ಕಲರವ

Archive for ನವೆಂಬರ್ 12th, 2008

‘ಮನುಷ್ಯನು ಬೇರೆಲ್ಲಾ ಪ್ರಾಣಿಗಳಿಗಿಂತ ಶ್ರೇಷ್ಠ…’ ಇದನ್ನು ಹೇಳಿದವರಾರು? ‘ಮಾನವ ಜನ್ಮ ಬಹು ದೊಡ್ಡದು…’ ಹೀಗಂತ ಹೇಳಿದ್ದು ಯಾರು? ಎಲ್ಲವನ್ನೂ ಹೇಳಿಕೊಂಡಿರುವುದು ಮನುಷ್ಯರಾದ ನಾವೇ! ಹೀಗೇ ಪ್ರತಿಯೊಬ್ಬ ಮನುಷ್ಯನು ಜೀವನದಲ್ಲಿ ತನ್ನನ್ನೇ ಸರ್ವಶ್ರೇಷ್ಠ, ಎಲ್ಲಕ್ಕೂ ತಾನೇ ಆದಿ ಅಂತ್ಯ ಹೀಗೆಲ್ಲಾ ಕಲ್ಪಿಸಿಕೊಳ್ಳುತ್ತಾನೆ. ಆದರೆ ಇವೆಲ್ಲವೂ ಸತ್ಯವೆಂಬುದನ್ನು ಹೇಳುವವರ್ಯಾರೂ ಇಲ್ಲ. ಅದರಂತೆಯೇ ಈತನ ಪಾರುಪತ್ಯ ಇಲ್ಲಿಗೇ ಮುಗಿಯದು. ಇತರರೆಲ್ಲರೂ ತನ್ನಂತೆಯೇ, ತಾನು ಹೇಳಿದಂತೆಯೇ ನಡೆಯಬೇಕೆಂದು ಬಯಸುತ್ತಾನೆ. ಆದರೆ…

ಯಾರೇ ಆಗಲಿ ಎಲ್ಲಾ ಸಮಯದಲ್ಲೂ ಒಂದೇ ರೀತಿ ಇರುವುದು ಅಸಾಧ್ಯ. ಮನುಷ್ಯನ ಮನಸ್ಸಿನ ಬಲಹೀನತೆ ಯಾರನ್ನೂ ಹೊರತಾಗಿಸಿಲ್ಲ. ನಗು, ಅಳು, ಕೋಪ, ತಾಪ ಯಾವುದಾದರೊಂದು ಸಮಯದಲ್ಲಿ ಎಲ್ಲರನ್ನೂ ಬಾಧಿಸಿರುವಂತೆಯೇ ಹುಟ್ಟಿನಿಂದ ಸಾಯುವವರೆಗೆ ಬರೀ ಸುಖವನ್ನೇ ಉಂಡಿರುವವರ್ಯಾರೂ ಇಲ್ಲ… ಈ ಸುದೀರ್ಘ ಜೀವನದಲ್ಲಿ ಪ್ರತಿಯೊಬ್ಬರೂ ಕೂಡ ನಗು-ಅಳುವಿನ ಗೆಳೆತನದಲ್ಲಿ ಮಿಂದು ಹೋಗಲೇ ಬೇಕು. ಅದರಲ್ಲೂ ಇಂದಿನ ಆಧುನಿಕ ಬದುಕಿನಲ್ಲಿ ಉದ್ವೇಗ, ಒತ್ತಡ ಯಾರನ್ನೂ ಬಿಟ್ಟಿಲ್ಲ. ಇಂಥವುಗಳೆಲ್ಲವುಗಳ ನಡುವೆ ಸಿಕ್ಕಿಹಾಕಿಕೊಂಡು ಹಸನ್ಮುಖಿಗಳಾಗಿದ್ದು, ಮನದ ಏರಿಳಿತಗಳನ್ನು ಹೊರಹಾಕದೆ ಸ್ಥಿತಪ್ರಜ್ಞರಾಗಿ ಇರುವಂತಹ ಪುನೀತರಿಗೆ ಹ್ಯಾಟ್ಸಾಫ್ ಹೇಳಲೇಬೇಕು.

ಇಂತಹ ಶಾಂತ ಯೋಗಿಗಳಿಗೂ ಸಹ ಕೆಲವೊಮ್ಮೆ ಮಂದಿಯ ಚುಚ್ಚು ಮಾತುಗಳು ಕಾಡಿಸದಿರವು. ಗೆಳೆಯರು, ಸಂಬಂಧಿಗಳ ಮಾತುಗಳೊಮ್ಮೆಯಾದರೂ ‘ಯೋಗಿ’ಯ ನಿದ್ರಾಭಂಗಕ್ಕೆ ಕಾರಣವಾಗಿದ್ದರೆ ಅದು ಅಚ್ಚರಿಯ ಸಂಗತಿಯಲ್ಲ. ಇದು ಅವರದೋ, ಇವರದೋ ಅಥವಾ ಮತ್ತೊಬ್ಬರದೋ ವಿಚಾರವಲ್ಲ, ಇದಕ್ಕೆ ನಾವೂ ಕೂಡಾ ಹೊರತಾಗಿಲ್ಲ…! ನಾವೂ ಕೂಡ ಎಷ್ಟೋ ಬಾರಿ ಹೀಗೆಲ್ಲಾ ಮಾಡಿ ತಿಳಿದೋ, ತಿಳಿಯದೆಯೋ ಇನ್ನೊಬ್ಬರ ಮನಸ್ಸಿಗೆ ಕಿರಿಕಿರಿ, ಬೇಸರ ಉಂಟು ಮಾಡಿರುತ್ತೇವೆ. ಕೋಪ ಕೆರಳಿಸಿರುತ್ತೇವೆ. ಅವರ ಸಹನೆ ಕೆಡಿಸಿರುತ್ತೇವೆ.

ಒಮ್ಮೆಮ್ಮೆ ತೀರಾ ಅನಿವಾರ್ಯವಾದ ಅಥವಾ ಅತೀ ಮುಖ್ಯವಾದ ಕೆಲಸವೊಂದರಲ್ಲಿ ತೊಡಗಿಕೊಂಡು ಅದರಲ್ಲೇ ಮುಳುಗಿ ಹೋಗಿರುತ್ತೇವೆ. ಅದೇ ಸಮಯದಲ್ಲಿ ಯಾರಾದರೂ ಲಗ್ಗೆಯಿಟ್ಟು ಕಾರ್ಯ ಭಂಗ ಮಾಡುತ್ತಾರೆ. ಆ ಕ್ಷಣದಲ್ಲಿ ಹುಟ್ಟುವ ಕೋಪ ಊಹಿಸಲಸಾಧ್ಯ. ಇನ್ನು ಕೆಲವಾರು ಸಂದರ್ಭಗಳಲ್ಲಿ ನಾವು ತುಂಬಾ ದುಃಖದಲ್ಲಿದ್ದಾಗ ಯಾರೋ ಬಂದು ಕ್ಷುಲ್ಲಕ ಸಂಗತಿಗಳನ್ನು ಮಾತನಾಡಿ, ಜೋಕ್ ಕಟ್ ಮಾಡಿ ನಗುತ್ತಾರೆ. ಮದದಿಂದ ಮನದ ಕದವ ತಟ್ಟಿ ಕೋಪಕ್ಕೆ ಕಾರಣವಾಗುತ್ತಾರೆ. ಇದನ್ನು ಓದಿದ ನಿಮಗೆ ಇವೆಲ್ಲಾ ಸಾಮಾನ್ಯವೆನಿಸಿದರೂ ಇಂತಹ ಸಂದರ್ಭಗಳಲ್ಲಿ ಆಗುವ ಕಿರಿಕಿರಿ, ಮನಸ್ಸಲ್ಲಿ ಮೂಡುವ ಕಹಿ ಸಾಮಾನ್ಯವಲ್ಲ. ಇದಕ್ಕೆಲ್ಲಾ ಕಾರಣ ಮತ್ತೊಬ್ಬರ ಮನಸ್ಸಿನ ಕೋಣೆಯನ್ನು ಪ್ರವೇಶಿಸುವ ಮುನ್ನ ಕದ ತಟ್ಟದೆ ಒಳಕ್ಕೆ ನುಗ್ಗುವುದು!!

ನೀವೂ ಕೂಡ ಸೂಕ್ಷ್ಮ  ಮನಸ್ಸಿನವರಾಗಿದ್ದಲ್ಲಿ ಖಂಡಿತಾ ಇವನ್ನೆಲ್ಲಾ ಅವಾಯ್ಡ್ ಮಾಡಿ ಸಭ್ಯತೆ ಮೆರೆದು, ಎಲ್ಲರ ಮೆಚ್ಚಿನ ವ್ಯಕ್ತಿಯಾಗಬಹುದು. ಇದಕ್ಕಾಗಿ ಅಂಥಾ ಶ್ರಮವನ್ನೇನೂ ಪಡಬೇಕಿಲ್ಲ. ಯಾವ ಬಗೆಯ ಸಾಹಸದ ಅಗತ್ಯವೂ ಇಲ್ಲ. ಎದುರಿಗಿರುವ ವ್ಯಕ್ತಿಯ ಮನಸ್ಥಿತಿ ಎಂಥದ್ದು ಎಂದು ಅರಿಯುವ ಆಸಕ್ತಿ, ತಾಳ್ಮೆ ನಿಮ್ಮಲ್ಲಿದ್ದರೆ ಅಷ್ಟೇ ಸಾಕು.

ಏನಾದರೂ ಮಾತಾಡುವ ಮುನ್ನ ಈ ಸಂಗತಿಗಳನ್ನು ಗಮನಿಸಿದರೆ ಒಳಿತು:

* Be careful about your thoughts when you are alone.
Be careful about your words when you are in crowd. ಎಂಬ ವಿವೇಕಾನಂದರ ಮಾತು ನೆನಪಲ್ಲಿರಲಿ.

* ಮಾತು ಮುತ್ತಿನ ಹಾರದಂತಿರಬೇಕು… ಎಂಬ ಬಸವಣ್ಣನವರ ನುಡಿ ಮನದಲ್ಲಿರಲಿ.

* ಇನ್ನೊಬ್ಬರ ಬಳಿ ಮಾತಾಡುವ ಮುನ್ನ ಅವರು ಯಾವ ಮೂಡಿನಲ್ಲಿರುವರೋ ಕೊಂಚ ಗಮನಿಸಿ, ದಿಢೀರಂತ ಎದುರು ಹೋಗಿ ಏನೂ ಹೇಳಬೇಡಿ.

* ಯಾವುದಾದರೂ ಮುಖ್ಯವಾದ ವಿಷಯವನ್ನು ಹೇಳುವುದಿದ್ದರೆ ಕೇಳುಗರ ಮನಸ್ಥಿತಿಯನ್ನು ಅರಿತು ಮಾತನಾಡಿದರೆ ಸಮಯ, ಪ್ರಯತ್ನ ಎಲ್ಲ ವ್ಯರ್ಥವಾಗುವುದನ್ನು ತಪ್ಪಿಸಬಹುದು. ಬಲವಂತದ ಮಾಘಸ್ನಾನ ಯಾವ ಕಾರಣಕ್ಕೂ ಒಳ್ಳೆಯದಲ್ಲ. ಸುಮ್ಮನೆ ಅವರಿವರಿಂದ ‘ಅನಾಸಿನ್’, ‘ಹೆಡ್ಡೇಕ್ ಪಾರ್ಟಿ’ ಎಂದೆಲ್ಲಾ ಹೇಳಿಸಿಕೊಳ್ಳುವುದು ಬೇಡ.

* ನಿಮ್ಮೆದುರಿರುವವರು ಖುಶಿಯಲ್ಲಿದ್ದರೆ ಯಾವ ವಿಷಯವನ್ನಾದರೂ ಧೈರ್ಯವಾಗಿ ಮಾತಾಡಿ. ಆದರೆ ಅವರಿಗೆ ಸಂಬಧಿಸಿದಂತಹ ವಿಷಯಗಳನ್ನು ಮಾತಾಡಿ ಖುಶಿ ಹಾಳು ಮಾಡಬೇಡಿ.

ಯಾವ ಸಂದರ್ಭದಲ್ಲೇ ಆಗಲಿ ನಮ್ಮಿಂದ ಇನ್ನೊಬ್ಬರಿಗೆ ಖುಷಿ ನೀಡಲಾಗದಿದ್ದರೂ ದುಃಖವನ್ನಂತೂ ನೀಡಬಾರದು. ಇನ್ನೊಬ್ಬರ ಮನಸ್ಸಿನ ಆನಂದ ಕಿತ್ತುಕೊಳ್ಳುವ/ ಅವರಿಗೆ ಕಿರಿಕಿರಿಯನ್ನುಂಟು ಮಾಡುವ, ಮನಸ್ಸಿಗೆ ಘಾಸಿ ಮಾಡುವ ಅಧಿಕಾರ ಖಂಡಿತಾ ನಮಗಿಲ್ಲ. ಮನೆಗೆ ಹೇಗೆ ಅನಪೇಕ್ಷಿತ ಅತಿಥಿಯಾಗಬಾರದೋ, ಅಂತೆಯೇ ಮನಸ್ಸಿಗೂ ಕೂಡ ಬೇಕಾಬಿಟ್ಟಿಯಾಗಿ ಲಗ್ಗೆಯಿಡಬಾರದು… ಕರೆಯದೆ ಬರುವ ಅತಿಥಿಗೆ ನಾವೇ ಆಗಲಿ ಯಾವ ಬಗೆಯ ಸತ್ಕಾರ ಮಾಡಲು ಸಾಧ್ಯ, ನೀವೇ ಯೋಚಿಸಿ… ಅಂತೆಯೇ ಆಲಿಸಲು ಬಾರದ ಮನದ ಮುಂದೆ ಮುತ್ತಿನ ಧಾರೆಯು ಕಲ್ಲಿನ ಮೇಲೆ ಎರೆದ ಎಣ್ಣೆಯಂತಾಗುತ್ತದೆ. ದೃಢ ನಿಶ್ಚಯವನ್ನು ಮಾಡಿ ವ್ಯಕ್ತಿತ್ವ ಬದಲಿಸಿಕೊಂಡು ಉನ್ನತಿಯೆಡೆಗೆ ಸಾಗಿ… ಎಲ್ಲರ ಪ್ರೀತಿ ಪಾತ್ರರಾಗಿ…

– ಶ್ರೀಧರ್.ಜಿ.ಎಸ್
ಯು.ವಿ.ಸಿ.ಇ


Blog Stats

  • 69,008 hits
ನವೆಂಬರ್ 2008
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12
3456789
10111213141516
17181920212223
24252627282930