ಈ ನಂಟಿಗೇಕೆ ಹೆಸರಿನ ಹಂಗು?-ಭಾಗ 2
Posted ಏಪ್ರಿಲ್ 24, 2008
on:ಕಳೆದ ಸಂಚಿಕೆಯಿಂದ ಮುಂದುವರೆದದ್ದು…
ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ. ನಿನ್ನ ನನ್ನ ಸಂಬಂಧದ ಹಸಿ ಮಣ್ಣಿನಲ್ಲಿ ಚಿಗುರೊಡೆದಿದ್ದ ಪರಿಚಿತತೆ ಎಂಬ ಹುಲ್ಲಿನ ಎಸಳಿಗೆ ಹೆಸರನ್ನಿಟ್ಟುಬಿಡುವ ನಿನ್ನ ಉದ್ವೇಗ ಕಂಡು ನನಗೆ ನಿಜಕ್ಕೂ ದಿಗಿಲಾಗಿತ್ತು. ನಿನ್ನೊಂದಿಗೆ ನಾನು ಲ್ಯಾಬಿನಲ್ಲಿ, ಲಂಚ್ ಟೈಮಿನ ಹರಟೆಯಲ್ಲಿ, ಅಪರೂಪದ ಕಂಬೈನ್ಡ್ ಸ್ಟಡಿಯಲ್ಲಿ ಕಳೆಯುತ್ತಿದ್ದ ಸಮಯದಲ್ಲಿ ನಮ್ಮಿಬ್ಬರ ಮಧ್ಯೆ ಆವರಿಸಿಕೊಳ್ಳುತ್ತಿದ್ದ ಆಹ್ಲಾದವಿದೆಯಲ್ಲಾ, ಅದನ್ನು ನಾನು ಇಂದಿಗೂ ಅನುಭವಿಸಲು ಹಪಹಪಿಸುತ್ತೇನೆ. ಆ ದಿನಗಳಲ್ಲಿ ನಿನ್ನ ಜೊತೆಗೆ ಇರುವಾಗ ಯಾರೇನಂದುಕೊಳ್ಳುವರೋ ಎನ್ನುವ ಭಯವಿತ್ತೇ ವಿನಃ ನೀನು ನನ್ನ ಬಗ್ಗೆ ಏನಂದುಕೊಳ್ಳುವಿಯೋ ಎಂಬ ಚಿಂತೆಯಿರಲಿಲ್ಲ. ನಿನ್ನಲ್ಲಿ ನನ್ನ ಗುಟ್ಟುಗಳನ್ನು ಹೇಳಿಕೊಳ್ಳಲು, ಬೇರೆ ಹುಡುಗರ ಬಗ್ಗೆ ಕಮೆಂಟು ಮಾಡಲು ನನಗ್ಯಾವ ಹಿಂಜರಿಕೆಯೂ ಕಾಣುತ್ತಿರಲಿಲ್ಲ. ನೆನಪಿದೆಯಾ, ಅವತ್ತು ರಾಜೇಶ್ ನನ್ನ ಕಂಡರೆ ಹ್ಯಾಗ್ಹ್ಯಾಗೋ ಆಡುತ್ತಿದ್ದಾನೆ ಅಂತ ನಿನ್ನ ಹತ್ತಿರ ಹೇಳಿದ್ದೆ. ನೀನು ತುಟಿಯ ಕೊನೆಯಲ್ಲಿ ಒಂದು ವಿಕಟ ನಗೆ ನಕ್ಕು ಈ ಹುಡುಗಿಯರು ಕಾಲೇಜಿಗೆ ಬಂದರೆ ಕೊಂಬು ಬಂದು ಬಿಡುತ್ತೆ. ನೋಡೋಕೆ ಸ್ವಲ್ಪ ಸುಂದರವಾಗಿದ್ದರಂತೂ ಮುಗಿದೇ ಹೋಯ್ತು, ನಿಮಗೆ ಕಣ್ಣಿಗೆ ಕಾಣುವ ಹುಡುಗರೆಲ್ಲಾ ನಿಮ್ಮೆದುರು ಪ್ರೇಮಭಿಕ್ಷೆ ಬೇಡಲು ನಿಂತಿರುವ ಭಿಕಾರಿಗಳ ಹಾಗೆ ಕಾಣುತ್ತಾರೆ ಎಂದಿದ್ದೆ. ಆ ಕ್ಷಣದಲ್ಲಿ ನನಗೆ ನಿನ್ನ ಮೇಲೆ ವಿಪರೀತವಾದ ಸಿಟ್ಟು ಬಂದಿತ್ತು. ನಾನು ನಿನ್ನಲ್ಲಿ ಬಯಸಿದ್ದು ‘ನಾನಿದ್ದೇನೆ ಬಿಡು’ ಎನ್ನುವಂಥ ಅಭಯವನ್ನ, ಉಡಾಫೆಯ ಉಪದೇಶವನ್ನಲ್ಲ. ಆದರೆ ಈಗ ಇಷ್ಟೆಲ್ಲಾ ಆದ ನಂತರ ಕುಳಿತು ಯೋಚಿಸಿದರೆ ನಮ್ಮ ಆ ಹೆಸರಿಲ್ಲದ ಸಂಬಂಧದಲ್ಲಿದ್ದ ಉಡಾಫೆ, ಸ್ವಾತಂತ್ರ್ಯ ಹಾಗೂ ಜವಾಬು ನೀಡುವ ಆವಶ್ಯಕತೆಯಿಲ್ಲದ ನಂಬುಗೆಯೇ ಚೆನ್ನಾಗಿತ್ತು ಅನ್ನಿಸುತ್ತಿದೆ.
ಇನ್ನೂ ನನಗೆ ಆ ನಮ್ಮ ಸಂಬಂಧದ ಬಗ್ಗೆ ಬೆರಗಿದೆ. ಹೆಸರಿಲ್ಲದ, ರೂಪವಿಲ್ಲದ, ಗಮ್ಯವಿಲ್ಲದ, ಕಟ್ಟಳೆಗಳಿಲ್ಲದ ಸದಾ ಹರಿಯುವಂತಹ ಅನುಭವವನ್ನು ನೀಡುತ್ತಿದ್ದ ಆ ಸಂಬಂಧ ಯಾವುದು? ಹೀಗೆ ಕೇಳಿಕೊಂಡ ತಕ್ಷಣ ಮತ್ತೆ ನಾವು ಸಮಾಜ ಕೊಡಮಾಡುವ ಹೆಸರುಗಳ ಆಸರೆ ಪಡೆಯಬೇಕಾಗುತ್ತದೆ. ನಮ್ಮ ಸಂಬಂಧವನ್ನು ಏನಾದರೊಂದು ಹೆಸರು ಕೊಟ್ಟು ಗುರುತಿಸಬೇಕಾಗುತ್ತದೆ. ಹರಿಯುವ ನದಿಯ ನೀರಿಗ್ಯಾವ ಹೆಸರು? ನದಿಯು ಹರಿಯುವ ಪಾತ್ರದ ಗುರುತು, ಅದರ ಸುತ್ತಮುತ್ತಲಿನ ಪ್ರದೇಶದ ಗುರುತಿನಿಂದ ನಾವು ನದಿಗೆ ಹೆಸರು ಕೊಡುತ್ತೇವೆ ಆದರೆ ಆ ಹೆಸರು ಎಷ್ಟು ಬಾಲಿಶವಾದದ್ದು ಅಲ್ಲವಾ? ನದಿಯ ಹರಿವು ನಿಂತು ಹೋಗಿ ಒಂದು ಹನಿ ನೀರೂ ಇಲ್ಲದಿದ್ದಾಗ ಅದನ್ನು ಇಂಥ ನದಿ ಅಂತ ಹೆಸರಿಟ್ಟು ಕರೆಯಲು ಸಾಧ್ಯವೇ? ಹಾಗಾದರೆ ನದಿಯೆಂದು ನಾವು ಕರೆಯುವುದು ಹರಿಯುವ ನೀರನ್ನೇ? ಆ ನದಿಗೆ ನೀರು ಬಂದದ್ದು ಎಲ್ಲಿಂದ? ತಾಳ್ಮೆಯ ತಪಸ್ಸಲ್ಲಿ ಫಲಿಸಿದ ಮೋಡದಿಂದ ಧಾರೆಯಾಗಿ ಸುರಿದ ಮಳೆ, ನಗರ, ಹಳ್ಳಿ, ಕೊಂಪೆಗಳ ರಸ್ತೆ, ಚರಂಡಿಗಳಲ್ಲಿ ಹರಿದು ಬಂದ ನೀರು ನದಿಯ ಸತ್ವವಾಗುತ್ತದೆ. ಹಾಗಂತ ನಾವು ನದಿಗೆ ಸೇರುವ ನೀರನ್ನು ‘ನದಿ’ ಎಂದು ಹೆಸರಿಟ್ಟು ಕರೆಯಲಾಗುತ್ತದೆಯೇ? ಲಕ್ಷ ಲಕ್ಷ ಮೈಲುಗಳನ್ನು ಉನ್ಮಾದದಲ್ಲಿ ಕ್ರಮಿಸಿ ವಿಶಾಲವಾದ ಜಲರಾಶಿಯನ್ನು ಸೇರುವ ಈ ನೀರು ಅಷ್ಟರವರೆಗೆ ನದಿಯಾದದ್ದು ‘ಸಮುದ್ರ’ ಹೇಗೆ ಆಗಿಬಿಡಲು ಸಾಧ್ಯ? ಸಮುದ್ರವನ್ನು ಸೇರಿದ ನದಿ ನದಿಯಾಗಿ ಉಳಿಯುವುದೇ? ನೋಡು, ನಮ್ಮ ಹೆಸರಿಡುವ ಪ್ರಯತ್ನ ಎಷ್ಟು ಬಾಲಿಶವಾದದ್ದು ಅಂತ! ನಮ್ಮ ಸಂಬಂಧಗಳಿಗೂ ನಾವು ಇದೇ ಮನಸ್ಥಿತಿಯಲ್ಲಿ ಪ್ರತಿಕ್ರಿಯಿಸುತ್ತಿರುವುದು ವಿಪರ್ಯಾಸ ಅಲ್ಲವೇ?
ಈಗ ನಿನ್ನಿಂದ ದೂರವಾಗಿ ನಿನ್ನೊಂದಿಗಿನ ಸಂಬಂಧವನ್ನು ಅವಲೋಕಿಸುತ್ತಿರುವವಳಿಗೆ ಹೀಗೆ ದೊಡ್ಡ ಚಿಂತಕಿಯ ಹಾಗೆ, ದಾರ್ಶನಿಕಳ ಹಾಗೆ ಮಾತನಾಡಲು ಸಾಧ್ಯವಾಗುತ್ತಿದೆ. ಆದರೆ ಆ ಪರಿಸ್ಥಿತಿಯಲ್ಲಿ, ನಿನ್ನೊಂದಿಗಿನ ಸಂಬಂಧದಲ್ಲಿ ನನ್ನನ್ನೇ ನಾನು ಕಳೆದುಕೊಂಡಿದ್ದಾಗ ನಾನು ಹೇಗಿದ್ದೆ? ಕ್ಷಣ ಕ್ಷಣಕ್ಕೂ ದಿಗಿಲು, ಆತಂಕ, ಗೊಂದಲ. ಏನೋ ಸಿಕ್ಕಬಹುದು ಎಂಬ ಕಾತುರ, ಅದು ಈಗ ಸಿಕ್ಕೀತು, ಆಗ ಸಿಕ್ಕೀತು ಎನ್ನುವ ನಿರೀಕ್ಷೆ, ಒಂದು ವೇಳೆ ಸಿಕ್ಕೇ ಬಿಟ್ಟರೆ ಏನು ಮಾಡುವುದು ಎನ್ನುವ ಆತಂಕ, ಅದನ್ನು ಪಾಲಿಸುವ ಧೈರ್ಯ, ತಾಕತ್ತು ನನ್ನಲ್ಲಿದೆಯೇ ಎನ್ನುವ ಅಭದ್ರತೆ, ಅಥವಾ ಅದು ಸಿಕ್ಕುವ ಸಾಧ್ಯತೆಗಳು ಶಾಶ್ವತವಾಗಿ ಇಲ್ಲವಾಗಿಬಿಟ್ಟರೆ ಎನ್ನುವ ದುಗುಡ, ಇನ್ನು ಅದು ಸಿಕ್ಕುವುದೇ ಇಲ್ಲ ಎಂದು ನಿಶ್ಚಯವಾಗಿಬಿಟ್ಟರೆ ಆಗುವ ನಿರಾಶೆಯನ್ನು, ದುಃಖವನ್ನು ಭರಿಸುವುದು ಹೇಗೆ? – ಹೀಗೆ ಮನಸ್ಸು ಲಕ್ಷ ಲಕ್ಷ ಭಾವನೆಗಳ ಸುಂದರ ಕೊಲಾಜ್ ಆಗಿರುತ್ತಿತ್ತು. ಆದರೆ ಅಸಲಿಗೆ ನನಗೆ ಸಿಕ್ಕಬೇಕಾದ್ದು ಏನು ಎನ್ನುವುದೇ ನನಗೆ ತಿಳಿದಿರುತ್ತಿರಲಿಲ್ಲ. ಯಾಕೆ ಅಂದರೆ, ಈ ತಿಳಿವು ಬುದ್ಧಿಗೆ, ನನ್ನ ಅಹಂಕಾರಕ್ಕೆ ಸಂಬಂಧಿಸಿದ್ದು. ಏನೋ ಸಿಕ್ಕುತ್ತದೆ ಎಂದು ನಿರೀಕ್ಷಿಸುತ್ತಿದ್ದದ್ದು ನನ್ನ ಮನಸ್ಸು. ಮನಸ್ಸು, ಬುದ್ಧಿಗಳ ನಡುವಿನ ತಿಕ್ಕಾಟದಿಂದಲೇ ಈ ಪ್ರೀತಿ ಇಷ್ಟು ನಿಗೂಢವಾಗಿ, ಆಕರ್ಷಕವಾಗಿ, ಗೊಂದಲದ ಗೂಡಾಗಿರುವುದೇ? ನೀನು ಹೇಳಬೇಕು, ಹೇಳುತ್ತಿದ್ದೆಯಲ್ಲ ಯಾವಾಗಲೂ ‘ನಾನು ವಿಪರೀತ ಭಾವಜೀವಿ ಕಣೇ’ ಅಂತ.
ನಿನ್ನ ನನ್ನ ನಡುವೆ ಎಗ್ಗಿಲ್ಲದೆ, ಸರಾಗವಾಗಿ ಪ್ರವಹಿಸುತ್ತಿದ್ದ ಭಾವದ ಹರಿವಿಗೆ ಒಂದು ಸ್ವರೂಪವನ್ನು ಕೊಡುವ ಪ್ರಯತ್ನವನ್ನ ನೀನೇ ಮಾಡಿದ್ದು. ಈ ಹರಿವಿಗೊಂದು ಅಣೇಕಟ್ಟು ಕಟ್ಟಿಕೊಂಡು ನೀನು ನಿನ್ನ ಬದುಕಿನ ತೋಟಕ್ಕೆ ನಿರಾವರಿ ಮಾಡಿಕೊಂಡು ನಿನ್ನ ತೋಟದಲ್ಲಿ ನನ್ನ ಪ್ರೀತಿಯ ಹೂವು ಹಣ್ಣು ಅರಳಬೇಕೆಂದು ಅಪೇಕ್ಷಿಸಿದೆ. ಸ್ವಚ್ಛಂದವಾಗಿ ಹರಿಯುತ್ತಿದ್ದ ಸಂಬಂಧಕ್ಕೆ ಒಂದು ತಂಗುದಾಣ ಕಟ್ಟಬಯಸಿದ್ದೆ. ಅದರ ಸೂಚನೆಯೋ ಎಂಬಂತೆ ನನ್ನೆದುರು ನಿನ್ನ ಮಾತು ಕಡಿಮೆಯಾಯಿತು. ಇನ್ನೊಬ್ಬ ಹುಡುಗಿಯನ್ನು ಹೊಗಳುವಾಗ ವಿಪರೀತ ಕಾಳಜಿಯನ್ನು ವಹಿಸಲು ಪ್ರಯತ್ನಿಸುತ್ತಿದ್ದದ್ದು ನನಗೆ ತಿಳಿಯುತ್ತಿತ್ತು. ಅಪ್ಪಿತಪ್ಪಿಯೂ ನಿನ್ನ ಗೆಳೆಯರ ಬಗ್ಗೆ ನನ್ನೆದುರು ಒಂದೊಳ್ಳೆ ಮಾತು ಆಡದಂತೆ ಎಚ್ಚರ ವಹಿಸುತ್ತಿದ್ದೆ. ಆಗಿನಿಂದ ನಾನಿನ್ನ ಕೆದರಿದ ಕೂದಲು, ವಡ್ಡ-ವಡ್ಡಾದ ಡ್ರೆಸ್ ಸೆನ್ಸ್ ಕಾಣುವುದು ತಪ್ಪಿಯೇ ಹೋಗಿತ್ತು. ನೀನು ಪ್ರಜ್ಞಾಪೂರ್ವಕವಾಗಿ ಬದಲಾಗುತ್ತಿದ್ದೆ, ನನ್ನನ್ನು ಮೆಚ್ಚಿಸಲು. ಒಂದು ಮಾತು ಹೇಳಲಾ, ನೀನು ಬೇಜವಾಬಾರಿಯಿಂದ ಡ್ರೆಸ್ ಮಾಡಿಕೊಂಡಾಗಲೇ ನನಗೆ ಚೆನ್ನಾಗಿ ಕಾಣುತ್ತಿದ್ದೆ. ನಿನ್ನ ವಕ್ರವಕ್ರವಾದ ವ್ಯಕ್ತಿತ್ವವೂ ನನಗೆ ಪ್ರಿಯವಾಗಿತ್ತು. ಆದರೆ ನೀನು ಅವನ್ನೆಲ್ಲಾ ಬದಲಾಯಿಸಿಕೊಳ್ಳುತ್ತಿದ್ದೆ. ನನ್ನನ್ನು ಮೆಚ್ಚಿಸುವುದಕ್ಕೆ. ಒಂದು ವೇಳೆ ನಾನು ನನಗೇನಿಷ್ಟ ಎಂಬುದನ್ನು ಹೇಳಿ, ನೀನು ಮೊದಲಿದ್ದ ಹಾಗೇ ಇರು ಅಂತೇನಾದರೂ ಹೇಳಿದ್ದರೆ ನೀನು ಹಾಗಿರಲು ಪ್ರಯತ್ನ ಮಾಡುತ್ತಿದ್ದೆ. ಪ್ರಯತ್ನಪೂರ್ವಕವಾಗಿ ಅಶಿಸ್ತು ರೂಢಿಸಿಕೊಳ್ಳುತ್ತಿದ್ದೆ, ಆದರೆ ನಾನು ಮೆಚ್ಚಿದ್ದ ನಿನ್ನ ಸಹಜ ಬೇಜವಾಬ್ದಾರಿತನವನ್ನು ನಾನೆಂದಿಗೂ ನಿನ್ನಲ್ಲಿ ಕಾಣಲು ಸಾಧ್ಯವಾಗುತ್ತಿರಲಿಲ್ಲ. ನೀನು ನೀನಾಗಿ ನನ್ನೆದುರು ಉಳಿದಿರಲಿಲ್ಲ. ನಮ್ಮತನವನ್ನು ಕಳೆದುಕೊಂಡು ಅಸ್ವಾಭಾವಿಕವಾಗಿ ವರ್ತಿಸಲೇಬೇಕಾ ಪ್ರೀತಿಸಿದವರು? ಹಾಗಾದರೆ ಪ್ರೀತಿ ಅಸ್ವಾಭಾವಿಕವಾ?
ಅಂದು ಸಂಜೆ ಕಾಫಿ ಬಾರಿನಲ್ಲಿ ಕುಳಿತಿದ್ದಾಗ ನೀನು ನೀನಾಗಿರಲಿಲ್ಲ. ಹಿಂದಿನ ದಿನ ತಾನೆ ನಮಗೆ ಸೆಂಡಾಫ್ ಕೊಟ್ಟಿದ್ದರು. ಇನ್ನು ಒಬ್ಬರದು ಒಂದೊಂದು ತೀರ. ನೀನು ಸಂಜೆ ಕಾಫಿ ಬಾರಿಗೆ ಬರಲು ಹೇಳಿದ್ದೆ. ಬಹುಶಃ ಅದೇ ನಮ್ಮ ಕೊನೆ ಭೇಟಿಯಾಗಬಹುದು ಅಂತ ನನಗೆ ತಿಳಿದಿರಲಿಲ್ಲ. ಅಗಲಿಕೆಯ ಗಾಬರಿ ನನ್ನಲ್ಲಿತ್ತು. ಇಷ್ಟು ದಿನ ಕಾಲೇಜಿನಲ್ಲಿ ಪ್ರತಿದಿನ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡಿರುತ್ತಿದ್ದವರು ಇನ್ನು ಮುಂದೆ ಬೇರೆ ಬೇರೆ ಜಾಗಗಳಿಗೆ ಹೋಗಬೇಕಲ್ಲಾ ಎನ್ನುವುದು ನನ್ನ ವೇದನೆಯಾಗಿತ್ತು. ಅದೇ ಭಾವವನ್ನು ನಾನು ನಿನ್ನ ಮುಖದ ಮೇಲೆ ಕಾಣಲು ಪ್ರಯತ್ನಿಸಿದ್ದೆ. ಆದರೆ ನಿನ್ನ ಮುಖದ ಮೇಲಿನ ಆತಂಕ, ಭಯ, ಅದನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದ ನಿನ್ನ ಶ್ರಮವನ್ನೆಲ್ಲಾ ಕಂಡು ನನಗೆ ಹೆದರಿಕೆಯಾಗಿತ್ತು. ಏನೋ ಅಹಿತವಾದದ್ದು ನಡೆಯಲಿದೆ ಅಂತ ಗಾಳಿ ಸೂಚನೆ ಕೊಡುತ್ತಿತ್ತು. ಕೊನೆಗೂ ನೀನು ಹೇಳಿಬಿಟ್ಟೆ, ‘ಬಿಂದು, ಐ ಲವ್ ಯೂ’! ನನ್ನ ಪ್ರತಿಕ್ರಿಯೆಗೂ ಕಾಯದೆ ಎದ್ದು ಹೋಗಿಬಿಟ್ಟೆ. ನಾನೂ ಎದ್ದು ಬಿಟ್ಟೆ, ಕೇಳಿದ ಪ್ರಶ್ನೆಗೆ ಉತ್ತರ ನೀಡಬೇಕೆಂಬ ಕನಿಷ್ಠ ಸೌಜನ್ಯವೂ ಇಲ್ಲದವಳ ಹಾಗೆ ನಾನು ನಿನ್ನ ಬದುಕಿನಿಂದಲೇ ಎದ್ದುಬಿಟ್ಟೆ. ಉತ್ತರವೇ ಇಲ್ಲದ ನಿನ್ನ ಪ್ರಶ್ನೆಯೊಂದಿಗೆ ನೀನು ಹೇಗಿರುವೆಯೋ!
ನಿನ್ನ ಪ್ರಶ್ನೆಗೆ ನಾನು ಯಾವ ಉತ್ತರವನ್ನೂ ಕೊಡದಿದ್ದರೂ ನನ್ನಿಡೀ ಬದುಕಿಗೆ ಒಂದು ಶಾಶ್ವತ ಕ್ವೆಶ್ಚನ್ ಮಾರ್ಕನ್ನು ಸಿಕ್ಕಿಸಿಬಿಟ್ಟಿತ್ತು ನಿನ್ನ ಪ್ರಶ್ನೆ. ‘ಈ ನಂಟಿಗೇಕೆ ಹೆಸರಿನ ಹಂಗು?’ ಉತ್ತರಿಸುವೆಯಾ ಗೆಳೆಯಾ?
ಇಂತಿ ನಿನ್ನ ಪ್ರೀತಿಯ,
ಅಕ್ಟೋಬರ್ 3, 2012 at 10:23 ಫೂರ್ವಾಹ್ನ
so nice messege