ಕಲರವ

ಲಹರಿ ಹರಿದಂತೆ : ಒಂದು ಸರಳ ಪ್ರಶ್ನೆಯ ಆಜೂಬಾಜು!

Posted on: ನವೆಂಬರ್ 20, 2008


-ಅಂತರ್ಮುಖಿ

ನಾವು ಬುದ್ಧಿವಂತರು. ಸಮಗ್ರವಾಗಿ ಆಲೋಚಿಸದೆ, ಸರಿ ತಪ್ಪುಗಳ ನಿಷ್ಕರ್ಷೆಯನ್ನು ಮಾಡದೆ, ಉದ್ದೇಶಗಳನ್ನುlahari 1.png ಸ್ಪಷ್ಟ ಪಡಿಸಿಕೊಳ್ಳದೆ, ಗುರಿಗಳನ್ನು ಕಂಡುಕೊಳ್ಳದೆ ನಾವು ಯಾವ ಕೆಲಸವನ್ನೂ ಮಾಡುವುದಿಲ್ಲ. ಏನನ್ನೇ ಮಾಡಬೇಕೆಂದರೂ ನಮಗೆ ಅದರಲ್ಲಿ ಒಂದು ಠಿuಡಿಠಿose ಇರಬೇಕು. ಉಪಯೋಗವಿಲ್ಲದ ಯಾವ ಕೆಲಸವನ್ನು ಮಾಡುವುದಕ್ಕೂ ನಾವು ಇಷ್ಟ ಪಡುವುದಿಲ್ಲ. ಉದ್ದೇಶವಿಲ್ಲದೆ ಮಾತನಾಡುವವರು, ಉದ್ದೇಶವಿಲ್ಲದೆ ಕೆಲಸ ಮಾಡುವವರು, ಆಕಾರವಿಲ್ಲದ ಚಿತ್ರದಲ್ಲಿ ಕುಂಚ ಅಲ್ಲಾಡಿಸುವವರು, ಏನನ್ನೂ ಹೇಳದ ಸಿನೆಮಾ ಮಾಡಿದವರು ನಮ್ಮಲ್ಲಿ ಲೂಸ್‌ಗಳು ಎಂದು ಗುರುತಿಸಲ್ಪಡುತ್ತಾರೆ. ಉದ್ದೇಶವಿಲ್ಲದೆ ನಗುತ್ತಾ ರಸ್ತೆಯಲ್ಲಿ ಸಾಗುವವನು ನಮ್ಮ ಅನುಕಂಪಕ್ಕೆ ತುತ್ತಾಗುತ್ತಾನೆ. ಯಾವ ಕಾರಣವೂ ಇಲ್ಲದೆ ಮುಗುಳ್ನಗುವವನು ನಮ್ಮಲ್ಲಿ ಸಂಶಯ ಹುಟ್ಟಿಸುತ್ತಾನೆ. ಏನನ್ನೂ ಕೇಳದೆ ನಮಗೆ ಬೇಕಿದ್ದನ್ನೆಲ್ಲಾ ಕೊಡುವವರು ನಮ್ಮಲ್ಲಿ ಆತಂಕವನ್ನು ಹುಟ್ಟಿಸುತ್ತಾರೆ. ನಮ್ಮೆಲ್ಲಾ ಚಟುವಟಿಕೆಗಳು ಅರ್ಥ ಪೂರ್ಣವೆನಿಸಿಕೊಳ್ಳುವುದು ಈ ‘ಉದ್ದೇಶ’ ಎಂಬ ಮಾಂತ್ರಿಕ ಶಕ್ತಿಯಿಂದ.

ಇಷ್ಟು ಬುದ್ಧಿವಂತರಾದ ನಾವು ಎಂದಾದರೂ ‘ಈ ಬದುಕಿನ ಉದ್ದೇಶವೇನು’ ಎಂದು ಕೇಳಿಕೊಂಡಿದ್ದೇವೆಯೇ? ನಾವು ಹುಟ್ಟಿದ್ದು ಯಾಕೆ? ನಾವು ಬದುಕುವುದಕ್ಕೆ ಇರುವ ಕಾರಣಗಳು ಯಾವುವು ಎನ್ನುವುದನ್ನು ಕೇಳಿಕೊಳ್ಳುವ ಧೈರ್ಯವನ್ನು ನಾವು ಒಂದು ಕ್ಷಣಕ್ಕಾದರೂ ಮಾಡಿದ್ದಿದೆಯೇ? ಒಂದು ಸಣ್ಣ ಚಪ್ಪಾಳೆ ತಟ್ಟುವುದಕ್ಕೆ ಹತ್ತಾರು ಕಾರಣಗಳನ್ನು, ಚಪ್ಪಾಳೆ ತಟ್ಟಿಸಿಕೊಳ್ಳುವವನ ಅರ್ಹತೆಗೆ ನೂರೆಂಟು ಸಮಜಾಯಿಷಿಗಳನ್ನು ಬಯಸುವ ನಾವು ಎಪ್ಪತ್ತು, ಎಂಭತ್ತು ವರ್ಷಗಳ ಬದುಕನ್ನು ಏನೂ ಪ್ರಶ್ನಿಸಿಕೊಳ್ಳದೆ, ಯಾವ ಕಾರಣಗಳನ್ನೂ ಕೇಳದೆ ಕಳೆದುಬಿಡುತ್ತೇವಲ್ಲಾ ಇದಕ್ಕಿಂತ ವಿಪರ್ಯಾಸ ಬೇರೊಂದಿದೆಯೇ?

existence.png

‘ನಾವು ಹುಟ್ಟಿದ್ದು ಏಕೆ?’ ಎಂಬುದು ತುಂಬಾ ಸರಳವಾದ ಪ್ರಶ್ನೆ. ಪ್ರಶ್ನೆ ಸರಳವಾದಷ್ಟೂ ಉತ್ತರಗಳು ಕ್ಲಿಷ್ಟವಾಗುತ್ತಾ ಹೋಗುವ ಸೋಜಿಗವನ್ನು ಗಮನಿಸಿದ್ದೀರಾ? ‘ನೀನು ನನ್ನನ್ನು ಎಷ್ಟು ಪ್ರೀತಿಸುತ್ತೀಯ?’ ಎಂಬುದು ನಿಮ್ಮ ಯಾವುದೇ ಪ್ರಶ್ನೆ ಪತ್ರಿಕೆಯ ಪ್ರಶ್ನೆಗಿಂತ ಸರಳವಾದದ್ದು. ಆದರೆ ಇದಕ್ಕೆ ಉತ್ತರಿಸುವುದು, ಉತ್ತರದಿಂದ ಪ್ರಶ್ನೆ ಕೇಳಿದವರನ್ನು ತೃಪ್ತಿ ಪಡಿಸುವುದು ಎಂದಾದರೂ ಸಾಧ್ಯವೇ? ‘ನೀನು ಯಾರು’ ಎಂಬುದು ತೀರಾ ಸಿಲ್ಲಿ ಪ್ರಶ್ನೆ. ಉತ್ತರ? ಆದಿಮಾನವನಿಂದ ಹಿಡಿದು, ಅತ್ಯಾಧುನಿಕ ಲ್ಯಾಬರೋಟರಿಯಲ್ಲಿ ಕುಳಿತ ಆಧುನಿಕ ಮನುಷ್ಯನವರೆಗೆ ಉತ್ತರ ರೂಪುಗೊಳ್ಳುತ್ತಿದೆ. ಉತ್ತರ ಬೆಳೆಯುತ್ತಲೇ ಹೋಗುತ್ತಿದೆ, ನೂರಾರು ಕವಲುಗಳನ್ನು ತನ್ನೊಳಗೆ ಸೆಳೆದುಕೊಳ್ಳುತ್ತಾ, ಹತ್ತಾರು ರೆಂಬೆಗಳಾಗಿ ಟಿಸಿಲೊಡೆಯುತ್ತಾ ಬೆಳೆಯುತ್ತಲೇ ಇದೆ. ಆದರೆ ಎಂದಿಗೂ ಅದು ಸಂಪೂರ್ಣ ಉತ್ತರವಾಗಲು ಸಾಧ್ಯವೇ ಇಲ್ಲ. ಇದನ್ನೆಲ್ಲಾ ಯೋಚಿಸಿದಾಗ ಈ ಜಗತ್ತಿನಲ್ಲಿ ಪ್ರಶ್ನೆಗಳೆಂಬುವವು ಇಲ್ಲವೇ ಇಲ್ಲ ಅನ್ನಿಸುತ್ತದೆ. ನಾವು ಕಂಡುಕೊಂಡ, ರೂಪಿಸಿದ, ಕಟ್ಟಿಬೆಳೆಸಿದ ಉತ್ತರಗಳಿಗೆ ಸಾರ್ಥಕ್ಯವೊಂದನ್ನು ಕರುಣಿಸುವುದಕ್ಕಾಗಿ ನಾವು ಪ್ರಶ್ನೆಗಳನ್ನು ಅನ್ವೇಷಿಸಿದೆವೆನೋ ಅನ್ನಿಸುತ್ತದೆ.

ಮತ್ತೆ ನಮ್ಮ ಮೂಲ ಪ್ರಶ್ನೆಗೆ ಹಿಂದಿರುಗೋಣ: ನಾವು ಈ ಭೂಮಿಯ ಮೇಲಿರುವುದು ಏತಕ್ಕೆ? ನಾನು ಈ ಇಡೀ ಬ್ರಹ್ಮಾಂಡದಲ್ಲಿ ಎಲ್ಲಿ ಬೇಕಾದರೂ ಹುಟ್ಟಬಹುದಿತ್ತು. ಆದರೂ ಈ ಭೂಮಿಯ ಮೇಲೆಯೇ ಹುಟ್ಟಿದ್ದೇನೆ. ಭೂಮಿಯ ಮೇಲಿನ ಕೋಟ್ಯಾನುಕೋಟಿ ಜೀವ ಜಂತುಗಳಲ್ಲಿ ಒಂದಾಗಿ ಹುಟ್ಟಬಹುದಿತ್ತು. ನಾನು ಮನುಷ್ಯನಾಗಿಯೇ ಹುಟ್ಟಿದ್ದೇನೆ. ಮನುಷ್ಯನಾಗಿ ನಾನು ಏಳು ಖಂಡಗಳಲ್ಲಿ ಬೇರೆಲ್ಲಾದರೂ ಹುಟ್ಟಬಹುದಿತ್ತು. ಏಷ್ಯಾ ಎಂಬ ಖಂಡದಲ್ಲಿ, ಭಾರತವೆಂಬ ದೇಶದಲ್ಲಿ, ಕನ್ನಡ ಎಂಬ ಭಾಷೆಯನ್ನಾಡುವ ಜನ ಸಮುದಾಯದಲ್ಲೇ ಹುಟ್ಟಿದ್ದೇನೆ. ನಾನು ಬೇರೊಂದು ಜಾತಿಯಲ್ಲಿ ಹುಟ್ಟಬಹುದಿತ್ತು. ನಾನು ಬಂಗಲೆಯಲ್ಲಿ ಹುಟ್ಟಬಹುದಿತ್ತು, ಗುಡಿಸಲಿನಲ್ಲಿ ಕಣ್ತೆರೆಯಬಹುದಾಗಿತ್ತು, ಹೆಣ್ಣಾಗಿ ಹುಟ್ಟಬಹುದಾಗಿತ್ತು, ಹುಟ್ಟುತ್ತಲೇ ಮಾತು, ದೃಷ್ಟಿ ಇಲ್ಲದವನಾಗಬಹುದಿತ್ತು. ನಾನು ಹಿಂದೆ, ಭಾರತಕ್ಕೆ ಬ್ರಿಟೀಷರು ಬರುವುದಕ್ಕೆ ಮುನ್ನವೇ ಹುಟ್ಟಬಹುದಿತ್ತು, ಗಾಂಧಿ ತಾತ ಬದುಕಿದ್ದಾಗ ಹುಟ್ಟಬಹುದಿತ್ತು, ಮುಂದೆಂದಾದರೋ ಹುಟ್ಟಬಹುದಿತ್ತು. ಅಸಲಿಗೆ ನಾನು ಹುಟ್ಟದೆಯೂ ಇರಬಹುದಿತ್ತು. ಆದರೂ ಹುಟ್ಟಿರುವೆ, ಏಕೆ?

ನೀವು ದೇವರಲ್ಲಿ ನಂಬಿಕೆ ಉಳ್ಳವರಾಗಿದ್ದರೆ, ಧರ್ಮ ಗ್ರಂಥಗಳು ಹೇಳುವುದನ್ನು ಭಕ್ತಿ ಹಾಗೂ ಶ್ರದ್ಧೆಯಿಂದ ಕೇಳುವವರಾಗಿದ್ದರೆ, ನಿಮಗೆ ವರ್ಚಸ್ವೀ ಹಿರಿಯರ, ಜ್ಞಾನಿಗಳ ಸಂಪರ್ಕವಿದ್ದರೆ ಹತ್ತಾರು ಉತ್ತರಗಳು ಸಿಕ್ಕುತ್ತವೆ. ‘ದೇವರು ಈ ಸೃಷ್ಟಿಯನ್ನು ಮಾಡಿದ. ಆತನ ಇಚ್ಛೆಯಂತೆ ನೀನಿಲ್ಲಿ ಹುಟ್ಟಿರುವುದು. ಇದರಲ್ಲಿ ನಿನ್ನ ಆಯ್ಕೆಯೇನೂ ಇಲ್ಲ. ನೀನು ಇಲ್ಲಿ ಹುಟ್ಟಿರುವುದು ನಿನ್ನ ಕರ್ಮ ಫಲವನ್ನು ತೀರಿಸುವುದಕ್ಕಾಗಿ. ಕರ್ಮದ ಬಂಧನದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹುಟ್ಟು ಸಾವುಗಳ ಚಕ್ರದಿಂದ ಮುಕ್ತರಾಗಿ ದೇವರನ್ನು ಸೇರುವುದೇ ಬದುಕಿನ ಉದ್ದೇಶ. ಇಲ್ಲಿ ಈ ಬದುಕಿನಲ್ಲಿ ಯಾವ ಅರ್ಥವೂ ಇಲ್ಲ. ಇಡೀ ವಿಶ್ವ ಮಾಯೆ. ಈ ಶರೀರ, ಈ ಬದುಕು ನಶ್ವರ. ಶಾಶ್ವತವಾದದ್ದು ಪರಮಾತ್ಮ. ನಮ್ಮ ಆತ್ಮವನ್ನು ಪರಮಾತ್ಮನಲ್ಲಿಗೆ ಸೇರಿಸಿದಾಗಲೇ ನಮ್ಮ ಜೀವಿತಕ್ಕೆ ಸಾರ್ಥಕ್ಯ ದೊರಕುವುದು….’ ಹೀಗೆ ಪುಂಖಾನುಪುಂಖವಾಗಿ ಧಾರ್ಮಿಕ ಗ್ರಂಥಗಳ, ಧರ್ಮಬೀರುಗಳ ವಿವರಣೆಗಳು ದೊರಕುತ್ತವೆ. ಹೆಚ್ಚೆಚ್ಚು ವಿವರಣೆ ತಿಳಿದಷ್ಟೂ ಸಂಶಯ ಹೆಚ್ಚುತ್ತಾ ಹೋಗುತ್ತದೆ. ಒಂದು ವೇಳೆ ಈ ಎಲ್ಲಾ ವಿವರಣೆಗೆ ಮೂಲವಾದ ದೇವರ ಅಸ್ತಿತ್ವವನ್ನೇ ನಿರಾಕರಿಸಿಬಿಟ್ಟರೆ? ಮೊದಲ ಹಂತದಲ್ಲೇ ದೇವರನ್ನು ಒಪ್ಪದೇ ಹೋದರೆ ಮೇಲಿನ ಯಾವ ವಿವರಣೆಯೂ ಉಪಯೋಗಕ್ಕೆ ಬರುವುದಿಲ್ಲ.

ದೇವರನ್ನು, ಧರ್ಮಗಳು ಉಪದೇಶಿಸಿದ ಸತ್ಯಗಳನ್ನು ನಿರಾಕರಿಸಿ ಸ್ವತಂತ್ರ ಆಲೋಚನೆ, ಸ್ವಂತ ಅನುಭವದ ಮೇಲೆ ನಂಬಿಕೆ ಇರಿಸಿಕೊಂಡು ಈ ಪ್ರಶ್ನೆಯನ್ನು ಎದುರುಗೊಂಡರೆ? ನಾವು ಹುಟ್ಟಿದ್ದು ಏಕೆ… ನಮ್ಮ ಹುಟ್ಟು ಕೇವಲ ಆಕಸ್ಮಿಕ. ಇದಕ್ಕೆ ಯಾವ ಉದ್ದೇಶವೂ ಇಲ್ಲ. ಆತ್ಮವೆಂಬುದೇ ಇಲ್ಲವಾದಾಗ ಹುಟ್ಟು ಸಾವಿನ ಚಕ್ರದ ಪ್ರಶ್ನೆಯೇ ಅಸಂಬದ್ಧ. ಕರ್ಮಫಲ, ದೇವರ ಇಚ್ಛೆ ಎಂಬುವೆಲ್ಲಾ ಕೆಲಸಕ್ಕೆ ಬಾರದ ತತ್ವಗಳು. ಯಾವ ಕಾರಣವೂ ಗೊತ್ತಿಲ್ಲದೆ ಹುಟ್ಟಿದ್ದೇವೆ, ಹುಟ್ಟಿದ್ದೇವೆ ಎಂಬ ಕಾರಣಕ್ಕೆ ಒಂದು ದಿನ ಸಾಯುತ್ತೇವೆ. ಸತ್ತ ನಂತರ ಏನೂ ತಿಳಿಯದು. ನಾವು ಹುಟ್ಟಿದ್ದು ಏತಕ್ಕೆ, ಬದುಕಬೇಕಿದ್ದು ಯಾವ ಪುರುಷಾರ್ಥ ಸಾಧನೆಗೆ, ನಾವು ಹುಟ್ಟಿದ ಉದ್ದೇಶ ಪೂರ್ಣವಾಗದಿದ್ದರೆ ಏನಾದೀತು ಎಂಬ ಸಂಶಯಗಳಿಗೆ ಸಾವೆಂಬುದು ಉತ್ತರ ಕೊಡುವಂತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು! ಆದರೆ ದುರದೃಷ್ಟಕ್ಕೆ ಬದುಕಿನ ಕಡೆಯ ಕ್ಷಣದವರೆಗೆ ಈ ಯಾವ ಸಂಶಯಗಳೂ ಕೊನೆಗೊಳ್ಳುವುದಿಲ್ಲ. ಈ ಬದುಕಿನಲ್ಲಿರುವ ಉದ್ದೇಶಗಳೆಲ್ಲವೂ ನಾವು ಸೃಷ್ಟಿಸಿಕೊಂಡಿರುವಂಥವು. ಒಂದು ದಿನ ಹುಟ್ಟುತ್ತೇವೆ. ಅತ್ತು ಕರೆದು ದಣಿವಾದಾಗ ಹಸಿವು ಕಾಡುತ್ತದೆ, ನಿದ್ರೆ ಬೇಕೆನಿಸುತ್ತದೆ. ಹಸಿವು ಆಹಾರ ಸಂಪಾದಿಸಿಕೊಳ್ಳುವ ಉದ್ದೇಶವನ್ನು ಬದುಕಿಗೆ ಕೊಡುತ್ತದೆ. ಹೊಟ್ಟೆಗೆ ಆಹಾರ ಬಿದ್ದ ಮೇಲೆ ದೇಹದ ಆಯಾಸ ಕರಗಿದ ಮೇಲೆ ಉದ್ದೇಶದ ಜಾಗ ಖಾಲಿ ಉಳಿಯುತ್ತದೆ. ಜಗತ್ತನ್ನು ನೋಡುವ, ಕಲಿಯುವ, ಕುಣಿಯುವ, ಅಂಬೆ ಕಾಲಿಕ್ಕುವ, ಎದ್ದು ನಡೆಯುವ, ವಿದ್ಯೆ ಕಲಿಯುವ, ಕ್ಲಾಸಿನಲ್ಲಿ ಫರ್ಸ್ಟ್ ಬರುವ, ಹುಡುಗಿಯ ಮನಗೆಲ್ಲುವ, ಒಳ್ಳೆಯ ಗಂಡನನ್ನು ಪಡೆಯುವ, ವಂಶ ಮುಂದುವರೆಸುವ, ಮಕ್ಕಳನ್ನು ಬೆಳೆಸುವ, ಕನಸನ್ನು ನನಸಾಗಿಸಿಕೊಳ್ಳುವ, ಒಳ್ಳೆಯ ಪ್ರಜೆಯಾಗುವ, ಆದರ್ಶ ವ್ಯಕ್ತಿಯಾಗುವ, ಯಶಸ್ವಿಯಾಗುವ ಉದ್ದೇಶಗಳು ಒಂದೊಂದಾಗಿ ಆ ಜಾಗವನ್ನು ತುಂಬುತ್ತಾ ಹೋಗುತ್ತವೆ. ಮೊದಲಿಗೆ ಆ ಜಾಗ ಖಾಲಿಯಿತ್ತು. ಒಂದೊಂದೇ ಉದ್ದೇಶ ಈಡೇರುತ್ತಾ ಹೋದಂತೆ ಅದು ಖಾಲಿಯಾಗಿ ಆ ಜಾಗದಲಿ ಮತ್ತೊಂದು ಉದ್ದೇಶ ಪ್ರತಿಷ್ಠಾಪಿತಗೊಳ್ಳುತ್ತಾ ಹೋಗುತ್ತದೆ… ನಾವು ಪ್ರತಿಷ್ಠಾಪಿಸಿಕೊಳ್ಳುವ ಈ ಉದ್ದೇಶಗಳಿಂದಾಗಿಯೇ ನಮ್ಮ ಬದುಕಿಗೆ ಅರ್ಥ ಬಂದುಬಿಡುತ್ತದೆ. ಸಾರ್ಥಕತೆ ದಕ್ಕಿಬಿಡುತ್ತದೆ!

ನಾವು ಏನೇ ಕಡಿದು ಕಟ್ಟೆ ಹಾಕಿದರೂ ಇಡೀ ವಿಶ್ವದಲ್ಲಿ ಏನೇನೂ ಬದಲಾವಣೆಯಾಗದು. ವಿಶ್ವವೇ ಉದ್ದೇಶವಿಲ್ಲದೆ ಸ್ಪೋಟಗೊಳ್ಳುತ್ತಾ… ಸಂಕುಚಿಸುತ್ತಾ… ಸ್ಪೋಟಗೊಳ್ಳುತ್ತಾ… ಸಾಗುತ್ತಿದೆ. ಹೀಗಿರುವಾಗ ನಮ್ಮ ಹುಟ್ಟಿಗೆ ಇರುವ ಉದ್ದೇಶವಾದರೂ ಏನು?

2 Responses to "ಲಹರಿ ಹರಿದಂತೆ : ಒಂದು ಸರಳ ಪ್ರಶ್ನೆಯ ಆಜೂಬಾಜು!"

ನಮ್ಮ ಹುಟ್ಟಿಗೆ ಉದ್ದೇಶವಾದರೂ ಏನು?
ಅಯ್ಯಬ್ಬಾ! ಎಂಥ ಮೂಲ ಭೂತ ಪ್ರಶ್ನೆ ಇದು! ವೇದೋಪನಿಷತ್ತುಗಳು ಹುಟ್ಟಿಕೊಂಡಿದ್ದು ಇದೇ ಪ್ರಶ್ನೆಯಿಂದ.
ಬದಲಾಗಿರುವ ಅಭಿರುಚಿಗಳ ಈ ಕಾಲದಲ್ಲಿ ಈ ಪ್ರಶ್ನೆ ಮತ್ತೇನನ್ನೋ ಹುಟ್ಟಿಸಬಹುದು. ಹುಟ್ಟಿನ ಉದ್ದೇಶ, ಸೃಷ್ಟಿಯ ನಿರಂತರತೆಯಷ್ಟೇ ಎನಿಸುತ್ತದೆ.
ಒಳ್ಳೆಯ ಲೇಖನ.

ಹೌದು ಸಿದ್ಧ ಉತ್ತರಗಳು ನಮ್ಮೆದುರು ರಾಶಿ ರಾಶಿಯಾಗಿರುವ ಈ ಸಮಯದಲ್ಲಿ ನಾವು ಪ್ರಶ್ನೆಗಳನ್ನು ಕೇಳುವುದನ್ನೇ ಮರೆತುಹೋಗಿದ್ದೇವಾ ಅನ್ನಿಸುತ್ತದೆ.
ಆ ಅನಿಸಿಕೆಯಿಂದಲೇ ಹುಟ್ಟಿಕೊಂಡದ್ದು ಈ ಪ್ರಶ್ನೆ. ಆದರ ಉತ್ತರವಿನ್ನೂ ನನಗೆ ಕಂಡಿಲ್ಲ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog Stats

  • 69,005 hits
ನವೆಂಬರ್ 2008
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12
3456789
10111213141516
17181920212223
24252627282930
%d bloggers like this: