ಕಲರವ

Archive for ಜುಲೈ 23rd, 2008

ತನ್ನ ತುಂಟ ನಗೆಯ ಮುಖ, ಆಕ್ರಮಣಕಾರಿ ಬ್ಯಾಟಿಂಗ್, ಶಾಂತ ಸ್ವಭಾವ, ಎಲ್ಲಕ್ಕಿಂತ ಮುಖ್ಯವಾಗಿ ಆತನ ಲೀಡರ್‌ಶಿಪ್ ಗುಣಗಳಿಂದಾಗಿ ಇಪ್ಪತ್ತೇಳು ವರ್ಷದ ಮಹೇಂದ್ರ ಸಿಂಗ್ ಧೋನಿ ಎಂಬ ರಾಂಚಿಯ ಹುಡುಗ ಯುವಕರ ಪಾಲಿನ ಆರಾಧ್ಯ ದೈವವಾಗಿದ್ದಾನೆ. ೨೦೦೬ರಲ್ಲೇ ಎಂ ಟಿವಿಯ ಯೂಥ್ ಐಕಾನ್ ಆಗಿದ್ದಾನೆ.

Dhoni23.jpg

ಉತ್ತರಖಂಡದ ಅಲ್ಮೋರದಲ್ಲಿ ಹುಟ್ಟಿದ ಧೋನಿ ಹೈಸ್ಕೂಲು ದಿನಗಳಲ್ಲೇ ಬ್ಯಾಡ್ಮಿಂಟನ್ ಹಾಗೂ ಫುಟ್‌ಬಾಲ್ ಆಡುವುದರಲ್ಲಿ ಆಸಕ್ತಿ ಹೊಂದಿದ್ದ. ಶಾಲೆಯ ಫುಟ್‌ಬಾಲ್ ತಂಡದಲ್ಲಿ ಆತ ಗೋಲ್ ಕೀಪರ್ ಆಗಿದ್ದ. ಒಮ್ಮೆ ಆತನ ಕೋಚ್ ಅವನನ್ನು ಸ್ಥಳೀಯ ಕ್ರಿಕೆಟ್ ಕ್ಲಬ್‌ವೊಂದರಲ್ಲಿ ಕ್ರಿಕೆಟ್ ಆಡಲು ಕಳುಹಿಸಿಕೊಟ್ಟರು. ವಿಕೆಟ್ ಹಿಂದಿನ ಧೋನಿಯ ಚುರುಕಾದ ಓಡಾಟ ಕ್ಲಬ್‌ನ ಗಮನ ಸೆಳೆಯಿತು. ಮುಂದೆ ಫುಟ್‌ಬಾಲ್‌ನ ಗೋಲಿನ ಮುಂದೆ ನಿಲ್ಲುತ್ತಿದ್ದ ಹುಡುಗ ಕ್ರಿಕೆಟ್ ಮೈದಾನದಲ್ಲಿ ವಿಕೆಟ್ ಹಿಂದೆ ನಿಲ್ಲಲು ಶುರು ಮಾಡಿದ, ಹತ್ತನೆಯ ತರಗತಿ ಮುಗಿಯುವಷ್ಟರಲ್ಲಿ ಕ್ರಿಕೆಟ್ ಎಂಬ ಮಾಯಾನಗರಿಯ ಹಾದಿಯಲ್ಲಿ ಅವನು ಸ್ಪಷ್ಟವಾದ ಹೆಜ್ಜೆ ಇಟ್ಟಿದ್ದ.

ಆತ ಇಂದು ಭಾರತದ ಯುವಶಕ್ತಿಯ ಪ್ರತಿನಿಧಿಯಾಗಿರುವುದಕ್ಕೆ ಹಲವು ಕಾರಣಗಳಿವೆ. ಆತ ಹಿಂದೆ ಗಾಡ್ ಫಾದರ್ ಇಟ್ಟುಕೊಂಡು ಮೈದಾನಕ್ಕಿಳಿದವನಲ್ಲ. ಆತನ ಕುಟುಂಬದ ಸರ್‌ನೇಮಿನ ಆಸರೆಯಿಂದ ಆತ ಅವಕಾಶದ ಗೊಂಚಲಿಗೆ ಕೈಹಾಕಲಿಲ್ಲ. ತನ್ನ ಸಾಧನೆಯ ಹಾದಿಯ ಪ್ರತಿ ಅಂಗುಲಂಗುಲನ್ನೂ ಖುದ್ದಾಗಿ ನಡೆದು ಸವೆಸಿದವನು. ಅವನು ಪ್ರಸಿದ್ಧಿಯ ಉತ್ತುಂಗಕ್ಕೆ ಏರಿದ್ದು ಕೇವಲ ತನ್ನ ಉದ್ದ ಕೂದಲಿನ ಗ್ಲಾಮರ್‌ನಿಂದಲ್ಲ. ಆತನ ಪ್ರತಿಭೆ, ಆತನ ಆತ್ಮವಿಶ್ವಾಸ ಹಾಗೂ ದುಡಿಮೆ ಅವನ ಕಾಲಡಿಗೆ ಪ್ರಸಿದ್ಧಿಯನ್ನೂ, ಹಣವನ್ನೂ ತಂದು ಸುರಿಯಿತು. ಶಕ್ತಿಯುತವಾದ ತೋಳುಗಳ ಮೇಲೆ ಶಾಂತವಾದ ತಲೆಯನ್ನು ಹೊಂದಿರುವ ಈ ಯುವಕನನ್ನು ದೇಶದ ಯುವ ಸಮೂಹ ಆದರ್ಶವಾಗಿ ಕಾಣುತ್ತದೆ. ಆತನ ಸಾಧನೆಯ ಗಾಥೆಯಿಂದ ಇವರೂ ಸ್ಪೂರ್ತಿಯನ್ನು, ಆತ್ಮವಿಶ್ವಾಸವನ್ನು ಮೊಗೆದುಕೊಳ್ಳಲಿಕ್ಕೆ ಸಾಧ್ಯವಾಗುತ್ತದೆ.

ಧೋನಿಯಂಥ ಡೈನಮಿಕ್ ಆದ ಸಮರ್ಥರಾದ, ಯಾರಿಗೂ ಹೆದರದ ಹುಮ್ಮಸ್ಸಿನ ಯುವಕರು ದೇಶದ ತುಂಬಾ ಇದ್ದಾರೆ. ಪ್ರತಿ ಕ್ಷೇತ್ರದಲ್ಲೂ ಮುನ್ನುಗ್ಗಲು ಹಾತೊರೆಯುತ್ತಾ ನಿಂತಿದ್ದಾರೆ. ಈಗಾಗಲೇ ದುಡಿದು, ಅಂತಃಸತ್ವವನ್ನೆಲ್ಲಾ ಕಳೆದುಕೊಂಡು, ಜಡತೆಯನ್ನು ಮೈಗಂಟಿಸಿಕೊಂಡು, ಸಿನಿಕತೆಯನ್ನೇ ಕಾಯಕವಾಗಿಸಿಕೊಂಡಿರುವ ಹಿರಿಯರು ಅವರನ್ನು ಒಳಕ್ಕೆ ಸೇರಿಸಿಕೊಳ್ಳಬೇಕು. ಅವರಿಗೆ ದಾರಿ ತೋರಿಸಿ ಮುಂದೆ ಜಿಗಿಯಲು ಪ್ರೋತ್ಸಾಹಿಸಬೇಕು. ಚಿಗುರಿಗೆ ಬೇರಿನ ಬೆಂಬಲವಿದ್ದರೆ ಮರದ ಸೊಗಸು ಹೇಗಿರುತ್ತದೆ, ಯೋಚಿಸಿ!

ಇದೇ ತಿಂಗಳ ಏಳಕ್ಕೆ ಹುಟ್ಟುಹಬ್ಬ ಆಚರಿಸಿಕೊಂಡ ಧೋನಿಗೆ ನಮ್ಮದೊಂದು ಬಿಲೇಟೆಡ್ ವಿಷಸ್!

ದಡವಿನ್ನೂ ಕಂಡಿಲ್ಲ
ದಿಗಿಲು ನನಗೆ
ದೋಣಿ
ಶುದ್ಧ ನಿರ್ಲಿಪ್ತ

ಬಿರುಸು ಗಾಳಿಗೆ
ನೂರು ದಿಕ್ಕುಗಳ
ಗಮ್ಯ
ದೋಣಿ ನಿರ್ಲಿಪ್ತ

ಅಡಿಯ ಅಲೆಗಳಿಗೆ
ಅರ್ಥವಾಗದ
ಮಮತೆ
ದೋಣಿ ನಿರ್ಲಿಪ್ತ

ಭೋರ್ಗರೆವ ಮಳೆಗೆ
ದಾರಿ ತಪ್ಪಿಸುವ
ತವಕ
ದೋಣಿ ನಿರ್ಲಿಪ್ತ

ದಡ ಕಾಣಿಸುವ
ಕಂದೀಲ
ಕರುಣೆಗೆ
ದೋಣಿ ನಿರ್ಲಿಪ್ತ

ಹಾದ ಹಡಗಿಗೆ
ಕೆರಳಿಸುವ
ಗತ್ತು
ದೋಣಿ ನಿರ್ಲಿಪ್ತ

ಒಬ್ಬಂಟಿ ನಾವಿಕ
ಮನದಲ್ಲಿ
ಸಂಶಯ
ದೋಣಿ ನಿರ್ಲಿಪ್ತ

ನೆಟ್ಟ ಕಂಗಳಲ್ಲಿ
ಹಸಿವಿನ
ಸಂಕಟ
ದೋಣಿ ನಿರ್ಲಿಪ್ತ

ಕ್ರೂರ ರಾತ್ರಿಗೆ
ಕೊಲೆಗಾರನ
ಉನ್ಮಾದ
ದೋಣಿ ನಿರ್ಲಿಪ್ತ.

– ಅಂತರ್ಮುಖಿ


Blog Stats

  • 69,182 hits
ಜುಲೈ 2008
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 123456
78910111213
14151617181920
21222324252627
28293031  

Top Clicks

  • ಯಾವುದೂ ಇಲ್ಲ