ಕಲರವ

ವಸಂತರಾಗ

Posted on: ಮೇ 17, 2009

– ನವಿತಾ.ಎಸ್, ಸಾಗರ

ಈ ಸಂಜೆಯ ಬಾನಲ್ಲಿ ಇನ್ನೂ ಚುಕ್ಕಿಗಳು ಬಹಳ ಮೂಡಿಲ್ಲ. ಆದರೆ ಪ್ರೀತಿಯ ಚುಕ್ಕಿಗಳು ಅಲ್ಲಲ್ಲಿ ಜಗದ ಮನಸುಗಳಲ್ಲಿ ಮೂಡುತ್ತಿವೆ. ಜಗದ ಅಚ್ಚರಿಗೆ ಕಾರಣವೇ ಈ ಪ್ರೀತಿ. ಈ ಜಗತ್ತು ಒಂದಲ್ಲ ಒಂದು ದಿನ ನಿರ್ಮಲ ಪ್ರೇಮವನ್ನು ಪರಿಗಣಿಸಲಿದೆ. ಈ ಪ್ರೀತಿಯಲ್ಲಿ ಅದೆಂತಹ ಸೆಳೆತಗಳು, ಎಷ್ಟೋಂದು ನೋಟಗಳು! ಈ ಜಗದ ನಿಯಮಕ್ಕೆ ಮೂಲ ಕಾರಣವೇ ಪ್ರೀತಿ. ಪ್ರತಿ ಗಾಳಿಯ ಸ್ಪರ್ಶಕ್ಕೂ ಮರಗಳು ತೂಗುವುದಿಲ್ಲವೇ? ಪ್ರತಿ ಗುಟುಕಿಗೂ ಪಕ್ಷಿಗಳು ಹಪಹಪಿಸುವುದಿಲ್ಲವೇ? ಇದೆಲ್ಲವೂ ಪ್ರೀತಿಗಾಗಿ.

ಪ್ರಕೃತಿಯಲ್ಲೂ, ನಮ್ಮಲ್ಲೂ ಕೂಡ ಹಾಗೆಯೇ…
ಜಗದ ನಿಯಮದಲ್ಲಿ, ಒತ್ತಡದಲ್ಲಿ ಸಿಕ್ಕ ನಮ್ಮ ಪಾಡು

ವಿಷಣ್ಣತೆಯ ತಣ್ಣಗಿನ ಬದುಕಿನೊಳಗೆ ಕುದಿಯುವ ಮನಸ್ಸುಗಳಂತೆ. ಅಂತಹ ಮನಸ್ಸಿಗೆ ಮುದನೀಡುವ ಕಾಲವೇ ಈ ವಸಂತ.
ಅದಕ್ಕೇ ನಾನು ವಸಂತನನ್ನು ಕಾಯುತ್ತಿರುವುದು. ಮತ್ತೆ ನನ್ನಲ್ಲೂ ವಸಂತ ಬರುತ್ತಾನೆಂದರೆ ಸಾಕು, ಏನೋ ಸಂಭ್ರಮ… ವಸಂತನಿರದ ಮತ್ಯಾವ ಕಾಲವೂ ಕಾಲವೇ ಅಲ್ಲವೆನ್ನುವ ಹುಚ್ಚು ಭಾವ… ನಾನು ವಸಂತನಿಗಾಗಿ ಪ್ರತಿಕ್ಷಣವೂ ನಿರೀಕ್ಷಿಸುವ ಅಭಿಸಾರಿಕೆಯಾದೆ.

ಈ ವಸಂತ ಯಾವಾಗ ಬರುವನೋ… ಗೋತ್ತೇ ಇಲ್ಲ. ಸುಳಿವಿಲ್ಲದೇ ಬರುತ್ತಾನೆ. ನಿನ್ನೆವರೆಗೂ ತಣ್ಣನೆ ಆವರಿಸಿಕೊಂಡಿದ್ದ ಶಿಶಿರನ ಹಿಡಿತವನ್ನು ಮೆಲ್ಲನೆ ಸರಿಸಿ ಬೆಳಗಾಗುವಷ್ಟರಲ್ಲಿ ಬಂದಿದ್ದಾನೆ. ಮಧುರವಾಗಿ ಮೊಳಗಿದ ಕೋಗಿಲೆಯ ಧ್ವನಿ ಕೇಳಿಸಿದಾಗಲೇ ಗೊತ್ತಾಗಿದ್ದು ಅವನು ಬಂದಿದ್ದಾನೆಂದು. ಇಷ್ಟು ದಿನ ಎಲ್ಲಿಗೆ ಹೋಗಿದ್ದವೋ ಸುಳಿವೇ ಇಲ್ಲದ, ಹೆಸರೇ ತಿಳಿಯದೀ ಹಕ್ಕಿಗಳು, ಕೆಂಪನೆ ಹೊಳೆವ ರತ್ನಗಳಂತಹ ಹೂವನ್ನು ಅಲಂಕರಿಸಿಕೊಂಡಿದ್ದ ಗಿಡಗಳು, ಮಂಜಿನ ಜೋಲಿಯನ್ನು ಕಟ್ಟಿದ್ದವು. ಇದೆಲ್ಲ ಆ ಮಾಯಗಾರನ ಆಟವೇ ಸರಿ…

ಈ ಸುಗಂಧ… ಗಾಳಿಯಲ್ಲೆಲ್ಲಾ ಅದರದೇ ಘಮಲು… ಈ ಹೂವಿನ ಗಿಡದಲ್ಲಿ ಅದ್ಯಾವಾಗ ಇಷ್ಟೋಂದು ಬಣ್ಣದ ಹೂವುಗಳಿದ್ದವೋ, ಮೊಗ್ಗು ಬಿಟ್ಟಿದುದೇ ಜ್ಞಾಪಕವಿಲ್ಲ, ಈ ವಸಂತನ ಸ್ಪರ್ಶ ಮಾತ್ರಕ್ಕೆ ಅವುಗಳ ಮೈ ಪುಳಕಗೊಂಡು ಹೂವರಳಿ, ಅದು ದುಂಬಿಗೂ ತಿಳಿದು, ಇಲ್ಲಿ ಈಗ ಅದರದೇ ಝೇಂಕಾರ ಮೂಡಿದೆ, ಇದೇ ತಾನೇ ಪ್ರೀತಿ…?
ಈ ಪ್ರಕೃತಿಯಲ್ಲಿ ಇಂದು ಸಿಂಗಾರೋತ್ಸವ. ಈ ಪ್ರಕೃತಿಯ ಮನೆಯ ಮೂಲೆ ಮೂಲೆಯಲ್ಲೂ ತರತರದ ಬಣ್ಣ. ಈ ಹಸಿರು ಮಂಟಪ, ಚಿಗುರಿನ ತೋರಣ, ಹೂಗಳ ಸುಂದರ ರಂಗೋಲಿ, ಜೊತೆಗೆ ದುಂಬಿಯ ಮಂಗಳವಾದ್ಯ, ಹಕ್ಕಿಗಳ ತಾಳ, ಮಲ್ಲಿಗೆಯ ಸುಗಂಧ, ಮೈತುಂಬ ರೋಮಾಂಚನ.

ವಸಂತ ಬರುವುದು ಹೀಗೆಯೇ… ಅವನು ಸುಮ್ಮನೆ ಬರುವುದೇ ಇಲ್ಲ. ಇನ್ನೇನು ಎಲ್ಲವೂ ಮುಗಿಯಿತು ಎನ್ನುವಾಗ ಪ್ರತಿ ಜೀವಿಯಲ್ಲೂ ಹೊಸತನ ತರುತ್ತಾನೆ. ಹೊಸ ಹುರುಪು ತುಂಬುತ್ತಾನೆ. ವಸಂತ ಬಂದರು ಸಾಕು ನನ್ನ ಮನಸ್ಸಿನಲ್ಲಿರುವ ಎಲ್ಲಾ ಜಂಜಾಟಗಳನ್ನು ಮರೆತು ಕ್ಷಣಕಾಲವಾದರೂ ಅವನ ಮಧುರ ಸಾನಿಧ್ಯದಲ್ಲಿ ಸಾಂತ್ವನಗೊಳ್ಳುತ್ತೇನೆ. ಹಾಗಾಗಿ ವಸಂತನೇ ಬೇಗ ಬಾ…

ಮಬ್ಬು ಮುಗಿಲ ಹಿಂದೆ ಇದ್ದೇ ಇರುವ
ಸೂರ್ಯನಂತೆ ಈಗ ನನ್ನಲ್ಲಿ ಉಳಿದಿರುವುದೊಂದೇ
ಒಂದು… ಅದು ನಿರೀಕ್ಷೆ,
ಮತ್ತೆ ಮತ್ತೆ ಮತ್ತೊಮ್ಮೆ ಬಾ ವಸಂತ… 

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog Stats

  • 68,988 hits
ಮೇ 2009
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 123
45678910
11121314151617
18192021222324
25262728293031

Top Clicks

  • ಯಾವುದೂ ಇಲ್ಲ
%d bloggers like this: