ಕಲರವ

ಹೇಮಾಂತರಂಗ: ಸ್ತ್ರೀ ಅಂದರೆ ಅಷ್ಟೇ ಸಾಕೆ?

Posted on: ನವೆಂಬರ್ 20, 2008

– ಹೇಮಾ ಪವಾರ್, ಬೆಂಗಳೂರು

ಬೆಳಿಗ್ಗೆಯಿಂದ ಆ ಮುಖಾನೇ ಕಾಡ್ತಿದೆ. ಸಿಗ್ನಲ್ನಲ್ಲಿ ಸಿಂಬಳ ಸೋರುತ್ತಿರುವ ಮಗುವನ್ನು ಎತ್ತಿಕೊಂಡು ಭಿಕ್ಷೆ ಬೇಡುತ್ತಿದ್ದ ಆ ಹೆಣ್ಣಿನ ಮುಖ. ಅವಳನ್ನ ದಿನಾ ನೋಡ್ತಿದ್ದೆ, ಇವತ್ತು ಆ ಮುಖ ಪದೇ ಪದೇ ನೆನಪಾಗ್ಲಿಕ್ಕೆ ಕಾರಣ, ಪತ್ರಿಕೆಯಲ್ಲಿ ಈ ಸಿಗ್ನಲ್ ಭಿಕ್ಷುಕರ ಬಗ್ಗೆ ಓದಿದ್ದ ಲೇಖನ. ಅವರು ಮಕ್ಕಳನ್ನ ಭಿಕ್ಷೆ ಬೇಡೋಕೆ ಅಂತಾನೆ ದುಡ್ಡುಕೊಟ್ಟು ತರ್ತಾರಂತೆ!! ಒಮ್ಮೆ ಪೋಲೀಸರಿಗೆ ಸಿಕ್ಕಿಹಾಕಿಕೊಂಡ ಒಬ್ಬ ಭಿಕ್ಷುಕಿಯ ಸೆರಗಿನ ಗಂಟಲ್ಲಿ ಭರ್ತಿ ನಲವತ್ತು ಸಾವಿರ ಸಿಕ್ತಂತೆ!! ಇದೆಲ್ಲ ನಿಜವಾ? ಅವಳ ದೀನ ಮುಖ, ಸಿಂಬಳ ಸುರಿಸುತ್ತಿದ್ದ ಆ ಮುಗ್ದ ಮಗು, ಅರೆ ಹಾಲೂಡಿಸುತ್ತಿದ್ದಳಲ್ಲ ಅದೂ ಸುಳ್ಳೇ? ಮನ ಕಲಕಿತ್ತು. ಈ ಜನಕ್ಕೆ ಅದೇನು ಬಂದಿದೀಯೋ. ಭಿಕ್ಷಾಟನೇನು ಬಿಸಿನೆಸ್ ಆಗಿ ಹೋಯ್ತೆ? ಆ ಹುಡುಗಿ ಮಗುವನ್ನಿಟ್ಟುಕೊಂಡು ತನ್ನ ಹೆಣ್ತನವನ್ನು ಎನ್‌ಕ್ಯಾಶ್ ಮಾಡಿಕೊಳ್ತಿತ್ತಾ? ಛೆ ಅಷ್ಟೊಂದು ಮುಗ್ದತೆ ಇತ್ತು ಮುಖದಲ್ಲಿ, ಅದರ ಹಿಂದೆ ಅಂಥಾ ಸ್ವಾರ್ಥವಿತ್ತಾ? ಸ್ವಾರ್ಥ ಅಂದೇಕೆ ಅಂದುಕೊಳ್ಳಬೇಕು ಅದು ಅವಳ ನೆಸೆಸಿಟಿ ಇರಬಹುದು, ಓದಿಲ್ಲದ, ಮನೆಯಿಲ್ಲದ ಅವಳಿಗೆ ಕೆಲಸ ಯಾರು ಕೊಡ್ತಾರೆ? ಯೋಚಿಸಿಕೊಂಡೇ ಬಸ್ ಹತ್ತಿದೆ. ಈ ಬಸ್ ಕಾರ್ಪೊರೇಷನ್ಗೆ ಹೋಗುತ್ತ… ಕಂಡಕ್ಟರನ್ನ ಕೇಳುತ್ತಿದ್ದ ಹುಡುಗಿ ಬಸ್ ಹತ್ತಿ ಸೀದಾ ನನ್ನ ಪಕ್ಕ ಬಂದು ಕೂತು, ಕಾರ್ಪೋರೇಷನ್ ಬಂದ್ರೆ ಹೇಳ್ತೀರಾ? ಅಂತ ಇಂಗ್ಲೀಷ್ನಲ್ಲಿ ಕೇಳಿದಾಗಲೆ ನನಗೆ ಎಚ್ಚರವಾಗಿದ್ದು. ಆಫ್ ಕೋರ್ಸ್ ಅಂತ ನಾನೂ ಸ್ಟೈಲಾಗಿ ಉಲಿದು ಇಷ್ಟಗಲ ಮುಗುಳ್ನಕ್ಕೆ. ಅಷ್ಟೇ ಸಾಕು ಅಂತ ಆ ಹುಡುಗಿ ಮಾತಿಗೆ ಶುರುವಿಡ್ತು. ಅವಳ ಕೆಲಸ, ಗಂಡ, ಆರು ತಿಂಗಳ ಮಗು ಇನ್ನು ಏನೇನೋ ನಮ್ಮ (ಅವಳ) ಮಾತಿನ ನಡುವೆ ಬಂತು. ಕಾರ್ಪೋರೇಷನ್ ಬಂದಿದ್ದೆ ಗೊತ್ತಾಗ್ಲಿಲ್ಲ. ಆ ಹುಡುಗಿ ತಡಬಡಾಯಿಸಿ ನನಗೊಂದು ಬಾಯ್ ಹೇಳಿ, ನಾನು ಕೊಟ್ಟಿದ್ದ ಅದೇ ಇಷ್ಟಗಲ ಮುಗುಳ್ನಗುವನ್ನು ನನಗೇ ಮರಳಿಸಿ ಇಳಿದು ಹೋದಳು. ಮನಸ್ಸು ಆ ಭಿಕ್ಷುಕಿಯೊಡನೆ ಇವಳನ್ನು ಹೋಲಿಸುತಿತ್ತು. ಹಿಂದೆಯೇ ಗುದ್ದಿಕೊಂಡು ಆ ಹೆಣ್ಣಿನ ನೆನಪು ಬಂದಿತ್ತು.

ಮೊದಲು ನಾನು ನೋಡಿದ್ದು ಅವಳ ಗಂಡನನ್ನು. ಅವಳು ಅವನನ್ನ ಬಿಟ್ಟು ಹೋಗಿದ್ದಳು. ಅವನನ್ನಷ್ಟೇ ಅಲ್ಲ ಅವಳ ಎರಡು ಮಕ್ಕಳನ್ನೂ ಬಿಟ್ಟು ಹೋಗಿದ್ದಲ್ಲದೇ ಅವಳ ಗಂಡನಿಂದ ಜೀವನಾಂಶ ಕೋರಿ ಕೋರ್ಟಿನಲ್ಲಿ ಕೇಸೊಂದನ್ನು ಹಾಕಿದ್ದಳು. ಆ ಮನುಷ್ಯನನ್ನು ನೋಡಿದಾಗ ನನಗೆ ಎಲ್ಲಿಲ್ಲದ ಕೋಪ ಬಂದಿತ್ತು. ಇರೋ ಎರಡು ಮಕ್ಕಳನ್ನು ಬಿಟ್ಟು ಹೋಗಬೇಕೆಂದರೆ ಅದಿನ್ನೆಂತಾ ಹಿಂಸೆ ಕೊಟ್ಟಿರಬೇಕು ಈ ಪ್ರಾಣಿ ಅಂತ ಬೈದುಕೊಂಡಿದ್ದೆ. ಬರೋ ಸಂಬಳ ಮಕ್ಕಳ ಊಟಕ್ಕೆ, ಸ್ಕೂಲ್ fee ಸಾಲೋಲ್ಲ ಸಾರ್ ಜೀವನಾಂಶ ಅಂದ್ರೆ ತೊಂದರೆಯಗುತ್ತೆ ಹೇಗಾದ್ರೂ ರಾಜಿ ಮಾಡ್ಸಿ ಸಾರ್ ಅಂತ ಲಾಯರನ್ನ ಅಂಗಲಾಚುತ್ತಿದ್ದ. ರಾಜಿಗೆ ಅಂತ ಕರೆಸಿದಾಗ ನೋಡಿದ್ದೆ ಅವಳನ್ನು, ಆಗ್ಲೇ ನನಗೆ ಗೊತ್ತಾಗಿದ್ದು ಅವಳು ಇನ್ನೊಬ್ಬ ಗಂಡಿನೊಂದಿಗೆ ಸಂಸಾರ ಮಾಡುತ್ತಿದ್ದಾಳೆಂದು. ಬೆಳೆಯುತ್ತಿರುವ ಇಬ್ಬರು ಮಕ್ಕಳನ್ನು, ಅಷ್ಟು ವರ್ಷ ಸಂಸಾರ ಮಾಡಿದ್ದ ಗಂಡನನ್ನು ಬಿಟ್ಟು ಇನ್ನೊಬ್ಬ ಗಂಡಿನೊಂದಿಗೆ ಹೋಗಿದ್ದು ತಪ್ಪೋ ಸರಿಯೋ ಗೊತ್ತಿಲ್ಲ. ಆದರೆ ಅವಳಲ್ಲಿ ಒಂದಿಷ್ಟೂ ಪಶ್ಚಾತಾಪವಿರಲಿಲ್ಲ! ಗಂಡ ಬೈದಿದ್ದು, ಅವನು ಹೊಡೆದಿದ್ದರ ಬಗ್ಗೆ ಸಾಲು ಸಾಲಾಗಿ ವರದಿಯೊಪ್ಪಿಸಿ ಬೈತಿದ್ದವಳು, ಮಕ್ಕಳ ವಿಷಯ ಬಂದಾಗ, ಅವನೇ ಹುಟ್ಟಿಸಿದ್ದಲ್ಲವೇ ಸಾಕಲೀ ಬೇಕಾದ್ರೆ ಅಂದಿದ್ದಳು. ತೀರಾ ಹಳ್ಳಿಯವಳಾದ, ಅದರಲ್ಲೂ ಹೆಣ್ಣಾದ ಆಕೆಯಲ್ಲಿ ಅಷ್ಟು ಕ್ರೌರ್ಯವಿರಲು ಹೇಗೆ ಸಾಧ್ಯ? ನನ್ನ ಮನಸ್ಸು ಒಪ್ಪಿಕೊಳ್ಳಲು ತಯಾರಿರಲಿಲ್ಲ ಆದರೆ ವಾಸ್ತವ ಕಣ್ಣಿಗೆ ರಾಚುತ್ತಿತ್ತು.

hemantaranga.png

ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ ವಿಷಯದಲ್ಲಿ ಎಂಜಿನಿಯರಿಂಗ್ ಮುಗಿಸಿ, ಸಾಫ್ಟ್ ವೇರ್ ಎಂಜಿನಿಯರ್ ಆಗಿ ಮೂರು ವರ್ಷದಿಂದ ಕೆಲಸ ಮಾಡುತ್ತಿದ್ದ ರಚನ, ಹೆರಿಗೆಗಾಗಿ ಮೂರು ತಿಂಗಳಷ್ಟೇ ರಜ ಹಾಕಿ ತೀರ ಎರಡು ತಿಂಗಳ ಮಗುವನ್ನು ಮನೇಲಿ ಬಿಟ್ಟು ಅರ್ಧ ದಿನ ಆಫೀಸಿಗೆ ಹೋಗಿಬರಲೇ ಬೇಕಾದ ಅನಿವಾರ್ಯತೆ, ಅವಳ ಮುಖದಲ್ಲಿ ಮಗುವಿನ ಬಗ್ಗೆ ಇದ್ದ ಪ್ರೀತಿ, ಕಾಳಜಿ, ಆತಂಕ, ಅವಳ ಕೆಲಸ ಬಿಡಲಾರದ ಪರಿಸ್ಥಿತಿ, ನಾಲ್ಕು ತಿಂಗಳಿಂದ ಅದನ್ನು ನಿಭಾಯಿಸುತ್ತಿದ್ದ ಅವಳ ಬುದ್ದಿವಂತಿಕೆ, ಬಸ್ಸಿನಲ್ಲಿ ಅವಳೊಡನೆ ಮಾತಾಡಲು ಸಿಕ್ಕ ಇಪ್ಪತ್ತು ನಿಮಿಷಕ್ಕೇ ಅವಳ ಬಗ್ಗೆ ಆರಾಧನಾ ಭಾವವನ್ನು ಮೂಡಿಸಿತ್ತು. ಗಂಡ ಹೇಗಿದ್ದರೂ ಅವನು ಗಂಡನೆಂಬ ಒಂದೇ ಕಾರಣಕ್ಕೆ ಜೀವಮಾನವಿಡೀ ಸಣ್ಣ ಬಿಕ್ಕಳಿಕೆಯೊಂದಿಗೇ ಬದುಕಿಬಿಡುವ ಎಷ್ಟೋ ಜನ ಹೆಣ್ಣುಮಕ್ಕಳ ಮಧ್ಯೆ, ಇಬ್ಬರು ಮಕ್ಕಳಿದ್ದುಕೊಂಡು ಗಂಡನನ್ನು ಬಿಟ್ಟು ಬೇರೆ ಗಂಡಿನೊಂದಿಗೆ ಹೋಗಿದ್ದಲ್ಲದೆ, ಅವನು ಕಿರುಕುಳ ನೀಡುತ್ತಿದ್ದ ಎಂದು domestic violence act ಕೆಳಗೆ ಜೀವನಾಂಶ ಕೇಳಿ ಕೇಸು ಬರೆಸಿದ್ದ ಆ ಹೆಣ್ಣು ಅದೇಕೋ ನನ್ನ ದೃಷ್ಠಿಯಲ್ಲಿ ದುಡ್ಡಿಗಾಗಿ ಮಗುವನ್ನಿಟ್ಟುಕೊಂಡು ಭಿಕ್ಷೆಬೇಡುತ್ತಿದ್ದ ಆ ಭಿಕ್ಷುಕಿಗಿಂತ ಕೀಳಾಗಿ ಹೋಗಿದ್ದಳು. “ಮನೆ ಮನೆಯಲಿ ದೀಪ ಉರಿಸಿ, ಹೊತ್ತು ಹೊತ್ತಿಗೆ ಅನ್ನ ಉಣಿಸಿ, ತಂದೆ ಮಗುವ ತಬ್ಬಿದಾಕೆ, ನಿನಗೆ ಬೇರೆ ಹೆಸರು ಬೇಕೆ… ಸ್ತ್ರೀ ಅಂದರೆ ಅಷ್ಟೇ ಸಾಕೆ?” ಬಸ್ಸಿನ ರೇಡಿಯೋದಲ್ಲಿ ಬರುತ್ತಿದ್ದ ಹಾಡು ನನ್ನನ್ನು ಅಣಕಿಸುತ್ತಿತ್ತು.

7 Responses to "ಹೇಮಾಂತರಂಗ: ಸ್ತ್ರೀ ಅಂದರೆ ಅಷ್ಟೇ ಸಾಕೆ?"

ಹೇಮಾ,
ನಿಮ್ಮ ಲೇಖನ ಓದಿ ತುಂಬಾ ಬೇಜಾರಾಯಿತು. ನೀವು ಕೊಟ್ಟಿರುವ ಮೂರು ಉದಾಹರಣೆಗಳಲ್ಲಿ ಒಬ್ಬ ಹೆಣ್ಣು ತನ್ನ ತಾಯ್ತನದ ಸುಖವನ್ನು ಅನುಭವಿಸುತ್ತಿದ್ದಾಳೆ. ಅದಕ್ಕೆ ಅವಳ ಗಂಡನ, ಅವಳ ಸುತ್ತ ಇರುವ ಜನ ಅವಳಿಗೆ ಕೊಡುತ್ತಿರುವ ಸಹಕಾರ ಮುಖ್ಯ ಕಾರಣವಾಗಿದೆ. ಇನ್ನೆರಡು ಉದಾಹರಣೆಗಳಲ್ಲಿರುವ ಹೆಣ್ಣು ಮಕ್ಕಳಿಗೆ ಇಂಥ ಸಹಕಾರ ಸಿಗುತ್ತಿಲ್ಲ. ಬದಲಾಗಿ, ಬಯ್ಗುಳ ಹೊಡೆತ/ಬಡತನ ಧಾರಾಳವಾಗಿವೆ. ಇವೆಲ್ಲವನ್ನೂ ಸಹಿಸಿಕೊಂಡು, ಸಹನಾಮಯಿಗಳಾಗಿ, ’ಸಂಪೂರ್ಣ ಸ್ತ್ರೀ’ ಆಗಬೇಕೆಂದು ನೀವು expect ಮಾಡುವುದನ್ನು ನೋಡಿದರೆ ನನಗೆ ಏನು ಹೇಳಬೇಕೆಂದು ತೋಚುತ್ತಿಲ್ಲ. ಕ್ರೂರನಾದ ಗಂಡನನ್ನು ಬಿಟ್ಟು, ಅವನಿಗೆ ಶಿಕ್ಷೆಯನ್ನೂ ಕೊಡಿಸಿ, ದಿಟ್ಟತನದಿಂದ ಬಾಳುತ್ತಿರುವ ಹೆಣ್ಣಿನ ಬಗ್ಗೆ ನನಗೆ ಸಂಪೂರ್ಣ ಗೌರವವಿದೆ. ಅವಳ ಮಕ್ಕಳ ಬಗ್ಗೆ ಅವಳಿಗೆ ಮಮತೆ ಇಲ್ಲದಿರುವಂತೆ ಅವಳು ಮಾತಾಡುವುದು ಅವಳ ವೈಯಕ್ತಿಕ ಹಕ್ಕು. ಅವಳ ಜೀವನ, ಸ್ತ್ರೀಯ ಬಗ್ಗೆ ಒಬ್ಬ ಗಂಡಸು ಬರೆದಿರುವ ನಿಮ್ಮ favorite ಹಾಡಿಗೆ ತಕ್ಕಂತೆ ಇಲ್ಲದಿರುವ ಕಾರಣ, ನಿಮಗೆ ಅವಳು ಅತ್ಯಂತ ಕೀಳಾದ ಹೆಣ್ಣಂತೆ ಕಾಣುವುದು, ನಿಮ್ಮ ಮನಸ್ಸಿನಲ್ಲಿರುವ ಸಂಕುಚಿತ ಸ್ವಭಾವವನ್ನು ತೋರಿಸುತ್ತದೆ. ತಮ್ಮ ಸುಖವಾದ ಜೀವನದ ದ್ರುಷ್ಟಿಯಿಂದ ಇತರರ ಜೀವನವನ್ನು ತೂಕಮಾಡಿ ನೋಡುವ, ’why don’t they eat cake’ ಎಂಬ ಧೋರಣೆ ಇರುವ ನಿಮ್ಮಂಥ ಮಂದಿ ನಮ್ಮಲ್ಲಿ ಅನೇಕರಿದ್ದಾರೆ ಬಿಡಿ. -AB

AB,

ನನ್ನ ಲೇಖನವನ್ನೂ ಹೀಗೂ ಗ್ರಹಿಸಬಹುದೆಂದು ನನಗೆ ತಿಳಿದಿರಲಿಲ್ಲ. ನಾನು ಕೊಟ್ಟ ಮೂರೂ ಉದಾಹರಣೆಗಳಲ್ಲಿನ ಸ್ತ್ರೀಯರಿಗೆ ಅವರವರದೇ ಆದ ಸಮಸ್ಯೆಗಳಿವೆ, ಈ ಲೇಖನ ಅವರ ವೈಯಕ್ತಿಕ ಸಮಸ್ಯೆಗಳನ್ನು, ನಿಲುವುಗಳನ್ನು ಅವಮಾನಿಸುವ ಉದ್ದೇಶದಿಂದ ಖಂಡಿತ ಬರೆದಿದ್ದಲ್ಲ. ಅವರ ಬಗ್ಗೆ ಸಂಪೂರ್ಣವಾಗಿ ನನಗೆ ತಿಳಿದೂ ಇಲ್ಲ, ’ಸ್ತ್ರೀ’ ಯ ವಿವಿಧ ವ್ಯಕ್ತಿತ್ವವನ್ನು ನಾನು ನನ್ನದೇ ರೀತಿಯಲ್ಲಿ ಅವಲೋಕಿಸಿ ಬರೆದಿದ್ದೇನೆ. ಹೆಣ್ಣೆಂದರೆ ಹೀಗೇ ಇರಬೇಕೆಂದು ಹೇಳುವ ಹಕ್ಕು ಯಾರಿಗೂ ಇಲ್ಲ, ಹೆಣ್ಣಾದ ನನಗೂ. ನಾನು ಹೇಳಬೇಂಕೆಂದಿದ್ದ ವಿಷಯ ಹೆಣ್ಣಿಗೆ ಸಂಬಂಧಿಸಿದ್ದಾದ್ದರಿಂದ ಹೀಗೆ ಉದಾಹರಿಸಿದ್ದೇನೆ. ನಾನು “ಕೀಳು” ಎಂಬ ಪದ ಬಳಸಿರುವುದು ಮಕ್ಕಳನ್ನು ಕುರಿತು ಆಕೆಗಿದ್ದ ಉದಾಸೀನಕ್ಕೆ ಹೊರತು ಆಕೆಯ ವೈಯಕ್ತಿಕ ನಿಲುವುಗಳಿಗಲ್ಲ.

ತನ್ನದೇ ಮಕ್ಕಳ ಬಗ್ಗೆ ಚೂರು ಕರುಣೆ ಹೆಣ್ಣಾಗಲ್ಲದಿದ್ದರೂ, ತಾಯಿಯಾಗಿ ಆಕೆಗಿರಬೇಕಿತ್ತು ಎಂಬುದು ನನ್ನ ಅಭಿಪ್ರಾಯ. ನೀವದನ್ನು ಸಂಕುಚಿತ ಮನೋಭಾವ ಎನ್ನುವುದಾದರೆ ಅದೇ ಸರಿ. ಇದೇ ಸ್ಥಿತಿಯಲ್ಲಿ ಒಬ್ಬ ಗಂಡಸಿದಿದ್ದರೆ ನೀವು ಹೀಗೆ ಪ್ರತಿಕ್ರಿಯಿಸುತ್ತಿದ್ದರ? ಹೆಣ್ಣಾಗಿ ಏನು ಮಾಡಿದರು ಸರಿ ಎನ್ನುವ ನಿಮ್ಮ ಸ್ತ್ರೀವಾದ ನನಗೇಕೋ ಹಿಡಿಸಲಿಲ್ಲ.

ಬರಹ ಓದಿ ಬೇಜಾರಾಗಿದ್ದರೆ ಕ್ಷಮಿಸಿ, ನಾನು entertainment ಗೆ ಬರೆಯುವುದಿಲ್ಲ.

ಧನ್ಯವಾದ,
ಹೇಮ

>ಹೆಣ್ಣೆಂದರೆ ಹೀಗೇ ಇರಬೇಕೆಂದು ಹೇಳುವ ಹಕ್ಕು ಯಾರಿಗೂ ಇಲ್ಲ, ಹೆಣ್ಣಾದ ನನಗೂ. ……..ನಾನು “ಕೀಳು” ಎಂಬ ಪದ ಬಳಸಿರುವುದು ಮಕ್ಕಳನ್ನು ಕುರಿತು ಆಕೆಗಿದ್ದ ಉದಾಸೀನಕ್ಕೆ ಹೊರತು ಆಕೆಯ ವೈಯಕ್ತಿಕ ನಿಲುವುಗಳಿಗಲ್ಲ. ……….ತನ್ನದೇ ಮಕ್ಕಳ ಬಗ್ಗೆ ಚೂರು ಕರುಣೆ ಹೆಣ್ಣಾಗಲ್ಲದಿದ್ದರೂ, ತಾಯಿಯಾಗಿ ಆಕೆಗಿರಬೇಕಿತ್ತು ಎಂಬುದು ನನ್ನ ಅಭಿಪ್ರಾಯ.

ಇಲ್ಲಿರುವ ವಿರೋಧಾಭಾಸ ನಿಮಗೆ ಕಾಣುವುದಿಲ್ಲವೇ? ಹೆಣ್ಣು ಹೇಗಿರಬೇಕೆಂದು ಹೇಳುವ ಹಕ್ಕು ಇಲ್ಲದಿದ್ದರೂ ಒಬ್ಬ ಹೆಣ್ಣಿನ ಮಕ್ಕಳ ಬಗೆಗಿನ ಅಭಿಪ್ರಾಯವನ್ನು ’ಕೀಳು’ ಎಂದು ಕರೆಯುವುದು ಸರಿಯೇ? ಇದನ್ನೇ ನಾನು ’ಸಂಕುಚಿತ ಮನೋಭಾವ’ ಎಂದು ಕರೆದದ್ದು.

ಹೆಂಗಸರ ಮಕ್ಕಳ ಬಗೆಗಿನ ಕರುಣೆಯನ್ನು ಮುಂದಿಟ್ಟುಕೊಂಡು divorce ಕೊಡದೆ, ಕೊಟ್ಟರೂ ಮಕ್ಕಳ ಓದು ಇತ್ಯಾದಿಗಳಿಗೆ ದುಡ್ಡು ಕೊಡದೆ ಸತಾಯಿಸುವ ಗಂಡಸರು ಇದ್ದಾರಲ್ಲ, ಅಂಥ ಪರಿಸ್ಥಿತಿಯಲ್ಲಿರುವ ಹೆಂಗಸರು ಏನು ಮಾಡಬೇಕು? ಇದೇ ಸ್ಥಿತಿಯಲ್ಲಿ ನಿಮ್ಮ ಉದಾಹರಣೆಯಲ್ಲಿರುವ ಹೆಣ್ಣು ಮಗಳು ಇಲ್ಲವೆಂದು ನಿಮಗೆ ಗೊತ್ತೇ? ಕೋರ್ಟಿನಲ್ಲಿ ಕಂಗಾಲಾಗಿ ಅಂಗಲಾಚುವ ಗಂಡು, ಮನೆಯಲ್ಲಿ ಬೇಕಾದಷ್ಟು ದಬ್ಬಾಳಿಕೆ ನಡೆಸಲು ಸಾಧ್ಯವಿದೆ. ತನ್ನನ್ನು ಕೀಳಾಗಿ ಕಂಡ ಗಂಡನನ್ನು ಬಿಟ್ಟು ಬೇರೆ ಗಂಡಸಿನ ಜೊತೆ ಸಂಸಾರ ನಡೆಸುವುದಕ್ಕೆ ಅವಳಿಗೆ ಪಶ್ಚಾತ್ತಾಪ ಯಾಕಿರಬೇಕೊ ನನಗಂತೂ ಗೊತ್ತಿಲ್ಲ. ಅವಳು ದಿಟ್ಟ ಮನಸ್ಸಿನಿಂದ, ಅನೇಕ ಹೆಂಗಸರೂ, ಸ್ತ್ರೀ ಸಂಘಗಳೂ ಸಾಧಿಸಲು ಪ್ರಯತ್ನಿಸುತ್ತಿರುವ ’ಸ್ತ್ರೀ ಸ್ವಾತಂತ್ರ್ಯ’ವನ್ನು (ಅವಳ ಜೀವನದ decisions ಅವಳೇ ಮಾಡುವುದು-ಎಂಬ ಅರ್ಥದಲ್ಲಿ) ಅವಳು ಗಳಿಸಿಕೊಂಡಿದ್ದಾಳೆ. ಅವಳು ’domestic violence’ಗೆ ಒಳಗಾಗಿದ್ದು, ‘domestic violence act’ ಅನ್ನು ಸರಿಯಾಗಿ ಬಳಸಿಕೊಂಡು, ತನ್ನ ಜೀವನವನ್ನು ನೆಮ್ಮದಿಯಿಂದ ಬಾಳಲು ಬಯಸುತ್ತಿದ್ದಾಳೆ. ಇದರಲ್ಲಿ ತಪ್ಪೇನಿದೆ?

ಅವಳು ಹಳ್ಳಿಯ ಹೆಣ್ಣಾಗಿಲ್ಲದಿದ್ದರೆ, ಅವಳ ನಡವಳಿಕೆ ನಿಮಗೆ ಹೆಚ್ಚು ಸರಿ ಅನ್ನಿಸುತಿತ್ತೇ?

ಹೆಣ್ಣಾದ ಕಾರಣಕ್ಕಾಗಿ ಅವಳು ಏನು ಮಾಡಿದರೂ ಸರಿ ಎಂದು ನಾನು ಹೇಳುತ್ತಿಲ್ಲ. ಎಲ್ಲ ಹೆಂಗಸರೂ ಅವಳಂತೆಯೇ ಇರಬೇಕೆಂದೂ ನಾನು ಹೇಳುತ್ತಿಲ್ಲ. ಅವಳ ಮಕ್ಕಳ ಬಗ್ಗೆ ಅವಳಿಗಿರುವ ನಿಲುವನ್ನು, ಅವಳ ಜೀವನದಲ್ಲಿ ಅವಳು ಮಾಡಿರುವ decisionsಅನ್ನು ನಾನು ಗೌರವಿಸುತ್ತೇನೆ. ಇಷ್ಟಾಗಿಯೂ ಅವಳು ಮಕ್ಕಳನ್ನು ಬೀದಿಪಾಲು ಮಡುತ್ತಿಲ್ಲ, ಮಕ್ಕಳ ತಂದೆಯ ಬಳಿ ಬಿಟ್ಟಿದ್ದಾಳೆ, ಅದರಲ್ಲಿ ತಪ್ಪೇನೂ ನನಗೆ ಕಾಣುತ್ತಿಲ್ಲ.

ಹೆಣ್ಣಿಗಿರಬೇಕಾದ ಕರುಣೆ ಮಮತೆಗಳ ಬಗ್ಗೆ ಅತಿರೇಕದ expectations ಇವೆ. ಕೆಲವಾದರೂ ಹೆಂಗಸರಿಗೆ ಇಂಥ ಭಾವನೆಗಳು ಇಲ್ಲದಿರುವುದು ಅಥವಾ ಈ ಭಾವನೆಗಳ ಉತ್ಕಟತೆ ಕಡಿಮೆಯಿರುವುದು ಪ್ರಕೃತಿ ಸಹಜವಾದ ವಿಷಯಗಳು. ಅವರ ಮೇಲೂ ’ಸಂಪೂರ್ಣ ಸ್ತ್ರೀ’ ಯ ಲಕ್ಷಣಗಳನ್ನು ಹೇರಿ, ಅವರ ನಡತೆಯನ್ನು ’ಕೀಳು’ ಎಂದು ಅಭಿಪ್ರಾಯ ಪಡುವುದು ನನಗೆ ಸರಿಯೆಂದು ಕಾಣುವುದಿಲ್ಲ.

>ಇದೇ ಸ್ಥಿತಿಯಲ್ಲಿ ಒಬ್ಬ ಗಂಡಸಿದಿದ್ದರೆ ನೀವು ಹೀಗೆ ಪ್ರತಿಕ್ರಿಯಿಸುತ್ತಿದ್ದರ?

ಆರ್ಥಿಕವಾಗಿ ತನ್ನ ಹೆಂಡತಿಯ ಮೇಲೆ ಸಂಪೂರ್ಣವಾಗಿ ಅವಲಂಬಿತನಾಗಿ, ತನ್ನ ಹೆಂಡತಿಯಿಂದ ಒದೆತ ತಿಂದು, ಪ್ರತಿದಿನದ ನಿಂದನೆ ಕಾಟ ತಡೆಯಲಾರದೆ, ಅವಳನ್ನೂ ಮಕ್ಕಳನ್ನೂ ಬಿಟ್ಟು ಬೇರೆ ಹೆಂಗಸಿನೊಂದಿಗೆ ಸಂಸಾರ ನಡೆಸುವ ಗಂಡಿನ ಬಗ್ಗೆ ನಾನು ಖಂಡಿತ ಇದೇ ರೀತಿ ಪ್ರತಿಕ್ರಿಯಿಸುತ್ತೇನೆ.

ನನಗೆ ಬೇಜಾರಾಗಿದ್ದು ನಿಮ್ಮ ಅಭಿಪ್ರಾಯದಿಂದ, ನಾನು ನಿಮ್ಮ ಬರಹವನ್ನು ’entertainment’ಗಾಗಿ ಓದಲಿಲ್ಲ.

-AB

ಅಲ್ಲಿ ವಿರೋಧಾಭಾಸವೇನಿದೆ ನನಗೆ ತಿಳಿಯಲಿಲ್ಲ AB. ನನ್ನ ಅಭಿಪ್ರಾಯ ಈಗಲೂ ಅದೇ, ಹೆಣ್ಣಾಗಿ ಆಕೆಗೆ ತನ್ನ ವೈಯಕ್ತಿಕ ಜೀವನದ ಬಗ್ಗೆ ಬೇಕಾದ ನಿರ್ಣಯ ತೆಗೆದುಕೊಳ್ಳುವ ಹಕ್ಕು ಖಂಡಿತ ಇದೆ. ಆಕೆ ಸಂಪೂರ್ಣ ಸ್ತ್ರೀ ಲಕ್ಷಣಗಳುಳ್ಳ, ನೀವು ಹೇಳಿರುವಂತೆ ನನ್ನ favourite ಹಾಡಿಗೆ ತಕ್ಕಂತೆ ಇರಬೇಕೆಂದು ನಾನು ಹೇಳುತ್ತಿಲ್ಲ, ಆದರೇ ತಾಯಿಯಾಗಿ ಅವಳು ಮಕ್ಕಳ ಬಗ್ಗೆ ಉದಾಸೀನತೆ ತೋರಬಹುದೆ? ಮಕ್ಕಳ ಬಗೆಗೆ ಆಕೆಯಿಂದ ಕರುಣೆ ಮಮತೆಯ ಅತಿರೇಕದ expectations ನನಗಿಲ್ಲ, ಒಬ್ಬ ತಂದೆ ತನ್ನ ಮಕ್ಕಳ ಜವಾಬ್ದಾರಿಯನ್ನು ನಿಭಾಯಿಸದೇ ಹೋದರೇ ಅವನನ್ನು ಜರಿಯುವ ನಾವು, ಹೆಣ್ಣೊಬ್ಬಳು ಹಾಗೆ ಮಾಡಿದರೆ ಅದವಳ ವೈಯಕ್ತಿಕ ನಿಲುವು, ಸ್ತ್ರೀ ಸ್ವಾತಂತ್ರ್ಯ ಎಂದೆಲ್ಲ ಬಿಂಬಿಸಿ defend ಮಾಡಿಕೊಳ್ಳುವುದು ಸರಿಯೇ?
ಆಕೆಗೆ ತನ್ನ ಗಂಡನ ಕಿರುಕುಳ ತಡೆಯಲಾಗಲಿಲ್ಲವೆಂದ ಮೇಲೆ ಆತನನ್ನು ನಂಬಿ ಮಕ್ಕಳನ್ನು ಹೇಗೆ ಅವನ ಬಳಿ ಬಿಟ್ಟಳು? ತಂದೆ ಮಕ್ಕಳನ್ನು ಚೆನ್ನಾಗಿ ಸಾಕುತ್ತಾನೆಂದು ತಿಳಿದ ಮೇಲೆ ಮತ್ತೆ ಜೀವನಾಂಶ ಕೋರಿ ಕೇಸನ್ನೇಕೆ ಬರೆಸಿದಳು? ತನ್ನ ಮಕ್ಕಳಿಗೇ ತೊಂದರೆಯಾಗುತ್ತದೆಂದು ತಿಳಿದಿದ್ದೂ ಆಕೆ ಹಾಗೆ ಮಾಡಿದಳೆಂದ ಮೇಲೆ ಆಕೆಗೆ ತಾಯಿಗಿರಬೇಕಾದ ಮಮತೆಯಿರಲಿ, ಮನುಷ್ಯ ಮಾತ್ರನಿಗೆ ಇರಬೇಕಾದ ಕನಿಷ್ಟ ಕರುಣೆಯೂ ಇಲ್ಲವೆಂದಾಯಿತಲ್ಲ? ಆಕೆಯ ಈ ಪ್ರವೃತ್ತಿ ನಿಮಗೆ ಕೀಳು ಅನಿಸುತ್ತಿಲ್ಲವೆ? ನನ್ನ ಪ್ರಶ್ನೆ ‘why dont they eat cake’ ಎಂದಲ್ಲ, ‘why they are always offered cake even though when they don’t deserve it’ ಎಂದು.

ಆಕೆ ಹಳ್ಳಿಯವಳಲ್ಲದಿದ್ದರೂ ನಿಸ್ಸಂಶಯವಾಗಿ ನನ್ನಭಿಪ್ರಾಯ ಆಕೆಯನ್ನು ಕುರಿತು ಇದೇ ಆಗಿರುತಿತ್ತು.

ಆರ್ಥಿಕವಾಗಿ ತನ್ನ ಹೆಂಡತಿಯ ಮೇಲೆ ಸಂಪೂರ್ಣವಾಗಿ ಅವಲಂಬಿತನಾಗಿ, ತನ್ನ ಹೆಂಡತಿಯಿಂದ ಒದೆತ ತಿಂದು, ಪ್ರತಿದಿನದ ನಿಂದನೆ ಕಾಟ ತಡೆಯಲಾರದೆ, ಅವಳನ್ನೂ ಮಕ್ಕಳನ್ನೂ ಬಿಟ್ಟು ಬೇರೆ ಹೆಂಗಸಿನೊಂದಿಗೆ ಸಂಸಾರ ನಡೆಸುವ ಗಂಡಿನ ಬಗ್ಗೆ ನಾನು ಖಂಡಿತ ನಿಮ್ಮಂತೆಯೇ ಪ್ರತಿಕ್ರಿಯಿಸುತ್ತೇನೆ AB, ಏಕೆಂದರೆ ಮಕ್ಕಳನ್ನು ಹೆಂಡತಿಯನ್ನು ಬಿಟ್ಟು ಇನ್ನೊಂದು ಹೆಂಗಸಿನೊಂದಿಗೆ ಹೋದ ಗಂಡು, ಹೆಂಡತಿ ನನಗೆ ಕಿರುಕುಳ ಕೊಡುತಿದ್ದಳು ಎಂದು ದೂರಿ, ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸದೆ ಜೀವನಾಂಶ ಕೋರಿ ಕೋರ್ಟಿನಲ್ಲಿ ಕೇಸು ಬರೆಸುತ್ತಿರಲಿಲ್ಲ.

>ಆದರೇ ತಾಯಿಯಾಗಿ ಅವಳು ಮಕ್ಕಳ ಬಗ್ಗೆ ಉದಾಸೀನತೆ ತೋರಬಹುದೆ?—– ಒಬ್ಬ ತಂದೆ ತನ್ನ ಮಕ್ಕಳ ಜವಾಬ್ದಾರಿಯನ್ನು ನಿಭಾಯಿಸದೇ ಹೋದರೇ ಅವನನ್ನು ಜರಿಯುವ ನಾವು…

ಈ ಎರಡೂ ಸಂದರ್ಭಗಳು ಬೇರೆ ಬೇರೆ. ’ತಂದೆ ತನ್ನ ಮಕ್ಕಳ ಜವಾಬ್ದಾರಿಯನ್ನು ನಿಭಾಯಿಸದೇ ಹೋದರೇ ಅವನನ್ನು ಜರಿಯುವ’ ಸಂದರ್ಭದಲ್ಲಿ ಶೋಷಣೆ ಇರುವುದಿಲ್ಲ. ನಿಮ್ಮ ಲೇಖನದಲ್ಲೇ ಇರುವ ಎರಡನೆ ಉದಾಹರಣೆಯನ್ನು ತೆಗೆದುಕೊಳ್ಳಿ. ಈ ಹೆಣ್ಣು ತಾಯಿಯಾಗಿ ತನ್ನ ಕರ್ತವ್ಯವನ್ನು ನಿಭಾಯಿಸದೇ ಇದ್ದಿದ್ದರೆ, ಅದು ತಪ್ಪಾಗುತ್ತಿತ್ತು. ಏಕೆಂದರೆ, ಅವಳ ಜೀವನ ’normal’ ಆಗಿದೆ. ನಮಗೆ ತಿಳಿದಂತೆ ಅವಳು ಯಾವ ಶೋಷಣೆಗೂ ಒಳಗಾಗಿಲ್ಲ. ಅವಳು, ಅವಳ ಗಂಡ ಮನುಷ್ಯತ್ವದ, ತಾಯ್ತನದ/ತಂದೆತನದ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗುತ್ತದೆ.

ನಿಮ್ಮ ಮೂರನೆಯ ಉದಾಹರಣೆಯ ಹೆಣ್ಣು ಅತೀವ ಶೋಷಣೆಗೆ ಒಳಗಾಗಿದ್ದಾಳೆ (ನಿಮ್ಮ ಅಭಿಪ್ರಾಯವೇನೋ ನನಗೆ ಗೊತ್ತಿಲ್ಲ, ಆದರೆ ನನ್ನ ಪ್ರಕಾರ ಒಂದೇ ಒಂದು ಸಾರಿ ಹೊಡೆದರೂ ಅದು ಶೋಷಣೆ, ಒಂದೇ ಒಂದು ಸಾರಿ ಮಾನಸಿಕ ಕಿರುಕುಳ ಕೊಟ್ಟರೂ, ಅದೂ ಶೋಷಣೆಯೇ, – ಗಂಡು-ಹೆಣ್ಣು ಎಂಬ ಭೇದವಿಲ್ಲದೆ). ಅವಳಿಗಾಗಿರುವ ಶೋಷಣೆ ಯಾವ ರೀತಿಯದು, ಅದರಿಂದ ಅವಳ ಮನಸ್ಸಿನ ಮೇಲಾಗಿರುವ ಪರಿಣಾಮ ಏನು ಎಂದು ನಿಶ್ಚಯವಾಗಿ ಹೇಳುವುದು ತುಂಬಾ ಕಷ್ಟ. ಯಾವುದೇ ಒಂದು ಸಂದರ್ಭಕ್ಕೆ ಎಲ್ಲರೂ (ಹೆಣ್ಣಾಗಲೀ ಗಂಡಾಗಲೀ) ಮಾನಸಿಕವಾಗಿ ಒಂದೇ ರೀತಿ ಪ್ರತಿಕ್ರಯಿಸುತ್ತಾರೆಂದು ಹೇಳಲು ಸಾಧ್ಯವಿಲ್ಲ. ಈ ಹೆಣ್ಣಿನ ವೈವಾಹಿಕ ಜೀವನದಲ್ಲಿ ನಡೆದ ಘಟನೆಗಳು ಅವಳ decisionsಗೆ ಕಾರಣವಾಗಿವೆ. ಆ ಘಟನೆಗಳು ನಿಮ್ಮ ಜೀವನದಲ್ಲಿ ನಡೆದಿದ್ದರೆ, ನೀವು ಬೇರೆ ರೀತಿ ಪ್ರತಿಕ್ರಯಿಸುತ್ತಿದ್ದಿರೇನೋ. ಅವಳ ಜೀವನದ ಘಟನೆಗಳ ಆಧಾರದ ಮೇಲೆ ಅವಳು ಕೈಗೊಂಡಿರುವ ನಿರ್ಧಾರವನ್ನು ದೂರ ನಿಂತು ನೋಡುತ್ತಿರುವ ನಾವು ಒಪ್ಪಿಕೊಳ್ಳಲೇಬೇಕಾಗುತ್ತದೆ.

ಇದಕ್ಕೆ ಸ್ತ್ರೀ ಸ್ವಾತಂತ್ರ್ಯದ ಆಯಾಮ ಕೊಡುವ ಕಾರಣವೇನೆಂದರೆ, ನಮ್ಮ ಸಮಾಜದಲ್ಲಿ (ಬೇರೆ ಸಮಾಜಗಳನ್ನು ನಾನು ಪರಿಗಣಿಸುತ್ತಿಲ್ಲ, ನನ್ನ ವಾದವನ್ನು ಸರಳಗೊಳಿಸುವುದಕ್ಕಾಗಿ) ಗಂಡ ಏನೇ ಮಾಡಿದರೂ ಎಂಥವನೇ ಆದರೂ ಸಹಿಸಿಕೊಂಡು ’ಆದರ್ಶ ಸತಿ’ಯಾಗಿ ಬಾಳಬೇಕೆಂಬ ನಂಬಿಕೆ ಇದೆ, ಈ ಶತಮಾನದಲ್ಲೂ ಇದೆ. ಸ್ತ್ರೀವಾದಿಗಳ ಪ್ರಕಾರ, ಗಂಡ ಎಂಬ ಕಾರಣಕ್ಕಾಗಿ ಅವನು ಕೊಡುವ ಕಿರುಕುಳವನ್ನೆಲ್ಲವನ್ನೂ ತಡೆದುಕೊಳ್ಳಬೇಕಾಗಿಲ್ಲ. ನಿಮ್ಮ ಉದಾಹರಣೆಯಲ್ಲಿರುವ ಹೆಂಗಸು ಇದನ್ನು ಸಾಧಿಸಿದ್ದಾಳೆ. ನಮ್ಮ ಸಮಾಜದೊಳಗಿದ್ದುಕೊಂಡು ಇಂಥ ನಿರ್ಧಾರವನ್ನು ತೆಗೆದುಕೊಳ್ಳುವುದು ತುಂಬಾ ಕಷ್ಟದ ವಿಷಯ. ಇದಕ್ಕಾಗಿಯೇ ನನಗೆ ಅವಳ ಬಗ್ಗೆ ಮೆಚ್ಚುಗೆ ಇರುವುದು. ಇಂಥ ಉದಾಹರಣೆಗಳು ತುಂಬಾ ಕಡಿಮೆ ಎಂದು ಗಮನಿಸಬೇಕು.

>‘why they are always offered cake even though when they don’t deserve it’

ಹೇಮಾ, ಅವಳ ಜೀವನದಲ್ಲೀಗ cake offer ಎಲ್ಲಿಂದ ಬಂದಿದೆ? ಜೀವನವಿಡೀ ಅವಳನ್ನು ’ಗಂಡ-ಮಕ್ಕಳನ್ನು ಬಿಟ್ಟು ಬಂದವಳು’ ಎಂಬ ಪಟ್ಟ ಅವಳನ್ನು ಹಿಂಬಾಲಿಸುತ್ತದೆ. ಅವಳ ಜೊತೆ ಈಗಿರುವ ಗಂಡು ಅವಳನ್ನು ಗೌರವದಿಂದ ಕಾಣುತ್ತಾನೆಂಬ guarantee ಇದೆಯೇ? ಮಕ್ಕಳಿಂದ ದೂರವಿರುವ ನೋವು ಅವಳ ಮನಸ್ಸಿನಲ್ಲಿ ಇರಲು ಸಾಧ್ಯವಿದೆ ಅಲ್ಲವೇ? ಈಗಾಗಲೇ ಅವಳ ಯೌವ್ವನದ ಬಹು ಭಾಗ ನೋವಿನಲ್ಲಿ ಕಳೆದಿದೆ. ಅವಳ ಕಟು ಅನುಭವಗಳ ನೋವು ಅವಳೊಂದಿಗೆ ಯಾವಾಗಲೂ ಇರುತ್ತದೆ. ಇಷ್ಟಕ್ಕೂ ಅವಳು ತನ್ನ ಮಕ್ಕಳನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದಿದ್ದರೆ, ಅವಳು ’ಸಂಪೂರ್ಣ ಸ್ತ್ರೀ’ ಆಗಿಬಿಟ್ಟಿದ್ದಾಳೆ ಎಂದು ಅವಳ ಗಂಡ ಅವಳಿಗೆ, ಅವಳ ಮಕ್ಕಳಿಗೆ ಸಲ್ಲಬೇಕಾದ ಜೀವನಾಂಶವನ್ನು ಕೊಡುತ್ತಿದ್ದನೇ? ತಾಯಿಯ ಅನನ್ಯ ಪ್ರೀತಿಯಿಂದ ಸುಖ ದೊರಕುತ್ತದಾದರೂ, ಹೊಟ್ಟೆ ತುಂಬುವುದಿಲ್ಲವಲ್ಲ!

ಅವಳಿಗಿದ್ದ choices ತುಂಬಾ ಕಷ್ಟದ್ದು. ಮಕ್ಕಳನ್ನು ತನ್ನೊಂದಿಗಿದ್ದರೆ, ಅವರನ್ನು ಸಾಕುವ ಸಾಮರ್ಥ್ಯ ಅವಳಿಗಿಲ್ಲ. ಮಕ್ಕಳ ಸಲುವಾಗಿ ಗಂಡನೊಂದಿಗೆ ಸಂಸಾರ ಮಾಡಲು, ಅವನ ಕಿರುಕುಳದ ಕಾರಣದಿಂದ ಸಾಧ್ಯವಿಲ್ಲ. ಮಕ್ಕಳನ್ನು ಗಂಡನೊಂದಿಗೆ ಬಿಟ್ಟರೆ ಅವನು ಚೆನ್ನಾಗಿ ಸಾಕುತ್ತಾನೆಂಬ ನಂಬಿಕೆಯಿಲ್ಲ. ಇವೆಲ್ಲವೂ ಅವಳಿಗೆ, ಅವಳ ಮಕ್ಕಳಿಗೆ ಅನುಕೂಲವಲ್ಲದ choices. ಇದರಲ್ಲೊಂದನ್ನು ಅವಳು ಆಯ್ದುಕೊಂಡಿದ್ದಾಳೆ. ಅದು ಸರಿಯೋ ತಪ್ಪೋ ನಿರ್ಧಾರ ಮಾಡುವ ಹಕ್ಕು ನನಗಾಗಲೀ ನಿಮಗಾಗಲೀ ಇಲ್ಲ. ಹೌದು, ಅವಳು ಮಕ್ಕಳನ್ನೂ ತನ್ನ ಜೊತೆಯಲ್ಲಿಟ್ಟುಕೊಂಡು ಬಾಳುವುದು ಸಾಧ್ಯವಾಗಿದ್ದರೆ ಚೆನ್ನಾಗಿರುತ್ತಿತ್ತು. ಆದರೆ ಅವಳಿಗೆ ಅದು ಸಾಧ್ಯವಾಗಲಿಲ್ಲ. (ಅವಳ ಗಂಡ ನೆಟ್ಟಗಿದ್ದಿದ್ದರೆ, ಮಕ್ಕಳನ್ನು ಬಿಡುವ ಪ್ರಮೇಯವೇ ಇರುತ್ತಿರಲಿಲ್ಲ—– -ರೆಗಳಿಗೆ ಕೊನೆಯಿಲ್ಲ)

ಮದುವೆ ಮುರಿದುಬಿದ್ದಾಗ, ಮಕ್ಕಳು ಅದರ ಅಮಾಯಕ ಬಲಿಪಶುಗಳು. ಇದಕ್ಕೆ ತಕ್ಕ ಪರಿಹಾರ ಇಲ್ಲ. ಈ ಉದಾಹರಣೆಯಲ್ಲಿ ಮಕ್ಕಳು ತಾಯಿಯೊಂದಿಗೆ ಇದ್ದಿದ್ದರೂ ಅವರಿಗೆ ತಂದೆಯ ಕೊರತೆ ಇರುತ್ತಿತ್ತು.

>ತಂದೆ ಮಕ್ಕಳನ್ನು ಚೆನ್ನಾಗಿ ಸಾಕುತ್ತಾನೆಂದು ತಿಳಿದ ಮೇಲೆ ಮತ್ತೆ ಜೀವನಾಂಶ ಕೋರಿ ಕೇಸನ್ನೇಕೆ ಬರೆಸಿದಳು?

ಅವಳು ಆರ್ಥಿಕವಾಗಿ ಸ್ವಾವಲಂಬಿಯಾಗಿಲ್ಲದಿದ್ದರೆ, ಅವಳಿಗೆ ಅವಳ ಗಂಡ ಜೀವನಾಂಶವನ್ನು ಕೊಡಲೇಬೇಕು, ಅದನ್ನು ಕೇಳುವುದರಲ್ಲಿ ತಪ್ಪೇನೂ ಇಲ್ಲ (ಅವಳು ಬೇರೆ ಮದುವೆ ಮಾಡಿಕೊಂಡರೆ, ಜೀವನಾಂಶ ನಿಂತು ಹೋಗುತ್ತದೆ ಎಂದು ನನ್ನ ತಿಳುವಳಿಕೆ). ಇದರಿಂದ ಅವಳು ಕೀಳು ಹೆಂಗಸಾಗುವುದಿಲ್ಲ. ಅವಳು ಅವನೊಂದಿಗೆ ಇದ್ದಿದ್ದರೆ, ಅವನು ಅವಳ ಹಾಗೂ ಮಕ್ಕಳ ಖರ್ಚನ್ನು ನಿರ್ವಹಿಸುತ್ತಿರಲಿಲ್ಲವೇ? ಅವಳನ್ನು ಹೊಡೆದು ಬಡಿದು ನಿಂದಿಸುವಾಗ ಅವನಿಗೆ ಇದ್ದ ತಾಕತ್ತು ಈಗೆಲ್ಲಿ ಹೋಯಿತು? ದುಡ್ಡಿನ ವಿಷಯ ಬಂದ ತಕ್ಷಣ, ಮಕ್ಕಳನ್ನು ನೆವವಾಗಿಟ್ಟುಕೊಂಡು ಗೋಳಾಡುವ ಗಂಡಸಿನ ಮೇಲೆ ನನಗೆ ಗೌರವವಿಲ್ಲ. ತಾಯಂದಿರು ತಮ್ಮ ಮಕ್ಕಳನ್ನು ಭಿಕ್ಷೆ ಬೇಡಿಯಾದರೂ ಸಾಕಬೇಕೆಂಬ ನಿಮ್ಮ ನಿಲುವು ಈಗ ತಂದೆಯಾದ ಅವನಿಗೆ ಅನ್ವಯಿಸಬೇಕಾಗಿದೆ. ಇಷ್ಟಾಗಿಯೂ ಅವನ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿಯೇ ಜೀವನಾಂಶವನ್ನು ತೀರ್ಮಾನಿಸುವುದು. ಅವನಿಗೆ ಸಂಬಳ ಇರುವ ಕೆಲಸ ಇದೆ, ಅವಳಿಗಿಲ್ಲ. ಈಗ ಅವನಿಗೆ ಕಷ್ಟವಾದರೂ ಮುಂದೆ ಅವನ ಜೀವನ ಆರ್ಥಿಕವಾಗಿ ಭದ್ರವಾಗಿದೆ (ನಿಮ್ಮಂಥವರ ಕನಿಕರ ಅವನ ಮೇಲೆ ಯಾವಾಗಲೂ ಇರುವುದರಿಂದ, ಸಾಮಾಜಿಕವಾಗಿಯೂ ಅವನ ಜೀವನ ಸುಭದ್ರವಾಗಿದೆ, ಅಷ್ಟೇ ಯಾಕೆ, ಇಂಥ ಗಂಡಸಿಗೂ ವರದಕ್ಷಿಣೆ ಕೊಟ್ಟು ತಮ್ಮ ಮಗಳನ್ನು ಕೊಡುವ ಕನ್ಯಾಪಿತೃಗಳಿದ್ದಾರೆ). ಅವಳ ಜೀವನದಲ್ಲಿ ಇಂಥ ರಕ್ಷಣೆಗಳಿಲ್ಲ. ಅವಳು ಅವನು ಕೊಡುವ ಜೀವನಾಂಶವನ್ನು ಉಪಯೋಗಿಸಿಕೊಂಡು, ಏನಾದರೂ ತರಬೇತಿ ಪಡೆದು, ಕೆಲಸ ಗಿಟ್ಟಿಸಿಕೊಂಡು, ಆರ್ಥಿಕವಾಗಿ ಸ್ವಾವಲಂಬಿಯಾಗಬೇಕು—ಮುಂದೆ ಅವಳೇನು ಮಾಡುತ್ತಾಳೊ ಅವಳಿಗೆ ಬಿಟ್ಟಿದ್ದು. ಅವಳಿಗೆ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ.

>ಏಕೆಂದರೆ ಮಕ್ಕಳನ್ನು ಹೆಂಡತಿಯನ್ನು ಬಿಟ್ಟು ಇನ್ನೊಂದು ಹೆಂಗಸಿನೊಂದಿಗೆ ಹೋದ ಗಂಡು, ಹೆಂಡತಿ ನನಗೆ ಕಿರುಕುಳ ಕೊಡುತಿದ್ದಳು ಎಂದು ದೂರಿ, ಮಕ್ಕಳ ಭವಿಷ್ಯದ ಬಗ್ಗೆ ಯೋಚಿಸದೆ ಜೀವನಾಂಶ ಕೋರಿ ಕೋರ್ಟಿನಲ್ಲಿ ಕೇಸು ಬರೆಸುತ್ತಿರಲಿಲ್ಲ.

ಇತ್ತೀಚಿನವರೆಗೆ ಹೆಂಗಸರೂ ಇಂಥ ಕೇಸು ಬರೆಸುತ್ತಿರಲಿಲ್ಲ. ಈಗಲೂ ಶೋಷಿತ ಹೆಂಗಸರೆಲ್ಲರೂ ಬರೆಸುತ್ತಿಲ್ಲ. ಇಂಥ ಕೇಸು ಬರೆಸುವುದರಲ್ಲಿ ತಪ್ಪೇನೂ ನನಗೆ ಕಾಣುತ್ತಿಲ್ಲ. ಹೆಂಗಸರಿಂದ ಶೋಷಣೆಗೆ ಒಳಗಾಗಿರುವ ಗಂಡಸರೂ/ಅವರ ಬಗ್ಗೆ ಕನಿಕರವಿರುವವರು ಸಂಘಟಿತರಾಗಿ, ಅಂಥ ಶೋಷಿತ ಗಂಡಸರ ರಕ್ಷಣೆಗೆ ಕಾನೂನು ಮಾಡಲು ಶ್ರಮಿಸುವುದಾದರೆ ಅದಕ್ಕೆ ನನ್ನ ಅಥವಾ ಯಾವುದೇ ಸ್ತ್ರೀವಾದಿಗಳಿಗೆ ಅಭ್ಯಂತರವಿಲ್ಲ. ಆದರೆ ನೀವು ಕೊಟ್ಟಿರುವ ಉದಾಹರಣೆಗಳಲ್ಲಿ ಗಂಡಸರು ಯಾರೂ ಶೋಷಣೆಗೊಳಗಾಗಿಲ್ಲ.

-AB

AB,

ನಿಮ್ಮ ಕಾಳಜಿ ನನಗೆ ಅರ್ಥವಾಯಿತು. ಕಾನೂನಿನ ಸಹಾಯ ಪಡೆದು ಮಕ್ಕಳ ಜವಬ್ದಾರಿಯಿಂದ ವಿಮುಖರಾಗುವುದು ಸರಿಯೆಂದಾದರೆ ಮಕ್ಕಳು ಯಾರನ್ನು ದೂರಬೇಕು? ತಂದೆಯಾಗಲೀ ತಾಯಿಯಾಗಲೀ ಮಕ್ಕಳ ವಿಷಯ ಬಂದಾಗ ಸಮಾನ ಜವಬ್ದಾರರು. ನನ್ನ ಉದಾಹರಣೆಯಲ್ಲಿನ ಹೆಣ್ಣುಮಗಳು ಮಕ್ಕಳ ಜವಬ್ದಾರಿಯನ್ನು ಹೊರಲು ಸಿದ್ದವಿಲ್ಲ, ಆಕೆಯ ಗಂಡನಿಂದ ಆಕೆ ಶೋಷಣೆಗೊಳಗಾಗಿರುವುದು ನಿಜವಾದರೂ ಆಕೆಯ ಗಂಡ ಮಕ್ಕಳನ್ನು ಸಾಕಲು ಸಿದ್ದವಿದ್ದಾನೆ. ನೀವೇಳಿರುವಂತೆ ಆಕೆ ಆರ್ಥಿಕವಾಗಿ ಗಂಡನ ಮೇಲೆ dependent ಇರಬಹುದು, ಆದರೆ ಆಕೆ ಇನ್ನೊಂದು ಗಂಡಿನ ಜೊತೆ ಇರಬೇಕೆಂದು ಸ್ವತಂತ್ರ ನಿಲುವನ್ನು ತಳೆದ ಮೇಲೆ ಮತ್ತೆ ಈತನನ್ನು ಆರ್ಥಿಕತೆಯ defence ಕೇಳುವುದು ಸರಿಯೇ? ಸಮಾನತೆ ಬಯಸುವ ಹೆಣ್ಣು ಈ ವಿಷಯದಲ್ಲಿ ತಾನು ಅಬಲೆ ಕೈಲಾಗದವಳು ಎಂದು advantage ತೆಗೆದುಕೊಳ್ಳುವುದು ಎಷ್ಟು ಸರಿ? (ಆಕೆ ಬೇರೆ ಮದುವೆಯಾಗುವ ಹಾಗಿದ್ದರೂ ಆಕೆಯ ಗಂಡ compensation ರೂಪದಲ್ಲಿ ಅವಳಿಗೆ ಒಮ್ಮೆಲೆ ಒಟ್ಟು ಮೊತ್ತ ಕೊಡಬೇಕಾಗುತ್ತದೆ).

>>>>ಜೀವನವಿಡೀ ಅವಳನ್ನು ‘ಗಂಡ-ಮಕ್ಕಳನ್ನು ಬಿಟ್ಟು ಬಂದವಳು’ ಎಂಬ ಪಟ್ಟ ಅವಳನ್ನು ಹಿಂಬಾಲಿಸುತ್ತದೆ. ಅವಳ ಜೊತೆ ಈಗಿರುವ ಗಂಡು ಅವಳನ್ನು ಗೌರವದಿಂದ ಕಾಣುತ್ತಾನೆಂಬ guarantee ಇದೆಯೇ? ಮಕ್ಕಳಿಂದ ದೂರವಿರುವ ನೋವು ಅವಳ ಮನಸ್ಸಿನಲ್ಲಿ ಇರಲು ಸಾಧ್ಯವಿದೆ ಅಲ್ಲವೇ? ಈಗಾಗಲೇ ಅವಳ ಯೌವ್ವನದ ಬಹು ಭಾಗ ನೋವಿನಲ್ಲಿ ಕಳೆದಿದೆ. ಅವಳ ಕಟು ಅನುಭವಗಳ ನೋವು ಅವಳೊಂದಿಗೆ ಯಾವಾಗಲೂ ಇರುತ್ತದೆ…………………… ಮುಂತಾದ ನಿಮ್ಮ ಸಾಲುಗಳು ಸಂಪೂರ್ಣವಾಗಿ ಸ್ತ್ರೀಪರ ನಿಲುವಾಗಿದೆ. ಇದು ಒಳ್ಳೆಯದೇ ಆದರೂ ಎಲ್ಲ ಸಮಯದಲ್ಲೂ ಅನ್ವಯಿಸುವುದಿಲ್ಲವೆಂದು ನನ್ನ ಅಭಿಪ್ರಾಯ. ಎಲ್ಲ ಕಡೆಯಿಂದಲೂ ಆಕೆಯೇ ಶೋಷಿತಳು ಎಂಬಂತೆ ಯಾಕೆ ಯೋಚಿಸುತ್ತೀರಿ? ಆಕೆಯೂ ಗಂಡನಿಗೆ ನಿಂದಿಸಿರಬಹುದು, ಮಾನಸಿಕ ಕಿರುಕುಳ ಕೊಟ್ಟಿರಬಹುದು ಎಂದೇಕೆ ನೀವು ಯೋಚಿಸುವುದಿಲ್ಲ? ನಾನು ಮೊದಲೇ ಹೇಳಿದಂತೆ ಸ್ತ್ರೀಯ ವಿವಿಧ ವ್ಯಕ್ತಿತ್ವದ ಬಗ್ಗೆ ’ನನ್ನ’ ಅವಲೋಕನ, ಈ ಲೇಖನ. ಎಲ್ಲಾ ಸಂಧರ್ಭದಲ್ಲೂ ಸ್ತ್ರೀ ಶೋಷಣೆಗೇ ಒಳಗಾಗುತ್ತಾಳೆ ಅಥವಾ ತಾನು ಶೋಷಣೆಗೆ ಒಳಗಾಗಿದ್ದೇನೆಂದು ಹೇಳಿಕೊಳ್ಳುವ ಸ್ತ್ರೀ ಸತ್ಯವನ್ನೇ ಹೇಳುತ್ತಾಳೆ ಎಂದು ಎಲ್ಲರ ಅಭಿಪ್ರಾಯ (ನನ್ನನ್ನು ಸೇರಿಸಿ) ಆದರೆ ನನ್ನ ಗಮನಕ್ಕೆ ಬಂದ ಈ ಹೆಣ್ಣು ಮಗಳು, ತಾನು ಶೋಷಿತಳೆಂದು ಹೇಳಿಕೊಂಡು ಅದರಿಂದ unwanted advantage ತೆಗೆದುಕೊಳ್ಳುತ್ತಿದ್ದಳೆಂಬುದು ನನ್ನ ಅನಿಸಿಕೆ. ನಿಮ್ಮಂತೆಯೇ ಸ್ತ್ರೀ ವಾದಿಯಾದ ನಾನು ಸ್ತ್ರೀಪರ ನಿಲುವನ್ನು ಮೀರಿ ಈ ಲೇಖನ ಬರೆಯುವಂತೆ ಮಾಡಿದ್ದು ಆಕೆಯ ನಡವಳಿಕೆ ಮತ್ತು ಮಕ್ಕಳ ಬಗ್ಗೆ ಆಕೆಗಿದ್ದ ಉದಾಸೀನತೆ. ಇದನ್ನು ಓದಿದ ನಿಮಗೆ ಆಕೆಯ ಬಗ್ಗೆ ನನ್ನ ಅಭಿಪ್ರಾಯ ತಪ್ಪು ಎನಿಸಿದ್ದರೆ ಅದು ನನ್ನ ಬರವಣಿಗೆಯಲ್ಲಿನ ಲೋಪವೇ ಹೊರತು, ಆಕೆಯ ಬಗ್ಗೆ ನನಗಿದ್ದ misunderstandingನಿಂದಲ್ಲ.

ನಿಮ್ಮ ವಾದವನ್ನು ಗಟ್ಟಿಗೊಳಿಸಲು ನೀವು ಆಕೆಯನ್ನು ಅಸಹಾಯಕಳನ್ನಾಗಿ ಮಾಡಿದಷ್ಟು, ನನ್ನ ವಾದವನ್ನು ಗಟ್ಟಿಗೊಳಿಸಲು ನಾನು ಆಕೆಯನ್ನು ಬೇರೆಯದೇ ರೀತಿಯಲ್ಲಿ ಬಿಂಬಿಸುವ ಅವಕಾಶಗಳಿವೆ. ಶೋಷಿತ ಹೆಣ್ಣುಮಕ್ಕಳ ಬಗ್ಗೆ ಅನುಕಂಪ, ಶೋಷಿಸುವ ಗಂಡಸರ ಬಗ್ಗೆ ದ್ವೇಷ ನಿಮ್ಮಂತೆಯೇ ನನಗೂ ಇದೆ. ಲೇಖನದ ಉದ್ದೇಶ, ನನ್ನ ನಿಲುವು ನಿಮಗೆ ಅರ್ಥವಾಗದೇ ಹೋದರೇ ನನ್ನ ವಾದದಿಂದೇನೂ ಪ್ರಯೋಜನವಿಲ್ಲ. If you like my view you are welcome, if you dont like it, still you are very welcome. ನನ್ನ ಅನಿಸಿಕೆಗಳನ್ನು ಅಭಿಪ್ರಾಯಗಳನ್ನು ನಿಮ್ಮ ಮೇಲೆ ಹೇರಲಾರೆ.

Its been nice debate with you.

Hema

ನಮಸ್ಕಾರ ಹೇಮ ಅವರೆ,

ಈ ದಿನದ ಸಂದರ್ಭದಲ್ಲಿ ಸಮಯೋಚಿತ ಲೇಖನವನ್ನು ಬರೆದಿದ್ದೀರಿ. ಅದಕ್ಕೆ ಪ್ರತಿಕ್ರಿಯೆಗಳೂ ಸಹ ಬಂದಿವೆ. ಲೋಕೋ ಭಿನ್ನ ರುಚಿ: ಎಂಬ ಮಾತಿನಂತೆ ಒಬ್ಬೊಬ್ಬರ ಅನಿಸಿಕೆಗಳು, ದೃಷ್ಟಿಕೋನಗಳೂ ಸಹ ಒಂದೊಂದು ವಿಧವಾಗಿರುತ್ತವೆ. ಒಟ್ಟಿನಲ್ಲಿ ಲೇಖನ ಮನಮುಟ್ಟುವಂತೆ ಹಾಗೂ ಚಿಂತನೆಗೀಡು ಮಾಡುವಂತಿದೆ.

ಧನ್ಯವಾದಗಳು.

ಕ್ಷಣಚಿಂತನೆ

Leave a reply to AB ಪ್ರತ್ಯುತ್ತರವನ್ನು ರದ್ದುಮಾಡಿ

Blog Stats

  • 72,887 hits
ನವೆಂಬರ್ 2008
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12
3456789
10111213141516
17181920212223
24252627282930

Top Clicks

  • ಯಾವುದೂ ಇಲ್ಲ