ಕಲರವ

ವ್ಯವಸ್ಥೆಯಿಂದ ವ್ಯವಸ್ಥೆಗೆ ಹಾರುವ ಮನ…

Posted on: ಡಿಸೆಂಬರ್ 22, 2008

– ಅಂತರ್ಮುಖಿ

ನಮ್ಮ ಸಮಾಜದಲ್ಲಿ ನಾವಿಷ್ಟು ಗೌರವನ್ನು, ಪ್ರಾಮುಖ್ಯತೆಯನ್ನು ಕೊಡುತ್ತಿರುವ ಕುಟುಂಬ ವ್ಯವಸ್ಥೆ ಹುಟ್ಟಿಕೊಂಡಿದ್ದೇ ಸ್ವಾತಂತ್ರ್ಯದ, ಮುಕ್ತ ಅವಕಾಶದ ಬಯಕೆಯಿಂದಾಗಿ ಎನ್ನುತ್ತಾರೆ ಬುಡಕಟ್ಟುಗಳಲ್ಲಿ ಜೀವಿಸುತ್ತಿದ್ದ ಆದಿ ಮಾನವರ ಬದುಕನ್ನು ಅಧ್ಯಯನ ಮಾಡಿದವರು. ಒಂದು ಬುಡಕಟ್ಟಿನ ಪಂಗಡದಲ್ಲಿ ಒಬ್ಬ ಬಲಿಷ್ಠವಾದ ನಾಯಕನಿರುತ್ತಾನೆ. ಆತನೇ ಇಡೀ ಪಂಗಡದ ಆಗುಹೋಗುಗಳ ಮೇಲೆ ಹಕ್ಕುಳ್ಳವನಾಗಿರುತ್ತಾನೆ. ಆತನ ಸ್ಥಾನಮಾನ ಇಡೀ ಗುಂಪಿನಲ್ಲಿ ಶ್ರೇಷ್ಠವಾಗಿರುತ್ತದೆ. ಆ ಪಂಗಡದಲ್ಲಿನ ಸಮಸ್ತ ವೈಭೋಗ, ಸುಖ, ಸಂಪತ್ತು ಆತನ ಒಡೆತನದಲ್ಲಿರುತ್ತದೆ, ಗುಂಪಿನ ಎಲ್ಲಾ ಸುಂದರ ಹೆಣ್ಣುಗಳನ್ನು ಆತನೇ ಇಟ್ಟುಕೊಂಡಿರುತ್ತಾನೆ. ಆತನು ಬಳಸಿ ಬಿಟ್ಟದ್ದು ಗುಂಪಿನ ಇತರ ಸದಸ್ಯರು ಉಪಯೋಗಿಸಬಹುದು. ಇಲ್ಲಿ ವ್ಯಕ್ತಿಯೊಬ್ಬನಿಗೆ ಪ್ರತ್ಯೇಕವಾದ ಐಡೆಂಟಿಟಿ ಇರುವುದಿಲ್ಲ. ಆತ ಆ ಪಂಗಡದ ಒಬ್ಬ ಸದಸ್ಯ ಮಾತ್ರ. ವ್ಯಕ್ತಿಯ ಸ್ವಂತ ಆಲೋಚನೆಗಳಿಗೆ, ನಿರ್ಧಾರಗಳಿಗೆ ಅಲ್ಲಿ ಬೆಲೆಯಿರುವುದಿಲ್ಲ. ಯಾರೊಂದಿಗೆ ಕೂಡಬೇಕು ಯಾರಲ್ಲಿ ಮಕ್ಕಳನ್ನು ಪಡೆಯಬೇಕು, ಎಷ್ಟು ಸಂಪಾದನೆ ಮಾಡಬೇಕು ಯಾರೊಂದಿಗೆ ಜೀವನವನ್ನು ಕಳೆಯಬೇಕು, ಯಾವ ಕೆಲಸ ಮಾಡಬೇಕು ಎಂಬ ಸಂಗತಿಗಳಲ್ಲಿ ಆತನ ವೈಯಕ್ತಿಕ ಆಯ್ಕೆಗೆ ಅವಕಾಶವೇ ಇರುವುದಿಲ್ಲ. ಪಂಗಡದ ನಾಯಕ ಯುದ್ಧಕ್ಕೆ ಹೊರಟರೆ ಸದಸ್ಯರೆಲ್ಲರೂ ಆತನ ಹಿಂದೆ ಶಸ್ತ್ರ ಹಿಡಿದು ಸಜ್ಜಾಗಿ ನಿಲ್ಲಬೇಕು. ಬೇಟೆಗೆ ಹೊರಟರೆ ಅಲ್ಲಿಗೆ ಹೊರಡಲು ತಯಾರಾಗಬೇಕು. ಪಂಗಡದ ಹಿರಿಯನ ಆಜ್ಞೆಯನ್ನು ಉಲ್ಲಂಘಿಸುವ ಪ್ರಯತ್ನ ಮಾಡಿದವರಿಗೆ ಕಠಿಣಾತಿಕಠಿಣ ಶಿಕ್ಷೆಯನ್ನು ಕೊಡಲಾಗುತ್ತಿತ್ತು.

ಮನುಷ್ಯನ ಜೀವಕೋಶಗಳಲ್ಲೇ ಈ ಗುಣ ಅಡಗಿ ಕುಳಿತಿದೆಯೇನೋ! ಆತ ಎಂದಿಗೂ ಸ್ವಾತಂತ್ರ್ಯವನ್ನು, ಸ್ವೇಚ್ಛೆಯನ್ನು, ಮುಕ್ತ ಅವಕಾಶಗಳಿಗೆ ಬೇರೆಲ್ಲವುಗಳಿಗಿಂತ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾನೆ. ಸಾವಿರ ವರ್ಷಗಳಿಂದ ಗುಲಾಮಗಿರಿಯಲ್ಲಿ ನರಳುತ್ತಿದ್ದರೂ ಆತನೊಳಗೆ ಬಿಡುಗಡೆಯ, ಸ್ವಾತಂತ್ರ್ಯದ, ಬಂಡಾಯದ ಬೀಜಗಳಿರುತ್ತವೆ. ಪಂಗಡದಲ್ಲಿನ ಶ್ರೇಷ್ಠ ವಸ್ತುಗಳು, ಸಕಲ ವೈಭೋಗ, ಸಮಸ್ತ ಸುಂದರಿಯರು ವಯಸ್ಸಾದ ಮುಖಂಡನ ಪಾಲಾಗುವುದನ್ನು ಆ ಪಂಗಡದ ಯುವ ತಲೆಗಳು ಎಷ್ಟು ದಿನ ತಾನೆ ಸಹಿಸಿಯಾವು? ಒಂದು ದಿನ ಎಲ್ಲಾ ಯುವ ತಲೆಗಳು ಸೇರಿ ಆ ಮುಖಂಡನ ತಲೆಯನ್ನು ತೆಗೆದು ಹಾಕಿದವು. ಒಮ್ಮೆ ನಾಯಕ ಎಂಬ ಸ್ಥಾನದ ಹಿಡಿತದಿಂದ ಪಂಗಡ ತಪ್ಪಿಸಿಕೊಂಡಾಗ, ಆ ವ್ಯವಸ್ಥೆಯು ನಾಶವಾದಾಗ ಬದಲಿ ವ್ಯವಸ್ಥೆಯ ಆವಶ್ಯಕತೆ ಕಂಡಿತು. ಹಿಂದಿನ ವ್ಯವಸ್ಥೆಯಲ್ಲಿನ ಬಂಡಾಯಕ್ಕೆ ಕಾರಣವಾಗಿದ್ದ ಕನಸುಗಳು, ಆಸೆಗಳು ಸೇರಿಕೊಂಡು ಹೊಸ ವ್ಯವಸ್ಥೆಯ ಜನ್ಮವಾಯಿತು. ಒಬ್ಬನ ಒಡೆತನದಲ್ಲಿ ಇಡೀ ಪಂಗಡ ಬಾಳುವ ವ್ಯವಸ್ಥೆಯಿಂದ ಬೇರ್ಪಟ್ಟು ನಾಲ್ಕೈದು ಮಂದಿಯ ಸಣ್ಣ ಸಣ್ಣ ಗುಂಪುಗಳು ಒಗ್ಗೂಡಿ ಸಮಾಜವಾಗುವ ವ್ಯವಸ್ಥೆಗೆ ಜನರು ಒಗ್ಗಿಕೊಂಡರು. ಹೀಗೆ ಬಳಕೆಗೆ ಬಂದ ಕುಟುಂಬ, ಕೌಟುಂಬಿಕ ವ್ಯವಸ್ಥೆ, ತಂದೆ-ತಾಯಿ-ಮಕ್ಕಳ ಸಂಬಂಧ ಎಲ್ಲಕ್ಕೂ ಮೂಲಕಾರಣ ಸ್ವಾತಂತ್ರ್ಯದ, ಸಮಾನ ಅವಕಾಶಗಳ ಹಂಬಲ. ಸರ್ವಾಧಿಕಾರಿ ನಾಯಕನ ಹಿಡಿತದಿಂದ ತಪ್ಪಿಸಿಕೊಂಡು ಸ್ವತಂತ್ರರಾಗಬೇಕೆನ್ನುವ ಅಭಿಲಾಷೆ.

ಪಂಗಡ ವ್ಯವಸ್ಥೆಯಿಂದ ಕುಟುಂಬ ವ್ಯವಸ್ಥೆಗೆ ಮನುಷ್ಯ ದಾಟಿಕೊಂಡ ತಕ್ಷಣ ಆತನಿಗೆ ಅಪರಿಮಿತ ಸ್ವಾತಂತ್ರ್ಯದ ಸವಿ ಸಿಕ್ಕಿತು. ತಾನು ಬಯಸಿದ, ತಾನು ಪ್ರೀತಿಸಿದ ಹೆಣ್ಣನ್ನು ಮದುವೆಯಾಗುವ ಹಕ್ಕು ಗಂಡಿಗೆ ದಕ್ಕಿದರೆ, ತನ್ನನ್ನು ಸಲಹಬಲ್ಲ ತಾಕತ್ತಿರುವ, ಯೌವನದಿಂದ ತುಳುಕುವ ಗಂಡನ್ನು ಒಪ್ಪುವ ಸ್ವಾತಂತ್ರ್ಯ ಹೆಣ್ಣಿಗೆ ಸಿಕ್ಕಿತು. ಒಂದು ಹೆಣ್ಣು, ಒಂದು ಗಂಡು ಜೊತೆಯಾದ ನಂತರ ಕುಟುಂಬವೆಂಬ ಘಟಕವಾಯಿತು. ಈ ಘಟಕಕ್ಕೆ ಕ್ರಮೇಣ ಮಕ್ಕಳು, ಮೊಮ್ಮಕ್ಕಳು, ಅವರ ಹೆಂಡತಿ/ಗಂಡಂದಿರು ಸೇರಿಕೊಳ್ಳುತ್ತಾ ಹೋದರು. ಕುಟುಂಬದೊಳಗೆ ಎಷ್ಟೇ ಜನರು ಇದ್ದರೂ ಅದು ಸಮಾಜದಲ್ಲಿ ಒಂದು ಘಟಕವಾಗಿಯೇ ಕೆಲಸ ಮಾಡುತ್ತಿತ್ತು. ಹಿಂದೆ ಪಂಗಡವೊಂದರ ಸದಸ್ಯರಾಗಿ ವರ್ತಿಸುತ್ತಿದ್ದವರು ಅನಂತರ ಕುಟುಂಬವೊಂದರ ಸದಸ್ಯರಾಗಿ ವರ್ತಿಸಲು ಶುರು ಮಾಡಿದರು. ಕುಟುಂಬದ ಶ್ರೇಯಸ್ಸಿಗಾಗಿ ದುಶಿಯುವುದು, ಅಣ್ಣ ತಮ್ಮಂದಿರ, ಅಕ್ಕ ತಂಗಿಯರ ಜವಾಬ್ದಾರಿಗಳನ್ನು ಹೊರುವುದು, ಕುಟುಂಬದ ಗೌರವವನ್ನು ತನ್ನ ಗೌರವವೆಂದು ಬಗೆದು ಅದನ್ನು ಉಳಿಸಿಕೊಳ್ಳಲು ಹೋರಾಡುವುದು ಹೀಗೆ ಪಂಗಡ ಎಂಬ ಘಟಕದಿಂದ ಮನುಷ್ಯ ಕುಟುಂಬ ಎಂಬ ಘಟಕಕ್ಕೆ ತನ್ನ ಬದುಕನ್ನು ವರ್ಗಾಯಿಸಿಕೊಂಡ.

ಆದರೆ ಆ ವ್ಯವಸ್ಥೆಯೂ ಸಂಪೂರ್ಣವಾಗಿ ಆತನನ್ನು ತೃಪ್ತಿಪಡಿಸಲಿಲ್ಲ. ಅಲ್ಲೂ ತನ್ನ ಸ್ವಾತಂತ್ರ್ಯಕ್ಕೆ, ತನ್ನ ಕನಸುಗಳ ಈಡೇರಿಕೆಗೆ ಅಡ್ಡಿ ಆತಂಕಗಳು ಕಂಡುಬಂದವು. ಹಿಂದೆ ಪಂಗಡದ ನಾಯಕನ ಹಿಡಿತದಲ್ಲಿದ್ದ ಸ್ವಾತಂತ್ರ್ಯ ಈಗ ಕುಟುಂಬದ ಯಜಮಾನನ ಕೈಗೆ ವರ್ಗಾವಣೆಯಾಗಿತ್ತು. ಮನೆಯಲ್ಲಿ ಹಿರಿಯರ ಮಾತಿನೆದುರು ಕಿರಿಯರ ಅಭಿಪ್ರಾಯಗಳು ಬೆಲೆಯಿಲ್ಲದಂತಾದವು. ತಮ್ಮನು ಜೀವನವಿಡೀ ಅಣ್ಣನಿಗೆ subordinate ಆಗಿ ಬದುಕಬೇಕಾಯಿತು. ದೊಡ್ಡ ಮಕ್ಕಳು ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ ಎಂಬ ಸನ್ನಿವೇಶ ಸೃಷ್ಟಿಯಾದಾಗ ಮನುಷ್ಯನ ಮನಸ್ಸಲ್ಲಿ ಸದಾ ಕಾಲ ಸುಪ್ತವಾಗಿದ್ದ ಬಂಡಾಯದ ಬೀಜಗಳು ಮೆಲ್ಲಗೆ ಮೊಳೆತವು. ಕೂಡು ಕುಟುಂಬದಿಂದ ಮೆಲ್ಲಮೆಲ್ಲನೆ ಒಬ್ಬೊಬ್ಬರೆ ಹೊರ ಬರತೊಡಗಿದರು. ಬುದ್ಧಿವಂತನಾದ ತಮ್ಮ ದಡ್ಡ ಅಣ್ಣನ ಅಡಿಯಾಳಾಗಿ ಕೆಲಸ ಮಾಡುವ ಅನಿವಾರ್ಯತೆಯಿಂದ ತಪ್ಪಿಸಿಕೊಳ್ಳಲು ಕುಟುಂಬದಿಂದ ಬೇರ್ಪಟ್ಟ. ಲೋಭಿಯಾದ ಹಿರಿಯವನು ತನ್ನ ದುಡಿಮೆಯ ಪಾಲನ್ನು ಹಂಚಿಕೊಳ್ಳಲು ನಿರಾಕರಿಸಿ ಉಳಿದವರನ್ನು ಮನೆಯಿಂದ ಹೊರದಬ್ಬಿದ. ಹೀಗೆ ಒಟ್ಟು ಕುಟುಂಬ ಅಥವಾ ಕೂಡು ಕುಟುಂಬದಿಂದ ನ್ಯೂಕ್ಲಿಯಾರ್ ಫ್ಯಾಮಿಲಿಗಳು ಜನ್ಮ ತಳೆದವು. ಗಂಡ ಹೆಂದತಿ ಹಾಗೂ ಅವರ ಮಕ್ಕಳು ಇಷ್ಟಕ್ಕೇ ಕುಟುಂಬ ಸೀಮಿತವಾಯಿತು. ಹಿಂದೆ ಇಲ್ಲದ ಹಕ್ಕುಗಳು, ಅಧಿಕಾರಗಳು ಈಗ ಲಭ್ಯವಾದವು. ನಾಲ್ಕು ಮಂದಿ ಅಣ್ಣ ತಮ್ಮಂದಿರ ಮನೆಯಲ್ಲಿ ಒಬ್ಬನಿಗೆ ಮನೆಯ ಯಾಜಮಾನ್ಯ ಸಿಕ್ಕು ಉಳಿದವರು ಆತನಿಗೆ ವಿಧೇಯರಾಗಿ ನಡೆಯಬೇಕಾಗಿದ್ದವರು ಈಗ ಒಬ್ಬೊಬ್ಬರು ಒಂದೊಂದು ಕುಟುಂಬದ ಯಜಮಾನರಾಗುವ ಅಧಿಕಾರವನ್ನು ಪಡೆದುಕೊಂಡರು. ತಮ್ಮ ಮಕ್ಕಳನ್ನು ಯಾವ ಶಾಲೆಗೆ ಸೇರಿಸಬೇಕು, ತಾವು ಎಷ್ಟು ಸಂಪಾದನೆ ಮಾಡಬೇಕು, ಹೆಂಡತಿಯೂ ಕೆಲಸಕ್ಕೆ ಹೋಗಬೇಕೆ ಬೇಡವೇ ಎಂಬೆಲ್ಲಾ ತೀರ್ಮಾನಗಳನ್ನು ತೆಗೆದುಕೊಳ್ಳುವ ಹಕ್ಕು ಸಿಕ್ಕಿತು.ಹೆಚ್ಚಿನ ಸ್ವಾತಂತ್ರ್ಯವನ್ನು ಕೊಡುವ ಹೊಸ ವ್ಯವಸ್ಥೆಗೆ ಸಹಜವಾಗಿ ಮನುಷ್ಯ ಒಗ್ಗಿಕೊಂಡ. ವ್ಯವಸ್ಥೆಯಿಂದ ವ್ಯವಸ್ಥೆಗೆ ಈತ ರೂಪಾಂತರಗೊಳ್ಳುತ್ತಾ ಹೋಗುವ ಪ್ರಕ್ರಿಯೆ ಅತ್ಯಂತ ಯಾತನಮಯವಾದದ್ದು ಎಂಬುದನ್ನು ಒಪ್ಪಬೇಕು. ಹಳೆಯ ತಂತುಗಳನ್ನು ಕಡಿದುಕೊಂಡು ಮುಂದೆ ನಡೆಯುವುದಕ್ಕೆ ಅಪಾರ ವೇದನೆಯನ್ನು ಸಹಿಸಿಕೊಳ್ಳುವ ಶಕ್ತಿಯ ಜೊತೆಗೆ ಹೊಸ ವ್ಯವಸ್ಥೆಯಲ್ಲಿನ ಅಪರಿಚಿತ ಸನ್ನಿವೇಶಗಳನ್ನು ಎದುರಿಸುವ ಧೈರ್ಯವೂ ಬೇಕು.

ತಂದೆ- ತಾಯಿ ಮಕ್ಕಳು ಒಟ್ಟಿಗೆ ಸೇರಿದ ಕುಟುಂಬ ವ್ಯವಸ್ಥೆ ಬಹುಕಾಲ ತನ್ನ ಅಧಿಕಾರವನ್ನು, ಸ್ವಾತಂತ್ರ್ಯವನ್ನು ಮನಸೋ ಇಚ್ಚೆ ಅನುಭವಿಸಿತು. ಆದರೆ ಇಲ್ಲೂ ಬಂಡಾಯದ ಹೊಗೆ ಏಳಲು ಶುರುವಾಯಿತು. ಅಪ್ಪನ ಯಾಜಮಾನ್ಯವನ್ನು ಮಕ್ಕಳು ಪ್ರಶ್ನಿಸಲು ಶುರು ಮಾಡಿದರು. ಆರ್ಥಿಕವಾಗಿ ಪೋಷಕರನ್ನು ಅವಲಂಬಿಸುವುದರಿಂದ ತಮ್ಮ ಸ್ವಾತಂತ್ರ್ಯಹರಣವಾಗುತ್ತದೆಯೆಂದು ಮಕ್ಕಳು ಆದಷ್ಟು ಬೇಗ ಆರ್ಥಿಕವಾಗಿ ಸ್ವತಂತ್ರರಾಗಲು ಹವಣಿಸತೊಡಗಿದರು. ಅಲ್ಲದೆ ಗಂಡ ಹೆಂಡಿರಲ್ಲೂ ಕುಟುಂಬದ ಉಳಿಯುವಿಕೆಗಿಂತ ಹೆಚ್ಚಾಗಿ ತಮ್ಮ ವೈಯಕ್ತಿಕ ಆಸೆ, ಮಹತ್ವಾಕಾಂಕ್ಷೆಗಳು, ವೃತ್ತಿ-ಪ್ರವೃತ್ತಿಗಳು, ಸುಖ ಭೋಗಗಳು ಮುಖ್ಯವಾದವು. ವಿಚ್ಛೇದನಗಳು ಸಾಮಾನ್ಯವಾದವು. ಮಕ್ಕಳು ತಂದೆ ತಾಯಿಯರ ಅಂಕುಶದಿಂದ ತಪ್ಪಿಹೋದರು. ಪಾಶ್ಚಾತ್ಯ ಸಮಾಜದಲ್ಲಿ ಸಹಜವೆನಿಸಿರುವ ಈ ವ್ಯವಸ್ಥೆಯ ನೆರಳು ನಮ್ಮಲ್ಲಿ ಕಾಣುತ್ತಿರುವುದನ್ನು ಅನೇಕರು ಆತಂಕದಿಂದ, ಕೆಲವರು ಅದೊಂದು ಸಹಜ ಪ್ರಕ್ರಿಯೆ ಎಂಬ ನಿರ್ಭಾವದಿಂದ ಕಾಣುತ್ತಿದ್ದಾರೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog Stats

  • 69,005 hits
ಡಿಸೆಂಬರ್ 2008
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
1234567
891011121314
15161718192021
22232425262728
293031  
%d bloggers like this: