ಎಚ್ಚರ ಇದು ಸೋಮಾರಿಗಳಿಗೆ ಮಾತ್ರ!
Posted ಜುಲೈ 24, 2008
on:ಈ ಬರಹ ಓದುವ ಮುನ್ನವೇ ಹೇಳಿಬಿಡುತ್ತೇನೆ. ನೀವು ಅಪ್ಪಟ ಸೋಮಾರಿಯಾಗಿದ್ದರೆ ಈ ಬರಹವನ್ನು ಇಡಿಯಾಗಿ ಓದುವ ಸಂಕಲ್ಪವನ್ನಾದರೂ ಮಾಡಿಕೊಳ್ಳಿ. ಇಲ್ಲ, ನೀವು ಸೋಮಾರಿಗಳಲ್ಲ ಎಂಬ ನಂಬಿಕೆ ನಿಮಗಿದ್ದರೆ ಇದನ್ನು ಓದುವ ಕಷ್ಟವನ್ನು ತೆಗೆದುಕೊಳ್ಳಬೇಕಿಲ್ಲ!
ನಾನು ಈಗ ಮಾತನಾಡುತ್ತಿರುವುದು ತಮ್ಮಲ್ಲಿ ಸಾಮರ್ಥ್ಯವಿದ್ದರೂ ಏನನ್ನೂ ಮಾಡದೆ ಕಾಲವನ್ನು ಜಾರಿ, ಸೋರಿ ಹೋಗಲು ಬಿಟ್ಟು ಕೂರುವ ಸೋಮಾರಿ ವರ್ಗದ ಕುರಿತು. ತಮ್ಮ ಸಾಮರ್ಥ್ಯ ಮೀರಿದ ಸಂಗತಿಗಳನ್ನು ಸಾಧಿಸಲು ಪಡಬೇಕಾದ ಪ್ರಯತ್ನವನ್ನು, ಸುರಿಸಬೇಕಾದ ಬೆವರನ್ನು ಸುರಿಸಲು ಹಿಂದೆ ಮುಂದೆ ನೋಡುತ್ತಾ ಕುಳಿತುಕೊಳ್ಳುವ ಇನ್ನೊಂದು ವರ್ಗದ ಸೋಮಾರಿಗಳ ಬಗ್ಗೆ ಮತ್ತೆ ಮಾತನಾಡೋಣ. ಮೊದಲನೆಯ ವರ್ಗದ ಸೋಮಾರಿಗಳ ಗುಣಲಕ್ಷಣಗಳ ಬಗ್ಗೆ ಹೇಳುವುದಾದರೆ, ಅವರು ಬುದ್ಧಿವಂತರು. ವಿಚಾರವಂತರು. ಪ್ರತಿಭಾಶಾಲಿಗಳು. ಮೈಯಲ್ಲಿ ಕಸುವು ಹೊಂದಿರುವವರು. ಆದರೆ ಅದನ್ನೆಲ್ಲಾ ಬಳಸಿಕೊಂಡು ತಾವು ಏರಬಹುದಾದ ಎತ್ತರವನ್ನು ತಿಳಿಯದವರು. ತಮ್ಮ ಸಾಮರ್ಥ್ಯವನ್ನು ಬಳಸಿಕೊಂಡು ಕ್ರಮಿಸಬಹುದಾದ ಹಾದಿಯನ್ನು ಅಲಕ್ಷಿಸಿದವರು. ಇವರ ಬಗ್ಗೆ ಸ್ವಲ್ಪ ವಿವರವಾಗಿ ಮಾತಾಡೋಣ.
ಮೇಲೆ ಹೇಳಿದ ವರ್ಗದ ಸೋಮಾರಿಗಳಿಗೆ ಅಂದುಕೊಂಡದ್ದನ್ನೆಲ್ಲ ಮಾಡುವ ಸಾಮರ್ಥ್ಯವಿರುತ್ತದೆ. ತಮಗೆ ಅಂಥ ಸಾಮರ್ಥ್ಯವಿದೆ, ಪ್ರತಿಭೆಯಿದೆ ಎಂಬುದೂ ಅವರಿಗೆ ಗೊತ್ತಿರುತ್ತದೆ. ಕೆಲವೊಮ್ಮೆ ಅದೇ ಅವರನ್ನು ಮಾಡಬೇಕಾದ ಕೆಲಸದಿಂದ ವಿಮುಖರನ್ನಾಗಿಸಿಬಿಡುತ್ತದೆ. ಎಂಥ ಕೆಲಸವನ್ನಾದರೂ ನಾನು ಮಾಡಬಲ್ಲೆ ಎಂಬ ಅವರ ಆತ್ಮವಿಶ್ವಾಸವೇ ಅವರಲ್ಲಿ ಕೆಲಸ ಮಾಡುವ ಉತ್ಸಾಹವನ್ನು ಕಸಿದುಕೊಂಡುಬಿಡುತ್ತದೆ. ‘ನನ್ನಲ್ಲಿ ಶಕ್ತಿಯಿರುವಾಗ ನಾನು ಆ ಕೆಲಸವನ್ನು ಯಾವಾಗ ಬೇಕಾದರೂ ಮಾಡಬಲ್ಲೆ’ ಎಂಬ ಉಡಾಫೆ ಮನಸ್ಸಿನಲ್ಲಿ ಮೊಳೆತು ಕೆಲಸವನ್ನು ಮಾಡಲು ಬೇಕಾದ ತುರ್ತನ್ನು ಅದು ಹುಟ್ಟಿಸುವುದೇ ಇಲ್ಲ. ಹೀಗಾಗಿ ಧುಮ್ಮಿಕ್ಕಿ ಹರಿಯಲು ಚಿಕ್ಕದೊಂದು ಕಿಂಡಿಯೂ ಇಲ್ಲದೆ ಬಲಿಷ್ಠವಾದ ಡ್ಯಾಮಿನ ಗೋಡೆಯ ಹಿಂದೆ ಖೈದಿಯಾದ ಜಲರಾಶಿಯ ಹಾಗೆ ಇವರ ಧೀಶಕ್ತಿ ಬಂಧಿಯಾಗಿರುತ್ತದೆ. ಆತ್ಮಶಕ್ತಿ ಪ್ರಕಟಗೊಳ್ಳಲು ಉತ್ಕಟವಾದ ಹಂಬಲವನ್ನು ತೋರುತ್ತಿದ್ದರೂ ಇವರಿಗೆ ಸೂಕ್ತ ಅವಕಾಶವನ್ನು ಕಲ್ಪಿಸಿಕೊಡಲು ಸಾಧ್ಯವಾಗುವುದಿಲ್ಲ.
ಹೀಗೆ ತಮ್ಮ ರೆಕ್ಕೆಯ ಮೇಲೆ ವಿಪರೀತ ವಿಶ್ವಾಸವಿಟ್ಟುಕೊಂಡು ಒಮ್ಮೆಯೂ ಸ್ವಚ್ಛಂದ ಆಗಸಕ್ಕೆ ಜಿಗಿಯದೆ ಕವುಚಿ ಕುಳಿತ ಬುದ್ಧಿವಂತರಿಗೆ ಬಹುದೊಡ್ಡ ಸಮಸ್ಯೆಯಾಗಿ ಕಾಡುವುದು. ‘ಎಲ್ಲಿಂದ ಶುರು ಮಾಡಬೇಕು?’ ಎಂಬ ಪ್ರಶ್ನೆ. ಇವರಿಗೆ ತಮ್ಮ ಯೋಗ್ಯತೆಗೆ, ತಮ್ಮ ಸಾಮರ್ಥ್ಯಕ್ಕೆ ದಕ್ಕಬೇಕಾದ ಸ್ಥಾನ ಮಾನದ ಕಲ್ಪನೆಯಿರುತ್ತದೆ. ತಾವು ಏರಬಹುದಾದ ಎತ್ತರದ ಬಗ್ಗೆ ಸ್ಪಷ್ಟವಾದ ಅಂದಾಜಿರುತ್ತದೆ. ಆದರೆ ಒಮ್ಮೆಗೇ ಮೊದಲನೇ ಮೆಟ್ಟಿಲಿನಿಂದ ಅಷ್ಟು ಮೇಲಕ್ಕೆ ಹಾರುವ ವಿವೇಕಶೂನ್ಯತೆಯೂ ಇವರಲ್ಲಿ ಮಡುಗಟ್ಟಿರುತ್ತದೆ. ಒಂದು ಹೆಜ್ಜೆಯೂ ಇಟ್ಟು ಅನುಭವವಿರದ ಇವರು ನೂರು ಅಡಿಯನ್ನು ಒಂದೇ ಬೀಸಿನಲ್ಲಿ ಕ್ರಮಿಸುವ ಯೋಜನೆಯನ್ನು ಹಾಕಿಕೊಳ್ಳುತ್ತಾರೆ. ತಮ್ಮ ಕಾಲುಗಳ ಮೇಲೆ ಅವರಿಗೆ ಅಷ್ಟು ವಿಶ್ವಾಸವಿರುತ್ತದೆ. ಹಾದಿ ಕ್ರಮಿಸಿದ ಅನುಭವ ಬೆನ್ನ ಹಿಂದಿರದೆ ಗುರಿ ಅಸ್ಪಷ್ಟವಾಗುತ್ತದೆ. ಗಾಳಿಯಲ್ಲಿ ಗುದ್ದುತ್ತಾರೆ, ಬಡಿದಾಡುತ್ತಾರೆ, ಸಂಪೂರ್ಣ ಶಕ್ತಿಯನ್ನು ವಿನಿಯೋಗಿಸಿ ಹೋರಾಡುತ್ತಾರೆ. ಆದರೆ ಒಂದಿನಿತೂ ಫಲ ಪಡೆಯದೆ ದಣಿಯುತ್ತಾರೆ. ಇವರಿಗೆ ಎಲ್ಲಿಗೆ ತಲುಪಬೇಕು ಎಂಬ ತಿಳಿವು ಇರುತ್ತದೆಯೇ ಹೊರತು ಎಲ್ಲಿಂದ ಶುರು ಮಾಡಬೇಕು ಎಂಬ ವಿವೇಕ ಇರುವುದಿಲ್ಲ. ಗಾಳಿಯೊಂದಿಗಿನ ಗುದ್ದಾಟ ಕೊಟ್ಟು ಹೋದ ದಣಿವು ಮೈಮನಸ್ಸನ್ನು ಹಣ್ಣು ಮಾಡಿರುತ್ತದೆ. ಇವರು ಸೋಮಾರಿತನದ ಬೆಚ್ಚನೆಯ ಆಲಿಂಗನಕ್ಕೆ ಶರಣಾಗಿ ಮಲಗಿಬಿಡುತ್ತಾರೆ. Poor fellows!
ಇಂಥಾ ಸೋಮಾರಿಗಳು ಮೊದಲು ತಮ್ಮ ತಲೆಯನ್ನು ಆಕಾಶದಲ್ಲಿ ಗಿರಕಿ ಹೊಡೆಯುವುದನ್ನು ತಪ್ಪಿಸಬೇಕು. ನೆಲದ ರಿಯಾಲಿಟಿಯನ್ನು ಅರಗಿಸಿಕೊಳ್ಳುವ ಗಂಡೆದೆಯನ್ನು ತೋರಬೇಕು. ಒಂದೇ ಏಟಿಗೆ ಹತ್ತು ಪಕ್ಷಿಗಳನ್ನು ಹೊಡೆಯುವುದು ಎಷ್ಟೇ ರಮ್ಯವಾದ ಕಲ್ಪನೆಯೇ ಆದರೂ ಒಮ್ಮೆಗೆ ಒಂದೇ ಪಕ್ಷಿಗೆ ಗುರಿಯಿಡಬೇಕು ಎನ್ನುವ ವಾಸ್ತವವನ್ನು ಇವರು ಮೈಗೂಡಿಸಿಕೊಳ್ಳಬೇಕು. ಒಂದೊಂದೇ ಹೆಜ್ಜೆ ಇಡುವಲ್ಲಿ ಇವರ ಕಾಳಜಿ ವ್ಯಕ್ತವಾಗಬೇಕು. ಗುರಿ ದೊಡ್ಡದೇ ಇರಲಿ ಚಿಂತೆ ಇಲ್ಲ, ಏಣಿ ಆಕಾಶಕ್ಕೇ ಇಟ್ಟಿರಲಿ ತೊಂದರೆಯಿಲ್ಲ, ಆದರೆ ಗಮನ ಹಾಗೂ ಏಕಾಗ್ರತೆಗಳು ಒಂದೊಂದೇ ಮೆಟ್ಟಿಲನ್ನು ಸಾವಕಾಶವಾಗಿ ಏರುವಲ್ಲಿ ವಿನಿಯೋಗವಾಗಲಿ. ಸಣ್ಣ ಸಣ್ಣ ಕೆಲಸಗಳನ್ನು ಮಾಡುವುದಕ್ಕೆ ಶುರು ಮಾಡಿಬಿಡುವುದು ಸೋಮಾರಿತನ ಎಂಬ ಬಹುದೊಡ್ಡ ಹಡಗಿನ ತಳಕ್ಕೆ ಸಣ್ಣ ರಂಧ್ರಗಳನ್ನು ಕೊರೆದಂತೆ. ಒಮ್ಮೆ ಕಲ್ಲು ಗುಂಡು ಕೂತ ಜಾಗದಿಂದ ಅಲುಗಾಡಿ ಉರುಳಲು ಶುರುವಾದರೆ ಎಂಥಾ ಕಲ್ಲು ಮುಳ್ಳಿನ, ಒರಟೊರಟಾದ, ಅಂಕುಡೊಂಕಿನ ಹಾದಿಯಾದರೂ ಅದಕ್ಕೆ ಅಡ್ಡಿಯಾಗುವುದಿಲ್ಲ. ಪ್ರಾರಂಭದ ಜಡತ್ವ ಮೀರಿ ರಾಕೆಟ್ ಆಗಸಕ್ಕೆ ಚಿಮ್ಮಿದ ಹಾಗೆ ಅಂತಃಶಕ್ತಿಯನ್ನೆಲ್ಲಾ ಕ್ರೋಢೀಕರಿಸಿಕೊಂಡು ಇವರು ಎದ್ದು ನಿಲ್ಲಬೇಕು. ಕೆಳಕ್ಕೆ ಎಳೆಯುವ ಸೋಮಾರಿತನದ ಗುರುತ್ವವನ್ನು ಮೀರುವುದಕ್ಕೆ ಹಲ್ಲು ಕಚ್ಚಿ ರೆಕ್ಕೆಗಳನ್ನು ಬಡಿಯುತ್ತಿರಬೇಕು. ಎಷ್ಟೋ ವೇಳೆ ರೆಕ್ಕೆ ಬಡಿಯುವುದೇ ನಿರರ್ಥಕ ಅನ್ನಿಸುತ್ತದೆ. ಮೇಲೆ ಎತ್ತರದ ನೀಲಾಕಾಶದಲ್ಲಿ ಹಾರುತ್ತಿರುವ ಇತರ ಪಕ್ಷಿಗಳಿಗೆ ಹಾರಾಟ ಅನಾಯಾಸವಾಗಿ ದಕ್ಕಿದೆಯಲ್ಲಾ ಎಂದೆನ್ನಿಸುತ್ತದೆ. ಒಂದು ವೇಳೆ ಆ ಅಮಲಿನಲ್ಲೇ ಮೈಮರೆತುಬಿಟ್ಟರೆ ಸೋಮಾರಿತನ ಪುನಃ ಇವರನ್ನು ತನ್ನ ತೆಕ್ಕೆಳೆದುಕೊಂಡುಬಿಡುತ್ತದೆ. ರೆಕ್ಕೆ ಪಟಪಟ ಬಡಿಯುತ್ತಲೇ ಇರಬೇಕು, ನೀರಲ್ಲಿ ಮುಳುಗಿದವ ಉಸಿರಿಗಾಗಿ ಬಡಿದಾಡುವ ಹಾಗೆ.
ಒಮ್ಮೆ ಈ ಬಗೆಯ ಸೋಮಾರಿತನವೆಂಬ ಕಪಿಮುಷ್ಟಿಯಿಂದ ಹೊರಗೆ ಹಾರಿದರೆ ಯಾವ ಬಂಧನವೂ ಇರದು. ಎದುರಿಗೆ ವಿಶಾಲವಾದ ಆಕಾಶ, ಕಸುವು ತುಂಬಿದ ರೆಕ್ಕೆಗಳು ಸ್ವಚ್ಛಂದ ಹಾರಾಟಕ್ಕೆ ಯಾವ ತಡೆಯೂ ಇರುವುದಿಲ್ಲ. ಅನಂತರ ಇವರು ಈ ಲೇಖನ ಓದಬೇಕಾದ ಅಗತ್ಯ ಬರುವುದಿಲ್ಲ!
3 Responses to "ಎಚ್ಚರ ಇದು ಸೋಮಾರಿಗಳಿಗೆ ಮಾತ್ರ!"

ಚೆಂದಾಗಿ ಕಮೆಂಟಿಸಬಹುದು ಈಗ ಬೇಡ. ಮತ್ತ್ಯಾವಗಾಲಾದರೊ… ಕಮೆಂಟಿಸುತ್ತೇನೆ

ಜುಲೈ 24, 2008 at 12:02 ಅಪರಾಹ್ನ
🙂 😦