ಕಲರವ

Archive for ನವೆಂಬರ್ 17th, 2008

271435806_7530553cb3

ವೀಣೆ ಇದೆ, ತಂತಿ ಇದೆ
ನುಡಿಸೋ ಬೆರಳುಗಳಲಿ
ಕಸುವು ಇದೆ
ತಾಣವಿದೆ, ಮೌನವಿದೆ
ಆಲಿಸುವ ಕಿವಿಗಳಲಿ
ಹಸಿವು ಇದೆ
ಕಂಪನದಿ ಸ್ವರ
ಕಾಣದಾಗಿದೆ.

ಪದಗಳಿವೆ, ಧ್ವನಿಗಳಿವೆ
ನಲಿಯುವ ಕೈಗಳಲಿ
ಕತ್ತಲು ಬೆಳಕಾಗಿದೆ
ಧ್ಯಾನವಿದೆ, ಅರ್ಥವಿದೆ
ಓಡುವ ಕಣ್ಣಿನಲಿ
ಬೆತ್ತಲು ಬಯಲಾಗಿದೆ
ಬೆಸೆದ ಸೇತುವೆಗೆ
ಮುಪ್ಪಾಗಿದೆ.

ರೂಪವಿದೆ, ದೀಪವಿದೆ
ಕಟೆದ ಮೂರ್ತಿಯಲಿ
ಹೊಳಪು ಇದೆ
ಭಾವವಿದೆ, ಭಕುತಿಯಿದೆ
ಜೋಡಿಸಿದ ಕರಗಳ
ಮುಡಿಪು ಇದೆ
ಪಂಜರದಿ ಪಕ್ಷಿ
ಸತ್ತಿದೆ.

– ‘ಅಂತರ್ಮುಖಿ’

539w

ಆತ ಬಲರಾಮ ಹಲವಾಯಿ ಭಾರತದ ಲಕ್ಷಾಂತರ ಕುಗ್ರಾಮಗಳಂತೆಯೇ ಇದ್ದ ಒಂದು ಗ್ರಾಮದಲ್ಲಿ ಹುಟ್ಟಿದವ. ಆತನ ತಂದೆ ತಾಯಿಗೆ ಆತನಿಗೊಂದು ಹೆಸರಿಡಬೇಕೆನ್ನುವ ಅರಿವೂ ಇರುವುದಿಲ್ಲ.ಆತನನ್ನು ಮುನ್ನಾ ಎಂದಷ್ಟೇ ಕರೆಯುತ್ತಿರುತ್ತಾರೆ. ಇಡೀ ಹಳ್ಳಿಯ ಒಡೆತನ ಜಮೀನುದಾರನ ಕೈಲಿರುತ್ತದಾದ್ದರಿಂದ ಆತನ ತಂದೆ ತಾಯಿಯಂತೆಯೇ ಅನೇಕರು ತಮ್ಮ ಬದುಕಿರುವುದು ಜಮೀನುದಾರರ ಸೇವೆ ಮಾಡುವುದಕ್ಕೆ ಎಂತಲೇ ಭಾವಿಸಿರುತ್ತಾರೆ. ಇಂಥ ಪರಿಸರದಲ್ಲಿ ಬೆಳೆದ ಬಲರಾಮ ಚೂಟಿ ಹುಡುಗ. ಶಾಲೆಗೆ ಬಂದ ಇನ್ಸ್‌ಪೆಕ್ಟರ್ ಈತನ ಬುದ್ಧಿಮತ್ತೆಯನ್ನು ಹೊಗಳುವಷ್ಟು ಚಾಲಾಕಿ.ಆದರೆ ತನ್ನ ತಂಗಿಯ ಮದುವೆಯನ್ನು ಮಾಡುವುದಕ್ಕಾಗಿ ಆತನ ಶಾಲೆಯನ್ನು ಬಿಟ್ಟು ಹೊಟೇಲಿನಲ್ಲಿ ಕಪ್ ತೊಳೆಯಬೇಕಾಗುತ್ತದೆ. ಶಾಲೆಯಲ್ಲಿ ತನ್ನ ಚಾಲಾಕಿತನದಿಂದಾಗಿ ‘ಬಿಳಿ ಹುಲಿ’ ಎಂದು ಕರೆಸಿಕೊಂಡಿದ್ದ ಬಲರಾಮ ಮುಂದೆ ತಾನು ಕೆಲಸ ಮಾಡುತ್ತಿದ್ದ ಶ್ರೀಮಂತ ಯಜಮಾನನ ಪ್ರಾಣವನ್ನೇ ತೆಗೆದು ದೊಡ್ಡ ವ್ಯಾಪಾರ ಪ್ರಾರಂಭಿಸಿ ಶ್ರೀಮಂತನಾಗುತ್ತಾನೆ. ಬೆಂಗಳೂರಿಗೆ ಭೇಟಿ ನೀಡಲಿದ್ದ ಚೀನಾದ ಅಧ್ಯಕ್ಷನಿಗೆ ಅದ್ಯಾಕೋ ತನ್ನ ಕಥೆಯನ್ನೆಲ್ಲಾ ಹೇಳಿಕೊಳ್ಳಬೇಕು ಅನ್ನಿಸುತ್ತದೆ. ಏಳು ರಾತ್ರಿಗಳಲ್ಲಿ ಆತ ತನ್ನ ಬದುಕಿಅ ಚಿತ್ರಣವನ್ನು ಕಟ್ಟಿಕೊಡುತ್ತಾ ಹೋಗುತ್ತಾನೆ.ಆತ ಚೀನಾದ ಅಧ್ಯಕ್ಷನಿಗೆ ಬರೆಯುವ ಸುದೀರ್ಘ ಪತ್ರವೇ ‘ದಿ ವೈಟ್ ಟೈಗರ್’ ಕಾದಂಬರಿಯ ಪುಟಗಳಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತದೆ.

ಈ ಕೃತಿಗೆ ೨೦೦೮ರ ಸಾಲಿನ ಪ್ರತಿಷ್ಠಿತ ಮ್ಯಾನ್ ಬುಕರ್ ಪ್ರಶಸ್ತಿ ಸಂದಾಯವಾಗಿದೆ. ಕಾಮನ್ ವೆಲ್ತ್ ಒಕ್ಕೂಟದ ರಾಷ್ಟ್ರಗಳು ಇಲ್ಲವೇ ಐರ್ಲೆಂಡಿನ ಒಂದು ಶ್ರೇಷ್ಠ ಕೃತಿಗೆ ಪ್ರತಿವರ್ಷ ಐವತ್ತು ಸಾವಿರ ಯುರೋ ಮೌಲ್ಯದ ಬಹುಮಾನ ಕೊಟ್ಟು ಗುರುತಿಸಲಾಗುತ್ತದೆ. ೨೦೦೨ರಿಂದ ಮ್ಯಾನ್ ಗ್ರೂಪ್ ಎಂಬ ಹಣಕಾಸು ವ್ಯವಹಾರದ ಸಂಸ್ಥೆಯೊಂದು ಈ ಪ್ರಶಸ್ತಿಯನ್ನು ಪ್ರಾಯೋಜಿಸುತ್ತಾ ಬಂದಿದೆ. ಈ ಬಾರಿ ಪ್ರಶಸ್ತಿ ಪಡೆದಿರುವ ಅರವಿಂದ್ ಅಡಿಗ ಮೂಲತಃ ಕನ್ನಡಿಗರು ಹಾಗೂ ಮುವತ್ನಾಲ್ಕು ವರ್ಷದ ತರುಣರು(?) ಎಂಬುದು ಗಮನಿಸಬೇಕಾದ ಸಂಗತಿ. ಅಡಿಗರಲ್ಲದೆ ಇತರ ಮೂವರು ಭಾರತೀಯರು(ಸಲ್ಮಾನ್ ರಶ್ದಿ, ಅರುಂಧತಿ ರಾಯ್, ಕಿರಣ್ ದೇಸಾಯ್) ಈಗಾಗಲೇ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.

ಅರವಿಂದ್ ೧೯೭೪ರಲ್ಲಿ ಮದ್ರಾಸಿನಲ್ಲಿ ಹುಟ್ಟಿದರಾದರೂ ಅವರ ತಂದೆ ತಾಯಿ ಕನ್ನಡಿಗರು, ಮಂಗಳೂರಿನವರು. ಓದಿದ್ದು ಬೆಳೆದದ್ದು ಮಂಗಳೂರಿನಲ್ಲಿ. ಅನಂತರ ಇಡೀ ಕುಟುಂಬ ಆಸ್ಟ್ರೇಲಿಯಾಕ್ಕೆ ವಲಸೆ ಹೋಗುತ್ತದೆ. ಕೊಲಂಬಿಯಾ ಕಾಲೇಜ್ ಹಾಗೂ ಕೊಲಂಬಿಯಾ ವಿಶ್ವವಿದ್ಯಾಲಯಗಳಲ್ಲಿ ಇಂಗ್ಲೀಷ್ ಸಾಹಿತ್ಯವನ್ನು ಅಭ್ಯಸಿಸಿದ ಅಡಿಗ ನ್ಯೂಯಾರ್ಕಿನ ‘ಟೈಮ್’ ಪತ್ರಿಕೆಗೆ ದಕ್ಷಿಣ ಏಷ್ಯಾದ ಪ್ರತಿನಿಧಿಯಾಗಿ ನೇಮಕಗೊಂಡರು. ಪತ್ರಕರ್ತರಾಗಿದ್ದ ಅವಧಿಯಲ್ಲಿ ಭಾರತದಲ್ಲಿ ಸಂಚರಿಸಿ ದೇಶದ ಆಗುಹೋಗುಗಳನ್ನು, ಆರ್ಥಿಕ ಪಲ್ಲಟಗಳನ್ನು ಸೂಕ್ಷ್ಮವಾಗಿ ಗಮನಿಸಿ ಭಾರತದ ಜನಸಾಮಾನ್ಯರ ನಾಡಿಮಿಡಿತವನ್ನು ಅರಿತ ಅಡಿಗರು ಭಾರತದಲ್ಲಿ ಹುಟ್ಟಿಕೊಳ್ಳುತ್ತಿರುವ ಹೊಸ ಬಗೆಯ ಅಸಮಾನತೆಯ ಬಗ್ಗೆ ಗಮನ ಹರಿಸಿದರು. ಜಾತಿಗಳ ನಡುವಿನ ಅಸಮಾನತೆಗಿಂತ ವ್ಯಾಪಕವಾಗಿ ಬೆಳೆಯುತ್ತಿರುವ ಬಡವ ಹಾಗೂ ಶ್ರೀಮಂತರ ನಡುವಿನ ಕಂದರದ ಮೇಲೆ ಬೆಳಕು ಚೆಲ್ಲುವ, ಶ್ರೀಮಂತಿಕೆಯನ್ನು ಬೆನ್ನಟ್ಟಿ ಹೊರಡುವ ಹೊಸ ಆದರ್ಶದ ಬೆಳಕಿನಲ್ಲಿ ಮಾನವೀಯತೆ, ಆತ್ಮಸಾಕ್ಷಿ, ಮೌಲ್ಯಗಳಿಗೆಲ್ಲಾ ಕುರುಡಾಗುತ್ತಾ ಸಾಗುವ ಬೆಳವಣಿಗೆಯನ್ನು ಎಳೆ-ಎಳೆಯಾಗಿ ಬಿಡಿಸಿಡುವ ಕಾದಂಬರಿಯನ್ನು ಬರೆದರು. ಅದಕ್ಕೆ ‘ದಿ ವೈಟ್ ಟೈಗರ್’ ಎಂದು ಹೆಸರಿಟ್ಟರು. ವೈಟ್ ಟೈಗರ್ ಎಂದರೆ ಅಪರೂಪದ ಪ್ರಾಣಿ, ಶತಮಾನದಲ್ಲಿ ಒಮ್ಮೆ ಅವತರಿಸುವ ಜೀವಿ ಎಂದರ್ಥ. ಅಡಿಗರು ತಮ್ಮ ಮೊದಲ ಪ್ರಯತ್ನಕ್ಕೇ ಬಹುದೊಡ್ಡ ಮಾನ್ಯತೆಯನ್ನು ಪಡೆದಿದ್ದಾರೆ.

ಬುಕರ್ ಪ್ರಶಸ್ತಿ ಸಿಕ್ಕೊಡನೆ ಆ ಲೇಖಕನ ಕೃತಿಗಳಿಗೆಲ್ಲಾ ಅಪಾರವಾದ ಬೇಡಿಕೆ ಬರುವುದು ಸಾಮಾನ್ಯ. ಈ ಪ್ರಶಸ್ತಿ ಬೇರೇನು ಮಾಡದಿದ್ದರೂ ಲೇಖಕನಿಗೆ ಆರ್ಥಿಕವಾಗಿ ಲಾಭ ಮಾಡಿಕೊಡುತ್ತದೆ. ಲೇಖಕ ಜಗದ್ವಿಖ್ಯಾತನಾಗುತ್ತಾನೆ. ಕನ್ನಡಿಗರಾದ ಅಡಿಗರ ಸಾಧನೆಯನ್ನು ಮೆಚ್ಚಿಕೊಂಡಾಡುವವರು ಇದ್ದ ಹಾಗೆಯೇ ಕಾದಂಬರಿಯಲ್ಲಿ ಭಾರತದ ಬಗ್ಗೆ ಕೇವಲ ಋಣಾತ್ಮಕವಾದ ಅಂಶಗಳೇ ತುಂಬಿಕೊಂಡಿವೆ.ಭಾರತವನ್ನು, ಭಾರತೀಯರನ್ನು ಮನಸಾರೆ ಬೈಯ್ಯಲಾಗಿದೆ, ಲೇವಡಿ ಮಾಡಲಾಗಿದೆ ಎಂಬ ಆರೋಪ ಹಲವರದ್ದು. ಇದೊಂದು ಆತ್ಮವಿಮರ್ಶೆಯ ಪ್ರಯತ್ನ. ಭಾರತ ಪ್ರಕಾಶಿಸುತ್ತಿದೆ ಎಂದು ಜಗತ್ತಿಗೆ ನಾವು ತೋರಿಸಲಿಚ್ಚಿಸುತ್ತಿರುವ ಮುಖದ ಹಿಂದೆ, ನಮ್ಮ ಜಿಡಿಪಿ ಬೆಳವಣಿಗೆ, ಚಂದ್ರಯಾನ, ಪರಮಾಣು ಒಪ್ಪಂದಗಳನ್ನು ಮೀರಿದ ವ್ಯಕ್ತಿತ್ವವೊಂದು ಭಾರತಕ್ಕಿದೆ ಎಂಬುದು ಅವರ ವಿಚಾರ. ಜಾಗತಿಕ ಮಟ್ಟದ ಪತ್ರಿಕೆಯೊಂದರ ಪ್ರತಿನಿಧಿಯಾಗಿ ಕೆಲಸ ಮಾಡಿದ ಅಡಿಗರು ನಮ್ಮೆಲ್ಲರಿಗಿಂತ ಹೆಚ್ಚು ಚೆನ್ನಾಗಿ ಜಗತ್ತನ್ನು ಬಲ್ಲವರು ಹಾಗೂ ಆ ಪಕ್ವ ದೃಷ್ಟಿಕೋನದಲ್ಲಿ ಭಾರತವನ್ನು ಸಮರ್ಪಕವಾಗಿ ಚಿತ್ರಿಸಬಲ್ಲರು ಎಂಬುದು ನನ್ನಂಥ ಅನೇಕರ ವಿಶ್ವಾಸ!

-ಕೆ.ಎಸ್.ಎಸ್


Blog Stats

  • 69,182 hits
ನವೆಂಬರ್ 2008
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12
3456789
10111213141516
17181920212223
24252627282930

Top Clicks

  • ಯಾವುದೂ ಇಲ್ಲ