ಕಲರವ

ಪ್ರೀತಿಯೆಂಬ ಆತ್ಮವಂಚನೆ

Posted on: ಮಾರ್ಚ್ 7, 2008

ಈ ಬರಹದ ಲೇಖಕರು ‘ಅಂತರ್ಮುಖಿ’.

Love is only a dirty trick played on us to achieve continuation of the species.
-W. Somerset Maugham

ಪ್ರಸ್ತುತ ನಮ್ಮ ಸುತ್ತಲಿರುವ ಮಾಧ್ಯಮಗಳ ಮನಸ್ಥಿತಿ, ನಮ್ಮ ಸಾಹಿತ್ಯ, ನಮ್ಮ ಸಿನೆಮಾಗಳಲ್ಲಿನ ಪ್ರೀತಿಯ ವೈಭವೀಕರಣವನ್ನು ಗಮನಿಸಿದರೆ, ನಿರ್ಭಾವುಕರಾಗಿ ಅವಲೋಕಿಸುವ ಪ್ರಯತ್ನ ಮಾಡಿದರೆ ‘ಹುಮನ್ ಬಾಂಡೇಜ್’ನಂತಹ ಶ್ರೇಷ್ಠ ಕೃತಿಯನ್ನು ರಚಿಸಿದ ಸೊಮರ್‍ಸೆಟ್ ಮಾಮ್‌ ಹೇಳಿದ ಈ ಮೇಲಿನ ಮಾತು ಎಷ್ಟು ಸಕಾಲಿಕವಾದದ್ದು ಹಾಗೂ ಸರ್ವಕಾಲೀನವಾದದ್ದು ಎಂಬುದರ ಅರಿವಾದೀತು.

ನಮ್ಮ ಬದುಕಿನಲ್ಲಿ ಏಕೆ ಬೇರಾವ ಮಾನವೀಯ ಸಂಬಂಧಗಳಿಗೂ ಇಲ್ಲದಂತಹ ಪ್ರಾಮುಖ್ಯತೆ ಹೆಣ್ಣು ಹಾಗೂ ಗಂಡಿನ ನಡುವಿನ ಸಂಬಂಧಕ್ಕೆ ಕೊಡುತ್ತೇವೆ. ನಮ್ಮ ಸಮಾಜವೇಕೆ ಬೇರಾವ ಸಂಗತಿಗಳಿಗೆ ಕೊಡದಷ್ಟು ಮಹತ್ವವನ್ನು ಮದುವೆ, ದಾಂಪತ್ಯದ ರಗಳೆಗೆ ಕೊಡುತ್ತದೆ? ನಮ್ಮ ಮಾಧ್ಯಮಗಳಲ್ಲೇಕೆ ಹೆಣ್ಣು-ಗಂಡಿನ ನಡುವಿನ ಪ್ರೀತಿಗೆ ಅತಿಭಾವುಕವಾದ, ವಾಸ್ತವದಿಂದ ದೂರಾದ ಪ್ರತಿಕ್ರಿಯೆ ದೊರೆಯುತ್ತದೆ? ನಾವಿರೋದೇ ಹೀಗಾ, ನಮ್ಮ ಬದುಕಿನಲ್ಲಿ ಪ್ರೀತಿಯೇ ಪ್ರಮುಖವಾದದ್ದು , ನಮ್ಮ ಜೀವನದ ಸತ್ಯಗಳನ್ನೇ ಕಲೆ ಪ್ರತಿಬಿಂಬಿಸುತ್ತದೆಯಾ?l15.png

ಬಹುಶಃ ದೇವರ ಇರುವಿಕೆಯ ಬಗ್ಗೆ, ದೇವರ ಗುಣಗಳ ಬಗ್ಗೆ ನಡೆದಿರುವ ಚರ್ಚೆ, ವಾದಗಳನ್ನು ಹೊರತು ಪಡಿಸಿದರೆ ಆ ಮಟ್ಟಿಗೆ ಚರ್ಚೆಗೆ, ಚಿಂತನೆಗೆ, ಅನುಭವದ ಜಗತ್ತಿಗೆ ಹತ್ತಿರವಾದದ್ದು ಪ್ರೀತಿಯೇ. ಇಲ್ಲಿ ಪ್ರೀತಿಗಿರುವ ಸಹಸ್ರಾರು ವ್ಯಾಖ್ಯಾನಗಳು, ನೂರಾರು ಅರ್ಥಗಳು, ವಿಶಾಲವಾದ ವ್ಯಾಪ್ತಿಯನ್ನು ಮನ್ನಿಸಿ ಚರ್ಚೆ ನಡೆಸಲು ಮುಂದಾದರೆ ನಾವು ಎಡವುವುದು ಖಂಡಿತಾ. ತಾಯಿಗೆ ಮಗುವಿನ ಮೇಲಿರುವ ಮಮತೆ, ಮಗಳಿಗೆ ತಂದೆಯ ಮೇಲಿರುವ ಅಭಿಮಾನ, ತಂಗಿಗೆ ಅಣ್ಣನ ಮೇಲಿರುವ ಮೆಚ್ಚುಗೆ, ಶಾಲೆಯಲ್ಲಿನ ಟೀಚರ್‍ಗೆ ಚೂಟಿಯಾದ ಹುಡುಗನ ಮೇಲಿರುವ ಒಲುಮೆ, ತಮ್ಮ ನಾಯಕನ ಮೇಲೆ ಹಿಂಬಾಲಕರಿಗಿರುವ ಗೌರವ, ಸಿನೆಮಾ ನಟನ ಬಗ್ಗೆ ಪಡ್ಡೆ ಹುಡುಗಿಯರಿಗಿರುವ ಆಕರ್ಷಣೆ, ಸಾಧನೆ ಮಾಡಿದ ವ್ಯಕ್ತಿಯ ಬಗ್ಗೆ ಇರುವ ಅನನ್ಯವಾದ ಭಾವ, ದೇಶದ ಬಗ್ಗೆ ಸೈನಿಕನೊಬ್ಬನಿಗಿರುವ ಹೆಮ್ಮೆ, ದೇವರ ಮೇಲೆ ಭಕ್ತನಿಗಿರುವ ಶ್ರದ್ಧೆ, ತನ್ನ ಕೆಲಸದ ಬಗ್ಗೆ ಕಾರ್ಮಿಕನಿಗಿರುವ ಮೋಹ, ತನ್ನ ಪ್ರತಿಭೆಯ ಬಗ್ಗೆ ಕಲಾವಿದನಿಗಿರುವ ಗೀಳು – ಈ ಎಲ್ಲಾ ಪರಸ್ಪರ ವೈರುಧ್ಯದ ಭಾವಗಳಿಗೆಲ್ಲಾ ನಾವು ಪ್ರೀತಿ ಎಂಬ ಹೆಸರನ್ನು ಕೊಟ್ಟು ಪ್ರೀತಿಯ ಬಗ್ಗೆ ಮಾತನಾಡಲು ಕುಳಿತರೆ ಅತಿಭಾವುಕತೆಗೆ, ಅತಾರ್ಕಿಕ ತೀರ್ಮಾನಗಳಿಗೆ ತಲುಪುವ ಅಪಾಯವಿದ್ದೇ ಇದೆ.

ಮೇಲೆ ಹೇಳಿರುವ ಸಕಲೆಂಟು ಭಾವಗಳು ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿದ್ದರೂ ಪ್ರೀತಿಗೆ, ಅಂದರೆ ಹೆಣ್ಣು-ಗಂಡಿನ ನಡುವಿನ ಸಂಬಂಧಕ್ಕೆ ಮಾತ್ರ ನಾವು ಈ ಮಟ್ಟಿಗಿನ ಪ್ರಾಮುಖ್ಯತೆಯನ್ನೇಕೆ ಕೊಟ್ಟಿದ್ದೇವೆ? ನಮ್ಮ ಸಿನೆಮಾಗಳಲ್ಲಿ, ಕತೆ, ಕಾದಂಬರಿಗಳಲ್ಲಿ, ಪತ್ರಿಕೆಗಳಲ್ಲಿ, ಟಿವಿ ಚಾನಲ್ಲುಗಳ ಸೀರಿಯಲ್ಲುಗಳಲ್ಲಿ, ಗೆಳೆಯರ ನಡುವಿನ ಸಂಭಾಷಣೆಯಲ್ಲಿ ಯಾಕೆ ಪ್ರೀತಿ ಇಷ್ಟು ಪರಿಣಾಮಕಾರಿಯಾಗಿ ಸುಳಿದಾಡುತ್ತದೆ? ಬಹುಶಃ ಸೋಮರ್‌ಸೆಟ್ ಮಾಮ್ ಹೇಳಿದ ಮಾತೇ ಇದಕ್ಕೆ ಕಾರಣವಿರಬೇಕು. ತೀರಾ ಪ್ರಾಕೃತಿಕವಾದ, ಆಹಾರ, ನಿದ್ರೆಯಷ್ಟೇ ಸ್ವಾಭಾವಿಕ ಹಾಗೂ ಅನಿವಾರ್ಯವಾದ ಲೈಂಗಿಕತೆಯನ್ನು ನಾವು ಹೀಗೆ ಎಲ್ಲರಿಗೂ ಒಪ್ಪಿಗೆಯಾಗುವಂತಹ,ನಮಗಿಷ್ಟವಾಗುವ ಮಡಿ ಮಡಿಯಾದ ರೀತಿಯಲ್ಲಿ ಪ್ರೆಸೆಂಟ್ ಮಾಡುವುದಕ್ಕಾಗಿ ಈ ಪ್ರೀತಿ, ಪ್ರೇಮ, ಒಲವು ಎಂಬ ದೊಡ್ಡ ದೊಡ್ಡ ಆದರ್ಶಗಳನ್ನು ಕಟ್ಟಿಕೊಂಡಿದ್ದೇವೆಯೇ? ‘ಎಲ್ಲರೂ ಮಾಡುವುದು ಹೊಟ್ಟೆಗಾಗಿ’ ಎಂದು ಹಾಡಿದ ಪುರಂದರ ದಾಸರು ವೇದ ಶಾಸ್ತ್ರಗಳನ್ನು ಓದಿಕೊಂಡು, ಪುರಾಣ-ಪಂಚಾಗ ತಿಳಿದುಕೊಂಡ ಪಂಡಿತನಾಗಲೀ, ಹೆಂಟೆ ಒಡೆದು ಮಣ್ಣಿನ ನೆಲವನ್ನು ಉತ್ತುವ ರೈತನಾಗಲೀ, ಸಂನ್ಯಾಸಿ-ಜಂಗಮ ಜೋಗಿಯ ವೇಷ ಹಾಕಿದವರಾಗಲೀ, ಜಟ್ಟಿ-ಮೊಂಡ-ಬೈರಾಗಿಯಾಗಲೀ, ಮೈಮೇಲೆ ಆಭರಣದ ಅಂಗಡಿಯನ್ನೇ ಹೊತ್ತು ಓಡಾಡುವ ರಾಜನಾಗಲೀ ಎಲ್ಲವನ್ನೂ ಮಾಡುವುದು ಹೊಟ್ಟೆಗಾಗಿ ಎಂದು ಸರಳವಾಗಿ ನಿರೂಪಿಸಿದ್ದಾರೆ. ಹಾಗೇನಾ ಈ ನಮ್ಮ ಪ್ರೀತಿ ಎಂಬ ಆದರ್ಶ?

ಪ್ರಕೃತಿ ಸಹಜವಾದ, ಹೆಣ್ಣು ಗಂಡಿನ ನಡುವಿನ ಲೈಂಗಿಕ ಆಕರ್ಷಣೆ ಎಷ್ಟು ಶಕ್ತಿಶಾಲಿಯಾದದ್ದೆಂದರೆ ಅದನ್ನು ಹತ್ತಿಕ್ಕಲು ನಮ್ಮ ಸಮಾಜ ಮಾಡಿದ ಎಲ್ಲಾ ಉಪಾಯಗಳು, ಸಾಹಸಗಳು ಚೂರೂ ಕೆಲಸಕ್ಕೆ ಬಾರದೆ ಹೋದವು. ನಮ್ಮೆಲ್ಲಾ ಧರ್ಮಗಳು,ಧಾರ್ಮಿಕ ಸಂಸ್ಥೆಗಳು, ಧರ್ಮ ಗ್ರಂಥಗಳು ಲೈಂಗಿಕತೆಯನ್ನು ಪಾಪವೆಂಬಂತೆ, ಹೆಣ್ಣು ಗಂಡಿನ ನೈಸರ್ಗಿಕವಾದ ಸಮಾಗಮವನ್ನು ಧರ್ಮ ಬಾಹಿರ, ಹೀನ ಕೃತ್ಯವೆಂದು ಬಿಂಬಿಸಿ ಮನುಷ್ಯನ ಲೈಂಗಿಕ ಹಸಿವನ್ನು ಇಂಗಿಸುವ ವ್ಯವಸ್ಥಿತ ಹುನ್ನಾರ ಮಾಡಿತು. ಆದರೆ ಪ್ರಕೃತಿಯ ಶಕ್ತಿಯ ಎದುರು ಮನುಷ್ಯನ ಯಾವ ಕೃತಕ ಧಾರ್ಮಿಕ ಕಟ್ಟಳೆಗಳೂ ಇಲ್ಲಲಾಗಲಿಲ್ಲ. ಯಾವಾಗ ಮನುಷ್ಯನ ಲೈಂಗಿಕ ಹಸಿವನ್ನು ಬಾಹ್ಯ ಬಲ ಪ್ರಯೋಗದಿಂದ ಹತ್ತಿಕ್ಕಲು ಅಸಾಧ್ಯ ಎಂಬುದು ಅರಿವಾಯಿತೋ ಆಗ ಸಮಾಜ ದಾಂಪತ್ಯ ವ್ಯವಸ್ಥೆಯ ಶರಣು ಹೋಯಿತು. ಮದುವೆಯೆಂಬುದನ್ನು ಲೈಂಗಿಕತೆಗೆ ಸಮಾಜ ನೀಡಲಾರಂಭಿಸಿದ ಲೈಸೆನ್ಸ್ ಎಂಬುದಾಗಿ ಬಿಂಬಿಸಲಾಯ್ತು. ಮದುವೆಯಾಚೆಗಿನ ಲೈಂಗಿಕತೆಗೆ, ಆಕರ್ಷಣೆಗೆ ಕಡಿವಾಣ ಹಾಕುವುದಕ್ಕಾಗಿ ದಾಂಪತ್ಯದ ಆದರ್ಶಗಳನ್ನು ಜನರ ಮನಸ್ಸಿನಲ್ಲಿ ಬೇರೂರಿಸಲು ಪ್ರಯತ್ನಿಸಲಾಯಿತು. ಆದರೆ ಮನುಷ್ಯನ ಸಹಜ ಹಸಿವನ್ನು, ಆಕರ್ಷಣೆಯನ್ನು ಸಮಾಜ ಸಂಪೂರ್ಣವಾಗಿ ಹತ್ತಿಕ್ಕಲು ಸಾಧ್ಯವಾಗಲಿಲ್ಲ. ಆಹ ಹುಟ್ಟಿಕೊಂಡದ್ದೇ ಕಣ್ಣಿಗೆ ಮಣ್ಣೆರೆಚುವ ತಂತ್ರಗಳು. ಮನುಷ್ಯ ತನ್ನ ಈ ಲೈಂಗಿಕ ದೌರ್ಬಲ್ಯಗಳನ್ನು ಮರೆಮಾಚಲು ಪ್ರೀತಿಯ ಆದರ್ಶವನ್ನು ಬಿತ್ತಿದ. ಹೆಣ್ಣಿಗೆ ಗಂಡು ಆಕರ್ಷಿತವಾಗುವುದು, ಗಂಡಿನ ಸಾಂಗತ್ಯಕ್ಕಾಗಿ ಹೆಣ್ಣು ಹಪಹಪಿಸುವುದು ದೈವಿಕವಾದ ಭಾವನೆ ಎಂದು ತನ್ನನ್ನೇ ತಾನು ಭ್ರಮೆಗೆ ತಳ್ಳಿಕೊಂಡ. ಪ್ರೀತಿ ಕುರುಡು, ಪ್ರೇಮಿಗಳಿಗೆ ಸಾವಿಲ್ಲ, ಒಲವೆಂಬ ವಿಸ್ಮಯ ಎಂದು ಹುಚ್ಚು ಹುಚ್ಚಾಗಿ ಆಲಾಪಿಸತೊಡಗಿದ. ಆದರೆ ಇವೆಲ್ಲಕ್ಕೂ ತಾರ್ಕಿಕವಾದ ಕೊನೆಯಿರುವುದು ಲೈಂಗಿಕ ಸಮಾಗಮದಲ್ಲೇ ಎಂಬ ಕಹಿ-ಸತ್ಯವನ್ನು ಆತ ನಿರಾಕರಿಸಲು ಸಾಧ್ಯವಾಗಲಿಲ್ಲ. ಆತ ಅದೇಷ್ಟೇ ಪ್ರಯತ್ನ ಪಟ್ಟರೂ ದೈಹಿಕ ಒಂದಾಗುವಿಕೆಗೆ ಸಹಾಯಕವಾದ ಪ್ರೀತಿಯ ಬಗ್ಗೆ ಆತನಿಗೆ ಗೌರವ ಉಳಿಯಲಿಲ್ಲ. ಆದರೂ ಆತ ಪ್ರೀತಿಯ ಆದರ್ಶದ ಹೆಸರಿನಲ್ಲಿ ತನ್ನನ್ನು ತಾನು ಮೋಸ ಮಾಡಿಕೊಳ್ಳುವುದನ್ನು ಬಿಟ್ಟಿಲ್ಲ.

ಈಗ ಹೇಳಿ, ಪ್ರೀತಿ ರೋಮಾಂಚನವಾ, ಪ್ರೀತಿ ಆತ್ಮವಂಚನೆಯಾ?


Technorati : , , , , ,

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog Stats

  • 69,005 hits
ಮಾರ್ಚ್ 2008
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12
3456789
10111213141516
17181920212223
24252627282930
31  
%d bloggers like this: