ಕಲರವ

Archive for ಸೆಪ್ಟೆಂಬರ್ 22nd, 2008

ಇತ್ತೀಚೆಗೆ ಬಿಡುಗಡೆಯಾದ ಎರಡು ಹಿಂದಿ ಸಿನೆಮಾಗಳ ಬಗ್ಗೆ ಸ್ವಲ್ಪ ಬರೆಯಬೇಕು. ಒಂದು, ನಿಶಿಕಾಂತ್ ಕಾಮತ್ ನಿರ್ದೇಶನದ ‘ಮುಂಬೈ ಮೇರಿ ಜಾನ್’. ಮತ್ತೊಂದು, ನೀರಜ್ ಪಾಂಡೆಯ ನಿರ್ದೇಶನದ ಸಿನೆಮಾ ‘ಎ ವೆಡ್‌ನೆಸ್‌ಡೇ’.

ಮೇಲ್ನೋಟಕ್ಕೆ ಎರಡೂ ಸಿನೆಮಾಗಳು ಒಂದೇ ಕಥಾವಸ್ತುವನ್ನು ಹೊಂದಿರುವಂತೆ, ಒಂದೇ ಸಮಸ್ಯೆಯೊಂದಿಗೆ ವ್ಯವಹರಿಸುವಂತೆ ಕಂಡರೂ ಈ ಎರಡೂ ಸಿನೆಮಾಗಳು ತಮ್ಮದೇ ಆದ ವಿಶಿಷ್ಟತೆಯನ್ನು ಹೊಂದಿವೆ. ಎರಡೂ ಚಿತ್ರಗಳು ಭಯೋತ್ಪಾದನೆಯ ಸಮಸ್ಯೆಯ ಬಗ್ಗೆ ಮಾತನಾಡುತ್ತವೆ. ಭಯೋತ್ಪಾದಕ ಕೃತ್ಯಗಳಲ್ಲಿ ಬಲಿಯಾದವರ ಬಗ್ಗೆ ಕಾಳಜಿಯಿಟ್ಟುಕೊಂಡು ರೂಪುಗೊಂಡಿವೆ.  ಮುಂಬೈ ಮೇರಿ ಜಾನ್‌ನಲ್ಲಿ ಯಾವುದೋ ಮುಖವಿಲ್ಲದ, ಹೆಸರಿಲ್ಲದ ಪಾತಕಿಗಳು ನಡೆಸುವ ವಿಧ್ವಂಸಕ ಕೃತ್ಯದಲ್ಲಿ ಬಲಿಯಾದ ಮುಂಬೈನ ಹಸಿ ಹಸಿ ಚಿತ್ರಣವಿದ್ದರೆ, ‘ಎ ವೆಡ್‌ನೆಸ್‌ಡೇ’ನಲ್ಲಿ ಆ ಅಗೋಚರ ಶತ್ರುಗಳ ವಿರುದ್ಧ ಶಸ್ತ್ರವೆತ್ತಿ ನಿಲ್ಲಲು ಸಜ್ಜಾಗುವ ಜನಸಾಮಾನ್ಯನ ಆಕ್ರೋಶ, ಹತಾಶೆಯ ಚಿತ್ರಣವಿದೆ. ಈ ಎರಡೂ ಸಿನೆಮಾಗಳ ಬಾಕ್ಸ್ ಆಫೀಸ್ ಸಾಧನೆಯನ್ನು ಪಕ್ಕಕ್ಕಿಟ್ಟು ನೋಡುವುದಾದರೆ ಇವೆರಡೂ ಸಿನೆಮಾ ಪ್ರತಿಪಾದಿಸುತ್ತಿರುವ ಕಾಳಜಿಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ.

ಕಳೆದ ವರ್ಷ ಸೆಪ್ಟೆಂಬರ್ ಹನ್ನೊಂದರಂದು ಮುಂಬೈನಲ್ಲಿ ನಡೆದ ರೈಲು ಸ್ಫೋಟದ ಸುತ್ತ ‘ಮುಂಬೈ ಮೇರಿ ಜಾನ್’ ಸಿನೆಮಾದ ಕಥೆ ಹಬ್ಬಿಕೊಳ್ಳುತ್ತಾ ಸಾಗುತ್ತದೆ. ಯಾವುದೋ ಉದ್ದೇಶಕ್ಕಾಗಿ, ಜಗತ್ತಿನ ಯಾವುದೋ ಮೂಲೆಯಲ್ಲಿ ಕುಳಿತ ಭಯೋತ್ಪಾದಕರು ಮುಂಬೈನ ರೈಲುಗಳಲ್ಲಿ, ಹೆಸರಿಲ್ಲದ ಗಲ್ಲಿಗಳಲ್ಲಿ ಇಟ್ಟು ಹೋದ ಬಾಂಬುಗಳು ಇಡೀ ಸಮಾಜವನ್ನು ಹೇಗೆ ಘಾಸಿಗೊಳಿಸುತ್ತವೆ, ವಿವಿಧ ಸ್ತರದ ಜನರ ಜನಜೀವನದ ಸೂಕ್ಷ್ಮ ತಂತುಗಳನ್ನು ಹೇಗೆ ಛಿದ್ರಗೊಳಿಸುತ್ತವೆ ಎಂಬುದನ್ನು ಅನಾವರಣಗೊಳಿಸುತ್ತಾ ಹೋಗುತ್ತಾರೆ ನಿಶಿಕಾಂತ್ ಕಾಮತ್. ಹಾಗೆ ನೋಡಿದರೆ ಈ ಸಿನೆಮಾ ಸಾಮಾನ್ಯ ವೀಕ್ಷಕರು ಬಯಸುವ ರೋಚಕತೆಯನ್ನಾಗಲೀ, ತಾರ್ಕಿಕ ಅಂತ್ಯಗಳಿರುವ ಕಥಾವಸ್ತುವನ್ನಾಗಲೀ ಒಳಗೊಂಡಿಲ್ಲ. ಇಲ್ಲಿರುವುದು ಯಾವ ಪೂರ್ವಾಗ್ರಹವಿಲ್ಲದೆ, ಯಾವ ತಾತ್ವಿಕತೆಯಿಲ್ಲದೆ, ಯಾವ ಸಂದೇಶಗಳನ್ನು ನೀಡುವ ತುರ್ತು ಇಲ್ಲದೆ ಬಾಂಬ್ ಸ್ಫೋಟ ನಡೆದ ನಂತರದಲ್ಲಿ ಮುಂಬೈನ ಜನರ ಬದುಕಿನಲ್ಲಾದ ಸ್ಥಿತ್ಯಂತರಗಳ, ಬದಲಾವಣೆಗಳ, ಪರಿಣಾಮಗಳ ಅವಲೋಕನ.

ಸಿನೆಮಾದಲ್ಲಿ ಬಾಂಬ್ ಬ್ಲಾಸ್ಟ್ ನಡೆಯುವ ಮುಂಚಿನ ಮುಂಬೈನ ವಿವಿಧ ವರ್ಗಗಳ ಜನರ ಬದುಕಿನ ಪರಿಚಯ ನಿಮಗೆ ಮಾಡಿಸಬೇಕು. ಆಕೆ ಒಬ್ಬ ಟಿವಿ ಜರ್ನಲಿಸ್ಟ್. ವರದಿಗಾರಿಕೆಯಲ್ಲಿ ಬಹಳ ಹೆಸರು ಮಾಡಿದವಳು. ಮುಂಬೈಯನ್ನು ಮುಳುಗಿಸುವ ಹಾಗೆ ಬಿದ್ದ ಮಳೆಯಲ್ಲಿ, ಗುಂಪು ಕಾಳಗದಲ್ಲಿ ಬಲಿಯಾದ ಹಳ್ಳಿಯಲ್ಲಿ – ಹೀಗೆ ಎಲ್ಲೆಂದರಲ್ಲಿಗೆ ತೆರಳಿ ವರದಿಗಾರಿಕೆ ಮಾಡುವ ಛಾತಿ ಉಳ್ಳವಳು. ಆಕೆಯ ವೃತ್ತಿಪರತೆ ಹಾಗೂ ಕೌಶಲ ಆಕೆಗೆ ದೊಡ್ಡ ಹೆಸರನ್ನು ತಂದುಕೊಟ್ಟಿರುತ್ತವೆ. ಈಕೆಗೊಬ್ಬ ಪ್ರಿಯಕರನಿರುತ್ತಾನೆ. ಇನ್ನು ಈತ ಮೇಲ್ಮಧ್ಯಮ ವರ್ಗದ ಗೃಹಸ್ಥ. ಪರಿಸರ ಪ್ರೇಮಿ, ಆದರ್ಶವಾದಿ. ಆಫೀಸಿಗೆ ಓಡಾಡಲು ಕಾರು ಕೊಂಡರೆ ಪೊಲ್ಯುಶನ್ ಹೆಚ್ಚುತ್ತದೆ, ಎಂದು ರೈಲಿನಲ್ಲಿ ಓಡಾಡುವವ. ಈತನಿಗೊಬ್ಬ ಮಡದಿಯಿದ್ದಾಳೆ. ಆಕೆ ಗರ್ಭಿಣಿ. ಸ್ವಲ್ಪ ಇತ್ತ ಬನ್ನಿ, ಇದು ಮುಂಬೈನ ಅತೀ ಸಾಮಾನ್ಯವಾದ ಒಂದು ಗಲ್ಲಿ. ಇಲ್ಲೊಂದು ಸಾಧಾರಣವಾದ ಟೀ ಅಂಗಡಿಯಿದೆ. ನಾಲ್ಕು ಮಂದಿ ಗೆಳೆಯರು ಗಂಟೆ ಗಟ್ಟಲೆ ಟೀ ಕುಡಿಯುತ್ತಾ, ಟಿವಿಯಲ್ಲಿ ಬರುವ ಸಂಗತಿಗಳ ಬಗ್ಗೆ ಗಹನವಾಗಿ ಮಾತನಾಡುತ್ತಾ ಹೋಗಿ ಬರುವವರ ಮೇಲೆ ಒಂದು ಕಣ್ಣಿಟ್ಟುಕೊಂಡು ಕೂತಿರುತ್ತಾರೆ. ಜೇಬಲ್ಲಿ ಹತ್ತು ರುಪಾಯಿ ಇರುತ್ತೆ, ಅದರಲ್ಲೇ ಇಡೀ ದಿನ ತಳ್ಳಬೇಕಿರುತ್ತದೆ. ಈಗ ಇವನನ್ನು ಪರಿಚಯಿಸಿಕೊಳ್ಳಿ, ಈತ ಮದ್ರಾಸಿ. ಇಲ್ಲಿ ಮುಂಬೈಯಲ್ಲಿ ಸೈಕಲ್ಲಿನ ಮೇಲೆ ಕಾಫಿ ಫಿಲ್ಟರ್ ಹೊತ್ತುಕೊಂಡು ಕಾಫಿ ಮಾರಿಕೊಂಡು ಜೀವನ ನಡೆಸುತ್ತಿರುತ್ತಾನೆ. ಇವರಿಬ್ಬರು ಮುಂಬೈ ಪೊಲೀಸ್. ಇವರಲ್ಲಿ ಒಬ್ಬಾತನಿಗೆ ನಿವೃತ್ತಿಯ ವಯಸ್ಸಾಗಿದೆ. ಮತ್ತೊಬ್ಬ ಹೊಸತಾಗಿ ಸೇವೆಗೆ ಸೇರಿದವ. ತನ್ನ ಸರ್ವೀಸಿಡೀ ತಾನೊಬ್ಬ ನಿರುಪಯುಕ್ತ ವ್ಯಕ್ತಿಯಾಗಿ ಜೀವನ ಕಳೆದೆ ಎಂಬುದು ಮೊದಲಿನವನ ಸಂಕಟವಾದರೆ, ಕಣ್ಣೆದುರಿನ ಭ್ರಷ್ಠಾಚಾರ, ಅನ್ಯಾಯವನ್ನು ಕಂಡು ಒಳಗೊಳಗೇ ಕುದಿಯುತ್ತಾ ಅಸಹಾಯಕನಾಗಿ ಕೂರುವುದು ನಂತರದವನ ಕರ್ಮ.

ಹೀಗಿರುವ ಮುಂಬೈಯಿಯಲ್ಲಿ ಬಾಂಬ್ ಸ್ಪೋಟಿಸುತ್ತದೆ. ಬಾಂಬ್ ಸ್ಪೋಟದ ತಾಜಾ ಸುದ್ದಿಗಳನ್ನು ವರದಿ ಮಾಡುವಲ್ಲಿ, ದುರಂತವನ್ನು ಯಾವ ಯಾವ ಕೋನದಿಂದ ವಿಮರ್ಶಿಸಬೇಕು, ದುಡಿಯುತ್ತಿದ್ದ ಒಬ್ಬನೇ ಮಗನನ್ನು ಕಳೆದುಕೊಂಡ ಕುಟುಂಬದ ಬಗೆಗಿನ ವರದಿಯನ್ನು ಯಾರು ಮಾಡಬೇಕು- ಎಂದೆಲ್ಲಾ ನಿಷ್ಕರ್ಷೆ ಮಾಡುವಲ್ಲಿ ಬ್ಯುಸಿಯಾಗಿದ್ದ  ಆಕೆಯ ಮೊಬೈಲು ಕುಣಿಯತೊಡ- ಗುತ್ತದೆ. ಬ್ಲಾಸ್ಟಿನಲ್ಲಿ ತನ್ನ ಪ್ರಿಯಕರ ನಾಪತ್ತೆಯಾಗಿದ್ದಾನೆ ಎಂಬುದು ಆಕೆಗೆ ತಿಳಿಯುತ್ತದೆ. ಆಸ್ಪತ್ರೆಯ ಶವಾಗಾರದಲ್ಲಿ ಹತ್ತಾರು ಶವಗಳ ಮಧ್ಯೆ ಆಕೆಗೆ ರುಂಡವಿಲ್ಲದ ತನ್ನ ಪ್ರಿಯಕರನ ಶವ ಎದುರಾಗುತ್ತದೆ. ಈತ ಎಂದಿನಂತೆ ತಾನು ಕಾರು ತೆಗೆದುಕೊಳ್ಳದಿರಲು ತೀರ್ಮಾನಿಸಿರುವ ಕಾರಣವನ್ನು ವಿವರಿಸುತ್ತಾ ಫರ್ಸ್ಟ್ ಕ್ಲಾಸ್ ಬೋಗಿಗೆ ತೆರಳಲು ಸಿದ್ಧನಾಗಿರುತ್ತಾನೆ. ಅಕಸ್ಮಾತಾಗಿ ಅಂದು ಜನರಲ್ ಕ್ಲಾಸ್‌ಗೆ ಹತ್ತಿಕೊಳ್ಳುತ್ತಾನೆ. ಸ್ವಲ್ಪ ಸಮಯದಲ್ಲೇ ಫರ್ಸ್ಟ್ ಕ್ಲಾಸ್ ಕಂಪಾರ್ಟ್‌ಮೆಂಟಿನಲ್ಲಿ ಬಾಂಬ್ ಸಿಡಿಯುತ್ತದೆ. ಹೊತ್ತುರಿಯುವ ರೇಲ್ವೆ ಡಬ್ಬಿ, ಸುಟ್ಟು ಕರಕಲಾದ ದೇಹಗಳು, ಕೈ ಕಾಲು ಕಳೆದುಕೊಂಡು ರಕ್ತ ಸುರಿಸುತ್ತಾ ಎದುರಲ್ಲೇ ಹಾದು ಹೋಗುತ್ತಿರುವ ಜನರು – ಇವನ್ನೆಲ್ಲಾ ಕಂಡು ಆತ ದಂಗಾಗಿ ಹೋಗುತ್ತಾನೆ. ಏನನ್ನೂ ಗ್ರಹಿಸಲಾಗದ ಸ್ಥಿತಿಗೆ ತಲುಪುತ್ತಾನೆ. ಅಲ್ಲಿ, ಮುಂಬೈನ ಗಲ್ಲಿಯೊಂದರ ಟೀ ಅಂಗಡಿಯಲ್ಲಿ ಟೀ ಹೀರುತ್ತಾ ಕುಳಿತಿದ್ದ ಈತನಿಗೆ ಅವಸರವಸರವಾಗಿ ಅಂಗಡಿಯಿಂದ ಓಡಿ ಹೋದ ಮುಸಲ್ಮಾನ ಯುವಕರಿಬ್ಬರ ಮೇಲೆ ಸಂಶಯ ಬಂದಿರುತ್ತದೆ. ಈತ ಬಾಂಬ್ ಬ್ಲಾಸ್ಟ್ ನಡೆದಾಗ ರೇಲ್ವೇ ಸ್ಟೇಷನ್ನಿನಲ್ಲೇ ಇರುತ್ತಾನೆ. ಬಾಂಬು ಸಿಡಿದಾಕ್ಷಣ ನೆರವಿಗೆ ಧಾವಿಸುತ್ತಾನೆ. ಅಲ್ಲಿ ರೇಲಿನಲ್ಲಿ ಸಿಡಿದ ಬಾಂಬಿಗೂ, ಅಂಗಡಿಯಿಂದ ಅವಸರವಸರಕ್ಕೆ ಓಡಿಹೋದ ಮುಸ್ಲೀಂ ಯುವಕರಿಗೂ ಆತನ ಮನಸ್ಸಿನಲ್ಲಿ ನಂಟು ಏರ್ಪಡುತ್ತದೆ. ಸೈಕಲ್ಲಿನ ಮೇಲೆ ಕಾಫಿ ಫಿಲ್ಟರ್ ಇಟ್ಟುಕೊಂಡು ವ್ಯಾಪಾರ ಮಾಡುವ ಮದ್ರಾಸಿ ಅಂದು ತನ್ನ ಹೆಂಡತಿ ಮಗಳನ್ನು ಕರೆದುಕೊಂಡು ನಗರದ ಶ್ರೀಮಂತ ಮಾಲ್‌ವೊಂದಕ್ಕೆ ಹೋಗಿರುತ್ತಾನೆ. ಪ್ರದರ್ಶನಕ್ಕಿಟ್ಟ ಸೆಂಟನ್ನು ಮೈಗೆ ಸಿಂಪಡಿಸಿಕೊಳ್ಳುತ್ತಾನೆ, ಹೆಂಡತಿಗೆ, ಮಗಳಿಗೂ ಸ್ಪ್ರೇ ಮಾಡುತ್ತಾನೆ. ಈತನ ಹಿನ್ನೆಲೆ ತಿಳಿದ ಮಾಲಿನವರು ಸೆಕ್ಯುರಿಟಿಯವರನ್ನು ಕರೆಸಿ ಇವರನ್ನು ಹೊರಗೆ ದಬ್ಬಿಸುತ್ತಾರೆ. ಮನೆಗೆ ತೆರಳಿದ ಆತ ಸೆಂಟಿನ ಘಮವಿದ್ದ ಅಂಗಿ ಕಿತ್ತೊಗೆದು ನಲುಗುತ್ತಾನೆ. ಬಾಂಬ್ ಸ್ಪೋಟದಂತಹ ದುರಂತದ ನಡುವೆ ಆತನಿಗೆ ತನಗಾದ ಅವಮಾನಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ವಿಲಕ್ಷಣವಾದ ಉಪಾಯ ಕಾಣುತ್ತದೆ. ನಗರದ ಎಲ್ಲಾ ಶ್ರೀಮಂತ ಮಾಲ್‌ಗಳಿಗೆ ಪಬ್ಲಿಕ್ ಬೂತಿನಿಂದ ಫೋನ್ ಮಾಡಿ ಬಾಂಬ್ ಇಟ್ಟಿರುವುದಾಗಿ ಹೆದರಿಸಲು ಶುರುಮಾಡುತ್ತಾನೆ. ಮಾಲಿನಲ್ಲಿದ್ದ ಜನರೆಲ್ಲಾ ಜೀವಭಯದಿಂದ ಹೊರಗೆ ಓಡುತ್ತಿರುವುದನ್ನು ಕಂಡು ಸಂಭ್ರಮಿಸುತ್ತಾನೆ. ಇವರಿಬ್ಬರಿಗೆ ಯಾವ ರಾತ್ರಿಗಳಲ್ಲೂ ನೆಮ್ಮದಿಯಿಲ್ಲ. ಬಾಂಬ್ ಬ್ಲಾಸ್ಟ್ ನಡೆದ ರಾತ್ರಿ ಕ್ಲಬ್ಬಿನಲ್ಲಿ ಕೂತು ಮಜಾ ಮಾಡುತ್ತಿದ್ದವರನ್ನು ಓಡಿಸಲಾಗದು, ರಸ್ತೆ ಮಧ್ಯ ಕಾರಿನಲ್ಲಿ ಡ್ರಗ್ಸ್ ತೆಗೆದುಕೊಂಡು ಸುಖ ಪಡುತ್ತಿದ್ದ ಶ್ರೀಮಂತನ ಮಗನನ್ನು ಮುಟ್ಟಲಾಗದು.  ಬ್ಲಾಸ್ಟ್ ಮಾಡಿದವರನ್ನು ಹಿಡೀರಿ ಮೊದ್ಲು ಎನ್ನುವ ಸವಾಲು ಎಲ್ಲರಿಂದ. ‘ಖಾಕಿಯಲ್ಲಿರುವಾಗ ಅಳುವುದು ನಿಷಿದ್ಧ. ಅಳಬೇಕನ್ನಿಸಿದರೆ ಟಾಯ್ಲೆಟ್ಟಿಗೆ ಹೋಗಿ ಪೂರ್ತಿ ನೀರನ್ನು ಹೊರಹಾಕಿಬಿಡಬೇಕು’ ಎನ್ನುವ ವೃದ್ಧ ಪೇದೆಯ ಉಪದೇಶ ಹೊಸಬನನ್ನು ಇಂಚು ಇಂಚಾಗಿ ಕೊಲ್ಲುತ್ತಿರುತ್ತದೆ.

ಅನಂತರದ ಬದುಕನ್ನು ಮುಂಬೈ ಕಟ್ಟಿಕೊಳ್ಳುವುದು ಹೇಗೆ? ಭೀಕರವಾದ ರಾತ್ರಿ ಕಳೆದು ಬೆಳಗಾಗುತ್ತಿದ್ದ ಹಾಗೆಯೇ ನಿನ್ನೆ ಏನೂ ಘಟಿಸಿಯೇ ಇಲ್ಲ ಎಂಬಂತೆ, ಮುಂದೆ ಮತ್ತೇಂದೂ ಇಂಥ ಘಟನೆ ನಡೆಯುವುದಿಲ್ಲ ಎಂಬಂತೆ ರೈಲುಗಳಲ್ಲಿ ತುಂಬಿಕೊಳ್ಳುವ ಜನರಲ್ಲಿರುವುದು ಜೀವನದ ಬಗ್ಗೆಯೇ ಅಸಡ್ಡೆಯಾ ಅಥವಾ ನಿಜವಾದ ಕೆಚ್ಚಾ, ಜೀವನೋತ್ಸಾಹವಾ? ಪ್ರಿಯತಮನನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿ ಬಿದ್ದ ಈಕೆಯ ಎದುರು ತನ್ನದೇ ಸಂಸ್ಥೆಯ ಕೆಮರಾ ಇದೆ. ತಾನು ಮಾಡುತ್ತಿದ್ದ ಕೆಲಸವನ್ನೇ ಮತ್ತೊಬ್ಬಾಕೆ ಮಾಡುತ್ತಿದ್ದಾಳೆ. ‘ಈಗ ನಿಮಗೇನನ್ನಿಸುತ್ತಿದೆ’ ಎಂಬ ಪ್ರಶ್ನೆ ತೂರಿ ಬರುತ್ತಿದೆ. ಹತ್ತಾರು ಟೇಕ್‌ಗಳಾದರೂ ಈಕೆಯಿಂದ ಸರಿಯಾಗಿ ಮಾತನಾಡಲಾಗದು. ವೈಬ್ರಂಟ್ ಜರ್ನಲಿಸ್ಟ್ ಆದಾಕೆಗೆ ಕೆಮರಾದೆದುರು ಮಾತಾಡುವುದೂ ಕಷ್ಟವಾಗುತ್ತದೆ. ಭೂಮಿಗೆ ಬರಲಿರುವ ತನ್ನ ಮಗುವಿಗೆ ಈ ದೇಶ ಸುರಕ್ಷತೆ ಒದಗಿಸಬಲ್ಲದೇ? ಆತ ಯೋಚಿಸುತ್ತಿದ್ದಾನೆ. ತನ್ನ ಭವಿಷ್ಯ ಇಲ್ಲಿ ಹಸಿರಾಗಲು ಸಾಧ್ಯವೇ ಕೇಳಿಕೊಳ್ಳುತ್ತಾನೆ, ಲ್ಯಾಪ್ ಟಾಪಿನಲ್ಲಿ ತೆರೆದುಕೊಂಡ ಗ್ಲೋಬಿನಲ್ಲಿ ಅಪ್ರಯತ್ನಪೂರ್ವಕವಾಗಿ ಗಮನ ಭಾರತದಿಂದ ಅಮೇರಿಕಾದತ್ತ ಚಲಿಸುತ್ತದೆ. ಅಮೇರಿಕಾ, ಇಂಗ್ಲೆಂಡ್ ಯಾವ ದೇಶವೂ ನಮ್ಮ ಮಕ್ಕಳಿಗೆ ಭದ್ರ ಭವಿಷ್ಯದ ಗ್ಯಾರಂಟಿಯನ್ನು ಕೊಡಲಾರದು ಎನ್ನುವುದು ಅಮೇರಿಕಾದ ಗೆಳೆಯನಿಂದ ತಿಳಿಯುತ್ತದೆ. ಬಾಂಬ್ ಬ್ಲಾಸ್ಟಿನ ದಿನ ಅವಸರವಸರವಾಗಿ ಓಡಿಹೋದ ಮುಸ್ಲಿಂ ಯುವಕ ಈತನ ಎದುರಲ್ಲಿ ಕೂತಿದ್ದಾನೆ. ಈತನಿಗಾಗಿ ಟೀ ಆರ್ಡರ್ ಮಾಡಿದ್ದಾನೆ. ಶಿರ್ಡಿಯಿಂದ ತಂದ ಬಾಬಾ ಪ್ರಸಾದ ಈತನಿಗೆ ಕೊಟ್ಟಿದ್ದಾನೆ. ಈತ ತನ್ನ ಗೆಳೆಯರ ಗುಂಪಿಗೆ ಆ ಮುಸ್ಲಿಂ ಯುವಕನ ಪರಿಚಯ ಮಾಡಿಸುತ್ತಾನೆ. ಮುಸ್ಲೀಮರೊಂದಿಗೆ ವ್ಯವಹಾರ ಬೇಡ ಎಂಬ ನಿರ್ಧಾರ ಕರಗಿ ಕೈಯಲ್ಲಿ ಕಾಸು ಓಡಾಡಲು ಶುರುವಾಗುತ್ತದೆ. ಈ ಮದ್ರಾಸಿ ಚಾಯ್‌ವಾಲಾ ಹೀಗೆ ಒಂದು ಮಾಲಿಗೆ ಬಾಂಬ್ ಬೆದರಿಕೆ ಕೊಟ್ಟು ಮಜಾ ನೋಡುತ್ತಾ ನಿಂತಿರುತ್ತಾನೆ. ಎದುರಲ್ಲಿ ಒಬ್ಬ ಮುದುಕನಿಗೆ ಓಡುವ ತರಾತುರಿಯಲ್ಲಿ ಹೃದಯಾಘಾತವಾಗಿ ನರಳುತ್ತಿರುತ್ತಾನೆ. ಆತನನ್ನು ಆಸ್ಪತ್ರೆಗೆ ಕರೆದೊಯ್ಯುವವರೆಗೆ ಈತ ಹಿಂಬಾಲಿಸುತ್ತಾನೆ. ಆತ ಗುಣಮುಖನಾಗಲಿ ಎಂದು ಆಶಿಸುತ್ತಾನೆ. ತಾನು ಮಾಡುತ್ತಿದ್ದ ಕಿಡಿಗೇಡಿತನದ ಅಪಾಯವನ್ನು ಅರಿತು ಕಂಬನಿ ಸುರಿಸುತ್ತಾನೆ. ಈತ ಇವತ್ತು ರಿಟೈರ್ ಆಗುವವನಿದ್ದಾನೆ. ‘ಮುಂದಿನ ಜನ್ಮದಲ್ಲಿ ಮತ್ತೆ ಮುಂಬೈ ಪೊಲೀಸ್ ಆಗಿ ಹುಟ್ಟುವುದಾದರೆ ಏನಾದರೂ ಸಾಧನೆ ಮಾಡಿಯೇ ಸಾಯುತ್ತೇನೆ’ ಎಂದುಕೊಳ್ಳುತ್ತಾನೆ. ‘ಒಬ್ಬನಾದರೂ ದೊಡ್ಡ ಪಾತಕಿಯನ್ನು, ಭಯೋತ್ಪಾದಕನನ್ನು ಹಿಡಿಯುತ್ತೇನೆ’ ಎನ್ನುತ್ತಾನೆ.  ಇಡೀ ಮುಂಬೈ ಅಂದು ಅರೆಕ್ಷಣ ಮೌನವನ್ನಾಚರಿಸುತ್ತದೆ.

ಇನ್ನು ‘ಎ ವೆಡ್ ನೆಸ್‌ಡೇ’. ನೀರಜ್ ಪಾಂಡೆಯ ನಿರ್ದೇಶನದ ಮೊದಲ ಚಿತ್ರ. ಬಾಕ್ಸಾಫೀಸ್ ಲೆಕ್ಕಾಚಾರದಲ್ಲಿ ಅಳೆದರೆ ‘ಮುಂಬೈ ಮೇರಿ ಜಾನ್’ ಚಿತ್ರಕ್ಕಿಂತ ಹೆಚ್ಚು ಸಾಧನೆ ಮಾಡಿರುವಂಥದ್ದು. ಆತ ಒಬ್ಬ ಸಾಮಾನ್ಯ ಮನುಷ್ಯ (ನಸ್ರುದ್ದೀನ್ ಶಾ). ಕಾಂಗ್ರೆಸ್ಸಿನವರು ತುಂಬಾ ಪ್ಯಾಶನೇಟ್ ಆಗಿ ಕರೆಯುವ ‘ಆಮ್ ಆದ್ಮಿ’. ಆರ್.ಕೆ.ಲಕ್ಷ್ಮಣ್‌ರ ಕಾರ್ಟೂನುಗಳಲ್ಲಿ ಸಾಕ್ಷಿ ಪ್ರಜ್ಞೆಯಾಗಿ ಕಾಣುವ ಆಸಾಮಿ. ಈತನಿಗೆ ತಾನೆಷ್ಟು ಅಸಹಾಯಕನಾಗಿದ್ದೇನೆ ಎನ್ನುವುದರ ಅರಿವಾಗುತ್ತದೆ. ತನ್ನ ರಕ್ಷಣೆಗಾಗಿ,ತನ್ನ ಕುಟುಂಬದ, ಮಕ್ಕಳ ಭದ್ರತೆಗಾಗಿ ತಾನು ಆಯ್ಕೆ ಮಾಡಿ ಕಳುಹಿಸಿದ ಸರಕಾರ, ಪೋಲೀಸ್, ಕಾನೂನು ವ್ಯವಸ್ಥೆ ತನ್ನನ್ನು ನಡು ನೀರಿನಲ್ಲಿ ಕೈಬಿಟ್ಟಿದೆ ಎಂದು ತೀರ್ಮಾನಿಸುತ್ತಾನೆ. ಭಯೋತ್ಪಾದಕರು ಈತ ಓಡಾಡುವ ರೈಲಿನಲ್ಲಿ, ಸಿಟಿ ಬಸ್ಸಿನಲ್ಲಿ, ಈತನ ಹೆಂಡತಿ ಖರೀದಿಗೆಂದು ಹೋಗುವ ಮಾರುಕಟ್ಟೆಯಲ್ಲಿ, ಶಾಪಿಂಗ್ ಕಾಂಪ್ಲೆಕ್ಸುಗಳಲ್ಲಿ, ಈತನ ಮಕ್ಕಳ ಶಾಲೆಯ ಕಾರಿಡಾರುಗಳಲ್ಲಿ ಹೀಗೆ ಎಲ್ಲೆಂದರಲ್ಲಿ ಪ್ರತ್ಯಕ್ಷರಾಗಿ ಬಾಂಬ್ ಉಡಾಯಿಸುತ್ತಿದ್ದಾರೆ. ‘ನಾವು ಹೀಗೇ ನಿನ್ನನ್ನು, ನಿನ್ನ ಕುಟುಂಬವನ್ನು ಕೊಲ್ಲುತ್ತಿರುತ್ತೇವೆ. ನೀನೇನು ಮಾಡಿಕೊಳ್ತೀಯೋ ಮಾಡು’ ಎಂದು ಫೂತ್ಕರಿಸುತ್ತಿದ್ದಾರೆ. ನಮ್ಮ ಸರಕಾರ, ನಮ್ಮ ಪೊಲೀಸ್ ಹಾಗೂ ನಮ್ಮ ನ್ಯಾಯ ವ್ಯವಸ್ಥೆ ಇದುವರೆಗೂ ಒಬ್ಬ ಭಯೋತ್ಪಾದಕನನ್ನು ದಂಡಿಸಿ, ನೋಡು ನಮ್ಮ ‘ಆಮ್ ಆದ್ಮೀ’ ಮೇಲೆ ಕೈ ಇಟ್ಟರೆ ನಿನ್ನ ಗತಿಯೇನಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿಲ್ಲ. ಸರಕಾರ, ಮಂತ್ರಿಗಳು, ಪೊಲೀಸರು ಎಲ್ಲರೂ ಕೈ ಕಟ್ಟಿ ಕೂತಿರುವಾಗ ಈತ ಎದ್ದು ನಿಲ್ಲುತ್ತಾನೆ. ಕಾನೂನನ್ನು ತನ್ನ ಕೈಗೆ ತೆಗೆದುಕೊಳ್ಳುತ್ತಾನೆ. ತನ್ನನ್ನು ಕೆಣಕಿದವರನ್ನು ತಾನೇ ಶಿಕ್ಷಿಸಬೇಕು ಎಂದು ತೀರ್ಮಾನಿಸುತ್ತಾನೆ. ತಾನೇ ಭಯೋತ್ಪಾದಕರನ್ನು ಕೊಲ್ಲುತ್ತಾನೆ. ಉಳಿದ ವಿವರಗಳು ಇಲ್ಲಿ ಬೇಕಿಲ್ಲ.

ಬೆಂಗಳೂರಿನಲ್ಲಿ ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಬಾಂಬ್ ಸ್ಫೋಟಗಳು ನಡೆದಿದ್ದರೂ ಇನ್ನೂ ಮುಂಬೈನಷ್ಟು ಪರಿಸ್ಥಿತಿ ಬಿಗಡಾಯಿಸಿಲ್ಲ. ಹೀಗಾಗಿ ನಮಗೆ ‘ಮುಂಬೈ ಮೇರಿ ಜಾನ್’ ಚಿತ್ರದ ಅಂತರಾಳದ ಕಾಳಜಿ ಅಷ್ಟಾಗಿ ತಟ್ಟದಿರಬಹುದು. ಇಡೀ ಸಮಾಜವನ್ನು ಮಮತೆಯಿಂದ ನೋಡುವ ದೃಷ್ಟಿ ಅಷ್ಟಾಗಿ ಆಕರ್ಷಕವೆನಿಸದಿರಬಹುದು. ಆದರೆ ‘ಎ ವೆಡ್‌ನೆಸ್ ಡೇ’ ಖಂಡಿತವಾಗಿ ನಮ್ಮನ್ನು ಥ್ರಿಲ್ಲಾಗಿಸುತ್ತದೆ. ಭ್ರಷ್ಟರ ವಿರುದ್ಧ ಸಮರ ಸಾರುವ ಪ್ರತಿಯೊಬ್ಬ ಏಕಾಂಗಿ ವೀರನ ಬಗ್ಗೆಯೂ  ಪ್ರೀತಿ ನಮ್ಮಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿರುತ್ತದೆ. ವ್ಯವಸ್ಥೆಯನ್ನು ಧಿಕ್ಕರಿಸುವ ಪ್ರತಿ ವ್ಯಕ್ತಿಯನ್ನೂ ನಾವು ಆರಾಧಿಸುತ್ತೇವೆ. ಇದು ಎಷ್ಟರ ಮಟ್ಟಿಗೆ ಸರಿ? ವೆಡ್ ನೆಸ್ ಡೇ.. ನಲ್ಲಿ ಆ ಆಮ್ ಆದ್ಮೀ ಪೊಲೀಸರು ಬಂಧಿಸಿದ್ದ, ಇನ್ನೂ ಶಿಕ್ಷೆ ವಿಧಿಸದ ಭಯೋತ್ಪಾದಕರನ್ನು ಕೊಲ್ಲುತ್ತಾನೆ. ನಿಜಕ್ಕೂ ಅವರೇ ಬಾಂಬ್ ಬ್ಲಾಸ್ಟ್‌ಗೆ ಕಾರಣಕರ್ತರು ಎಂದು ಆ ಆದ್ಮೀ ಹೇಗೆ ತೀರ್ಮಾನಿಸಿದ? ಇಷ್ಟಕ್ಕೂ ನಾವು ರೂಪಿಸಿಕೊಂಡ ವ್ಯವಸ್ಥೆ ಸಮರ್ಥವಾಗಿಲ್ಲ ಎಂದರೆ ನಾವು ಸಮರ್ಥವಾಗಿಲ್ಲ ಎಂದೇ ಅರ್ಥ. ಪ್ರತಿ ಬಾರಿ ಬಾಂಬ್ ಸ್ಪೂಟಗೊಂಡಾಗಲೂ ಗೃಹ ಮಂತ್ರಿ ‘ನಾವು ಉಗ್ರರನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಅಬ್ಬರಿಸುವುದನ್ನು ನೋಡಿ ಕಿಡಿಕಾರುವ ನಾವು ಆತ ಅಲ್ಲಿ ತಲುಪಿಕೊಳ್ಳಲು ಪರೋಕ್ಷವಾಗಿ ಕಾರಣ ಎಂಬುದನ್ನು ಮರೆತಿರುತ್ತೇವೆ. ಅಲ್ಲವೇ?

ಈ ಎರಡು ಸಿನೆಮಾಗಳು ನನ್ನನ್ನು ಕಲಕಿದ್ದರಿಂದ ಇವುಗಳ ಬಗ್ಗೆ ಬರೆಯಬೇಕಾಯ್ತು. ಸಮಯವಾದಾಗ ಇವೆರಡನ್ನೂ ನೋಡಿ…

– ಸುಪ್ರೀತ್.ಕೆ.ಎಸ್

ಬೈಕಿಗೆ
ನೂರು ಅಶ್ವದ
ಉನ್ಮಾದ
ಒಳಗಿನ
ಚೈತನ್ಯಕ್ಕೆ
ದಿವ್ಯ
ಆಲಸ್ಯ

ಗೋಡೆಯ
ಗಡಿಯಾರದಲ್ಲಿ
ಮುಳ್ಳುಗಳ ದುಡಿಮೆ
ಕೈಗಳಿಗೆ
ಸಂಕೋಲೆಯಲ್ಲದ
ಬೇಡಿ

ದಿನ ಪತ್ರಿಕೆಗೆ
ಎಲ್ಲಾ ಗೊತ್ತೆಂಬ
ಉಡಾಫೆ
ಕಣ್ಣುಗಳಿಗೆ
ರೆಪ್ಪೆ ಬಡಿಯಲೂ
ನಿರಾಸಕ್ತಿ

ಅಡುಗೆ ಮನೆಗೆ
ಬೆಲೆವೆಣ್ಣಿನ
ವಯ್ಯಾರ
ಹೊಟ್ಟೆಗೆ
ಸದ್ದು ಮಾಡದ
ಎಚ್ಚರ

ಕಿಟಾರೆನ್ನುವ
ಬೀದಿಯಲ್ಲಿನ
ಆಟೋ
ಸುಮ್ಮನಿರು
ಮಗು ಮಲಗಿದೆ
ಎಂಬ ಉತ್ತರ

ಕಾಗದದ
ಎದೆಯಲ್ಲಿ
ಅಕ್ಷರದ ಸಂತೆ
ಕವಿಗೆ
ಏನೆಂದು
ಹೆಸರಿಡುವ ಚಿಂತೆ.

– ‘ಅಂತರ್ಮುಖಿ’


Blog Stats

  • 69,182 hits
ಸೆಪ್ಟೆಂಬರ್ 2008
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
1234567
891011121314
15161718192021
22232425262728
2930  

Top Clicks

  • ಯಾವುದೂ ಇಲ್ಲ