ಕಲರವ

ಅಲಾರಾಂ ಹೊಡೆದ ತಕ್ಷಣ ಏಳುತ್ತೀರಾ?

Posted on: ಏಪ್ರಿಲ್ 19, 2008

ಕನಸಿನ ಸುಂದರ ಸ್ವಪ್ನ ಲೋಕ ಚದುರಿಹೋಗುವಂತೆ ಅರಚಿಕೊಳ್ಳುತ್ತದೆ ಅಲರಾಮು . ಅದೆಂಥಾ ಹೈಟೆಕ್ ಕಂಪನಿಯ ಲೇಟೆಸ್ಟ್ ಅಲರಾಂ ತಂದಿಟ್ಟುಕೊಂಡು , ಅದೆಷ್ಟೇ ನಯವಾಗಿ ಸದ್ದು ಮಾಡಿದರೂ ನಿದ್ದೆಯ ರಗ್ಗು ಹೊದ್ದು ಮಲಗಿದವರಿಗದು ಕರ್ಣಕಠೋರವಾಗಿಯೇ ಕೇಳುತ್ತದೆ . ಜೀವನದ ನೆಮ್ಮದಿಯನ್ನೆಲ್ಲಾ ಯಕಃಶ್ಚಿತ್ ಅಲರಾಮು ನುಂಗಿಹಾಕಿದಂತೆನಿಸುತ್ತದೆ . ಇಷ್ಟು ಸಾಲದೆಂಬಂತೆ ಮುಂಜಾನೆಯ ಮಬ್ಬು ಬೆಳಕಿನಲ್ಲಿ ಎತ್ತ ಕೈ ಹಾಕಿದರೂ ಕೂಗುಮಾರಿ ಎಟಕುವುದೇ ಇಲ್ಲ . ಕತ್ತಲಲ್ಲಿ ತಡಕಾಡಿ ಕಣ್ಣಿಗಂಟಿಕೊಂಡ ಪಿಸುರನ್ನು , ಬಾಯಿಂದ ಲಾವಾದಂತೆ ಹರಿದು ಒಣಗಿದ ಜೊಲ್ಲನ್ನು ಒರೆಸಿಕೊಳ್ಳುತ್ತಾ ಅಲರಾಂ ಹುಡುಕಿ ಅದರ ಬಾಯಿ ಮುಚ್ಚಿಸುವಷ್ಟರಲ್ಲಿ ಎದ್ದು ಕೆಲಸಕ್ಕೆ ತೊಡಗುವ ಹುಮ್ಮಸ್ಸೇ ಸತ್ತು ಹೋಗಿರುತ್ತದೆ . ಮೈ ಮನಸ್ಸು ಮತ್ತೊಂದು ರೌಂಡು ನಿದ್ರೆಗೆ ಹಪಹಪಿಸುತ್ತಿರುತ್ತದೆ . ಬುದ್ಧಿ ಏನೆಲ್ಲಾ ಲೆಕ್ಕಾಚಾರಗಳನ್ನು ಹಾಕಿ ತೋರಿಸಿ ಇನ್ನೈದೇ ಐದು ನಿಮಿಷ ಮಲಗಿಕೊಂಡರೆ ನಿನ್ನ ಗಂಟೇನೂ ಹೋಗಲ್ಲ . ಬರೀ ಐದೇ ನಿಮಿಷ ಅಂತ ಆಮಿಷವೊಡ್ಡುತ್ತದೆ . ನಾವು ಪೆದ್ದರಾದರೆ ಆಮಿಷಕ್ಕೆ ಬಲಿ ಬಿದ್ದು ಐದೇ ನಿಮಿಷದ ನಿದ್ದೆಯನ್ನು ಮತ್ತೆರಡು ತಾಸು ನಿರರ್ಗಳವಾಗಿ ಪೂರೈಸಿಬಿಡುತ್ತೇವೆ !

ಹಾಗಂತ ನೀವು ನಿದ್ದೆಯ ಮಹಾತಾಯಿಯೆದುರು ನಿಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶಿಸುವುದಕ್ಕೆ ಪ್ರಯತ್ನಿಸಿ ನೋಡಿ ನಿಮ್ಮ ಮನಸ್ಸೆಂಬ ಮಾಯಾವಿ ನಿಮ್ಮ ಬುದ್ಧಿಗೇ ಮಣ್ಣನ್ನೆರಚಿಬಿಡುತ್ತದೆ . ಅಲರಾಂ ಹೊಡೆದುಕೊಂಡ ಕ್ಷಣದಲ್ಲಿ ಎದ್ದುಬಿಡಬೇಕೆಂದು ತೀರ್ಮಾನ ಮಾಡಿಕೊಂಡಿರುವ ನಿಮಗೆ ನಿಮ್ಮ ಮನಸ್ಸು ಎದ್ದೇಳುವಿಯಂತೆ , ಮೊದಲು ಅಲರಾಂ ಆಫ್ ಮಾಡು ಎನ್ನುತ್ತದೆ .’ ಅದರ ಮಾತಿನಲ್ಲಿ ಯಾವ ಹುಳುಕನ್ನೂ ಕಾಣದೆ ನಿಮ್ಮ ಬುದ್ಧಿಯೂ ಅದನ್ನು ಅನುಮೋದಿಸುತ್ತದೆ . ಅಲರಾಂ ಬಂದ್ ಮಾಡಿ ನೀವು ಹಾಸಿಗೆಯಿಂದೇಳಲು ಪ್ರಯತ್ನಿಸುತ್ತೀರಿ ಆಗ ನಿಮ್ಮ ಮಳ್ಳ ಮನಸ್ಸು ಹ್ಹಾ ! ಹಾಗೆ ಧಡಕ್ಕನೆ ಏಳಬೇಡ ಏಳೋಕೆ ಮೊದಲು ಎದ್ದು ಏನು ಮಾಡಬೇಕು ಅಂತ ಯೋಚಿಸಿಟ್ಟುಕೋ’ ಎಂದು ತಿದಿಯೊತ್ತುತ್ತದೆ . ನಿಮ್ಮ ಬುದ್ಧಿ , ಪಾಪ ಇದು ತನ್ನ ಕೆಲಸ ಅಂದುಕೊಂಡು ಎದ್ದು , ರಗ್ಗು ಮಡಚಿ ಇಟ್ಟು , ಮುಖಕ್ಕೆ ನೀರು ಹಾಕಿಕೊಂಡು , ಹಲ್ಲುಜ್ಜಿ …’ ಅಂತ ಪಟ್ಟಿ ಮಾಡಲು ಶುರುಮಾಡುತ್ತದೆ . ಅಷ್ಟರಲ್ಲಿ ಕಳ್ಳ ಮನಸ್ಸು ಮೆಲ್ಲಗೆ ಹಿಂದಿನ ಬಾಗಿಲಿನಿಂದ ನಿದ್ದೆಯನ್ನು ಒಳಕ್ಕೆ ಕರೆಸಿಕೊಂಡುಬಿಟ್ಟಿರುತ್ತದೆ . ನೀವು ಬೆಚ್ಚಗೆ ರಗ್ಗನ್ನು ಮೇಲಕ್ಕೆಳೆದುಕೊಂಡು ಪವಡಿಸುತ್ತೀರಿ , ಪಾಪ ನಿಮ್ಮ ಜಾಣ ಬುದ್ಧಿ ಪಟ್ಟಿ ಮಾಡುತ್ತಲೇ ಇರುತ್ತದೆ !

ನಿದ್ರೆಯೆಂಬ ನಿಗೂಢ ಲೋಕದಲ್ಲಿ ನಮ್ಮ ತರ್ಕ , reasoning ಎಲ್ಲವೂ ತಾಯ ಮಡಿಲಲ್ಲಿ ಕರಗಿಹೋಗುವ ಹಸುಗೂಸಿನ ಹಾಗೆ ಕರಗಿಹೋಗಿಬಿಟ್ಟಿರುತ್ತವೆ . ಒಮ್ಮೆ ನಿದ್ರೆಯಿಂದ ಎಚ್ಚರವಾಗುವಾಗ ಕರಗಿಹೋಗಿದ್ದ ಪ್ರಜ್ಞೆ , ಎಚ್ಚರ ಎಲ್ಲವೂ ಮತ್ತೆ ದುಡುದುಡನೆ ಎದ್ದುನಿಲ್ಲಬೇಕು . ನಿದ್ರೆಯಲ್ಲಿ ನಮ್ಮಿಡೀ ದೇಹದ ನಿಯಂತ್ರಣ ನಮ್ಮ ಸುಪ್ತ ಮನಸ್ಸು (sub concious) ವಹಿಸಿಕೊಂಡಿರುತ್ತದೆ . ಎಚ್ಚರವಾಗುವಾಗ ಅದು ಜವಾಬ್ದಾರಿಯನ್ನು ಜಾಗೃತ ಮನಸ್ಸಿನ ಕೈಗೆ ಕೊಡುತ್ತದೆ . ತನ್ನ ಕೈಗಿನ್ನೂ ಪೂರ್ಣ ಅಧಿಕಾರ ಬಂದಿರುವುದಿಲ್ಲವಾದ್ದರಿಂದ ನಿದ್ರೆಯಿಂದ ಏಳುವ ಸಮಯದಲ್ಲಿ ನಮ್ಮ ಜಾಗೃತ ಮನಸ್ಸು ಪ್ರಭಾವ ಶಾಲಿಯಾಗಿರುವುದಿಲ್ಲ . ನಾವು ಸಮಯದಲ್ಲಿ ಮನಸ್ಸಿಗೆ ಸೂಚನೆಗಳನ್ನು ಕೊಡಲು ಪ್ರಾರಂಭಿಸಿದರೆ ಅದು ಒತ್ತಡದಿಂದ ಕುಸಿದು ಕುಳಿತುಬಿಡುತ್ತದೆ . ನಮ್ಮ ದೇಹದ ನಿಯಂತ್ರಣ ಮತ್ತೆ ಸುಪ್ತ ಮನಸ್ಸಿನ ಕೈಗೆ ಹೋಗಿಬಿಡುತ್ತದೆ . ಆಗಲೇ ಅಲರಾಂ ಹೊಡೆದ ಮೇಲು ನಾವು ನಿದ್ರೆಗೆ ಜಾರುವುದು .

ಹಾಗಾದರೆ ಇದನ್ನ ಹೇಗೆ ತಪ್ಪಿಸುವುದು ? ನಮ್ಮ ಮನಸ್ಸು ನಮಗೇ ಮೋಸ ಮಾಡದ ಹಾಗೆ ಯಾವ ಉಪಾಯ ಕಂಡುಕೊಳ್ಳಬಹುದು ? ಉತ್ತರ ಸಿಂಪಲ್ , ಅಲರಾಂ ಹೊಡೆದ ಕ್ಷಣದಿಂದ ನೀವು ಪೂರ್ಣ ಎಚ್ಚರದ ಸ್ಥಿತಿಗೆ ಬರುವವರೆಗೂ ಏನೇನು ಮಾಡಬೇಕೆಂಬುದನ್ನು ಮೊದಲೇ ನಿರ್ಧರಿಸಿಟ್ಟುಕೊಂಡುಬಿಡಿ . ಹಾಗೂ ಅದನ್ನು ಸ್ವಲ್ಪ ದಿನ ಪ್ರಜ್ಞಾಪೂರ್ವಕವಾಗಿ ಅಭ್ಯಾಸ ಮಾಡಿ . ನಮ್ಮ ಮನೆಗಳಲ್ಲಿ ಚಿಕ್ಕಂದಿನಿಂದಲೇ ಬೆಳಿಗ್ಗೆ ಏಳುವಾಗ ಬಲ ಮಗ್ಗುಲಿಂದಲೇ ಏಳಬೇಕು . ಎದ್ದು ನಮ್ಮೆರಡು ಕೈಗಳನ್ನು ಉಜ್ಜಿ ಕರಾಗ್ರೆ ವಸತೇ …’ ಶ್ಲೋಕವನ್ನು ಹೇಳಿಕೊಳ್ಳುವ ಅಭ್ಯಾಸವನ್ನು ಬೆಳೆಸಿರುತ್ತಾರೆ . ಇದೊಂದು ಯಾಂತ್ರಿಕ ಅಭ್ಯಾಸವಾಗಿಯಾದರೂ ನಾವು ಪಾಲಿಸಿದರೆ ನಮಗೆ ಎಚ್ಚರವಾದ ತಕ್ಷಣ ಏನು ಮಾಡಬೇಕು ಎನ್ನುವ ಗೊಂದಲವಿರುವುದಿಲ್ಲ . ನಾವು ಮೆಕಾನಿಕಲ್ ಆಗಿ ಅಭ್ಯಾಸವನ್ನು ಪಾಲಿಸಿದರೆ , ಎಲ್ಲಾ ಕ್ರಿಯೆಗಳು ಮುಗಿಯುವಷ್ಟರಲ್ಲಿ ನಮ್ಮ ಜಾಗೃತ ಮನಸ್ಸು ದೇಹವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿರುತ್ತದೆ . ಆಮೇಲೆ ಆಮೇಲೇನು , ಇಡೀ ದುನಿಯಾನೇ ನಿಮ್ಮ ಮರ್ಜಿ !

ಟ್ಯಾಗ್ ಗಳು: , ,

1 Response to "ಅಲಾರಾಂ ಹೊಡೆದ ತಕ್ಷಣ ಏಳುತ್ತೀರಾ?"

thank u very much for your valuable suggetion

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog Stats

  • 69,182 hits
ಏಪ್ರಿಲ್ 2008
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 123456
78910111213
14151617181920
21222324252627
282930  

Top Clicks

  • ಯಾವುದೂ ಇಲ್ಲ
%d bloggers like this: