ಕಲರವ

ಲಹರಿ ಹರಿದಂತೆ- ಸಿಟಿ ಬಸ್ಸಿನ ಕೊನೇ ಸೀಟು

Posted on: ಏಪ್ರಿಲ್ 24, 2008

ಕೆಂಪು… ಹಳದಿ… ಮೂರು…ಎರಡು…ಒಂದು, ಬಿತ್ತು ಹಸಿರು! ಬಾಗಿಲ ಸಂದಿನಲ್ಲಿ ಇಲಿಯ ಚಲನವಲನವನ್ನೇ ಏಕಾಗ್ರಚಿತ್ತದಿಂದ ನೋಡುತ್ತಾ ನಿಂತ ಬೆಕ್ಕು ಗಕ್ಕನೆ ಅದರ ಮೇಲೆ ಜಿಗಿದಂತೆ ಬಸ್ಸು ಮುನ್ನುಗ್ಗಿತು.ಹಾಲಿನ ಪಾಕೀಟನ್ನು ಒಮ್ಮೆಗೇ ಅತ್ತಿಂದಿತ್ತ ಅಲಾಡಿಸಿದಾಗ ಒಳಗಿನ ಹಾಲು ಅತ್ತಿತ್ತ ಅಲ್ಲಾಡುವ ಹಾಗೆ ಬಸ್ಸಿನಲ್ಲಿದ್ದ ಜನರು ಮುಂದಕ್ಕೂ ಹಿಂದಕ್ಕೂ ಒಲಾಡಿದರು. ಇದ್ಯಾವುದೂ ವಿಶೇಷವಲ್ಲವೆಂಬಂತೆ ಎಲ್ಲರೂ ಮತ್ತೆ ಚಲಿಸುವ ಬಸ್ಸಿನ ಲಹರಿಗೆ ಹೊಂದಿಕೊಳ್ಳುತ್ತಿದ್ದರೆ ಅಗೋ ಅಲ್ಲಿ ಎದುರುಗಡೆ ಬಲ ಬದಿಯ ಎರಡನೆಯ ಸಾಲಿನಲ್ಲಿ ಕುಳಿತಿರುವ ಪುಟ್ಟ ತಾಯಿಯ ಮಡಿಲಲ್ಲಿ ಬೆಚ್ಚನೆಯ ಬಟ್ಟೆ ಸುತ್ತಿಕೊಂಡು ಪವಡಿಸಿರುವ ಮಗುವಿಗೆ ಮಾತ್ರ ಏನಾಯಿತೋ ಎಂಬ ಉದ್ವೇಗ. ಬಸ್ಸು ಸಿಗ್ನಲ್ಲಿನಲ್ಲಿ ನಿಂತಾಗ, ಹಸಿರು ಬಿದ್ದು ಒಮ್ಮೆಗೇ ಮುಂದಕ್ಕೆ ಚಿಮ್ಮಿದಾಗಲೆಲ್ಲಾ ಆ ಪುಟ್ಟ ಮಗುವಿನ ಮಿನುಗುವ ಕಣ್ಣುಗಳಲ್ಲಿ ಜಗತ್ತಿನ ಬೆರಗೆಲ್ಲಾ ಮನೆ ಮಾಡಿಕೊಂಡಂತಹ ನೋಟ.

ಆ ತಾಯಿ ಹಾಗೂ ಮಗುವಿನ ಪಕ್ಕದ ಸೀಟಿನಲ್ಲಿ ಕಿಟಕಿಗೆ ತಲೆಯಾನಿಸಿ ಮಲಗಿದಂತೆ ನಟಿಸುತ್ತಿರುವ ಕಾಲೇಜು ಹುಡುಗಿ ಗಮನವೆಲ್ಲಾ ಇರುವುದು ತನ್ನ ಮೊಬೈಲೆಂಬ ಪುಟ್ಟ ಯಂತ್ರದ ಮೇಲೆ. ನಿರ್ಜೀವವಾದ ಆ ಪುಟ್ಟ ಉಪಕರಣ ಆ ಕ್ಷಣ ಅವಳ ಭಾವುಕತೆ, ನಿರೀಕ್ಷೆ, ಉನ್ಮಾದಗಳಿಗೆ ಕಾರಣವಾಗಿದೆ. ಆ ಉಪಕರಣ ಹೊತ್ತು ತರುವ ಆಕೆಯ ಇನಿಯನ ಸಂದೇಶ, ಅದಕ್ಕೆ ಒಂದಿನಿತೂ ವಿಶೇಷವಾಗಿ ಕಾಣದಿದ್ದರೂ ಆಕೆಯಲ್ಲಿ ನೂರಾರು ಭಾವಗಳ ಕಡಲನ್ನೇ ಉಕ್ಕಿಸುತ್ತದೆ. ಆಕೆಯ ಕೈಯಲ್ಲಿ ಆ ಒರಟು ಉಪಕರಣ ಸಹ ಕೋಮಲವಾದ ಹಂಸವಾಗಿ ಜನ್ಮ ತಾಳುತ್ತಿದ್ದೆ. ಆಕೆಯ ಸಂದೇಶವನ್ನು ಹೊತ್ತು ಆಕೆಯ ಇನಿಯನತ್ತ ಹಾರುವ ಹಂಸ ಪಕ್ಷಿಯಾಗುತ್ತಿದೆ. ಆದರೆ ಈ ಯಾವ ಮನೋ ವ್ಯಾಪಾರದ ಚಿಕ್ಕ ಸುಳಿವೂ ಅಕ್ಕ ಪಕ್ಕವಿದ್ದವರಿಗೆ ಸಿಕ್ಕದ ಹಾಗೆ ಎಚ್ಚರ ವಹಿಸುವುದು ಆಕೆಯ ಮುಖಕ್ಕೆ ಅಭ್ಯಾಸವಾಗಿಹೋಗಿದೆ. ಆದರೂ ಹಿಂದೆ ಕಂಬಿ ಹಿಡಿದು ನೇತಾಡುವವನಂತೆ ನಿಂತಿರುವ ಹುಡುಗನಿಗೆ ಇದೆಲ್ಲಾ ಗೊತ್ತಾಗುತ್ತಿದೆ ಎಂಬುದನ್ನು ನಾಲ್ಕನೆಯ ಸಾಲಿನಲ್ಲಿ ಕುಳಿತ ವಯಸ್ಕರೊಬ್ಬರು ಊಹಿಸುತ್ತಿದ್ದಾರೆ.

ಇತ್ತ ಹಿಂದುಗಡೆಯಿಂದ ಎರಡನೆಯ ಸಾಲಿನಲ್ಲಿರುವ ಸೀಟಿಗೆ ಆತುಕೊಂಡು ನಿಂತಿರುವ ಯುವಕ ಕಿವಿಗೆ ಸಿಕ್ಕಿಸಿಕೊಂಡಿರುವ ಹ್ಯಾಂಡ್ಸ್ ಫ್ರೀಯಲ್ಲಿ ಯಾರೊಂದಿಗೋ ಹರಟುತ್ತಿದ್ದಾನೆ. ಆತನ ಉಡುಗೆಯಲ್ಲಿರುವ ನಾಜೂಕು, ಆತನ ಪರ್‌ಫ್ಯೂಮಿನ ಪರಿಮಳ ಇಲ್ಲಿ ಕೊನೆಯ ಸೀಟಿನಲ್ಲಿರುವ ನನ್ನ ಗಮನವನ್ನೂ ಸೆಳೆಯುವಂತಿದೆ. ಮೂರ್ನಾಲ್ಕು ಪದರದಷ್ಟು ಧೂಳು ಬಸ್ಸಿನ ಫ್ಲೋರಿನ ಮೇಲಿದ್ದರೂ ಆತನ ಶೂ ಒಂದಿನಿತೂ ಕೊಳಕಾಗದೆ ಹೊಳೆಯುತ್ತಿರುವುದನ್ನು ಆತನ ಎದುರಿನ ಸೀಟಿನಲ್ಲಿ ಕುಳಿತಿರುವ ಸ್ಕೂಲು ಹುಡುಗ ಬೆರಗಿನಿಂದ ನೋಡುತ್ತಿದ್ದಾನೆ. ಬಸ್ಸು ಮಾರ್ಕೆಟಿನ ಬಳಿ ಹಾದು ಹೋದರೂ ಫೋನಿನಲ್ಲಿ ಮಾತನಾಡುತ್ತಿರುವ ಆ ಯುವಕನ ಧ್ವನಿ ಕೇಳುವುದಿಲ್ಲ. ನನ್ನ ಪಕ್ಕದಲ್ಲಿ ಕುಳಿತ ದಢೂತಿ ವ್ಯಕ್ತಿಯೊಬ್ಬರು ಅಬ್ಬರಿಸುವ ಧ್ವನಿಯಲ್ಲಿ ಇಡೀ ಬಸ್ಸಿಗೇ ಕೇಳುವಂತೆ ತನ್ನ ವ್ಯಪಾರದ ಬಗ್ಗೆ ಮಾತನಾಡುತ್ತಿರುವುದನ್ನು ಆ ನಾಜೂಕಿನ ಯುವಕ ತಿರಸ್ಕಾರ ಬೆರೆತ ನೋಟದಲ್ಲಿ ಗಮನಿಸುತ್ತಿದ್ದಾನೆ. ಆ ಸ್ಕೂಲು ಹುಡುಗನ ಬೆರಗಿನ್ನೂ ಕಡಿಮೆಯಾದಂತೆ ಕಾಣುವುದಿಲ್ಲ.

ನಾಜೂಕು ಯುವಕನ ಮುಂದೆ ನಿಂತಿರುವ ಮತ್ತೊಬ್ಬ ಯುವಕ ಬಸ್ಸಿನ ಕಿಟಕಿಯಿಂದ ತೂರಿಬರುವ ಗಾಳಿಗೆ ಕೆಟ್ಟುಹೋಗುತ್ತಿರುವ ತನ್ನ ಕ್ರಾಪನ್ನು ತನ್ನ ಬೆರಳುಗಳಿಂದಲೇ ತೀಡಿಕೊಳ್ಳುತ್ತಿದ್ದಾನೆ. ಆಗಾಗ ತನ್ನ ಬಲ ಪಕ್ಕದಲ್ಲಿ , ಮುಂದಿನ ಸಾಲಿನಲ್ಲಿ ಸಂಜೆವಾಣಿ ಓದುತ್ತಾ ಕುಳಿತಿರುವ ಬೋಳುತಲೆಯ ಅಂಕಲ್‌ನ್ನು ನೋಡುತ್ತಾನೆ. ಮತ್ತೆ ಕಿಟಕಿಯಾಚೆ ಕಣ್ಣು ಹಾಯಿಸುತ್ತಾನೆ. ಚಡಪಡಿಸುವವನಂತೆ ಸುತ್ತಲೂ ಒಮ್ಮೆ ಕಣ್ಣು ಹಾಯಿಸುತ್ತಾನೆ, ಹುಡುಗಿಯರ್ಯಾರಾದರೂ ಹತ್ತಿಕೊಂಡರಾ ಎಂದು ಬಾಗಿಲ ಬಳಿ ನೋಡುತ್ತಾನೆ. ಮೊದಲ ಸಾಲಿನಲ್ಲಿ ಕಿಟಕಿಗೆ ತಲೆಯಾನಿಸಿ ಎಫ್.ಎಂ ಕೇಳುತ್ತಾ ಕಣ್ಣು ಮುಚ್ಚಿಕೊಂಡಿರುವ ಮಾಡರ್ನ್ ಆಂಟಿಯ ಹರವಿದ ಕೂದಲ ನಡುವೆ ಆಕೆಯ ಮುಖವನ್ನು ನೋಡುವ ಪ್ರಯತ್ನ ಮಾಡುತ್ತಾನೆ, ಅದರಲ್ಲೇ ಕೆಲ ಕಾಲ ಮೈ ಮರೆಯುತ್ತಾನೆ. ಮೈತಿಳಿದು ಏಳುತ್ತಿದ್ದಂತೆಯೇ ತಾನು ಹಾಗೆ ನೋಡುತ್ತಿದ್ದದ್ದನ್ನು ಯಾರಾದರೂ ನೋಡಿಬಿಟ್ಟರಾ ಎಂಬಂತೆ ಸುತ್ತಲೂ ಕಣ್ಣು ಹಾಯಿಸುತ್ತಾನೆ. ನಾನು ಆತನ ಕಣ್ಣು ತಪ್ಪಿಸುವವನಂತೆ ಕಿಟಕಿಯಿಂದ ಹೊರಗೆ ನೋಡುತ್ತೇನೆ. ಆತ ಮತ್ತೆ ಒಮ್ಮೆ ಆ ಆಂಟಿಯನ್ನು ನೋಡಿ ಆಕೆಯನ್ನು ತನ್ನಂತೆಯೇ ಯಾರಾದರೂ ನೋಡುತ್ತಿದ್ದಾರಾ ಎಂದು ಅತ್ತಿತ್ತ ಪರೀಕ್ಷಿಸುತ್ತಾನೆ. ಈ ನಡುವೆ ಮತ್ತೊಮ್ಮೆ ಕ್ರಾಪನ್ನು ತೀಡಿಕೊಂಡು ಅಸಹನೆಯಿಂದ ಪೇಪರ್ ಓದುತ್ತಿದ್ದ ಅಂಕಲ್ ಕಡೆಗೆ ತಿರುಗುತ್ತಾನೆ. ಬಿಟ್ಟಿ ಪೇಪರ್ ಸಿಕ್ಕಿಬಿಟ್ಟರೆ ಜನರಿಗೆ ಅದೇನು ಓದಿನ ಮೋಹ ಹತ್ತಿಬಿಡುತ್ತೋ ಎಂದು ಮನಸ್ಸಿನಲ್ಲೇ ಗೊಣಗಿಕೊಂಡು ಸುಮ್ಮನಾಗುತ್ತಾನೆ.

ನನ್ನೆದುರು ಸಾಲಿನ ಸೀಟಿನಲ್ಲಿ ಕುಳಿತ ಮುದುಕನೊಬ್ಬ ರಾಮ ರಕ್ಷಾ ಸ್ತೋತ್ರದ ಪಾಕೆಟ್ ಸೈಜಿನ ಪುಸ್ತಕ ಹಿಡಿದುಕೊಂಡು ಮಣಮಣಿಸುತ್ತಿದ್ದಾನೆ. ಆತನ ಮತ್ತೊಂದು ಕೈಲಿರುವ ಕೈಚೀಲದಲ್ಲಿ ಪಂಚಾಂಗದಂತೆ ಕಾಣುವ ಒಂದೆರಡು ಪುಸ್ತಕಗಳಿವೆ. ಪ್ರತಿ ಸಲ ಬಸ್ಸು ಗಕ್ಕನೆ ನಿಂತಾಗಲೂ ಆ ಮುದುಕ ಕಿಟಿಪಿಟಿ ಮಾಡುತ್ತಾ, ತನ್ನ ತಲೆಗೆ ತಾಕುತ್ತಿದ್ದ ಇಂಜಿನಿಯರಿಂಗ್ ಕಾಲೇಜು ಹುಡುಗನ ಬ್ಯಾಗನ್ನು ದೂಡುತ್ತಾ ಆತನ ಮೇಲೆ ಹುಸಿ ಸಿಟ್ಟು ಮಾಡಿಕೊಳ್ಳುತ್ತಾ ಸ್ತೋತ್ರವನ್ನು ಗುನುಗುತ್ತಿದ್ದಾನೆ. ಆತನ ಪಕ್ಕದಲ್ಲಿ ಕುಳಿತ ಹುಡುಗ ಸೀಟಿಗೆ ಬೆನ್ನು ಕೊಟ್ಟು ಬಾಯ್ತೆರೆದು ಆಳವಾದ ನಿದ್ರೆಯಲ್ಲಿ ಮುಳುಗಿದ್ದಾನೆ. ಇನ್ನೂ ಎರಡು ನಿಮಿಷವಾಗಿಲ್ಲ ಆತನಿಗೆ ಸೀಟು ಸಿಕ್ಕು, ಆಗಲೇ ಹೆಂಗೆ ಗೊರಕೆ ಹೊಡೆಯುತ್ತಿದ್ದಾನಲ್ಲ ಎಂದುಕೊಳ್ಳುತ್ತಾ ಬೆವರೊರೆಸಿಕೊಳ್ಳುತ್ತಿದ್ದಾನೆ ಮುಂದೆ ನಿಂತ ಇಂಜಿನಿಯರಿಂಗು ಹುಡುಗ.

ಇಷ್ಟು ಮನೋವ್ಯಾಪಾರದ ಗದ್ದಲದ ನಡುವೆಯೇ ರೂಢಿಸಿಕೊಂಡ ಮೌನದಲ್ಲಿ ನಾನು ಯೋಚಿಸುತ್ತಿದ್ದೇನೆ. ಈ ಯಕಶ್ಚಿತ್ ಸಿಟಿ ಬಸ್ಸು ನನಗ್ಯಾಕೆ ಕಾಡುತ್ತಿದೆ? ಚಲಿಸುವ ಈ ಸೂರಿನಡಿ ಅದೆಷ್ಟು ಜೀವಗಳು ಅಲೆದಾಡುತ್ತವೆಯೋ, ಅದೆಷ್ಟು ಭಾವನೆಗಳು ವಿಲೇವಾರಿಯಾಗುತ್ತವೆಯೋ, ಅದೆಷ್ಟು ಕನಸುಗಳು, ನೋವು -ನಿರಾಸೆಗಳು, ಹುರುಪು- ಉತ್ಸಾಹಗಳು, ಅಸಹನೆ- ಅಂಜಿಕೆಗಳು ಓಡಾಡಿಕೊಂಡಿರುತ್ತವೆಯೋ! ಈ ಬಸ್ಸಿಗೆ ಅವುಗಳ ಬಗ್ಗೆ ಯಾವ ಬೆರಗೂ ಇಲ್ಲ. ಅದಂತೂ ನಿರ್ಜೀವಿ, ಆದರೆ ರಕ್ತ ಮಾಂಸ, ಮಜ್ಜೆ ತುಂಬಿಕೊಂಡು ಜೀವ ಜಲದಿಂದ ತುಳುಕುವ ಈ ಮನುಷ್ಯರಿಗೂ ಈ ಬೆರಗು ಕಾಣುತ್ತಿಲ್ಲವಲ್ಲಾ? ಇದಕ್ಕಿಂತ ಬೆರಗು ಇನ್ನೊಂದಿದೆಯೇ? ಈ ಬೆರಗಿನ ಗುಂಗಿನಲ್ಲೇ ನಾನು ತುಸುವಾಗಿ ನಗುತ್ತೇನೆ, ಪಕ್ಕದಲ್ಲಿ ಕುಳಿತ ವ್ಯಕ್ತಿಗೆ ನನ್ನ ಕಿವಿಗೆ ಯಾವ ಮೊಬೈಲೂ, ಎಫ್.ಎಮ್ಮೂ, ಐಪಾಡೂ ಇಲ್ಲದೆ, ಕೈಯಲ್ಲಿ ಯಾವ ಪುಸ್ತಕ, ದಿನಪತ್ರಿಕೆಯೂ ಇಲ್ಲದೆಯೂ ನಾನು ನಗುತ್ತಿರುವುದು ವಿಚಿತ್ರವಾಗಿ ಕಾಣುತ್ತದೆ…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog Stats

  • 69,182 hits
ಏಪ್ರಿಲ್ 2008
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 123456
78910111213
14151617181920
21222324252627
282930  

Top Clicks

  • ಯಾವುದೂ ಇಲ್ಲ
%d bloggers like this: