ಕಲರವ

ಲಕ್ಕಿನ ಸಿಕ್ಕುಗಳಲ್ಲಿ ಸಿಲುಕಿ…

Posted on: ಸೆಪ್ಟೆಂಬರ್ 26, 2008

– ರಂಜಿತ್ ಅಡಿಗ

“ದುರದೃಷ್ಟ ಬಾಗಿಲು ಬಡಿಯುತ್ತಲೇ ಇರುತ್ತದೆ.. ಆದರೆ ಅದೃಷ್ಟ ಅನ್ನೊದು ಯಾವಾಗಲೋ ಒಮ್ಮೆ ಮಾತ್ರ ಬಾಗಿಲು ತಟ್ಟುತ್ತದೆ.”

ಲೇಖಕನೊಬ್ಬನ ಸಾಲುಗಳಿವು. ಸಾಮಾನ್ಯವಾಗಿ ಯಾವುದಾದರೊಂದು ಕ್ಷೇತ್ರದಲ್ಲಿ ಯಶಸ್ವಿಯಾದ ವ್ಯಕ್ತಿಯನ್ನು ಕಂಡು ಹಲುಬುವವರೇ ಹೆಚ್ಚು.

“ಪ್ರತಿಭೇನೂ ಇಲ್ಲ.. ಏನೂ ಇಲ್ಲ.ಬರೇ ಲಕ್ಕಿನಿಂದ ಮೇಲೆ ಬಂದ ಮಾರಾಯ..”ಅಂದುಕೊಂಡೋ, ಇಲ್ಲವೇ “ನಾನೂ ಅವನೂ ಇಬ್ಬರೂ ಒಟ್ಟೇ ಕಷ್ಟ ಪಟ್ವಿ.. ಅವನ ಲಕ್ಕು ಚೆನ್ನಾಗಿತ್ತು” ಅಂತ ಯಶಸ್ಸನ್ನು ಅದೃಷ್ಟಕ್ಕೇ ಕಟ್ಟಿ ಬಿಡುತ್ತಾರೆ. ದುರದೃಷ್ಟ ಬಾಗಿಲು ಬಡಿಯುತ್ತಲೇ ಇರುವ ಅತಿಥಿ.ಅದಕ್ಕೆ ತಕ್ಷಣವೇ ಯಾರನ್ನಾದರೂ ಅವರಿಸಿಕೊಳ್ಳುವ ತವಕ. ಎಲ್ಲರ ಮನೆ ಬಾಗಿಲ ಬಳಿಯೇ ಅದರ ಕೆಲಸ. ಅಡ್ಡದಾರಿಯ ಸೂತ್ರಕ್ಕೆ, ಕಷ್ಟಪಡದೇ ಸುಲಭ ತುತ್ತಿನ ಆಸೆಗೆ ಬಿದ್ದು ಕೂಡಲೇ ಬಾಗಿಲು ತೆಗೆಯುವವರೆಲ್ಲರೂ ದುರದೃಷ್ಟವಂತರೇ.

ನಿಜಕ್ಕೂ ಅದೃಷ್ಟ ಅಂದರೆ ಏನು?
ಬದುಕಿನಲ್ಲಿ ಅಧಃಪಾತಾಳಕ್ಕಿಳಿದ ವ್ಯಕ್ತಿ ಹಂತ ಹಂತವಾಗಿ ಯಶಸ್ಸಿನ ತುದಿ ಮುಟ್ಟಿದವರನ್ನು ಕೇಳಿ ನೋಡಿ. ಬದುಕನ್ನು ಉನ್ನತ ದೃಷ್ಟಿಕೋನದಿಂದ
ನೋಡಿರುತ್ತಾನಾತ. ಅವನಿಗೆ ಅದೃಷ್ಟ ಬಾಗಿಲು ಬಡಿವುದೂ ಗೊತ್ತು. ದುರದೃಷ್ಟದ ಹಟವೂ ಗೊತ್ತು. ಅದೃಷ್ಟ ಅಂದರೆ “ಅವಕಾಶ ಮತ್ತು ಸಿದ್ಧತೆಗಳ ಸಂಗಮ” ಅಂತ ಸಕಾರಾತ್ಮಕವಾಗಿ ಸರಿಯಾದ ಡೆಫಿನೇಶನ್ ಹೇಳಬಲ್ಲ. ಅವಕಾಶ ಹೇಳದೇ ಕೇಳದೇ ಯಾವಾಗಲೋ ಒಮ್ಮೆ ಬರುತ್ತದೆ. ಆದರೆ ಆ ಅವಕಾಶಕ್ಕಾಗಿ ಮಾಡಬೇಕಾದ ಸಿದ್ಧತೆಯಿದೆಯಲ್ಲ.. ಅದು ಪ್ರಾರಂಭದಿಂದಲೇ ಹುಟ್ಟಿರಬೇಕು.
ಬೆಳಗಾಗುವುದರೊಳಗೆ ಶ್ರೀಮಂತನಾಗಿ ಬಿಡಬೇಕು. ಎವರೆಸ್ಟ್ ಹತ್ತಿ ಬಿಡಬೇಕು, ಯಶಸ್ಸಿನ ಜುಟ್ಟು ಹಿಡಿದಿರಬೇಕು ಅಂತೆಲ್ಲಾ ಅಲೋಚಿಸುವವರು ಅದಕ್ಕೆ ತನಗೆ ಅರ್ಹತೆಉಂಟಾ ಅಂತ ಯೋಚಿಸಿದ್ದಿದೆಯಾ? ಅಲ್ಲಿಯವರೆಗೂ ಅದೇ ಫೀಲ್ಡಿನಲ್ಲಿರುವ ಸಾವಿರಾರು ಜನರು, ಅನುಭವಸ್ಥರು ಅವರನ್ನೆಲ್ಲಾ ಹಿಂದಿಕ್ಕಿ ಮುನ್ನುಗ್ಗಬಲ್ಲ ಛಾತಿ ಇದೆಯಾ ಅಂತ ತಮ್ಮ ಅಂತರಂಗದ ಕನ್ನಡಿಯಲ್ಲಿ ನೋಡಿದ್ದಿದೆಯಾ?

ದಿಢೀರ್ ಯಶಸ್ಸು ಅಷ್ಟು ಸುಲಭ ಸಾಧ್ಯವಲ್ಲ. ಚೀನಾದಲ್ಲಿ ಒಂದು ಬಗೆಯ ಬಿದಿರು ಮರವಿದೆ. ಸಾಮಾನ್ಯವಾಗಿ ಬೇರೆ ಜಾತಿಯ ಬಿದಿರುಗಳು ವೇಗವಾಗಿ ಬೆಳೆಯುತ್ತವೆ. ಆದರೆ ಆ ಚೀನಾದ ಬಿದಿರು ಬೀಜ ಹಾಕಿ ನೀರು ಹಾಕಿ ಪೋಷಿಸಿದರೂ ಗಿಡವಾಗುವುದೇ ಇಲ್ಲ. ಒಂದು ವರ್ಷ.. ಎರಡು ವರ್ಷ.. ಮೂರು ವರ್ಷ… ನಾಲ್ಕು… ಉಹುಂ.. ಬರೋಬ್ಬರಿ ಏಳು ವರ್ಷದ ತನಕ ಬೀಜ ಹಾಕಿದ ಜಾಗೆಯಲ್ಲಿ ಚಿಕ್ಕ ಸಸಿಯೂ ಏಳುವುದಿಲ್ಲ. ಆದರೆ ಏಳನೆಯ ವರ್ಷವಿದೆಯಲ್ಲ.. ಆಗ ಚಿಕ್ಕದೊಂದು ಸಸಿ ಕುಡಿಯೊಡೆಯುತ್ತದೆ. ಮುಂದೆ ಅದರ ಬೆಳವಣಿಗೆ ಬಹಳ ಕ್ಷಿಪ್ರ. ಕೇವಲ ಏಳು – ಎಂಟು ತಿಂಗಳಲ್ಲಿ ತನ್ನ ಎತ್ತರವನ್ನು ಬೆಳೆದುಬಿಡುತ್ತದೆ.

ಯಶಸ್ಸೂ ಹಾಗೆಯೇ ಅಲ್ಲವೆ?

ಏಳು ವರ್ಷಗಳ ನಂತರ ಬೆಳೆವ ವೇಗಕ್ಕಾಗಿ ಶಕ್ತಿಯನ್ನು ಹೊಂದಿಸಿಕೊಳ್ಳುತ್ತಿದೆಯೆನೋ ಎಂಬಂತೆ ಸುಮ್ಮನಿರುತ್ತದಲ್ಲ ಆ ಬೀಜ, ಹಾಗೆಯೇ ಮನಸ್ಸನ್ನು ಅಣಿಗೊಳಿಸುತ್ತಿರಬೇಕು. ಗುರಿಗೆ ಬೇಕಾಗುವ ಕೌಶಲ್ಯಗಳನ್ನು ಒಟ್ಟುಹಾಕುತ್ತಿರಬೇಕು. ಮುಖ್ಯವಾಗಿ ಯಶಸ್ಸಿನ ತುದಿಮುಟ್ಟಿದ ಮಹಾನುಭಾವರ ಬಗ್ಗೆ ಹಲುಬುವ ಮಾನಸಿಕ ಖಾಯಿಲೆಗೆ ಎಡೆಮಾಡಿಕೊಡಬಾರದು. ಎಷ್ಟೋ ಸಲ ಇದೂ ಒಂದು ಮಾನಸಿಕ ದುರ್ಬಲತೆ ಎಂಬುದನ್ನು ಮರೆತಿರುತ್ತೇವೆ. ಇಂದಿನ ಯುವಕರ ಇಂತಹ ಧೋರಣೆ ಅವರನ್ನು ಪಲಾಯನವಾದದತ್ತ ಕೊಂಡೊಯ್ಯುತ್ತದೆ.
ಇದು ಸ್ಪರ್ಧಾತ್ಮಕ ಯುಗ. ನಿಜವಾಗಿಯೂ ಪ್ರತಿಭೆ ಒಳಗಿದ್ದರೆ ಮುಂದೆ ಬರಲು ಹಲವಾರು ಹಾದಿಗಳೂ, ಆಕಾಶದಷ್ಟು ಅವಕಾಶಗಳಿವೆ. ಆದ್ದರಿಂದ ಮನಸ್ಸಿನ ಅಸಂಬದ್ಧ ವಿಚಾರಸರಣಿಗೆ ಸೋಲದೇ ವಿಜಯದ ಸಿದ್ಧತೆಗಳನ್ನು ಆರಂಭಿಸಬೇಕು. “ಇಂಟರ್ವ್ಯೂಗೆ ಕರೆ ಬಂದಾಗ ಓದಿಕೊಂಡರಾಯ್ತು.. ಈಗ್ಲೆ ಏನವಸರ?” ಎಂದುಕೊಂಡು ದಿನಗಳನ್ನು ಜಾರಿಹೋಗಲು ಬಿಟ್ಟು ಉದ್ಯೋಗಕ್ಕಾಗಿ ಪರದಾಡುವ ಯುವಕ-ಯುವತಿಯರೇನು ಕಡಿಮೆ ಇಲ್ಲ. ಇಂಟರ್ವ್ಯೂ ಎಂಬುದು ಅವಕಾಶ. ಓದು ಅನ್ನುವುದು ಸಿದ್ಧತೆ.
ಸಿದ್ಧತೆ ಮತ್ತು ಅವಕಾಶದ ಸಂಗಮವಾದಾಗ ಮಾತ್ರ ಯಶಸ್ಸು; ಅದೃಷ್ಟ!

ಇನ್ನು ವಿದ್ಯಾರ್ಥಿಗಳಿಗೂ ಅಷ್ಟೇ. ಪರೀಕ್ಷೆ ಎಂಬುದನ್ನು ತನ್ನ ಪ್ರತಿಭೆ ತೋರಿಸಲು ಅವಕಾಶ ಎಂದುಕೊಂಡು ಖುಷಿಯಾಗಿ ಕಾಲೇಜಿನ ಪ್ರಾರಂಭದ ದಿನದಿಂದಲೇ (ಅರ್ಧ-ಒಂದು ಘಂಟೆಯಾದರೂ ಸರಿ) ಓದುತ್ತಾ ಬಂದರೆ ಯಾವ ಅದೃಷ್ಟ ದ ಮೇಲೂ ಡಿಪೆಂಡ್ ಆಗಬೇಕಿಲ್ಲ?ಲಕ್ಕಿನ ಸಿಕ್ಕುಗಳಲ್ಲಿ ಸಿಲುಕಿ ನರಳಬೇಕಿಲ್ಲ..

ಬದುಕು, ಹೆಗಲಿಗೆ ಕೈ ಹಾಕಿ ಗೆಳೆಯನಂತೆ ಸ್ವಾಗತಿಸುತ್ತದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog Stats

  • 69,008 hits
ಸೆಪ್ಟೆಂಬರ್ 2008
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
1234567
891011121314
15161718192021
22232425262728
2930  
%d bloggers like this: