ಕಲರವ

ಹಾಗೆ ಬೆಳೆಯಿತು ಬರವಣಿಗೆಯೆಡೆಗಿನ ಪ್ಯಾಶನ್!

Posted on: ಏಪ್ರಿಲ್ 24, 2008


ಕೆಲವು ಸಲ ಹಾಗಾಗುತ್ತದೆ. ಮನಸ್ಸಲ್ಲಿ ಹುಟ್ಟಿದ ಭಾವಕ್ಕೆ ಅಭಿವ್ಯಕ್ತಿಯ ಸ್ವಾತಂತ್ರ್ಯ ಕೊಡದಿದ್ದರೆ ಅದು ಒಳಗೊಳಗೇ ನಮ್ಮನ್ನು ತಿನ್ನತೊಡಗುತ್ತದೆ. ಅಂಥದ್ದನ್ನು ಒಮ್ಮೆ ಹೊರಗೆಡವಿಬಿಟ್ಟರೆ ಮನಸ್ಸಿಗೆ ನಿರಾಳ. ‘ನೆನೆಯದೆ ಇರಲಿ ಹ್ಯಾಂಗ…?‘ ಎನ್ನುತ್ತಾರೆ ‘ಅಂತರ್ಮುಖಿ’.

ಪ್ರೈಮರಿ ಸ್ಕೂಲಿನಲ್ಲಿದ್ದಾಗ ನಮ್ಮ ಕನ್ನಡ ಮೇಷ್ಟ್ರ ಒತ್ತಾಯಕ್ಕಾಗಿ ಒಂದೆರಡು ಪ್ರಬಂಧಗಳನ್ನು, ಪ್ರಾಸಕ್ಕೆ ಜೋತುಬಿದ್ದ ನಾಲ್ಕೈದು ಕವನಗಳನ್ನು ಬರೆದಿದ್ದೆ. ತರಗತಿಯಲ್ಲಿದ್ದ ನಮ್ಮೆಲ್ಲರಿಗೂ ಅವರು ಹೋಂ ವರ್ಕ್ ಎಂಬಂತೆ ಒಂದೊಂದು ವಿಷಯ ಕೊಟ್ಟು ಪ್ರಬಂಧ ಬರೆದು ತರಲು ಹೇಳುತ್ತಿದ್ದರು. ಕೆಲವರಿಗೆ ಚಿತ್ರಗಳನ್ನು ಬರೆದುಕೊಡಲು ಹೇಳುತ್ತಿದ್ದರು. ಅವುಗಳಲ್ಲಿ ಆಯ್ದು ಕೆಲವನ್ನು ಅವರು ಸ್ಥಳೀಯ ಪತ್ರಿಕೆಯೊಂದರ ಮಕ್ಕಳ ಪುಟಕ್ಕೆ ಕಳುಹಿಸಿಕೊಡುತ್ತಿದ್ದರು. ಹೋಂ ವರ್ಕ್ ಎಂದುಕೊಂಡು ಏನೇನನ್ನೋ ಗೀಚಿ ಕೊಟ್ಟಿರುತ್ತಿದ್ದ ನನಗೆ ಅದು ಪೇಪರಿನಲ್ಲಿ ಹಾಕುವುದಕ್ಕಾಗಿ ಎಂದು ಗೊತ್ತಾದಾಗ, ‘ಇನ್ನೂ ಚೆನ್ನಾಗಿ ಬರೆಯಬಹುದಿತ್ತಲ್ಲವಾ’ ಎಂದು ಕೈ ಕೈ ಹಿಸುಕಿಕೊಳ್ಳುವಂತಾಗುತ್ತಿತ್ತು.

ಅದಾದ ನಂತರ ಬರವಣಿಗೆಯ ಅಭ್ಯಾಸ ತಪ್ಪಿ ಹೋಗಿತ್ತು. ಬರವಣಿಗೆ, ಕತೆ, ಕವನ ಎಂಬುವೆಲ್ಲಾ ಅಪರಿಚಿತ ಪದಗಳಾಗಿದ್ದವು. ಆಗ ನನಗೆ ಪರಿಚಯವಾದದ್ದೇ ‘ಹಾಯ್ ಬೆಂಗಳೂರ್!’. ನನ್ನ ಸಂಬಂಧಿಕರೊಬ್ಬರ ಮನೆಯಲ್ಲಿ ಈ ವಾರಪತ್ರಿಕೆಯನ್ನು ರೆಗ್ಯುಲರ್ ಆಗಿ ತರಿಸುತ್ತಿದ್ದರು. ನಾನು ಆಗಾಗ ಅವರ ಮನೆಗೆ ಹೋದಾಗ ಅಲ್ಲಿರುತ್ತಿದ್ದ ದಿಕ್ಸೂಚಿ, ತರಂಗಗಳನ್ನು ತಿರುವಿ ಹಾಕಿದ ನಂತರ ಕಪ್ಪು-ಕಪ್ಪು ಬಣ್ಣದ, ವಿಚಿತ್ರ ಆಕಾರದ ಈ ಪತ್ರಿಕೆಯನ್ನು ಕುತೂಹಲಕ್ಕಾಗಿ ತೆಗೆದು ನೋಡುತ್ತಿದ್ದೆ. ಒಳಪುಟಗಳಲ್ಲಿ, ಕೆಲವೊಮ್ಮೆ ಮುಖಪುಟದಲ್ಲೇ ಇರುತ್ತಿದ್ದ ಮುಜುಗರ ಪಡುವಂತಹ ಫೋಟೊಗಳು, ಕೊಲೆ, ರಕ್ತಪಾತದ ಫೋಟೊಗಳನ್ನು ನೋಡಿ ಕೊಳೆತ ಬಾಳೆಗಣ್ಣಿನ ಬುಟ್ಟಿಗೆ ಕೈ ಹಾಕಿದವನಂತೆ ಅಸಹ್ಯಪಟ್ಟುಕೊಳ್ಳುತ್ತಿದ್ದೆ.

ಹೀಗೆ ಒಮ್ಮೆ ಒಂದು ಬೀಡಾ ಅಂಗಡಿಯ ಎದುರು ನಿಂತಿದ್ದಾಗ ಅಂಗಡಿಯಲ್ಲಿ ನೇತುಹಾಕಿದ್ದ ಹಲವಾರು ಪತ್ರಿಕೆಗಳ ಮಧ್ಯೆ ‘ಹಾಯ್ ಬೆಂಗಳೂರ್!’ ಕಂಡಿತು. ಮುಖಪುಟದಲ್ಲಿ ಅದರ ಸಂಪಾದಕ ಅದೆಲ್ಲೋ ಅಫಘಾನಿಸ್ತಾನಕ್ಕೆ ಹೋಗಿದ್ದಾನೆ… ಅಲ್ಲಿಂದ ಬಂದ ವರದಿಗಳಿವೆ… ಎಂಬ ಹೆಡ್ಡಿಂಗುಗಳನ್ನು ಓದಿ ಕುತೂಹಲ ಕೆರಳಿತ್ತು. ಆ ವಾರ ನನ್ನ ಸಂಬಂಧಿಕರ ಮನೆಗೆ ಹೋದಾಗ ಮರೆಯದೆ ‘ಹಾಯ್’ನ್ನು ಹುಡುಕಿ ಓದತೊಡಗಿದೆ. ಆಗ ನಾನು ಆಶ್ಚರ್ಯದಿಂದ, ಬೆರಗಿನಿಂದ ಕಂಡ ಹೆಸರೇ ರವಿ ಬೆಳಗೆರೆ!

ಆ ಕ್ಷಣದಿಂದ ನನ್ನ ಜೊತೆಯಾದ ಆತನ ವಿಲಕ್ಷಣ ಆಸಕ್ತಿಗಳು, ತಿಕ್ಕಲು ಸಾಹಸಗಳು, ಆತ್ಮೀಯವಾದ ಬರವಣಿಗೆ ಇಂದಿಗೂ ನನ್ನೊಂದಿಗಿವೆ ನನ್ನನ್ನು ಬೆಳೆಸುತ್ತಿವೆ. ಬರವಣಿಗೆಯ ಬಗ್ಗೆ ಒಂದು ಪ್ಯಾಶನ್ ಎಂಬುದು ಹುಟ್ಟಿದ್ದೇ ‘ಹಾಯ್ ಬೆಂಗಳೂರ್!’ ಓದಲು ಪ್ರಾರಂಭಿಸಿದಂದಿನಿಂದ. ಒಂದು ಪತ್ರಿಕೆಯ ಸಂಪಾದಕನಿಗೆ ಇರುವ ಗ್ಲಾಮರ್‌ನ್ನು ಕಂಡು ಮೊದಮೊದಲು ಮುದಗೊಳ್ಳುತ್ತಿದ್ದೆ. ಬಹುಶಃ ಆ ಗ್ಲಾಮರೇ ನನ್ನನ್ನು ಬರವಣಿಗೆಗೆ ಸೆಳೆಯಿತು ಅನ್ನಿಸುತ್ತದೆ. ಒಂದು action ಸಿನೆಮಾ ನೋಡಿದ ನಂತರ ನಮ್ಮಲ್ಲೊಂದು ಹುರುಪು, ಒಂದು ಬಗೆಯ ಹಿರೋಯಿಸಂ ಹುಟ್ಟಿಕೊಳ್ಳುತ್ತದಲ್ಲಾ ಅಂಥದ್ದೇ ಭಾವೋದ್ವೇಗ ‘ಹಾಯ್’ನಲ್ಲಿನ ರವಿ ಬೆಳಗೆರೆಯ ಬರಹಗಳನ್ನು ಓದುವಾಗ ಹುಟ್ಟಿಕೊಳ್ಳುತ್ತಿದ್ದವು.

ಅದೇ ಸಮಯಕ್ಕೆ ಸರಿಯಾಗಿ ದಾವಣಗೆರೆಯ ಹರಪ್ಪನಹಳ್ಳಿಯ ಬಳಿ ನಕಲಿ ಚಿನ್ನದ ಜಾಲದ ಬೆನ್ನುಹತ್ತಿ ಕೊರಚರ ಹಟ್ಟಿಯ ಡಕಾಯಿತನೊಬ್ಬನ ಕಾಲಿಗೆ ಗುಂಡು ಹೊಡೆದು, ಮಾಧ್ಯಮಗಳಲ್ಲಿ ರಾಕ್ಷಸನಂತೆ ಬಿಂಬಿತವಾಗಿ, ತನ್ನ ಪತ್ರಿಕೆಯಲ್ಲಿ ‘ನಾನೇ ಡಕಾಯಿತನ ಕಾಲಿಗೆ ಗುಂಡು ಹೊಡೆದದ್ದು’ ಎಂದು ಬರೆದುಕೊಂಡು ಸರಕಾರದ ವಿರುದ್ಧ ಕೇಸನ್ನು ಗೆದ್ದದ್ದು ಎಲ್ಲವನ್ನೂ ಕಂಡವನಿಗೆ ಬೆಳಗೆರೆ ಮೇಲಿನ ಅಭಿಮಾನ ಹೆಚ್ಚಿತ್ತು. ‘ದಿನಕ್ಕೆ ಹದಿನೆಂಟು ತಾಸು ಓದು ಬರೆದು ಮಾಡುತ್ತೇನೆ’, ‘ನಾಲ್ಕು ದಿನ ನಾಲ್ಕು ರಾತ್ರಿ ಕುಳಿತು ಒಂದು ಪುಸ್ತಕ ಬರೆದು ಮುಗಿಸಿದೆ’ ಎಂಬಂಥ ಅವರ ಕೆಲಸದ ಬಗೆಗಿನ ಅವರದೇ ಮಾತುಗಳನ್ನು ಕೇಳಿ ರೋಮಾಂಚಿತನಾಗುತ್ತಿದ್ದೆ. ಎಂಥವರಿಗಾದರೂ ಅಂಥ ಮಾತುಗಳು ಒಂದೆರಡು ಕ್ಷಣ ಆಸಕ್ತಿಯನ್ನು ಕೆರಳಿಸಿಬಿಡುತ್ತವೆ. ಪತ್ರಿಕೋದ್ಯಮದ ಬಗ್ಗೆ, ಬರವಣಿಗೆಯ ಬಗ್ಗೆ ‘ಹಾಯ್’ನಲ್ಲಿ ರವಿ ಬರೆಯುತ್ತಿದ್ದ ಸಂಗತಿಗಳನ್ನು ಓದಿಕೊಂಡು ನಾನೂ ಬರವಣಿಗೆಗೆ ಕೈ ಹಾಕಿದ್ದೆ. ನಾನಾಗ ನಿಯಮಿತವಾಗಿ ಓದುತ್ತಿದ್ದದ್ದು ‘ಹಾಯ್ ಬೆಂಗಳೂರ್!’ ಒಂದನ್ನೇ ಆದ್ದರಿಂದ ಸ್ವಾಭಾವಿಕವಾಗಿ ನನ್ನ ಬರವಣಿಗೆಯ ಶೈಲಿ, ಚಿಂತನೆಯ ಜಾಡು, ವಿಷಯಗಳ ಆಸಕ್ತಿಯ ಮೇಲೆ ರವಿ ಬೆಳಗೆರೆಯ ಛಾಯೆ ಎದ್ದು ಕಾಣುತ್ತಿತ್ತು. ‘ಹಾಯ್…’ ಎಂಬ ಟ್ಯಾಬ್ಲಾಯ್ಡ್‌‌ನ ಭಾಷೆಯಲ್ಲಿ ನಾನು ಬರೆಯುತ್ತಿದ್ದ ಕೆಲವು ಲೇಖನಗಳು ನಮ್ಮ ಶಾಲೆಯ ಗೋಡೆ ಪತ್ರಿಕೆಯಲ್ಲಿ ಬೆಳಕು ಕಂಡು ಹಲವರನ್ನು ಬೆರಗುಗೊಳಿಸುತ್ತಿದ್ದವು. ಆಗಲೇ ಹುಟ್ಟಿದ್ದು ನಾನೂ ಒಂದು ಪತ್ರಿಕೆಯನ್ನೇಕೆ ಮಾಡಬಾರದು ಎಂಬ ಐಡಿಯಾ!

ನನ್ನ ಬರವಣಿಗೆಯ ಹಾದಿಯಲ್ಲಿನ ಇಷ್ಟು ಕಾಲದಲ್ಲಿ ನಾನು ಪ್ರಜ್ಞಾಪೂರ್ವಕವಾಗಿ ರವಿಬೆಳಗೆರೆ ಎಂಬ ಶಕ್ತಿಯ ಅನುಕರಣೆ ಮಾಡುವ ಪ್ರಯತ್ನ ಮಾಡಿದ್ದೇನೆ. ಅನಂತರ ಆ ಅನುಕರಣೆಗಾಗಿ guilt ಅನುಭವಿಸಿದ್ದೇನೆ. ನಾನು ಯಾರ ಅನುಕರಣೆಯೂ ಮಾಡುತ್ತಿಲ್ಲ ಎಂದು ಸಾಧಿಸುವ ವ್ಯರ್ಥ ಪ್ರಯತ್ನವನ್ನೂ ಮಾಡಿದ್ದೇನೆ. ಈಗೀಗ ಪ್ರಜ್ಞಾಪೂರ್ವಕವಾಗಿ ಎಲ್ಲಾ ಬಗೆಯ ಅನುಕರಣೆಗಳ ಪ್ರಭಾವವನ್ನು ಮೀರಿನಿಲ್ಲುವ ಪ್ರಯತ್ನ ಮಾಡುತ್ತಿದ್ದೇನೆ. ಆದರೂ ತುಂಬಾ ಚಿಕ್ಕಂದಿನಲ್ಲೇ ಬರವಣಿಗೆಯೆಡೆಗೆ, ಓದಿನೆಡೆಗೆ ನನ್ನಲ್ಲಿ ಅದಮ್ಯವಾದ ಪ್ಯಾಶನ್ ಹುಟ್ಟಿಸಿದ ಆ ಲೇಖಕನಿಗೊಂದು ಶುಕ್ರಿಯಾ!

10 Responses to "ಹಾಗೆ ಬೆಳೆಯಿತು ಬರವಣಿಗೆಯೆಡೆಗಿನ ಪ್ಯಾಶನ್!"

nijakkoo thumbaa chennagide nim blaagu…. ishTu dina naanu ee blaagu Odade ULidadakke vishaada ide..
inmele regular readerappa naanu….

Vijay

ಧನ್ಯವಾದಗಳು ಸರ್, ನಿಮ್ಮ ಪ್ರೀತಿಗೆ ನಾವು ಋಣಿ…

-ಸುಪ್ರೀತ್

ಕುತೂಹಲಕಾರಿಯಾಗಿದೆ ನಿಮ್ಮ ಅಕ್ಷರ ಪ್ರೀತಿ ಸುಪ್ರೀತ್‌. ನಾವೆಲ್ಲ ಒಬ್ಬರಲ್ಲ ಒಬ್ಬರ ಪ್ರಭಾವಲಯದಲ್ಲೇ ಬೆಳೆಯುವುದು. ಆದರೆ, ದಿನಗಳೆದಂತೆ ಆ ಪ್ರಭಾವವಲಯ ದಾಟಿ ಹೊರಬರಲೇಬೇಕು. ಎಷ್ಟು ಬೇಗ ಬರುತ್ತೇವೋ ಅಷ್ಟು ಒಳ್ಳೆಯದು. ನಾನು ಕೂಡಾ ಹಲವಾರು ಲೇಖಕ/ಲೇಖಕಿಯರ ಪ್ರಭಾವಕ್ಕೆ ಈಡಾದವಳೇ.

ಆದರೆ, ಅಂತಹ ವಲಯದಿಂದ ಹೊರಬರುವ ನಿಮ್ಮ ಪ್ರಯತ್ನ ಬರವಣಿಗೆಯಲ್ಲಿ ಎದ್ದು ಕಾಣುತ್ತದೆ. ಓದಿದ ತಕ್ಷಣ ಶೈಲಿ ನಿಮ್ಮದೇ ಅನಿಸುವ ಮಟ್ಟಿಗೆ ನೀವು ಸ್ವಂತಿಕೆ ಸಾಧಿಸಿದ್ದೀರಿ. ಅದಕ್ಕಾಗಿ ನಿಮಗೆ ಅಭಿನಂದನೆ.

ಬರೆಯುತ್ತಿರಿ. ಆಗ ಮಾತ್ರ ಪ್ರತಿಕ್ರಿಯೆ ಹಾಕಲು ನಮಗೆ ಅವಕಾಶ, ಅಲ್ಲವೆ?

ಪಲ್ಲವಿ ಅಕ್ಕಾ,
ನಮ್ಮ ಪತ್ರಿಕೆಯ ಬ್ಲಾಗಿಗೆ ಸ್ವಾಗತ. ಹೌದು ಎಷ್ಟು ದಿನ ಅಂತ ಕಂಡವರ ಕಾಲಿನ ಆಸರೆ ಪಡೆಯುತ್ತಾ, ಗೋಡೆಗೆ ಮೊಣಕೈ ಊರುತ್ತಾ ನಡೆಯುವುದು? ಒಂದಲ್ಲ ಒಂದು ದಿನ ನಮ್ಮ ಕಾಲ ಮೇಲೆ ನಾವು ನಿಲ್ಲಲೇ ಬೇಕಲ್ಲವಾ? ಹಾಗೆ ನಿಲ್ಲುವುದಕ್ಕೆ ಆ ಆಸರೆಗಳು ಸಹಕಾರಿಯಾಗಬೇಕು.

ಹಾಗೆ ನೋಡಿದರೆ ನಾನು ನಿಮ್ಮ ಬರವಣಿಗೆಯ ಶೈಲಿಯಿಂದಲೂ ಪ್ರಭಾವಿತನಾಗಿದ್ದೇನೆ. ಬೇಸರ, ಖಿನ್ನತೆಯನ್ನು ಬರವಣಿಗೆಯಲ್ಲಿ ನೀವು ಕಟ್ಟಿ ಕೊಟ್ಟ ಸೊಬಗನ್ನು ಕಂಡು ಬೆರಗಾಗಿದ್ದೇನೆ…

ನಿಮ್ಮ ಸಲಹೆ, ಹಾಗೂ ಹಾರೈಕೆಯೇ ನಮ್ಮ ಜೀವಾಳ…

supree

adbuthawada anubhava kodthane ravi nimmahage nanu vibhinna abhiruchi,sahithyawannu kannada sahithyakke kotta nanna athmiya lekha ravige preethiya chumbhandondhige
nimmablog ennu beleyaly embha haraiyondhige
irshad u t dubai

super sir nanu saha nimmahage

ಹೌದು, ಬೆಳಗೆರೆ ಅದೆಷ್ಟೋ ಮಂದಿಗೆ ಸ್ಪೂರ್ತಿ, ಉತ್ತಮ ಉದಾಹರಣೆಯಾಗಿದ್ದಾರೆ.

ನೊಂದ ಮನಸ್ಸಿಗೆ ಉಲ್ಲಾಸ ನೀಡುವ, ಮನ ಅರಳಿಸುವ, ತಣಿಸುವ ಹಾಗೇಯೇ ಆತ್ಮವಿಶ್ವಾಸ ಮೂಡಿಸುವ ರವಿಬೆಳಗೆರೆಯವರ ಬರಹಗಳಿಗೆ ಸಾಟಿಯಿಲ್ಲ. ಇವರಿಂದ ಪ್ರಭಾವಿತರಾದ ನಿಮ್ಮ ಲೇಖನದಲ್ಲಿ ಇವರ ಛಾಪು ಖಂಡಿತ ಕಾಣಸಿಗುತ್ತದೆ. ಹಾಯ್ ಬೆಂಗಳೂರ್‍ ವಾರಪತ್ರಿಕೆ ಕ್ರೈಂ ಗೆ ಮಾತ್ರ ಸೀಮಿತವಲ್ಲ ಇದು ಇನ್ನೂ ಹಲವರಿಗೆ ಮನವರಿಕೆಯಾಗಬೇಕಿದೆ.
ಭೆಟಿ ನೀಡಿ: ravibelagere.wordpress.com

ರವಿ ಬೆಳಗೆರೆ ಒಂದು ಫಿನಾಮಿನಾನ್ ಬಿಡಿ.
ಪ್ರತಿಕ್ರಿಯೆಗೆ ಧನ್ಯವಾದಗಳು.

ಅಸತೋಮ ಸದ್ಗಮಯ,ಎನ್ ಸಮಾಚಾರ ಇನ್ನು ಮುಂತಾದ ಬ್ಲಾಗು ಗಳು ನನಗೆ ತುಂಬಾ ಇಷ್ಟಾವಾಗಿವೆ ಸರ್…………Thanks. ಧನ್ಯವಾದಳು ಸರ್ …

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog Stats

  • 69,005 hits
ಏಪ್ರಿಲ್ 2008
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 123456
78910111213
14151617181920
21222324252627
282930  
%d bloggers like this: