ಕಲರವ

ಸ್ನೇಹದ ಕಡಲಲ್ಲಿ…

Posted on: ಏಪ್ರಿಲ್ 19, 2008


ಮಾರ್ಚ್ ೨೦೦೮ರ ಸಂಚಿಕೆಯ ಮುಖಪುಟವನ್ನು ಸ್ನೇಹದ ಬಗೆಗಿನ ಚರ್ಚೆಗೆ ಮೀಸಲಿರಿಸಲಾಗಿತ್ತು. ಸ್ನೇಹದ ವಿವಿಧ ಆಯಾಮಗಳನ್ನು ಕಾಣುವ ಪ್ರಯತ್ನವನ್ನು ಮಾಡಿದ್ದಾರೆ ಸುಪ್ರೀತ್.ಕೆ.ಎಸ್.

ಯಾರನ್ನಾದರೂ ಕೇಳಿ ನೋಡಿ. ಆತ ಎಷ್ಟೇ ಬಡವನಾಗಿರಲಿ, ಎಷ್ಟೇ ಹಣವಂತನಾಗಿರಲಿ, ಹೆಣ್ಣಾಗಿರಲಿ, ಗಂಡಾಗಿರಲಿ, ಯಾವ ಜಾತಿಯೇ ಆಗಿರಲಿ, ಯಾವ ವಯೋಮಾನದವನೇ ಆಗಿರಲಿ ಆತನಿಗೆ ಒಬ್ಬನಾದರೂ ಗೆಳೆಯ ಎಂಬುವವನು ಇದ್ದೇ ಇರುತ್ತಾನೆ. ಆತ ಒಡಹುಟ್ಟಿದವನಲ್ಲ, ರಕ್ತಸಂಬಂಧಿಯಲ್ಲ, ನಂಟನಲ್ಲ. ಆದರೂ ಆತ ಇವೆಲ್ಲಾ ಸಂಬಂಧಿಗಳಿಗಿಂತ ಗುಲಗಂಜಿಯಷ್ಟು ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಾನೆ. ಆತನೊಂದಿಗೆ ನಾವು ಯಾರಿಗೂ ಹೇಳಿಕೊಳ್ಳದ ಗುಟ್ಟುಗಳನ್ನು ಹೇಳಿಕೊಳ್ಳುತ್ತೇವೆ, ನಮ್ಮ ತೀರಾ ಖಾಸಗಿ ಸಂಗತಿಗಳೆಲ್ಲಾ ಆತನಿಗೆ ತಿಳಿಯಪಡಿಸುತ್ತೇವೆ, ನಮ್ಮ ಸಂಭ್ರಮ, ನಿರಾಸೆಗಳನ್ನೆಲ್ಲಾ ಆತನಲ್ಲಿ ತೋಡಿಕೊಳ್ಳಬೇಕು ಅನ್ನಿಸುತ್ತದೆ, ಯಾರ ಬಗ್ಗೆಯಾದರೂ ಆತನಲ್ಲಿ ನಾವು ಕೆಮೆಂಟ್ ಮಾಡಬಹುದು. ಆತನ ಜೊತೆಗೆ ಸಿಕ್ಕುವ ಕಂಫರ್ಟ್ ಬೇರಾರ ಜೊತೆಗೂ ಸಿಗುವುದಿಲ್ಲ. ಆತ ನಮ್ಮ ಪಕ್ಕದ ಮನೆಯವನಾಗಿರಬಹುದು, ನಮ್ಮ ಸಂಬಂಧಿಗಳಿಗೆ ಪರಿಚಿತನಾಗಿರಬಹುದು, ಶಾಲೆಯಲ್ಲಿ ನಮ್ಮ ಬೆಂಚ್ ಮೇಟ್ ಆಗಿರಬಹುದು, ಹಾಸ್ಟೆಲ್ಲಿನಲ್ಲಿ ಜೊತೆಗಿದ್ದವನಾಗಿರಬಹುದು, ಸಹೋದ್ಯೋಗಿಯಾಗಿರಬಹುದು, ಪ್ರೀತಿಸಿದ ಹುಡುಗ ಅಥವಾ ಹುಡುಗಿಯ ದೋಸ್ತ್ ಆಗಿರಬಹುದು, ಹೀಗೆ ಸುಮ್ಮನೆ ಕವಿಗೋಷ್ಠಿಯಲ್ಲಿ ಪಕ್ಕದಲ್ಲಿ ಕುಳಿತಿದ್ದವನಾಗಿರಬಹುದು, ಪತ್ರದ ಮೂಲಕ ಹತ್ತಿರವಾದವನಾಗಬಹುದು, ಆರ್ಕುಟ್ಟಿನಲ್ಲಿ ಫ್ರೆಂಡ್ ಆಗ್ತೀಯಾ ಅಂತ ಕೇಳಿದವನಾಗಬಹುದು, ಅಸಲಿಗೆ ಪರಸ್ಪರ ಮುಖ ನೋಡದೆಯೇ ಕಷ್ಟ ಸುಖ ಹಂಚಿಕೊಳ್ಳುವ ಪೆನ್ ಫ್ರೆಂಡ್‌ಗಳಾಗಬಹುದು. ಈ ಗೆಳೆತನಕ್ಕೆ ಯಾವ ಗಡಿಯೂ ಇಲ್ಲ. ಗೆಳೆತನ ಬೆಳೆಸಲಿಕ್ಕೆ ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿಲ್ಲ. ಇಷ್ಟು ವಿಶಾಲ ಹರವಿನ ಗೆಳೆತನದ ಉದ್ದೇಶವಾದರೂ ಏನು? ಗೆಳೆತನದ ಗಮ್ಮತ್ತೇನು?

ಅವನು ಚಡ್ಡಿದೋಸ್ತು

ಕೂಸು ಈ ಭೂಮಿಗೆ ಬಂದ ಕ್ಷಣವೇ ಅದಕ್ಕೆ ಸಖ ಸಖಿಯರು ಸಿದ್ಧವಾಗಿಬಿಟ್ಟಿರುತ್ತಾರೆ. ಅಕ್ಕಪಕ್ಕದ ಮನೆಯ ಪುಟಾಣಿ ಗೆಳೆಯರು ಹೊಸ ಅತಿಥಿಯನ್ನು ಸ್ವಾಗತಿಸಲು ದೇವತೆಗಳ ಹಾಗೆ ತಯಾರಾಗಿಬಿಟ್ಟಿರುತ್ತಾರೆ. ಮಗು ತೊಟ್ಟಿಲಿನಿಂದ ಕೆಳಗಿಳಿದು ಬಾರಲು ಬೀಳುವ ಕ್ಷಣಕ್ಕೆ ಹೆತ್ತ ತಾಯಿ-ತಂದೆಯರ ಜೊತೆಗೆ ಹಲವು ಅಕ್ಕರೆಯ ಜೀವಗಳು ಸಾಕ್ಷಿಯಾಗಿರುತ್ತವೆ. ಮೆಲ್ಲಗೆ ಅಂಗೈ, ಮಂಡಿ ಊರಿ ಅಂಬೆಗಾಲಿಡುವ ಮಗುವಿಗೆ ಹಾಲು ಕುಡಿಸುವ, ಅದರ ಶೌಚ ಸ್ವಚ್ಛ ಮಾಡುವ, ಆರೋಗ್ಯ ನೋಡಿಕೊಳ್ಳುವ ಜವಾಬ್ದಾರಿಗಳನ್ನು ಮುಗಿಸಿದ ತಾಯಿಯೇ ಮೊದಲ ಗರ್ಲ್ ಫ್ರೆಂಡ್ ಆಗಿರುತ್ತಾಳೆ.

ಮಗು ತನ್ನ ಕಾಲ ಮೇಲೆ ತಾನು ನಂಬಿಕೆ ಬೆಳೆಸಿಕೊಂಡು ಒಮ್ಮೆ ಹೊಸ್ತಿಲು ದಾಟಿದೊಡನೆಯೇ ಅದಕ್ಕೆ ಹೊರಗಿನ ಗೆಳೆಯರ, ಗೆಳತಿಯರ ಆಸರೆ ಬೇಕಾಗುತ್ತದೆ. ಇದಕ್ಕೆ ಆಟ, ತುಂಟಾಟಗಳು ನೆಪವಷ್ಟೇ. ಗುಂಪು ಗುಂಪಾದ ಮನೆಗಳಿರುವ ಓಣಿಗಳು, ಒತ್ತೊತ್ತಾದ ಮನೆಗಳಿರುವ ಚಿಕ್ಕ ಹಳ್ಳಿಗಳು, ನೂರಾರು ಕುಟುಂಬಗಳಿರುವ ಅಪಾರ್ಟ್‌ಮೆಂಟುಗಳು, ಒಟ್ಟಿನಲ್ಲಿ ಭೂತದ ಬಂಗಲೆಯಂತಹ ದೈತ್ಯ ಗೇಟುಗಳ ಮನೆಗಳನ್ನು ಹೊರತುಪಡಿಸಿದರೆ ಬೇರೆಲ್ಲಾ ಕಡೆ ಎಂಥದ್ದೇ ವಯಸ್ಸಿನ ಹುಡುಗ, ಹುಡುಗಿಯರಿಗೂ ಆಟವಾಡಲು ಗೆಳೆಯರು ಸಿಕ್ಕುಬಿಡುತ್ತಾರೆ. ಆಟದ ನೆಪದಲ್ಲಿ ಅವರು ಹತ್ತಿರವಾಗುತ್ತಾರೆ. ಮನೆಯಿಂದ ಕದ್ದ ಮಿಠಾಯಿ, ಚಕ್ಕುಲಿ, ಬಾಳೆಹಣ್ಣುಗಳು ಪರಸ್ಪರರ ಕೈಬದಲಾಗುತ್ತವೆ. ಅಜ್ಜಿ ಮಾಡಿಕೊಟ್ಟ ಚಿಗುಳಿ, ಅಪ್ಪ ಕೊಡಿಸಿದ ಪೆಪ್ಪರ್‌ಮೆಂಟಿನ ಒಂದು ಭಾಗ ಗೆಳೆಯನಿಗೆ ಸಂದಾಯವಾಗುತ್ತದೆ. ಆಟಕ್ಕೆ ಹೊರಗಿನಿಂದ ಬರುವ ಹುಡುಗರ ಎದುರು ಇವರು ಒಗ್ಗಟ್ಟಾಗುತ್ತಾರೆ. ಜಗಳ, ಮುನಿಸು, ಟೂ ಬಿಡುವುದು, ಮರು ಮೈತ್ರಿಯಾಗುವುದು ಅವರ ಮುಗ್ಧತೆಯಲ್ಲಿ ಅರಳಿ ನಿಲ್ಲುತ್ತವೆ. ಹಾಗೆ ಇನ್ನೂ ಚಡ್ಡಿ ಏರಿಸಲು ಕಷ್ಟ ಪಡುವ ವಯಸ್ಸಿನಲ್ಲಿ ಜೊತೆಗಾದವನೇ ಚಡ್ಡಿ ದೋಸ್ತು!

ಬಹಳಷ್ಟು ಮಂದಿ ಅಪ್ಪ, ಅಮ್ಮನ ಕೆಲಸದ ಟ್ರಾನ್ಸ್‌ಫರ್‌ಗಳಿಂದಾಗಿ, ಬಾಡಿಗೆ ಮನೆ ಬದಲಾಯಿಸಬೇಕಾದ ಅನಿವಾರ್ಯತೆಯಿಂದಾಗಿ, ಓದುವುದಕ್ಕೆ ಹಳ್ಳಿ ಬಿಟ್ಟು ಸಿಟಿಗೆ ಬರುವುದಕ್ಕಾಗಲೀ ತಮ್ಮ ಚಡ್ಡಿ ದೋಸ್ತುಗಳನ್ನು ಬಿಟ್ಟು ನಡೆಯಬೇಕಾಗುತ್ತದೆ. ಮುಂದೆಂದೋ ದೊಡ್ಡವರಾದಾಗ ಇನ್ನೆಲ್ಲೋ ಒಮ್ಮೆ ಆ ನಮ್ಮ ಚಡ್ಡಿ ದೋಸ್ತು ಸಿಕ್ಕಾಗ ಹಳೆಯ ದಿನಗಳನ್ನು ಮೆಲುಕು ಹಾಕಬಹುದೇ ಹೊರತು ಅದೇ ಉತ್ಕಟತೆಯಲ್ಲಿ ಅವರ ನಡುವೆ ಗೆಳೆತನ ಸಾಧ್ಯವಾಗುವುದಿಲ್ಲ. ಆ ಚಡ್ಡಿ ದೋಸ್ತಿ ನಮ್ಮ ಚಿಕ್ಕಂದಿನ ಚಡ್ಡಿಯ ಹಾಗೆ, ನಾವು ಅದನ್ನು ಮೀರಿಬೆಳೆದುಬಿಟ್ಟಿರುತ್ತೇವೆ. ನಾವು ಪ್ಯಾಂಟು, ಶರ್ಟು, ಕೋಟು, ಜೀನ್ಸು ತೊಡಲಾರಂಭಿಸಿರುತ್ತೇವೆ. ನಮ್ಮ ದೋಸ್ತಿ ಚಡ್ಡಿಯಿಂದ ಪ್ಯಾಂಟಿಗೆ, ಪ್ಯಾಂಟಿನಿಂದ ಪಂಚೆಗೆ ಬೆಳೆಯದಿದ್ದರೆ ಹಳೆಯ ನೆನಪಿನ ಹಾಗೆ, ಗತಕಾಲದ ಪಳೆಯುಳಿಕೆಯ ಹಾಗಾಗಿಬಿಡುತ್ತದೆ. ಅನಂತರ ಅದರಲ್ಲಿ ಸ್ವಾದವಿರುವುದಿಲ್ಲ, ಅದೇನಿದ್ದರೂ ಮ್ಯೂಸಿಯಮ್ಮಿನಲ್ಲಿ ನೋಡಿ ಖುಶಿಪಡಬೇಕಾದ ವಸ್ತುವಂತಾಗಿಬಿಡುತ್ತದೆ.

ಈತ ಕ್ಲಾಸ್ ಮೇಟು

ಇದರ ಖದರೇ ಬೇರೆ. ಇದರ ವ್ಯಾಕರಣವೇ ಬೇರೆ. ನಮ್ಮ ಚಡ್ಡಿ ದೋಸ್ತ್ ಆದವನೇ ನಮ್ಮ ಕ್ಲಾಸ್ ಮೇಟೂ ಆಗಬಹುದಾದರೂ ಈ ಕ್ಲಾಸ್ ಮೇಟುಗಳ ಲೋಕವೇ ಬೇರೆ ತೆರನಾದದ್ದು. ಈ ವರ್ಗದಲ್ಲಿ ನಮ್ಮ ಚಡ್ಡಿದೋಸ್ತನನ್ನು ಮರೆತುಬಿಡೋಣ. ಶಾಲೆಗೆ ಸೇರಿದ ಸಮಯದಲ್ಲಿ ಎಲ್ಲವೂ ಹೊಸತೇ. ಸ್ವಚ್ಛಂದವಾಗಿ ಆಡಿಕೊಂಡಿದ್ದ ಮನೆಯನ್ನು ಬಿಟ್ಟು ಬೆಳಗಿನಿಂದ ಸಂಜೆಯವರೆಗೆ ಕಾಲ ಕಳೆಯಬೇಕಾದ ಶಾಲೆ ಜೈಲಾಗಿ ಕಾಣುತ್ತಿರುತ್ತದೆ. ಪರಿಸರ ಹೊಸದು, ಶಿಕ್ಷಕರು ಹೊಸಬರು ಸುತ್ತಲಿರುವ ನಮ್ಮದೇ ವಯಸ್ಸಿನ ನೂರಾರು ವಿದ್ಯಾರ್ಥಿಗಳಲ್ಲಿ ಒಂದೂ ಪರಿಚಯದ ಮುಖವಿಲ್ಲ. ಗಾಬರಿಯಾಗುವುದೇ ಆಗ.

ಆದರೆ ಕೆಲವೇ ದಿನಗಳಲ್ಲಿ ಅಪರಿಚಿತ ಮುಖಗಳಲ್ಲಿ ಪರಿಚಯದ ನಗೆ ಅರಳಲು ಶುರುವಾಗುತ್ತದೆ. ಹೆಸರುಗಳ ಪರಿಚಯವಾಗುತ್ತದೆ. ಬಳಪ, ಪನ್ಸಿಲ್ಲುಗಳ ವಿಲೇವಾರಿಯಾಗುತ್ತದೆ. ಸಹಪಾಠಿಯಾದವನು ಶಾಲೆಯ ಹೊರಗೂ ಸಿಗುವ ಗೆಳೆಯನಾದರಂತೂ ಬೆಸುಗೆ ಗಾಢವಾಗಿ ಉಂಟಾಗುತ್ತದೆ. ಆದರೆ ಇಲ್ಲಿ ಆಯ್ಕೆಗೆ ವಿಪುಲವಾದ ಅವಕಾಶವಿರುತ್ತದೆ. ಎಂಥ ಗೆಳೆಯರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಅಪ್ಪ ಅಮ್ಮ ಎಷ್ಟೇ ಬುದ್ಧಿಮಾತು ಹೇಳಿದರೂ ನಾವು ನಮ್ಮ ಸ್ವಭಾವಕ್ಕೆ ತಕ್ಕಂಥವರ ಜೊತೆಗೇ ಗೆಳೆಯರಾಗುತ್ತೇವೆ. ಇಂಥಿಂಥವರನ್ನೇ ಫ್ರೆಂಡ್ ಮಾಡಿಕೊಳ್ಳಬೇಕು ಎಂದು ಆಯ್ಕೆ ಮಾಡಲು ಗೆಳೆಯರೇನು ಶೋ ರೂಮಿನಲ್ಲಿ ನೇತುಹಾಕಿದ ಬಟ್ಟೆಯೇ?

ಕ್ಲಾಸುಗಳಲ್ಲಿ ಹುಟ್ಟುವ ಸ್ನೇಹದಲ್ಲಿ ಅನೇಕ ಆಯಾಮಗಳಿರುತ್ತವೆ. ನೋಟ್ಸು ಚೆನ್ನಾಗಿ ಬರೆಯುತ್ತಾನೆ ಎಂಬ ಕಾರಣಕ್ಕೆ ಒಬ್ಬನ ಬಳಿ ನಾವು ಸ್ನೇಹ ಹಸ್ತ ಚಾಚಿದರೆ, ಕರೆದಾಗ ಆಟಕ್ಕೆ ಬರುತ್ತಾನೆ ಎಂಬುದಕ್ಕಾಗಿ ನಾವು ಇನ್ನೊಬ್ಬನೊಂದಿಗೆ ದೋಸ್ತಿಗೆ ಬೀಳುತ್ತೇವೆ, ಒಬ್ಬಾಕೆ ತುಂಬಾ ಸೈಲೆಂಟು, ಭಯಂಕರವಾಗಿ ಓದುತ್ತಾಳೆ ಅನ್ನೋದಕ್ಕಾಗಿ ಆಕೆಗೆ ಗೆಳತಿಯಾಗಲು ಹಂಬಲಿಸಿದರೆ ಮತ್ತೊಬ್ಬಾಕೆ ಮನೆಯಿಂದ ತಂದ ಟಿಫಿನ್ನಿನಲ್ಲಿ ಪಾಲು ಕೊಡುತ್ತಾಳೆ ಎಂಬ ಕಾರಣಕ್ಕೆ ಗೆಳತಿಯಾಗುತ್ತಾಳೆ. ಮೇಲ್ನೋಟಕ್ಕೆ ಸ್ನೇಹವೆಂಬುದು ಕೇವಲ ಸ್ವಾರ್ಥ ಉದ್ದೇಶಕ್ಕಾಗಿ ರೂಪುಗೊಳ್ಳುವಂತೆ ಕಂಡರೂ ಗೆಳೆತನ ಅಂದರೆ ಅಷ್ಟೇ ಅಲ್ಲ. ನಮ್ಮ ಆವಶ್ಯಕತೆಗಳನ್ನು ಪೂರೈಸಿಕೊಳ್ಳಲು ಗೆಳೆತನ ಬೇಕಿಲ್ಲ. ಅದಕ್ಕೆ ನಮ್ಮಲ್ಲಿ ಹಣವಿದ್ದರೆ ಸಾಕು ಆದರೆ ಆವಶ್ಯಕತೆಗಳು ನಮ್ಮನ್ನು ಹತ್ತಿರ ತರುತ್ತವೆ. ಉದ್ದೇಶಗಳಿಂದ ಸ್ನೇಹಕ್ಕೆ ಫೌಂಡೇಶನ್ ಬೀಳುತ್ತದೆ. ಗೆಳೆತನವೆಂಬ ಭಾವ ಇಬ್ಬರ ನಡುವೆ ಬೆಸೆಯುವುದಕ್ಕೆ ಈ ಆವಶ್ಯಕತೆಗಳು ಕೇವಲ ನೆಪಗಳಿದ್ದಂತೆ.

ಇವರು ಯಂಗ್ ಟರ್ಕ್ಸ್

ಕಾಲೇಜು ಸಹ ವಿದ್ಯಾರ್ಥಿ ಜೀವನದ ಮುಂದುವರಿಕೆಯೇ ಆದರೂ ಹೈಸ್ಕೂಲು ದಾಟಿ ಕಾಲೇಜಿಗೆ ಕಾಲಿಟ್ಟವರ ಖದರ್ರೇ ಬದಲಾಗಿಬಿಡುತ್ತದೆ. ವಯಸ್ಸು ಬಲಿತಂತೆ ದೇಹದಲ್ಲಿ, ಮಾನಸಿಕತೆಯಲ್ಲಿ, ಪ್ರಬುದ್ಧತೆಯಲ್ಲಿ ಬದಲಾವಣೆಗಳಾದ ಹಾಗೆಯೇ ಕಾಲೇಜು ಜೀವನದಲ್ಲಿ ಹೊಸತೊಂದು ಪರಿಸರವೇ ಸೃಷ್ಟಿಯಾಗುತ್ತದೆ. ಅಲ್ಲಿಯವರೆಗೆ ತೀರಾ ಸಹಜವಾಗಿ ಬೆರೆಯುತ್ತಿದ್ದ, ಜಗಳವಾಡುತ್ತಿದ್ದ, ಹರಟೆ ಕೊಚ್ಚುತ್ತಿದ್ದ ಹುಡುಗಿಯರು ಸಡನ್ನಾಗಿ ಗಂಭೀರವಾಗಿಬಿಡುತ್ತಾರೆ. ಒಂದೊಂದು ಮಾತನ್ನೂ ಅಳೆದು ಸುರಿದು ಆಡತೊಡಗುತ್ತಾರೆ. ಹುಡುಗರು ತಮ್ಮ ಸಹಜವಾದ ಮಾತಿನಲ್ಲಿ ಯಾವ್ಯಾವ ಅರ್ಥಗಳು ಹೊಮ್ಮಿಬಿಡುತ್ತವೋ ಎಂಬ ಎಚ್ಚರಿಕೆಯಲ್ಲಿ ಮಾತನಾಡುತ್ತಿರುತ್ತಾರೆ. ಎಷ್ಟೇ ಹಳೆಯ ಗೆಳೆತನವೆಂದರೂ ವಯಸ್ಸಿಗೆ ಸಹಜವಾದ ಲೈಂಗಿಕ ಸೆಳೆತದ ಅಲೆಗೆ ಸ್ನೇಹದ ನಾವೆ ಒಲಾಡಿದ ಅನುಭವವಾಗುತ್ತದೆ.

ಇನ್ನು ಹುಡುಗರ ನಡುವಿನ ಗೆಳೆತನಕ್ಕೂ ಸಹ ಬದಲಾವಣೆಯ ಸಮಯ ಸನ್ನಿಹಿತವಾಗಿರುತ್ತದೆ. ಸ್ವಂತದ್ದೊಂದು ವ್ಯಕ್ತಿತ್ವ, ಆಲೋಚನಾ ರೀತಿಯಿಲ್ಲದಿದ್ದಾಗ ಎಂಥವರು ಬೇಕಾದರೂ ಗೆಳೆಯರಾಗಿಬಿಡಬಹುದು. ಚಿಕ್ಕವರಾಗಿದ್ದಾಗ ಜಗಳಗಳು, ವೈಮನಸ್ಸು ಆಟದ ವಿಷಯದಲ್ಲಿ, ಸಣ್ಣ ಪುಟ್ಟ ಸಂಗತಿಗಳಲ್ಲಿ ಕಾಣಿಸಿಕೊಳ್ಳಬಹುದು. ಆದರೆ ಬೆಳೆದಾಗ ವೈಚಾರಿಕ ಭೇದ, ಚಿಂತನೆಯಲ್ಲಿನ ವ್ಯತ್ಯಾಸ, ಸಿದ್ಧಾಂತಗಳಲ್ಲಿನ ಬಿರುಕು ಗೆಳೆತನದಲ್ಲಿ ಸಣ್ಣಗೆ ಅಪಸ್ವರವನ್ನು ಹುಟ್ಟಿಸುತ್ತಿರುತ್ತದೆ. ಮನೆಯಿಂದ ಸಾಕಷ್ಟು ಸಮಯ ಹೊರಗೇ ಕಳೆಯುವುದರಿಂದ, ಕೈಯಲ್ಲಿ ಹಣ ಓಡಾಡಲು ಶುರುವಾಗುವುದರಿಂದ ಗೆಳೆತನಕ್ಕೆ ಹೊಸ ಹೊಸ ಬಣ್ಣಗಳ ಲೇಪ ದೊರೆಯಲಾರಂಭವಾಗುತ್ತದೆ.

ಇದು ಸ್ನೇಹದ ನವೀಕರಣದ ಸಮಯ. ನಮ್ಮ ಗೆಳೆತನಕ್ಕೆ ನಿರ್ದಿಷ್ಟ ಅರ್ಥಗಳನ್ನು ಕಂಡುಕೊಳ್ಳುವ ಕಾಲ. ಈ ಸಂದರ್ಭದಲ್ಲಿ ಕೊಂಚ ನಾಜೂಕಿನಿಂದ ವ್ಯವಹರಿಸಿದರೆ ಅದೆಷ್ಟೋ ಅಪರೂಪದ ಗೆಳೆತನದ ಎಳೆಗಳನ್ನು ಜೋಪಾನ ಮಾಡಬಹುದು. ಸ್ವಲ್ಪ ಎಚ್ಚರವಾಗಿದ್ದರೆ ಅಪಾಯಕಾರಿ ಕಳೆಗಳನ್ನು ಕಿತ್ತೊಗೆದುಬಿಡಬಹುದು. ಎಷ್ಟೋ ತಪ್ಪು ಅಭಿಪ್ರಾಯಗಳನ್ನು, ಗೆಳೆತನವನ್ನು ಪ್ರೀತಿಯನ್ನಾಗಿಯೂ, ಆಕರ್ಷಣೆಯನ್ನು ಗೆಳೆತನವನ್ನಾಗಿಯೂ ಕಲ್ಪಿಸಿಕೊಳ್ಳುವ ಪ್ರಮಾದಗಳು ನಡೆಯದಂತೆ ನೋಡಿಕೊಳ್ಳಬಹುದು. ಆದರೆ ನಾವೆಂದೂ ಅಂಥ ನವೀಕರಣವನ್ನು ಪ್ರಜ್ಞಾಪೂರ್ವಕವಾಗಿ ಕೈಗೊಳ್ಳುವುದಿಲ್ಲ. ಎಷ್ಟೋ ಸಲ ತಾನೇ ತಾನಾಗಿ ಗೆಳೆತನದ ಹದ ಬದಲಾಯಿಸುತ್ತಿರುತ್ತದೆ. ಹೀಗಾದಾಗ ಯಾವ ತೊಂದರೆಯೂ ಆಗುವುದಿಲ್ಲ. ಆದರೆ ತೀರಾ ಆಪ್ತವಾದ ಸ್ನೇಹದಲ್ಲಿ ಈ renewal ಸಾಧ್ಯವಾಗದಿದ್ದಾಗ ಅಲ್ಲಿ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗುತ್ತದೆ. ಸ್ನೇಹದ ಹೂವು ಬಾಡಲಾರಂಭಿಸುತ್ತದೆ.

ಇವರು ಹಾಸ್ಟೆಲ್ ವಾಸಿಗಳು

ಈ ಹಂತದ ಗೆಳೆತನಕ್ಕೆ ಅಪಾರವಾದ ಶಕ್ತಿಯಿದೆ. ಕಾಲೇಜುಗಳಲ್ಲಿ, ಶಾಲೆಯಲ್ಲಿ ತರಗತಿಗಳಲ್ಲಿ ಕಳೆಯುವ ಸಮಯವನ್ನು ಹೊರತು ಪಡಿಸಿದರೆ ಬಹುಪಾಲು ಸಮಯವನ್ನು ನಾವು ಕಳೆಯುವುದು ಹಾಸ್ಟೆಲ್ಲುಗಳಲ್ಲಿ. ಇಲ್ಲಿ ನಮ್ಮ ಮನೆಯ ವಾತಾವರಣವಿರುವುದಿಲ್ಲ. ನಮ್ಮ ಅಭ್ಯಾಸಗಳಿಗೆ, ನಮ್ಮ ರೀತಿ ರಿವಾಜುಗಳಿಗೆ ತೀರಾ ವ್ಯತಿರಿಕ್ತವಾದ ವಾತಾವರಣವಿರುತ್ತದೆ. ನಮ್ಮ ಮೇಲೆ ಅಪ್ಪ, ಅಮ್ಮಂದಿರ ಕಣ್ಣಿರುವುದಿಲ್ಲ. ತೀರಾ ಪಂಜರದಿಂದ ಹಾರಿಬಿಟ್ಟ ಹಕ್ಕಿಯ ಹಾಗಾಗಿರುತ್ತದೆ ನಮ್ಮ ಮನಸ್ಸು. ಈ ಸಮಯದಲ್ಲಿ ನಮ್ಮ ಗೆಳೆತನ ನಮ್ಮ ಬೆಳೆವಣಿಗೆಯ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರುತ್ತದೆ. ಹೊಸ ಊರಿನಲ್ಲಿ ಸಿನೆಮಾ ಥಿಯೇಟರು, ಬಾರುಗಳನ್ನು ಹುಡುಕಿಕೊಂಡು ಹೋಗಲೂ ಗೆಳೆಯರು ಬೇಕು. ಪುಸ್ತಕದಂಗಡಿ, ಲೈಬ್ರರಿ, ಮ್ಯೂಸಿಯಮ್ಮುಗಳನ್ನು ಹುಡುಕಲೂ ಗೆಳೆಯರು ಬೇಕು. ಇಲ್ಲಿ ಒಂದು ಅಂಶವನ್ನು ನಿಚ್ಚಳವಾಗಿ ಅರ್ಥಮಾಡಿಕೊಳ್ಳಬೇಕು. ನಿಮಗೆ ಒಬ್ಬ ಗೆಳೆಯನಾಗಿದ್ದಾನೆ ಎಂದರೆ ನೀವೂ ಆತನಿಗೆ ಗೆಳೆಯನಾಗಿರುತ್ತೀರಿ. ನಿಮ್ಮ ಆಸಕ್ತಿಗೆ ತಕ್ಕ ಹಾಗೆ ಗೆಳೆಯರನ್ನ ಸಂಪಾದಿಸಿಕೊಂಡಿದ್ದೀರಿ ಅಂದರೆ ಅದರರ್ಥ ನಿಮಗೆ ಗೆಳೆಯರಾದವರ ಆಸಕ್ತಿ ತಕ್ಕ ಹಾಗೆ ನೀವು ಇದ್ದೀರಿ ಎಂದರ್ಥ.

ಹಲವು ಸಲ ನಾವು ಒಂದು ಗೆಳೆಯರ ಗುಂಪು ನಂಬಲಾಗದಂತಹ ಸಾಧನೆಗಳನ್ನು ಮಾಡುವುದನ್ನು ಗಮನಿಸಿರುತ್ತೇವೆ. ನಾಲ್ಕೈದು ಮಂದಿ ಗೆಳೆಯರ ಗುಂಪು ಸೇರಿಕೊಂಡು ಒಂದು ಮ್ಯೂಸಿಕ್ ಆಲ್ಬಂ ಹೊರತರುತ್ತಾರೆ, ಒಂದೈದು ಮಂದಿ ಹುಡುಗರು ಸೇರಿಕೊಂಡು ಒಂದು ಸಾಫ್ಟವೇರ್ ಕಂಪೆನಿ ಶುರು ಮಾಡಿರುತ್ತಾರೆ, ಐದಾರು ಮಂದಿ ಗೆಳತಿಯರು ಅನಾಥಾಶ್ರಮಕ್ಕಾಗಿ ದೇಣಿಗೆ ಸಂಗ್ರಹಿಸಿ ಕೊಡುತ್ತಿರುತ್ತಾರೆ ಹೀಗೆ ಈ ವಯಸ್ಸಿನಲ್ಲಿ ಕೆಲಸ ಮಾಡಬೇಕೆಂಬ ತುಡಿತವಿರುವವರು, ಒಂದೇ ಆದರ್ಶವನ್ನು, ಕನಸನ್ನು ಹಂಚಿಕೊಂಡವರು ಒಟ್ಟು ಸೇರಿದರೆ ಅಸಾಧ್ಯವಾದ ಕೆಲಸಗಳು ಸಾಧ್ಯವಾಗುತ್ತವೆ. ಇವರಿಗೆ ಹಣ ಮಾಡಬೇಕೆಂಬ ಹಪಹಪಿಯಿರುವುದಿಲ್ಲ, ತಮ್ಮ ಪ್ರತಿಭೆಗೆ ಒಂದು ರೆಕಾಗ್ನಿಶನ್ ಸಿಕ್ಕರೆ ಸಾಕು ಎಂದು ಒಂದೇ ಮನಸ್ಸಿನಿಂದ ದುಡಿಯುತ್ತಿರುತ್ತಾರೆ. ಪ್ರೊಫೆಶನಲ್‌ಗಳು ಮಾಡಲಾಗದ ಕೆಲಸವನ್ನು ಇಂಥ ಅಮೆಚೂರ್ ಗುಂಪುಗಳೇ ಮಾಡಿರುತ್ತವೆ. ಇಲ್ಲಿ ಆ ವ್ಯಕ್ತಿಗಳ ಸಾಧನೆಗೆ ಗೆಳೆತನ ಎಂಬುದು ಕೇವಲ ಬೈಂಡಿಂಗ್ ಫೋರ್ಸ್ ಆಗಿ ಕೆಲಸ ಮಾಡಿರುತ್ತದೆ.

ಆದರೆ ಇದೇ ಸಮಯದಲ್ಲಿ ಇನ್ನೊಂದು ಅಪಾಯದ ಪ್ರಪಾತವೂ ಇರುತ್ತದೆ. ಕಾಲೇಜುಗಳಲ್ಲಿ ನಡೆಯುವ ಚಿಲ್ಲರೆ ಜಗಳ, ಪ್ರೀತಿ ಸಂಬಂಧಿಸಿದ ಕೀಟಲೆ, ಕ್ರಿಕೆಟ್, ವಾಲಿಬಾಲ್ ಆಡುವಾಗಿನ ಕಿರಿಕ್ಕು ಇಂಥವುಗಳಲ್ಲಿ ಗುಂಪು ಗೂಡುವ ಗೆಳೆಯರಿಗೆ ಅದಮ್ಯವಾದ ಉನ್ಮಾದವಿರುತ್ತದೆ. ವಯಸ್ಸಿಗೆ ತಕ್ಕ ಹಾಗೆ ಬಿಸಿ ರಕ್ತ ಮೈಯಲ್ಲಿ ಕುದಿಯುತ್ತಿರುತ್ತದೆ. ಒಂದು ಕಲ್ಲಿಗೆ ಹತ್ತು ಕಲ್ಲು ಬೀರುವ ಕೆಚ್ಚು ಇರುತ್ತದೆ. ಇಂಥ ಮನಸ್ಥಿತಿಯವರು ಒಟ್ಟುಗೂಡಿ ಗೆಳೆಯರ ಗುಂಪಾದಾಗ ಅದು ಡೆಡ್ಲಿ ಕಾಂಬಿನೇಷನ್ ಆಗಿಬಿಡುತ್ತದೆ. ತಮ್ಮಲ್ಲಿ ಒಬ್ಬನಿಗೆ ಹೊಡೆದರು ಎಂಬ ಕಾರಣಕ್ಕೆ ಇವರೆಲ್ಲರ ದೋಸ್ತಿಯ ಮಾನದ ಪ್ರಶ್ನೆ ಮುಂದೆ ಬಂದುಬಿಡುತ್ತದೆ. ತಮ್ಮ ಭವಿಷ್ಯ, ತಮ್ಮನ್ನು ನಂಬಿಕೊಂಡಿರುವವರ ಆಶೋತ್ತರಗಳನ್ನು, ಕೊನೆಗೆ ತಮ್ಮ ಪ್ರಾಣದ ಹಂಗನ್ನೇ ತೊರೆದು ಆ ಗೆಳೆಯರ ಗುಂಪಿನ ಉನ್ಮಾದಕ್ಕೆ ಬಲಿಯಾಗಿ ಹೋಗುತ್ತಾರೆ. ಇದ್ಯಾವುದೂ ದೂರದ ಊರುಗಳಲ್ಲಿರುವ, ವಾರಕ್ಕೊಮ್ಮೆ ಫೋನ್ ಮಾಡುವ ತಾಯ್ತಂದೆಯರಿಗೆ ಗೊತ್ತೇ ಆಗಿರುವುದಿಲ್ಲ.ಇಲ್ಲಿ ಕೂಡ ಗೆಳೆತನದ ಪಾತ್ರ ಕೇವಲ ಬೈಂಡಿಂಗ್ ಫೋರ್ಸ್ ಆಗಿ ಕೆಲಸ ಮಾಡುವುದೇ ಆಗಿರುತ್ತದೆ.

ವಿರುದ್ಧ ಧೃವಗಳ ಸ್ನೇಹ

ಹೈಸ್ಕೂಲು ಮೆಟ್ಟಿಲು ದಾಟುತ್ತಿದ್ದಂತೆಯೇ ಒಬ್ಬ ಹುಡುಗನಿಗೆ ಗಂಡಸುತನದ ಲಕ್ಷಣಗಳು ಪರಿಚಯವಾಗಲಾರಂಭಿಸುತ್ತವೆ. ಹುಡುಗಿಗೆ ತನ್ನ ಹೆಣ್ತನದ ಪ್ರಜ್ಞೆ ಬೆಳೆಯಲಾರಂಭಿಸುತ್ತದೆ. ಅಲ್ಲಿಯವರೆಗೆ ಹುಡುಗ ಹುಡುಗಿಯರಾಗಿದ್ದವರು ಒಮ್ಮೆಗೇ ಯುವಕ-ಯುವತಿಯರಾಗಿ ಬಿಡುತ್ತಾರೆ. ಯುವಕನೇ ಆಗಲಿ ಯುವತಿಯೇ ಆಗಲಿ ಪ್ರತಿಯೊಬ್ಬರಲ್ಲೂ opposite sexನ ಬಗ್ಗೆ ಕುತೂಹಲ, ಸ್ವಾಭಾವಿಕವಾದ ಆಕರ್ಷಣೆಗಳು ಇದ್ದೇ ಇರುತ್ತವೆ. ಒಬ್ಬ ಹುಡುಗನಿಗೆ ಎಷ್ಟೇ ಮಂದಿ ಗೆಳೆಯರಿದ್ದರೂ ಆತನ ಮನಸ್ಸು ಸದಾ ಒಂದು ಹೆಣ್ಣು ಜೀವಕ್ಕೆ ಕಾತರಿಸುತ್ತಿರುತ್ತದೆ. ಆದರೆ ಇದಕ್ಕೆ ಕೇವಲ ಲೈಂಗಿಕ ಆಕರ್ಷಣೆಯೇ ಕಾರಣವಾಗಿರುವುದಿಲ್ಲ. ವಿರುದ್ಧ ಧ್ರುವಗಳ ಆಕರ್ಷಿಸುವಂತೆ, ಹುಡುಗನಿಗೆ ಹುಡುಗಿಯರ ಜಗತ್ತಿನ ಬಗ್ಗೆ, ಆಕೆಯ ಒಟ್ಟಾರೆ ಬದುಕಿನ ಬಗ್ಗೆ, ಆಕೆಯ ವ್ಯಕ್ತಿತ್ವದ ಬಗ್ಗೆ ವಿಲಕ್ಷಣವಾದ ಕುತೂಹಲವಿರುತ್ತದೆ. ಒಬ್ಬ ಹುಡುಗಿಗೂ ಹುಡುಗರು ಹೇಗಿರ್ತಾರೆ ಎಂಬ ಬಗ್ಗೆ ಇಂಟರೆಸ್ಟ್ ಇರುತ್ತದೆ. ಚಡ್ಡಿ ಹಾಕಿಕೊಂಡ ಹುಡುಗನಿಗೆ ಕಾಲೇಜು ಹುಡುಗರ ಬಗ್ಗೆ ಒಂದು ಕುತೂಹಲ, ವಿನಾಕಾರಣದ ಬೆರಗು ಇರುತ್ತದಲ್ಲಾ, ಹಾಗೆ.

ಒಬ್ಬ ಗಂಡಿಗೆ ಹೆಣ್ಣಿನ ಲೋಕದ ಬಗ್ಗೆ, ಒಬ್ಬ ಹೆಣ್ಣಿಗೆ ಗಂಡಸಿನ ಮಾನಸಿಕತೆಯ ಬಗ್ಗೆ ಸ್ಪಷ್ಟವಾದ ಒಳನೋಟ, ಗ್ರಹಿಕೆ ದಕ್ಕಬೇಕಾದರೆ ಇರುವ ಏಕೈಕ ಮಾರ್ಗವೆಂದರೆ ಗೆಳೆತನ. ಗಂಡು ಹೆಣ್ಣು ಸ್ನೇಹಿತರಾಗಿರುವಾಗ ಅವರ ನಡುವೆ ಅರಳುವ ಆಪ್ಯಾಯಮಾನತೆ, ವಿಚಿತ್ರವಾದ ಸಮಾಧಾನ, ಬಿಗಿದಿರಿಸಿದ ಮುಷ್ಟಿಯನ್ನು ಸಡಿಲಿಸಿದಾಗ ಸಿಕ್ಕುವ ನಿರಾಳತೆಯಂತಹ ಭಾವಗಳು ಬೇರಾವ ಹೆಣ್ಣುಗಂಡಿನ ಸಂಬಂಧದಲ್ಲೂ ಸಿಕ್ಕುವುದಿಲ್ಲ. ಒಬ್ಬ ಹುಡುಗನಿಗೆ ಗೆಳತಿಯರಿದ್ದಾರೆ ಎಂದ ಕೂಡಲೇ ಆತನನ್ನು ಬೇರೆ ದೃಷ್ಟಿಯಿಂದ ನೋಡುವ, ಒಬ್ಬ ಹೆಣ್ಣಿಗೆ ಗೆಳೆಯರಿದ್ದಾರೆ ಎಂದ ತಕ್ಷಣ ಆಕೆಯನ್ನು ಸಂಶಯಿಸುವ ಪರಿಪಾಠ ನಮ್ಮಲ್ಲಿದ್ದರೂ ಗೆಳೆತನ ಬೆಸೆದುಕೊಳ್ಳಲಿಕ್ಕೆ ಅಡ್ಡಿಯಾಗಿಲ್ಲ.

ಹೆಣ್ಣು ಗಂಡಿನ ನಡುವೆ ಅನಾವಶ್ಯಕವಾದ ಆಕರ್ಷಣೆಯನ್ನು, ಸಂಶಯಾಸ್ಪದ ಕುತೂಹಲವನ್ನು ತೊಡೆದು ಹಾಕಿ, ಇಬ್ಬರೂ ಸಾಕಾಗುವಷ್ಟು ಉಸಿರಾಡುವ ಸ್ಪೇಸ್ ಕೊಡುವ ಸಂಬಂಧವೇ ಗೆಳೆತನ. ‘ಅವರ ಸ್ನೇಹ ಪ್ರೇಮದಲ್ಲಿ ಮುಕ್ತಾಯವಾಯಿತು’ ಎಂಬುದೊಂದು ಮೂರ್ಖತನದ ಮಾತು. ಪ್ರೇಮ ಶುರುವಾದ ಬಳಿಕ, ಇಲ್ಲವೇ ಮದುವೆಯಾದ ನಂತರ ಸ್ನೇಹ ದಿವಂಗತವಾಗಿಬಿಡುವುದಿಲ್ಲ. ಮದುವೆಯಾದ ನಂತರವೂ ಗಂಡು ಹೆಣ್ಣು ಗೆಳೆಯರ ಹಾಗಿರಬಹುದು. ಗೆಳೆತನವೆಂಬ ಸಂಬಂಧದ ತಾಕತ್ತೇ ಅಂಥದ್ದು ಬೇರಾವ ಸಂಬಂಧವನ್ನಾದರೂ ಅದು ತನ್ನ ತೆಕ್ಕೆಗೆ ಎಳೆದುಕೊಂಡುಬಿಡಬಲ್ಲದು.

ಹೆಸರಿಡಲಾಗದ ಸಂಬಂಧ

ಆತನಿಗೆ ಮದುವೆಯಾಗಿರುತ್ತದೆ. ಮಕ್ಕಳಿರುತ್ತಾರೆ ಆದರೂ ಒಬ್ಬ ಗೆಳತಿಯ ಸಂಗಾತ ಬೇಕೆನಿಸುತ್ತಿರುತ್ತದೆ. ಅವರ ನಡುವೆ ದೈಹಿಕ ಸಂಬಂಧವಿರುವುದಿಲ್ಲ. ಅವರು ಸುಮ್ಮನೆ ಕುಳಿತು ಗಂಟೆಗಟ್ಟಲೆ ಮಾತನಾಡಬಯಸುತ್ತಿರುತ್ತಾರೆ. ತಮ್ಮ ಕಷ್ಟ ಸುಖಗಳ ಬಗ್ಗೆ, ಬೇರಾರೂ ಕೇಳುವ ಆಸಕ್ತಿ ತೋರದ ವಿಷಯಗಳ ಬಗ್ಗೆ ಮಾತನಾಡಲು ಇಷ್ಟಪಡುತ್ತಿರುತ್ತಾರೆ. ಕಾಲೇಜು ದಿನಗಳಲ್ಲಿ ಇದ್ದ ಗೆಳೆತನ ಬಾಂಧವ್ಯವನ್ನು ಅವರು ತಮ್ಮ ಸಂಬಂಧದಲ್ಲಿ ಅರಸುತ್ತಿರುತ್ತಾರೆ. ಕೊಂಚ ಕ್ರಿಯೇಟಿವ್ ಆದವರಿಗೆ ತಾವು ಓದಿದ ಪುಸ್ತಕವನ್ನು, ತಮಗೆ ಬೆಳಗಿನಿಂದ ಕಾಡುತ್ತಿರುವ ರಾಗವನ್ನೋ ಹಂಚಿಕೊಳ್ಳಲು ಇಂಥ ಸ್ನೇಹದ ಆಸರೆ ಪಡೆಯುತ್ತಾರೆ. ನಿರ್ಣಾಯಕ ತೀರ್ಮಾನಗಳನ್ನು ತೆಗೆದುಕೊಳ್ಳಲು ಅವರು ಇಂಥ ಗೆಳೆಯರನ್ನು, ಗೆಳತಿಯರನ್ನು ಆಶ್ರಯಿಸುತ್ತಾರೆ. ಕೌನ್ಸೆಲಿಂಗ್ ಗಾಗಿ ದೂರದ ಗೆಳೆಯನನ್ನು ಆಕೆ ಫೋನ್ ಮಾಡಿ ಮಾತನಾಡಿಸುತ್ತಾಳೆ. ಇಂಥ ಹೆಸರಿಡಲಾಗದ, ಹೆಸರನ್ನು ಬಯಸದ ಸಂಬಂಧಗಳಿಗೆಲ್ಲಾ ನೀರೆರೆಯುತ್ತದೆ ಸ್ನೇಹ.

ಇಷ್ಟೇ ಅಲ್ಲದೆ ನಾವು ಸಾಕಿಕೊಂಡ, ನಮ್ಮೊಂದಿಗೆ ಮಾತೂ ಕೂಡ ಆಡದ ಸಾಕು ಪ್ರಾಣಿಗಳು ನಮ್ಮ ಗೆಳೆಯರಾಗಬಹುದು. ಒಂದೊಳ್ಳೆಯ ಗೆಳೆಯನಂತಹ ಪುಸ್ತಕ ಕೊಂಡುಕೊಂಡೆ ಎನ್ನುತ್ತೇವೆ. ಇದನ್ನೆಲ್ಲಾ ಒಮ್ಮೆ ಸ್ಥೂಲವಾಗಿ ಅವಲೋಕಿಸಿದರೆ ಸ್ನೇಹವೆಂಬುದು ನಾವು ತಿಳಿದಷ್ಟು, ಭಾವಿಸಿದಷ್ಟು ಸೀಮಿತವಾದದ್ದಲ್ಲ ಎಂಬುದು ಮನವರಿಕೆಯಾಗುತ್ತದೆ. ಈ ಸ್ನೇಹದ ಹರವಿನ ಬಗ್ಗೆ ಬೆರಗು ಉಂಟಾಗುತ್ತದೆ. ಕೆಲವು ಸಂಗತಿಗಳನ್ನು ವಿಶ್ಲೇಷಿಸಬೇಕು, ವಿಭಜಿಸಿ ಪರಿಶೀಲಿಸಬೇಕು ಇನ್ನು ಕೆಲವನ್ನು ಪ್ರಶ್ನಿಸುವ ಗೋಜಿಗೆ ಹೋಗದೆ ಮನಃಪೂರ್ವಕವಾಗಿ ಒಪ್ಪಿಕೊಂಡು ಅನುಭವಿಸಬೇಕು. ಹಾಗೆ ಅನುಭವಿಸಬೇಕಾದ ಸಂಗತಿ ಗೆಳೆತನ ಆದರೆ ಈ ನಮ್ಮ ವಿಶ್ಲೇಷಣೆ, ಆಲೋಚನೆಗಳು ನಮ್ಮ ಅನುಭವವನ್ನು ಇನ್ನಷ್ಟು ಆಳವಾಗಿಸುವುದಕ್ಕೆ, ಹೊಸ ಒಳನೋಟಗಳನ್ನು ಕಾಣಿಸುವುದಕ್ಕೆ ಸಹಕಾರಿಯಾಗುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ.

ಕೊನೆಗೂ ನಮ್ಮೆದೆಯಿಂದ ಹೊಮ್ಮುವುದಕ್ಕೆ ಸಾಧ್ಯವಾಗುವುದು ‘ದೋಸ್ತಿ ನಿನಗೊಂದು ಸಲಾಮ್’ ಎಂಬ ಉದ್ಗಾರ ಮಾತ್ರ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog Stats

  • 69,182 hits
ಏಪ್ರಿಲ್ 2008
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 123456
78910111213
14151617181920
21222324252627
282930  

Top Clicks

  • ಯಾವುದೂ ಇಲ್ಲ
%d bloggers like this: