ಕಲರವ

Archive for ಮೇ 14th, 2009

-ಶ್ರೀಕಾಂತ್.ಎನ್.ಎಸ್, ಬೆಂಗಳೂರು

ನನ್ನ ಮನಸ ಇಂಪೋರ್ಟ್ ಮಾಡ್ಕಂಡು
ಅವಳ ಮನಸ ಎಕ್ಸ್‌ಪೋರ್ಟ್ ಮಾಡದೆ,
ನನ್ನ ದೇಹ ಎಕ್ಸ್‌ಪೈರ್ ಆದಾಗ,
ಮಾಡಿದಳು ಕಣ್ಣೀರಿನ ಎಕ್ಸ್ ಪೋರ್ಟ್

– ಅಂತರ್ಮುಖಿ

ದೇವರೆಂಬ ವ್ಯಕ್ತಿ ಮನುಷ್ಯ ಹಾರಿ ಬಿಡುವ ರಾಕೆಟುಗಳು ತಾಕದಷ್ಟು , ಆತನ ಉಪಗ್ರಹಗಳು ಸಂಕೇತಗಳನ್ನು ಗ್ರಹಿಸಲು ಸಾಧ್ಯವಾಗದಷ್ಟು, ಅತಿ ಸೂಕ್ಷ್ಮ ಕೆಮರಾ ಕಣ್ಣಿಗೆ ಬೀಳದಷ್ಟು, ಆತನೆಂದಾದರೊಂದು ದಿನ ತಲುಪಲು ಅಸಾಧ್ಯವಾದ ದೂರದಲ್ಲಿ ಇರುವುದು ನಿಜವೇ ಆದರೆ ಆತ ನಾನು ಆತನ ವಿಷಯವಾಗಿ ತಲೆ ಕೆಡಿಸಿಕೊಂಡು ನಂಬಿಕೆ ಅಪನಂಬಿಕೆಗಳ ಒಳಸುಳಿಗಳಲ್ಲಿ ಸಿಕ್ಕಿಕೊಂಡು, ವಾದ-ವಿವಾದ, ಸಾಕ್ಷ್ಯಾಧಾರಗಳ ಗೋಜಲಿನಲ್ಲಿ ಕಾಲು ಸಿಗಿಸಿಕೊಂಡು ನರಳಾಡಿದ್ದನ್ನು ಕಂಡು ನಸುನಗುತ್ತಿರಬಹುದು. ಆತನ ಹೆಸರಿನಲ್ಲಿ ನಾನು ರಾತ್ರಿಗಳ ನಿದ್ದೆಗಳನ್ನು ಕಳೆದುಕೊಂಡಿದ್ದು, ಕೆನ್ನೆಯ ಮುಖಾಂತರ ಹರಿದ ಕಂಬನಿಯನ್ನು ಹಾಸಿಗೆ, ದಿಂಬುಗಳಿಗೆ ಕುಡಿಸಿದ್ದು, ಆತನ ಇರುವನ್ನು ಸಾಬೀತು ಮಾಡಲು, ಅಲ್ಲಗಳೆಯಲು ಹತ್ತಿರದವರ, ಆತ್ಮೀಯರ ಪ್ರೀತಿಗೆ ಕಲ್ಲು ಹಾಕಿಕೊಂಡದ್ದು, ನನ್ನ, ಸುತ್ತಮುತ್ತಲಿನವರ ನೆಮ್ಮದಿಯನ್ನೆಲ್ಲ ಕದಡಿ ಹಾಕಿದ್ದು – ಇವೆಲ್ಲ ಆತನಿಗೆ ಕಂಡಿದ್ದೇ ಆದರೆ ಆತ ಅದೆಷ್ಟು ಗಟ್ಟಿಯಾಗಿ ಗಹಗಹಿಸಿ ನಕ್ಕಿರಬೇಕು! prayer

“ಯಾವುದು ಸರಿ? ಮನುಷ್ಯ ದೇವರ ಸೃಷ್ಟಿಯಲ್ಲಿನ ದೊಡ್ಡ ಪ್ರಮಾದವೋ, ದೇವರು ಮನುಷ್ಯನ ಸೃಷ್ಟಿಯಲ್ಲಿನ ದೊಡ್ಡ ಪ್ರಮಾದವೋ” ಎಂದು ಪ್ರಶ್ನಿಸಿದ ಫ್ರೆಡ್ರಿಕ್ ನೀಶೆ. ಆತ ನನ್ನೇನಾದರೂ ಈ ಪ್ರಶ್ನೆಯನ್ನು ಕೇಳಿದ್ದನಾದರೆ ತಪ್ಪು ಯಾವುದು, ಸರಿ ಯಾವುದು ತಿಳಿದಿಲ್ಲ ಆದರೆ ಎಲ್ಲೋ ಒಂದು ಕಡೆ ದೊಡ್ಡ ಪ್ರಮಾದ ಆಗಿರುವುದು ಮಾತ್ರ ಸತ್ಯ ಎಂದಿರುತ್ತಿದ್ದೆ. ಎಷ್ಟೋ ವರ್ಷಗಳ ಕಾಲ ಅಪ್ಪಟ ಸಾತ್ವಿಕ ಆಸ್ತಿಕನಾಗಿ, ದೈವ ಕೃಪೆಯ ಕಳೆಯನ್ನು ಹೊತ್ತು, ಭಕ್ತಿ ಭಾವದಲ್ಲಿ ಮೈಮರೆತು, ದೇವರ ನಿಂದಿಸುವ ಜನರೆಲ್ಲ ಕುಷ್ಠ ರೋಗ ಬಂದು ಹಾಳಾಗಲಿ ಎಂದು ಪ್ರಾಮಾಣಿಕವಾಗಿ ಪ್ರಾರ್ಥಿಸುತ್ತಿದ್ದವ ನಾನು. ಹಾಗೆಯೇ ಉಗ್ರ ನಾಸ್ತಿಕತೆಯ ಉನ್ಮಾದದಲ್ಲಿ ಹುಚ್ಚೆದ್ದು ಕುಣಿದು, ಮರದಿಂದ ಮರಕ್ಕೆ ಹಾರುತ್ತ, ಸ್ವೇಚ್ಛೆಯ ಸವಿಯನ್ನು ಉಂಡು, ನಮ್ಮವರ ಕಂಡವರ ತೋಟವನ್ನೆಲ್ಲಾ ಹಾಳು ಮಾಡಿದವನೂ ನಾನೇ. ಈಗ ಎರಡೂ ಅತಿರೇಕಗಳು ಒಂದೇ ಕೋಲಿನ ಎರಡು ತುದಿಗಳೆಂಬ ಅರಿವಾಗಿರುವುದಾದರೂ ಒಮ್ಮೊಮ್ಮೆ ಕೊಲಾಟವಾಡುವ ಸೆಳೆತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದು.

ಹುಟ್ಟಿದ ಮಗುವಿನ ಜಾತಿ ಎಂಥದ್ದು, ಅದರ ನಂಬಿಕೆಗಳೇನು, ಅದು ಆಸ್ತಿಕನಾಗಿರುತ್ತದೋ, ನಾಸ್ತಿಕನಾಗಿರುತ್ತದೆಯೋ ತಿಳಿದಿಲ್ಲ. ಆದರೆ ಭಾರತದಲ್ಲಿ ಮಾತ್ರ ಅದು ಹುಟ್ಟಿದೊಡನೆಯೇ ಅದಕ್ಕೆ ಬಾಯಿಗಿಡುವ ನಿಪ್ಪಲು, ಸೊಂಟಕ್ಕೆ ಕಟ್ಟುವ ನ್ಯಾಪಿ ಪ್ಯಾಡಿನ ಜೊತೆಯಲ್ಲೇ ಜಾತಿ, ಧರ್ಮ, ನಂಬಿಕೆಯ ಉಡುಗೆಯನ್ನೂ ತೊಡಿಸಲಾಗುತ್ತದೆ. ಜೀವನಿರೋಧಕ ಔಷಧ ಡೋಸುಗಳ ಜೊತೆಗೆ ಶ್ರದ್ಧೆ, ನಂಬಿಕೆಗಳ ಡೋಸನ್ನು ನೀಡಲಾಗಿರುತ್ತದೆ. ಆ ಮಗು ಬೆಳೆದು ದೊಡ್ದದಾದಂತೆ ತೊಡಿಸಿದ ಬಟ್ಟೆಯನ್ನೇ ಮೈಯ ಚರ್ಮವಾಗಿಸಿಕೊಂಡು ಅದರ ಹಿರಿಮೆ ಗರಿಮೆಗಳನ್ನು, ಓರೆ ಕೋರೆಗಳನ್ನು ಚರ್ಚಿಸುತ್ತಲೇ, ಹೆಮ್ಮೆ ಪಡುತ್ತಲೇ, ಅಸೂಯೆ ಪಡುತ್ತಲೇ ಜೀವನ ಕಳೆದು ಬಿಡುತ್ತದೆ.

ನಾನು ಹುಟ್ಟಿನಿಂದ ಗುರುತಿಸಿಕೊಂಡ ಜಾತಿ, ಮನೆಯೆಂಬ ಮೊದಲ ಪಾಠಶಾಲೆಯಲ್ಲಿ ಕಲಿತ ದೈವ ಶ್ರದ್ಧೆಗಳು ಹಲವು ವರ್ಷಗಳವರೆಗೆ ತಮ್ಮ ಆಳ್ವಿಕೆಯನ್ನು ನಡೆಸಿದವು. ನಾನು ಬೆಳೆದ ಪರಿಸರ ಬಹುಮಟ್ಟಿಗೆ ನಗರ ಪರದೇಶವಾಗಿದ್ದರಿಂದ ಜಾತಿಯತೆಯ ಕಮಟು ಅಷ್ಟಾಗಿ ಗಮನಕ್ಕೆ ಬಂದಿರಲಿಲ್ಲ. ಜೊತೆಗೆ ತಾನಾಯಿತು ತನ್ನ ಕೆಲಸವಾಯಿತು ಎಂಬುದು ಮನೆಯಲ್ಲಿ ತುಂಬಾ ಹಿಂದಿನಿಂದಲೇ ಪಾಲಿಸುತ್ತಾ ಬಂದ ಪಾಲಿಸಿಯಾಗಿದ್ದರಿಂದ ಜಾತಿಯ ವಿಷಯವಾಗಿ ಅನವಶ್ಯಕ ಮನಕ್ಲೇಷಗಳು ಉಂಟಾಗುವ ಅವಕಾಶಗಳಿರಲಿಲ್ಲ. ಹಾಗೆಂದ ಮಾತ್ರಕ್ಕೆ ನಾನು ಜಾತಿ ಪ್ರಜ್ಞೆಯಿಂದ ಸಂಪೂರ್ಣ ಮುಕ್ತನಾಗಿದ್ದೆ, ಮುಕ್ತನಾಗಿರುವೆನೆಂದೂ ಅಲ್ಲ. ಚಿಕ್ಕಂದಿನಲ್ಲಿ ಹಲವು ಸಂದರ್ಭಗಳಲ್ಲಿ ಜಾತಿಯ ಹೆಮ್ಮೆ ನನ್ನನ್ನು ತಲೆ ತಿರುಗಿಸಿದ್ದಿದೆ. ಅವರ ಮನೇಲಿ ಊಟ ಮಾಡಬಾರದು, ಇವರನ್ನು ಮುಟ್ಟಿಸಿಕೊಳ್ಳಬಾರದು, ಅವನನ್ನು ಫ್ರೆಂಡ್ ಮಾಡಿಕೊಳ್ಳಬಾರದು ಎಂದು ಹೇಳಿಕೊಡಲು ನನ್ನ ಅಪ್ಪ ಅಮ್ಮರಿಗೆ ಸಂಕೋಚವಾಗುತ್ತಿತ್ತೋ ಅಥವಾ ಅಷ್ಟೆಲ್ಲಾ ಗಮನ ಕೊಡದಷ್ಟು ಅವರು ಲಿಬರಲ್ ಆಗಿದ್ದರೋ ತಿಳಿಯದು ಆದರೆ ಅಂಥ ಕಟ್ಟಪಾಡುಗಳೇನೂ ನನ್ನ ಬಾಲ್ಯದಲ್ಲಿರಲಿಲ್ಲ. ಆದರೆ ಒಂದು ಹೊತ್ತಿನ ಊಟವನ್ನು ಮಾಡದೆ ಉಪವಾಸ ಮಾಡಿ ತನ್ನದೇ ನಿಗ್ರಹ ಶಕ್ತಿಯ ಬಗ್ಗೆ ಹೆಮ್ಮೆ ಪಡುತ್ತಾ, ತನ್ನಷ್ಟು ಶ್ರಮಜೀವಿ ಯಾರೂ ಇಲ್ಲ ಎಂದು ಭ್ರಮಿಸುವಂತೆ ಕೆಲವೊಮ್ಮೆ ಇಲ್ಲದ ಕಟ್ಟುಪಾಡುಗಳನ್ನು ಕಲ್ಪಿಸಿಕೊಂಡು ಅವನ್ನು ಪಾಲಿಸುವ ಮೂಲಕ ಜಾತಿಯ ಗೌರವ ಉಳಿಸುವ, ಸಮಾಜದ ಆರೋಗ್ಯ ಕಾಪಾಡುವ ಪ್ರಯತ್ನಗಳನ್ನೂ ಮಾಡಿದ್ದುಂಟು. ಪ್ರೈಮರಿ ಶಾಲೆಯಲ್ಲಿ ಮಧ್ಯಾನ ಎಲ್ಲರೂ ಒಟ್ಟಿಗೆ ಕಲೆತು ಊಟ ಮಾಡುವಾಗ ಬುದ್ಧಿಗೆ ಗೋಚರವಾದ ಮಟ್ಟಿಗೆ ಮಡಿ-ಮೈಲಿಗೆಯನ್ನು ತೋರ್ಪಡಿಸಿ ಒಂದಷ್ಟು ಮಂದಿ ಗೆಳೆಯರನ್ನು ದಿಗ್ಭ್ರಮೆಗೊಳಿಸಿ, ಉಳಿದವರಿಗೆಲ್ಲಾ ತನ್ನ ಜಾತಿ ಯಾವುದೆಂದು ಸೂಚ್ಯವಾಗಿ ತಿಳಿಸಿ ಶಿಸ್ತು ಪಾಲಿಸಿದ ಹೆಮ್ಮೆಯನ್ನು ಉಂಡದ್ದಿದೆ. ಪಾಲಿಸಬೇಕಾದ ಶಿಸ್ತನ್ನೇ ನಿಯತ್ತಾಗಿ ನಿರ್ವಹಿಸಲಾಗದ ನನ್ನಂಥವನಿಗೆ ಸ್ವಯಂ ಸೃಷ್ಟಿಸಿಕೊಂಡ ಶಿಸ್ತನ್ನು ಮುರಿಯುವುದಕ್ಕೆ ಬಹಳ ಸಮಯ ಬೇಕಾಗುತ್ತಿರಲಿಲ್ಲ. ಕುಟುಂಬ ವಲಯದ ಸಮಾರಂಭಗಳಲ್ಲಿ ಜಾತಿಯ ಹಿರಿಮೆಯ ವಿಜೃಂಭಣೆಯನ್ನು ಮಾಡುವಾಗ, ಜಾತಿಯ ಕಾರಣವಾಗಿ ಜನ ಮನ್ನಣೆ ಸಿಕ್ಕುವಾಗ, ‘ಓ ಆ ಪೈಕಿಯವನಾ ನೀನು… ಅದಕ್ಕೆ ಹೀಗೆ…’ ಹೊಗಳುವಾಗಾ ಯಾವ ಸಂಕೋಚ, ನಾಚಿಕೆ ಕಾಣುತ್ತಿರಲಿಲ್ಲವಾದರೂ ಸ್ವಜಾತಿಯ ಹೆಮ್ಮೆ ಎಂದಿಗೂ ನನ್ನ ಪ್ರಜ್ಞೆಯಲ್ಲಿ ಸಕ್ರಿಯವಾಗಿರುತ್ತಿರಲಿಲ್ಲ.

ಜಾತಿ ಪ್ರಜ್ಞೆಯ ಜೊತೆ ದೈವಭಕ್ತಿಗೂ ಮನೆಯೇ ಮೊದಲ ಪಾಠ ಶಾಲೆ. ಮೌಲ್ಯಗಳು, ಆದರ್ಶಗಳ ಜೊತೆಯಲ್ಲೇ ಅಥವಾ ಅವಕ್ಕೆ ಪೂರಕವಾಗಿಯೇ ನಮ್ಮ ದೈವ ಶ್ರದ್ಧೆ, ಧರ್ಮ ಶ್ರದ್ಧೆ ರೂಪುಗೊಳ್ಳುತ್ತದೆ. ದೇವರೆಡೆಗೆ ಭಯ, ಭಕ್ತಿ, ಧರ್ಮ ಗ್ರಂಥಗಳ ಬಗೆಗಿನ ಭಯ ಮಿಶ್ರಿತ ಕುತೂಹಲ, ದೆವ್ವ ಪಿಶಾಚಿ ಅಪಶಕುನಗಳೆಡೆಗಿನ ಭಯ, ಪವಾಡ ಪುರುಷರು, ಸಂತರು ಬಾಬಾಗಳ ಕುರಿತ ಮಮಕಾರ, ಭಕ್ತಿ ಇವೆಲ್ಲವೂ ಸಂಸ್ಕಾರದ ಹೆಸರಿನಲ್ಲಿ ಹೇರಲ್ಪಡುವ ಗುಣಗಳೇ ಆಗಿವೆ.ವ್ಯಕ್ತಿತ್ವ, ಸ್ವತಂತ್ರ ಆಲೋಚನೆ ರೂಪುಗೊಳ್ಳುವ ಮೊದಲಿನಿಂದಲೇ ಆರಂಭವಾಗುವ ಈ ಶಿಕ್ಷಣ ನಮ್ಮಲ್ಲಿ ಬೆಳೆಸುವ ದೃಷ್ಟಿಕೋನ, ರಾಗ ದ್ವೇಷ ಮುಂದೆ ನಾವು ಬೆಳೆದು ದೊಡ್ಡವರಾಗಿ ಅದೆಷ್ಟೇ ವೈಚಾರಿಕರಾದರೂ, ಅದೆಷ್ಟೇ ವಸ್ತುನಿಷ್ಠತೆ, ನಿಷ್ಟುರತೆಯನ್ನು ಬೆಳೆಸಿಕೊಂಡರೂ ನಮ್ಮ ಆಲೋಚನೆ, ನಿರ್ಧಾರಗಳಲ್ಲಿ ತನ್ನ ಪ್ರಭಾವವನ್ನು ಬೀರಿಯೇ ತೀರುತ್ತದೆ. ಬಾಲ್ಯದಲ್ಲಿ ಪ್ರಾರ್ಥನೆ, ಪುರಾಣ ಕಥೆಗಳು, ದೇವರ ಲೀಲಾ ವರ್ಣನೆ, ತಂದೆ ತಾಯಿಯ, ಪ್ರೀತಿಪಾತ್ರರಾದವರ, ಗುರುಹಿರಿಯರ ಹಿತನುಡಿಗಳು  ಭಾವನಾತ್ಮಕವಾಗಿ ನಮ್ಮನ್ನು ಬೆಸೆದುಕೊಂಡು ನಮ್ಮ ವ್ಯಕ್ತಿತ್ವದ ಮೇಲೆ ಬಹುದೊಡ್ಡ ಪ್ರಭಾವವನ್ನು ಉಂಟು ಮಾಡುತ್ತವೆ. ಸುಪ್ತ ಮನಸ್ಸನ್ನು ಪ್ರಭಾವಿಸಿ ಅವ್ಯಕ್ತವಾಗಿ ನಮ್ಮನ್ನೊಂದು ಪೂರ್ವಾಗ್ರಹಕ್ಕೆ ಈಡು ಮಾಡಿರುತ್ತವೆ.

ಚಿಕ್ಕಂದಿನಲ್ಲೇ ಮೌಲ್ಯಗಳ, ಸಂಸ್ಕಾರದ ಹೆಸರಿನಲ್ಲಿ ಮಕ್ಕಳ ಮೇಲೆ ಧಾರ್ಮಿಕ ನಂಬಿಕೆಗಳನ್ನು, ಅಂಧವಿಶ್ವಾಸವನ್ನು, ಜಾತಿ ಪ್ರಜ್ಞೆಯನ್ನು, ನಮ್ಮ ಪೂರ್ವಾಗ್ರಹಗಳನ್ನು, ಒಳಿತು ಕೆಡುಕುಗಳ ತೀರ್ಮಾನವನ್ನು ಹೇರುವುದು ಅದೆಷ್ಟರ ಮಟ್ಟಿಗೆ ಸರಿ ಎನ್ನುವ ನಿಷ್ಕರ್ಷೆಗೆ ಇಳಿಯುವುದು ಬೇಡ. ಆದರೆ ಸದ್ಯಕ್ಕೆ ಆ ಹೇರಿಕೆಯೆಂಬುದು ಜೀವನ ಪೂರ್ತಿ ನಮ್ಮ ಪ್ರಜ್ಞೆಯ ಭಾಗವಾಗಿರುತ್ತದೆ, ನಮ್ಮೆಲ್ಲಾ ಆಲೋಚನೆ, ಇಷ್ಟ ಕಷ್ಟಗಳು, ಆಯ್ಕೆ- ನಿರ್ಧಾರಗಳ ಮೇಲೆ ಪ್ರಭಾವ ಬೀರುತ್ತದೆ ಎಂಬ ಅರಿವಿದ್ದರೆ ಸಾಕು. 

(ಮುಂದಿನ ಸಂಚಿಕೆಗೆ)


Blog Stats

  • 68,989 hits
ಮೇ 2009
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 123
45678910
11121314151617
18192021222324
25262728293031

Top Clicks

  • ಯಾವುದೂ ಇಲ್ಲ