ಕಲರವ

Archive for ಡಿಸೆಂಬರ್ 25th, 2008

– ಮಚೆಂಪು

ದೀಪಾವಳಿಯಲ್ಲಿ ಹಾಯಾಗಿ ಪಟಾಕಿಗೆ ಬೆಂಕಿ ಹಚ್ಚಿ ಕುಣಿದು ಕುಪ್ಪಳಿಸಿದ ನಂಗೆ ಮಾರನೆಯ ದಿನಾನೇ ತಲೇಮೇಲೆ ಬೆಂಕಿ ಇಟ್ರು ನಂ universityನವ್ರು. Exam dates unfortunately prepone ಆಗ್ಬಿಟ್ಟಿದೆ. ಕನ್ನಡಕವನ್ನು ತಿರುಗಿಸಿ, ಮುರುಗಿಸಿ, ಉಜ್ಜಿ, ಒರೆಸಿ ನೋಡಿದ್ರೂ ಅದೇ date. ಎಲ್ಲಾ unexpectedಉ. Full tensionಉ. ಏನ್ಮಾಡೋದು ಅನ್ನೋದೆ questionಉ.

ವರ್ಷದ beginning ನಿಂದ ಇಲ್ಲಿಯವರೆಗೆ ಆಗಿರೋ ಎಲ್ಲಾ portion Greek and Latin dmbtest ಆಗಿಬಿಟ್ಟಿದೆ. Internalsನಲ್ಲಂತೂ ಹೆಂಗೋ ಆ ಕಡೆ, ಈ ಕಡೆ ತಲೆಯಾಡಿಸಿಕೊಂಡು, paperನಲ್ಲಿ ಪುಳಿಯೋಗರೆ ಮಾಡಿ pass ಆಗ್ಬಿಟ್ಟೆ. ಆದ್ರೆ ಇದು ದೊಡ್ಡ examಉ. Squad, examiner, invigilator ಅಂತ ನೂರಾರು ಜನ CIDಗಳು, ಹೆಂಗೆ ಹುಡ್ಗೂರನ್ನ catch ಹಾಕೋದು ಅಂತ ಬಾಲ ಸುಟ್ಟ ಬೆಕ್ಕಿನ ಥರ ಓಡಾಡ್ತಿರ್ತಾರೆ. ಬೆಂಚುಗಳ middleನಲ್ಲಿ ಕಿಲೋಮೀಟರ್‌ಗಟ್ಲೆ gap. Friendshipನ ಇದೊಂದು ಕೆಲಸಕ್ಕೆ ನಿಯತ್ತಾಗಿ ಉಅಪಯೋಗಿಸ್ಕೊಂತಿದ್ದೆ. ಅದಕ್ಕೂ ಕಲ್ಲು ಬಿದ್ದದೆ.

ಕೊನೇ ೨೦ ದಿನ. ಏನಾದ್ರೂ ಆಗ್ಲಿ text bookನ ಅಟ್‍ಲೀಸ್ಟ್ ಹಂಗೆ ಒಮ್ಮೆ ತಿರುಗಾಡಿಸಿ ನೋಡಣ ಅಂತ ರೀಡಿಂಗ್ ರೂಮಿನಲ್ಲಿ ಹೋಗಿ ಕೂತ್ರೆ, ಹಂಗೆ ತಂಪಾಗಿ ನಿದ್ದೆ ಕಣ್ಮೇಲೆ ಬಂದು settle ಆಗ್ಬಿಡುತ್ತೆ. ಅದ್ರಲ್ಲೂ, ನಮ್ಮ hostelನಲ್ಲಿ ಬೆಳಿಗ್ಗೆ ಏನಾದ್ರೂ ದೋಸೆ ತಿಂದಿದ್ದೆ ಅಂದ್ರೆ, ಮುಗೀತು; ಅವತ್ತು ಹಂಗೇ flat. ನಿದ್ದೆ ಬರ್ಬೇಕು, ಆದ್ರೆ ಹೀಗೆ ಬರ್ಬಾರ್ದ timeನಲ್ಲಿ ಬಂದು ಅಟಕಾಯಿಸಿಕೊಂಡ್ರೆ, ನಾನು ಬರ್ಬಾದು ಆಗೋಗ್ಬಿಡ್ತೀನಿ ಅಷ್ಟೇ!

ಇನ್ನೊಂದು ಕಡೆಯಿಂದ ನಮ್ಮ ಹುಡ್ಗೂರು ಬೇರೆ ಟೆನ್ಷನ್ ಕೊಡ್ತಾ ಇದಾರೆ. Bathroom ಗೋದ್ರೂ ಬುಕ್ ಬಿಡಾಕಿಲ್ಲ ಅಂತ ಶಪಥ ಮಾಡ್ಬಿಟ್ಟಿದ್ದಾರೆ. ವರ್ಷ ಇದೀ ತಲೆ ಬಗ್ಗಿಸ್ಕೊಂಡು ಓದಿದಾರೆ, ಈಗ್ಲೂ ‘ಲೋ ಬನ್ರೋ, ಎಷ್ಟು ಓದ್ತೀರಾ? Bore ಆಗ್ತಾ ಇದೆ. ಹಂಗೆ ಕುಕ್ರಳ್ಳಿ ಕೆರೆಗೆ ಹೋಗಿ ಬರಾಣ’ ಅಂದ್ರೆ, “ಮುಂದೋಗಲೋ ಬಂದ್ಬಿಟ್ಟ. ಈ ಸಾರಿ ಪಾಸ್ ಆಗ್ಬೇಕು ಅಂತ ಕನಸು ಕಾಣ್ತಾ ಇದೀವಿ. Disturb ಮಾಡ್ಬೇಡ. ಕಳಚಿಕೋ!” ಅಂತ full fledge ಆಗಿ dialogue ಹೊಡೀತಾ ಇದ್ದಾರೆ. ಈ ಕಡೆ moodಉ ಇಲ್ಲ, ಆ ಕಡೆ foodಉ ಇಳೀತಿಲ್ಲ. ಹಿಂಗಾಗ್ಬಿಟ್ಟಿದೆ ನನ್ನ ಪರಿಸ್ಥಿತಿ.

Actually classes ಇನ್ನೂ ಹತ್ತು ದಿನ ನಡಿಲಿಕ್ಕಿದೆ. ಆದ್ರೆ, classನಲ್ಲಿ ಒಂದು ನರಪಿಳ್ಳೆನೂ ಕಾಣ್ತಾಇಲ್ಲ. ವರ್ಷ ಪೂರ್ತಿ ಥಿಯೇಟರ್‌ನಲ್ಲೇ ಪಾಠ ಕೇಳಿದ ನಂಗೆ, attendance shortage ಆಗಿ, ಯಾರೂ ಇಲ್ಲ ಅಂದ್ರೂ, ಕೂತ್ಕಂಡು ಪಾಠ ಕೇಳೋ ಪರಿಸ್ಥಿತಿ. ನನ್ನ ಹೆಸರು ಎಲ್ಲಾ lecturersಗೂ ಚಿರಪರಿಚಿತ. ಪಾಠ ಮಾಡಿದ್ನ ಕೂದ್ಲೆಲ್ಲಾ ಹರ್ಕಂಡು, ತಲೆ ಒಳಕ್ಕೆ ಒಂದೆರಡು ಅಕ್ಷರಾನ ತೂರಿಸೋಣ ಅಂತ ಹರಸಾಹಸ ಮಾಡಿದ್ರೂ, no use. ಇಡೀ ಒಂದ್ಗಂಟೆ ಪಾಠ ಮಾಡಿ ಕೊನೆಗೆ ಪಾಠದ ಹೆಸರೇನು ಅಂತ ಗೊತ್ತಿರಲಿಲ್ಲ ಅಂತ ಅವರಿಗೆ ತಿಳಿದು ಹೋಗಿದ್ದಕ್ಕೆ ಮೂರು ದಿನ assignment ಕೊಟ್ಟು, ಇರೋ ಅಲ್ಪಸ್ವಲ್ಪ timeನೂ ನುಂಗಿ ನೀರು ಕುಡೀತಾ ಇದಾರೆ.

ಎಲ್ರೂ ನಿದ್ದೆ ಬರ್ಬಾರ್ದು ಅಂತ ಟೀ ಕುಡುದ್ರೆ, ಹಾಳಾದ್ದು, ನಾನು ಟೀ ಕುಡುದ್ರೆ ನಿದ್ದೆ ಇನ್ನೂ accelerate ಆಗುತ್ತೆ. ಆದ್ರೂ ಈ ಟ್ರೆಂಡ್‌ನ ಮಾತ್ರ ನಾನು ಬಿಡದಿಲ್ಲ. Canteen uncleಉ, “ಏನ್ಸಾರ್? ನೀವು ಓದಕ್ಕೆ reading roomಗೆ ಬರ್ತೀರೋ ಅಥವಾ canteenಗೆ ಬರ್ತೀರೋ?” ಅಂತ ಓಪನ್ ಆಗಿ question ಕೇಳಿ ಇರೋ ಚೂರುಪಾರು ಮರ್ಯಾದೀನೂ ಹರಾಜಿಗೆ ಎಳೆದುಬಿಟಿದ್ರು. ಹೆಂಗೋ ಸುಧಾರಿಸಿಕೊಂಡು ದಿನಚರ್ಯಾನಾ ಮುಂದುವರೆಸ್ತಾ ಇದೀನಿ.

ಓದಕ್ಕೆ kgಗಟ್ಲೇ ಇದೆ. ಆದ್ರೆ time ಇರೋದು seconds ಲೆಕ್ಕದಲ್ಲಿ. Last benchನ ‘ದಾದಾ’ ಆದ ನಂಗೆ ಇದು ಕಾಮನ್ನು. ಆದ್ರೆ, ಹೆದರಿಕೆ ಅನ್ನೋದು ನನ್ನಲ್ಲೂ ಇದೆ ಅಂತ ಮೆತ್ತಗೆ ಬಾಯ್ಬಿಡ್ತಾ ಇದೀನಿ. ಯಾರೂ ತಪ್ಪು ತಿಳ್ಕೋಬೇಡಿ. ಇದೊಂದೇ ಸರಿ ನಾನು ಮೊದಲನೆಯ ಬೆಂಚಿನ brilliants ಹತ್ರ ಮೊರೆಹೋಗಿ, ಶರಣಾಗಿ, ಅದೂ ಇದೂ ಹೇಳಿಸಿಕೊಂಡು ಪಾಸ್ ಆಗೋದು. So, once again thanks to them.

Friends! Next time I am going to bring about a change in my writing. Presently ಬರೀತಾ ಇರೋ style ಬೊರ್ ಬಂತು ಅಂತ ಸುಮಾರು ಜನ ಹೇಳಿದ ಪ್ರಕಾರ, ಈ decision ತೆಗೆದುಕೊಂದಿದೀನಿ. ಇದಕ್ಕೆ ತಮ್ಮದೇನಾದ್ರೂ suggestions ಅಥವಾ ಯಾವ ಥರ ಬರೀಬೇಕು ಅನ್ನೋ idea ಏನಾದ್ರೂ ಇದ್ರೆ, ಹಂಗೆ ನಮ್ಮ Editor ಸಾಹೇಬ್ರಿಗೆ ಬಿಸಾಕಿ ಪುಣ್ಯ ಕಟ್ಕಳಿ.

Wishing you belated Diwali wishes…

ನಿಮ್ಮ ಮನೆ ಹುಡುಗ,

ಮಚೆಂಪು

– ‘ಅಂತರ್ಮುಖಿ’

ಹೈಸ್ಕೂಲು ದಿನಗಳಿಂದಲೂ ಪತ್ರಕರ್ತರ ಬಗ್ಗೆ ನನಗೆ ವಿಲಕ್ಷಣವಾದ ಕುತೂಹಲ ಬೆಳೆದಿತ್ತು. ಯಾವ ಹಾಲಿವುಡ್ ಹೀರೋನ ಸಾಹಸಗಳಿಗೂ ಕಡಿಮೆಯಿರದ ‘ಹಾಯ್ ಬೆಂಗಳೂರ್’ ಸಂಪಾದಕರಾದ ರವಿ ಬೆಳಗೆರೆಯವರ ಚಿತ್ರ ವಿಚಿತ್ರ ಸಾಧನೆಗಳು, ಮೈಲುಗಲ್ಲುಗಳು ಹಾಗೂ ರೋಮಾಂಚನಕಾರಿ ಸಾಹಸಗಳು, ಅವುಗಳಷ್ಟೇ ಥ್ರಿಲ್ಲಿಂಗಾಗಿರುತ್ತಿದ್ದ ಅವರ ಬರವಣಿಗೆ ಪತ್ರಕರ್ತ ಎಂದರೆ ಸಿನೆಮಾದಲ್ಲಿ ಅಕರಾಳ-ವಿಕಾರಾಳವಾಗಿ ಮುಖಭಾವ ಪ್ರಕಟಿಸುತ್ತಾ ಆಕ್ರಮಣ ಮಾಡುವ ಹತ್ತಾರು ಮಂದಿ ದಾಂಢಿಗರಿಗೆ ಒದೆ ಕೊಟ್ಟು ಗರಿ ಮುರಿಯದ ಶರ್ಟನ್ನೊಮ್ಮೆ ಕೊಡವಿ ನಿಂತು ಕೈ ಬೀಸುವ ಸಣಕಲ ಹೀರೋನ ಹಾಗೆ ಎಂಬ ಭ್ರಮೆಯನ್ನು ಮೂಡಿಸುತ್ತಿದ್ದವು. ಪತ್ರಿಕೋದ್ಯಮವೆಂಬುದು ಅತ್ಯಂತ ತ್ಯಾಗಮಯವಾದ, ನಿಸ್ವಾರ್ಥದಿಂದ ಕೂಡಿದ ಉದ್ಯಮ ಎಂಬುದು ಆಗಿನ ಗ್ರಹಿಕೆಯಾಗಿತ್ತು. ಸತ್ಯದ ಉಪಾಸಕರನ್ನು ಪತ್ರಕರ್ತರು ಎಂಬ ಹೆಸರಿನಿಂದ ಕರೆಯುತ್ತಾರೆ, ಜಗತ್ತಿಗೆ ಎಂದಾದರೂ ಪ್ರಾಮಾಣಿಕತೆ, ನಿಷ್ಠುರತೆ, ವಸ್ತುನಿಷ್ಠತೆ, ಧೈರ್ಯಗಳ ಕೊರತೆ ಬಿದ್ದರೆ ಇವರಿಂದ ಕಡ ಪಡೆಯಬಹುದು ಎಂಬುದು ಮುಗ್ಧ ನಂಬಿಕೆಯಾಗಿತ್ತು. ಪತ್ರಿಕೆಗಳಲ್ಲಿ ಪ್ರಕಟವಾಗುವುದು ಗಾಸ್ಪೆಲ್ ಟ್ರುಥ್ ಎಂದು ಈಗಲೂ ಶ್ರದ್ಧೆಯಿಂದ ನಂಬುವ ‘ಭಕ್ತಾದಿ’ಗಳಲ್ಲಿ ನಾನೂ ಒಬ್ಬನಾಗಿದ್ದೆ. ಪತ್ರಿಕೆಗಳ ಬಗ್ಗೆ, ಪತ್ರಕರ್ತರ ಬಗ್ಗೆ ನನ್ನ ಕ್ರೇಜು ಅದೆಷ್ಟರ ಮಟ್ಟಿಗೆ ಹುಚ್ಚುತನದ ಪರಿಧಿಯನ್ನು ಮುಟ್ಟುತ್ತಿತ್ತೆಂದರೆ ನ್ಯೂಸ್ ಸ್ಟಾಂಡಿನಲ್ಲಿ ಕಣ್ಣಿಗೆ ಬೀಳುವ ಪ್ರತಿಯೊಂದು ಹೊಸ ಪತ್ರಿಕೆಯನ್ನೂ ತಂದಿಟ್ಟುಕೊಂಡು ಜೋಪಾನ ಮಾಡುತ್ತಿದ್ದೆ. Paper Man

ಅಳಿಕೆಯಲ್ಲಿ ಕಾಲೇಜು ಓದುವುದಕ್ಕೆ ಸೇರಿದಾಗ ನನ್ನ ಅನೇಕ ಹುಚ್ಚಾಟಗಳಿಗೆ ಅನಿವಾರ್ಯವಾಗಿ ಕಡಿವಾಣ ಹಾಕಿಕೊಳ್ಳಬೇಕಿತ್ತು. ಕಾಲೇಜಿನ ಇನ್ನೂರು ಚಿಲ್ಲರೆ ಹುಡುಗರಿಗೆ ಸೇರಿ ಅಲ್ಲಿಗೆ ನಾಲ್ಕು ಪೇಪರುಗಳು ಬರುತ್ತಿದ್ದವು. ಎರಡು ಇಂಗ್ಲೀಷು, ಎರಡು ಕನ್ನಡ. ಜೊತೆಗೆ ಜಗತ್ತಿನಲ್ಲಿ ಇರಬಹುದಾದ ಅತ್ಯಂತ ಸಪ್ಪೆಯಾದ, ಎಂಥಾ ಸಾಹಸಿಗಾದರೂ ಬೋರು ಹೊಡೆಸುವ ಆಧ್ಯಾತ್ಮಿಕ ಮಾಸ ಪತ್ರಿಕೆಗಳು ಬಿಟ್ಟರೆ ಬೇರಾವ ಸರಕೂ ನಮ್ಮ ಕೈಗೆ ಸಿಕ್ಕುತ್ತಿರಲಿಲ್ಲ. ಇದ್ದುದರಲ್ಲಿ ಟೈಮ್ಸಾಫಿಂಡಿಯಾದ ಮನರಂಜನೆಯ ಪುಟಗಳು, ವಿಜಯಕರ್ನಾಟಕದ ಕೆಲವು ಜನಪ್ರಿಯ ಅಂಕಣಗಳು ನಮ್ಮ ಹಸಿವನ್ನು ತಣಿಸುತ್ತಾ ನಮ್ಮ ಪ್ರಾಣವನ್ನು ಉಳಿಸಿದ್ದವು ಎನ್ನಬಹುದು! ಬೆಳಗಿನ ತಿಂಡಿಯನ್ನು ಮುಗಿಸಿಕೊಂಡು ಒಲಂಪಿಕ್ಸಿನಲ್ಲಿ ಓಡಿದಂತೆ ನಾವು ರೀಡಿಂಗ್ ರೂಮಿಗೆ ಓಡುತ್ತಿದ್ದೆವು. ಸಾಮಾನ್ಯವಾಗಿ ಈ ರೇಸಿನಲ್ಲಿ ಭಾಗವಹಿಸುವವರ ಸಂಖ್ಯೆ ನಾಲ್ಕಕ್ಕಿಂತ ಹೆಚ್ಚು ಇರುತ್ತಿರಲಿಲ್ಲ. ಒಂದು ವೇಳೆ ಈ ಸಂಖ್ಯೆ ನಾಲ್ಕನ್ನು ದಾಟಿ ಹತ್ತು-ಹದಿನೈದರ ಗಡಿಯನ್ನು ಮುಟ್ಟಿತು ಎಂದರೆ ಹಿಂದಿನ ದಿನ ಯಾವುದೋ ಕ್ರಿಕೆಟ್ ಮ್ಯಾಚ್ ನಡೆದಿರಬೇಕು ಎಂತಲೇ ತಿಳಿಯಬೇಕು. ಪ್ರಪಂಚದ ಹೊಸ ಹೊಸ ಆವಿಷ್ಕಾರಗಳನ್ನು, ವಿದ್ಯಮಾನಗಳನ್ನು ಅರಗಿಸಿಕೊಂಡು ಗಟ್ಟಿಗರಾಗಲು ತಯಾರಾಗುತ್ತಿದ್ದ ನಮ್ಮಂತಹ ನೂರಾರು ವಿದ್ಯಾರ್ಥಿಗಳಿಗೆ ಒಂದು ದಿನದ ಕ್ರಿಕೆಟ್ ಪಂದ್ಯದಲ್ಲಿ ಯಾರು ಗೆದ್ದರು ಎಂಬುದು ತಿಳಿಯುವುದಕ್ಕೆ ಸುಮಾರು ಹತ್ತು ಹನ್ನೆರಡು ತಾಸು ಬೇಕಾಗಿತ್ತು ಎಂಬುದನ್ನು ತಿಳಿದರೆ ಸಂಪರ್ಕ ಕ್ರಾಂತಿಯ ಪಿತಾಮಹ ಎದೆ ಒಡೆದು ಸಾಯುತ್ತಿದ್ದುದು ಖಂಡಿತ!

ಹೀಗೆ ಸರ್ವೈವಲ್ ಆಫ್ ದ ಫಿಟ್ಟೆಸ್ಟ್ ಎಂಬ ಡಾರ್ವಿನನ್ನ ಸಿದ್ಧಾಂತವನ್ನು ಅತ್ಯಂತ ಸಮರ್ಕಪವಾಗಿ ಅನುಷ್ಠಾನಕ್ಕೆ ತಂದು ಸುದ್ದಿ ಸಮಾಚಾರಗಳನ್ನು ತಿಳಿದುಕೊಂಡು, ಜಗತ್ತಿನ ವಿದ್ಯಮಾನದ ಬಗ್ಗೆ ನಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡು ಭವ್ಯ ಭಾರತದ ಜವಾಬ್ದಾರಿಯುತ ಪ್ರಜೆಯಾಗುವ ಹಾದಿಯಲ್ಲಿ ಸಮರ್ಪಕವಾಗಿ ನಡೆಯುತ್ತಿದ್ದೇವೆ ಎಂದು ನಮ್ಮನ್ನು ನಾವು ಸಂತೈಸಿಕೊಳ್ಳುತ್ತಿದ್ದೆವು. ಹೈಸ್ಕೂಲಿನಲ್ಲಿದ್ದಾಗ ಕಂಡಕಂಡ ಪತ್ರಿಕೆ, ಮ್ಯಾಗಜೀನುಗಳನ್ನು ಗುಡ್ಡೆ ಹಾಕಿಕೊಂಡು ಶೂನ್ಯ ಸಂಪಾದನೆ ಮಾಡುತ್ತಿದ್ದ ನನಗೆ ನಮ್ಮ ಕಾಲೇಜಿನ ರೀಡಿಂಗ್ ರೂಮೆಂಬುದು ಪ್ರತಿದಿನ ಮೃಷ್ಟಾನ್ನ ತಿಂದು ಹಾಲಿನಲ್ಲಿ ಕೈತೊಳೆಯುವವನಿಗೆ ಗಂಜಿ ಕುಡಿಸಿ ಕೈತೊಳೆಯಲು ಬೀದಿ ನಲ್ಲಿ ತೋರಿದ ಹಾಗಾಗಿತ್ತು. ಆದರೂ ಮರುಭೂಮಿಯಲ್ಲಿನ ಓಯಸ್ಸಿಸಿನ ಹಾಗೆ ನನ್ನ ಹಾಗೂ ನನ್ನಂಥ ತಿಕ್ಕಲರ ದಾಹವನ್ನು ತೀರಿಸುವುದಕ್ಕಾಗಿ ವಿಜಯ ಕರ್ನಾಟಕ, ಟೈಮ್ಸಾಫಿಂಡಿಯ, ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್‌ಗಳು ಕೈಲಾದ ಪ್ರಯತ್ನ ಮಾಡುತ್ತಿದ್ದವು. ವಿಜಯ ಕರ್ನಾಟಕವನ್ನು ಅದೆಷ್ಟು ಗಾಢವಾಗಿ ಓದುತ್ತಿದ್ದೆವೆಂದರೆ ಪತ್ರಿಕೆಯ ಮಧ್ಯದ ಸಂಪಾದಕೀಯ ಪುಟವನ್ನು ನೋಡಿಯೇ ಇವತ್ತು ಯಾವ ದಿನ ಎಂಬುದನ್ನು ಹೇಳಬಲ್ಲ ಕೌಶಲ್ಯವನ್ನು ಸಂಪಾದಿಸಿಕೊಂಡಿದ್ದೆವು. ಗುರುವಾರವೆಂದರೆ ವಿಶ್ವೇಶ್ವರ ಭಟ್ಟರ ನೂರೆಂಟು ಮಾತು, ಆ ಜಾಗದಲ್ಲಿ ಚೂಪು ನೋಟದ ಬೈತೆಲೆ ಕ್ರಾಪಿನ ಯುವಕನೊಬ್ಬನ ಫೋಟೊ ಪ್ರಕಟವಾಗಿದೆಯೆಂದರೆ ನಿಸ್ಸಂಶಯವಾಗಿ ಅದು ‘ಬೆತ್ತಲೆ ಜಗತ್ತು’ ಎಂದು ಹೇಳಿಬಿಡಬಹುದಿತ್ತು,ಜೊತೆಗೆ ಅಂದು ಶನಿವಾರ ಎಂಬುದನ್ನು ಯಾವ ಪಂಚಾಂಗದ ನೆರವಿಲ್ಲದೆ ಹೇಳಿಬಿಡುತ್ತಿದ್ದೆವು. ಭಾನುವಾರವೆಂಬ ‘ಸಬ್ಬತ್ ದಿನ’ವನ್ನು ನಾವು ಪರಮ ಶ್ರದ್ಧಾವಂತ ಯಹೂದಿಗಿಂತ ಶ್ರದ್ಧೆಯಿಂದ ಆಚರಿಸುತ್ತಿದ್ದೆವು. ಆ ದಿನ ಕೆಲಸಕ್ಕೆ ರಜೆ. ಯಾವ ಕೆಲಸವನ್ನೂ ಮಾಡಬಾರದು ಎಂಬುದು ಯಹೂದಿಗಳ ನಂಬಿಕೆ. ನಾವದನ್ನು ಅಕ್ಷರಶಃ ಪಾಲಿಸುತ್ತಿದ್ದೆವು. ಭಾನುವಾರ ನಮ್ಮ ಪಠ್ಯಪುಸ್ತಕಗಳ ಮುಖವನ್ನೂ ನೋಡುವ ಕಷ್ಟ ತೆಗೆದುಕೊಳ್ಳುತ್ತಿರಲಿಲ್ಲ. ರೆಕಾರ್ಡ್ ಬರೆಯುವುದಂತೆ, ನೋಟ್ಸ್ ಮಾಡಿಕೊಳ್ಳುವುದಂತೆ, ಸಿಇಟಿಗೆ ಓದಿಕೊಳ್ಳುವುದಂತೆ – ಹೀಗೆ ನಾನಾ ಕೆಲಸಗಳಲ್ಲಿ ಮುಳುಗಿ ಹೋಗಿರುತ್ತಿದ್ದ ಓರಗೆಯ ಗೆಳೆಯರನ್ನು ಅಧರ್ಮಿಯನ್ನು ಕನಿಕರದಿಂದ, ಸಹಾನುಭೂತಿಯಿಂದ ನೋಡುವ ಧರ್ಮಿಷ್ಟರ ಹಾಗೆ ನೋಡುತ್ತಿದ್ದೆವು. ಮೌನವಾಗಿ ‘ದೇವರೇ ತಾವೇನು ಮಾಡುತ್ತಿದ್ದೇವೆಂಬುದನ್ನು ಇವರರಿಯರು, ಇವರನ್ನು ಕ್ಷಮಿಸು’ ಎಂದು ಪ್ರಾರ್ಥಿಸಿ ನಮ್ಮ ‘ಸಬ್ಬತ್’ ಆಚರಣೆಯಲ್ಲಿ ಭಕ್ತಿಯಿಂದ ಮಗ್ನರಾಗುತ್ತಿದ್ದೆವು.

ನಮ್ಮ ಭಾನುವಾರದ ‘ಸಬ್ಬತ್’ ಆಚರಣೆಗೆ ಕೆಲವೊಂದು ಅನುಕೂಲ ಸಿಂಧುಗಳನ್ನು ಮಾಡಿಕೊಂಡಿದ್ದೆವೆಂಬುದನ್ನು ತಿಳಿಸಬೇಕು. ಆ ದಿನ ಯಾವ ಕೆಲಸವನ್ನೂ ಮಾಡಬಾರದು (ಉಳಿದ ದಿನಗಳಲ್ಲಿ ನಾವು ಮಾಡುತ್ತಿದ್ದದ್ದು ಅಷ್ಟರಲ್ಲೇ ಇತ್ತು!) ಎಂದು ನಾವು ನಿಯಮ ವಿಧಿಸಿಕೊಂಡಿದ್ದರೂ ಸಾಪ್ತಾಹಿಕ ಸಂಚಿಕೆಗಳನ್ನು ಓದುವುದಕ್ಕಾಗಿ ನಿಯಮವನ್ನು ಸಡಿಲಿಸಿಕೊಳ್ಳುತ್ತಿದ್ದೆವು. ಕೆಲವೊಮ್ಮೆ ನಾನಾ ಮೂಲಗಳಿಂದ ಅಕ್ರಮವಾಗಿ ಸಂಪಾದಿಸಿಕೊಂಡಿರುತ್ತಿದ್ದ ‘ಹಾಯ್ ಬೆಂಗಳೂರು’, ಮಾಂಡೋವಿ, ಹೇಳಿ ಹೋಗು ಕಾರಣ, ಪರಿಸರದ ಕಥೆ, ವಿಶ್ವ ವಿಸ್ಮಯದಂತಹ ಪುಸ್ತಕಗಳ ಓದಿಗಾಗಿ ನಮ್ಮ ಭಾನುವಾರವನ್ನು ಮೀಸಲಿಡುತ್ತಿದ್ದೆವು. ತರಗತಿಗೆ ಸಂಬಂಧ ಪಟ್ಟ ಪುಸ್ತಕ ಓದುವುದು ಬಿಟ್ಟು ಕೆಲಸಕ್ಕೆ ಬಾರದವುಗಳನ್ನು ಓದುತ್ತಿದ್ದ ನಮ್ಮನ್ನು ಕಂಡು ಅನೇಕ ಗೆಳೆಯರು ಪ್ರಾಮಾಣಿಕವಾಗಿ ಸಂತಾಪ ಸೂಚಿಸುತ್ತಿದ್ದರಾದರೂ ನಮ್ಮ ಸಾಂಕ್ರಾಮಿಕ ಖಾಯಿಲೆ ಅವರಿಗೂ ತಗುಲಿಕೊಂಡೀತೆಂದು ಹತ್ತಿರ ಬರಲು ಹೆದರುತ್ತಿದ್ದುದರಿಂದ ಭಾನುವಾರಗಳಲ್ಲಿ ನಾವು ಅವರ ‘ಧರ್ಮ ಬೋಧನೆ’ಯಿಂದ ಪಾರಾಗುತ್ತಿದ್ದೆವು!

Ignorance is bliss ಎಂದು *ತಿಳಿದವರು* ಹೇಳುತ್ತಾರೆ. ಅದರಂತೆ ಆ ತಿಳುವಳಿಕೆಯಿಲ್ಲದ ದಿನಗಳಲ್ಲೇ ನಮ್ಮ ಬದುಕು pause ಆಗಿಬಿಟ್ಟಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅನ್ನಿಸುತ್ತದೆ. ತಿಳುವಳಿಕೆ ಬರುತ್ತಾ ನಾವು ಭಾವಿಸಿಕೊಂಡಿದ್ದ ದೇವ-ದೇವತೆಗಳ ನಿಜಬಣ್ಣ ಬಯಲಾಗತೊಡಗಿತು. ಪರದೆಯ ಮೇಲೆ ಕಂಡ ಬೆಳ್ಳಿ ಬಣ್ಣದ ಹೀರೋ ಮೇಕಪ್ ಕಳಚಿ ಎದುರು ಬಂದಾಗ ಆಗುವ ಆಘಾತ ಪತ್ರಕರ್ತರ ನಿಜಮುಖ ತಿಳಿದಾಗ ಆಗತೊಡಗಿತು. ಹಿಂದೆ ಭಾವಿಸಿದ್ದ ಹಾಗೆ ಪತ್ರಕರ್ತರು ಜಗತ್ತಿಗೆ ಪ್ರಾಮಾಣಿಕತೆ, ಅಕೌಂಟೆಬಿಲಿಟಿ, ದಕ್ಷತೆ ಮುಂತಾದ ಸದ್ಗುಣಗಳನ್ನು, ಆದರ್ಶದ ಸಗಟನ್ನು ಸಾಲ ಕೊಡಬಲ್ಲ ಧನಿಕರು ಅಲ್ಲ ಎಂಬುದು ತಿಳಿಯತೊಡಗಿತು. ಅಸಲಿಗೆ ಬಹುತೇಕರಲ್ಲಿ ಈ ದಾಸ್ತಾನಿನ ಕೊರತೆ ತೀವ್ರವಾಗಿರುತ್ತದೆ. ಹಲವು ಸಂದಭ್ರಗಳಲ್ಲಿ ನಮ್ಮಂತಹ ಸಾಮಾನ್ಯರು ಒಟ್ಟುಗೂಡಿ ಕೈಲಾದ ಸಹಾಯ ಮಾಡದ ಹೊರತು ಅವರು ಸಂಪೂರ್ಣ ದಿವಾಳಿಯೆದ್ದು ಹೋಗುತ್ತಾರೆ ಎಂಬ ಜ್ಞಾನೋದಯವಾಗುತ್ತಿದ್ದ ಹಾಗೆ ಕಟ್ಟಿಕೊಂಡಿದ್ದ ಆಶಾಗೋಪುರಗಳು ಕಣ್ಣ ಮುಂದೆ ಕುಸಿದು ಬೀಳಲು ಶುರುವಾದವು. ಇಡೀ ಕಟ್ಟಡವೇ ಕುಸಿದು ಬಿದ್ದ ನಂತರವೂ ಆಕಾಶದತ್ತ ಮುಖ ಮಾಡಿ ಅಪರಿಮಿತ ಆಶಾಭಾವದೊಂದಿಗೆ ಹಲ್ಲು ಕಚ್ಚಿ ಹಿಡಿದು ನಿಂತಿರುವ ಪಿಲ್ಲರುಗಳ ಹಾಗೆ ಅಲ್ಲಲ್ಲಿ ಕಂಡ ಕೆಲವು ಅಪವಾದಗಳು ನಿಂತಿವೆಯಾದರೂ ಮನಸ್ಸನ್ನೆಲ್ಲಾ ಕುಸಿದು ಬಿದ್ದ ಕಟ್ಟಡದ ಧೂಳು ಆಕ್ರಮಿಸಿಕೊಂಡಿದೆ.


Blog Stats

  • 68,988 hits
ಡಿಸೆಂಬರ್ 2008
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
1234567
891011121314
15161718192021
22232425262728
293031  

Top Clicks

  • ಯಾವುದೂ ಇಲ್ಲ