ಕಲರವ

ನೆಲಕ್ಕಿಳಿದ ತಾರೆ ಹಾಗೂ ಆಗಸಕ್ಕೆ ಹಾರಿದ ಗಾಳಿಪಟ!

Posted on: ಮಾರ್ಚ್ 7, 2008

ನಮ್ಮಲ್ಲೇಕೆ ‘ತಾರೆ ಜಮೀನ್ ಪರ್’ ರೀತಿಯ ಸಿನೆಮಾಗಳಿಲ್ಲ? ನಾವ್ಯಾಕೆ ‘ಚಕ್ ದೇ’ ತರಹದ ಸಿನೆಮಾ ಮಾಡಲು ಮುಂದಾಗುವುದಿಲ್ಲ ಎಂದು ಹಲುಬುವವರಿಗೆ ಇಲ್ಲಿ ಉತ್ತರ ಕೊಟ್ಟಿದ್ದಾರೆ ‘ಚಿತ್ರ’.

ನೆಲಕ್ಕಿಳಿದ ತಾರೆ ಹಾಗೂ ಆಗಸಕ್ಕೆ ಹಾರಿದ ಗಾಳಿಪಟ!

ಹೌದು, ಅಕ್ಷರಶಃ ಈ ಶೀರ್ಷಿಕೆ ಕನ್ನಡ ಹಾಗೂ ಬಾಲಿವುಡ್ ಚಿತ್ರೋದ್ಯಮದ ಮನಸ್ಥಿತಿಗಳ ನಡುವಿನ ವ್ಯತ್ಯಾಸವನ್ನು ಬಿಂಬಿಸುತ್ತದೆ. ಆಕಾಶದಲ್ಲಿ ಹೊಳೆಯುವ ತಾರೆಯನ್ನು ವಾಸ್ತವದ ನೆಲದ ಮೇಲೆ ತರುವ ಪ್ರಯತ್ನ ಹಿಂದಿಯಲ್ಲಿ ಕಂಡು ಬಂದರೆ, ಕೇವಲ ಒಂದು ಎಳೆಯ ದಾರದ ಸೂತ್ರದ ಹಿಡಿತದಲ್ಲಿ ಗಾಳಿಪಟವನ್ನು ಆಗಸಕ್ಕೆ ಹಾರಿಬಿಡುವ ಮನಸ್ಥಿತಿ ಕನ್ನಡ ಚಿತ್ರಗಳದ್ದು.

ಹೆಚ್ಚಿನ ಚರ್ಚೆ ನಡೆಸುವ ಮೊದಲು ನಾವು ಮೂಲಭೂತವಾದ ಆದರೆ ಚರ್ವಿತ ಚರ್ವಣವಾದ ಈ ಪ್ರಶ್ನೆಯನ್ನು ಕೇಳಿಕೊಳ್ಳಲೇ ಬೇಕು: ನಾವು ಸಿನೆಮಾ ನೋಡುವುದು ಅಥವಾ ಮಾಡುವುದು ಏತಕ್ಕಾಗಿ? ಬೇರೆಲ್ಲಾ ಉದ್ದಿಮೆಗಳಿದ್ದ ಹಾಗೆ ಇದೂ ಒಂದು ಉದ್ದಿಮೆ ಎಂದು ವಾದಿಸುವವರ ಪ್ರಕಾರ ಬಹುಜನರ ಬೇಡಿಕೆ, ಡಿಮ್ಯಾಂಡ್ ಏನಿದೆಯೋ ಅದನ್ನು ಕೊಡುವುದಷ್ಟೇ ಚಿತ್ರ ತಯಾರಕರ ಕೆಲಸ. ಇನ್ನುಳಿದದ್ದೆಲ್ಲಾ ಸೆಕೆಂಡರಿ. ಚಿತ್ರಕಥೆ, ಸಂದೇಶ, ಸಾಮಾಜಿಕ ಕಳಕಳಿ ಇವೆಲ್ಲಾ ಕಣ್ಣೊರೆಸುವ ಅಂಶಗಳು. ಮಾರುಕಟ್ಟೆ ಬೇಡಿಕೆಗಳ ಅಸ್ಥಿಪಂಜರವನ್ನಿಟ್ಟುಕೊಂಡು ಅದಕ್ಕೆ ಉಳಿದೆಲ್ಲಾ ಸೃಜನಶೀಲತೆಯ ರಕ್ತ ಮಾಂಸವನ್ನು ತುಂಬುವುದು ಸಿನೆಮಾ ಮಾಡುವವರ ಕೆಲಸ ಎನ್ನುವುದು ಇವರ ವಾದ. ಆದರೆ ಇನ್ನೊಂದು ವರ್ಗವಿದೆ. ಅವರಿಗೆ ಸಿನೆಮಾವನ್ನು ಉದ್ದಿಮೆಯಾಗಿ ಬೆಳೆಸುವ ಹಪಹಪಿಯಿಲ್ಲ. ಅವರಿಗೆ ಸಿನೆಮಾ ಕಲಾಭಿವ್ಯಕ್ತಿಯ ಮಾಧ್ಯಮ. ಸಾಹಿತ್ಯ, ಚಿತ್ರ ಕಲೆ, ಸಂಗೀತದಲ್ಲಿ ಹೊಸ ಅನ್ವೇಷಣೆಗಳನ್ನು ಮಾಡುತ್ತಾ ಹೋಗುವಂತೆ ಸಿನೆಮಾವನ್ನೂ ಸಹ ಅವರು ಒಂದು ಮಾಧ್ಯಮವಾಗಿ ಬಳಸಿಕೊಳ್ಳುತ್ತಾರೆ. ಇಲ್ಲಿ ಕಥೆ, ಚಿತ್ರಕಥೆಯೇ ಸಿನೆಮಾದ ಜೀವಾಳ ಇದಕ್ಕೆ ಪೂರಕವಾಗುವ ಇನ್ನಿತರ ಸಿನೆಮಾ ಆವಶ್ಯಕತೆಗಳು ಬಂದುಹೋಗುತ್ತವೆ. ಆದರೆ ಇವರ ಉದ್ದೇಶ ಸಿನೆಮಾವನ್ನು ಉದ್ದಿಮೆಯ ಪ್ರಾಡಕ್ಟ್ ಮಾಡುವುದಲ್ಲ. 1360040069_e5d831cf24.jpg

2007011901850102.jpgಹೀಗೆ ಎರಡು ವಿಭಾಗಗಳು ಹುಟ್ಟಿಕೊಂಡಾಗ ಅಲ್ಲಲ್ಲಿ ಇವೆರಡೂ ದಡಗಳನ್ನು ಬೆಸೆಯುವಂತಹ ಪ್ರಯತ್ನಗಳು ಶುರುವಾದವು. ಇವನ್ನು ಬ್ರಿಡ್ಜ್ ಸಿನೆಮಾಗಳೆಂದು ಕರೆಯಲಾರಂಭಿಸಿದರು. ಇವುಗಳ ಮೂಲ ಉದ್ದೇಶ ಒಳ್ಳೆಯ ಕಲಾತ್ಮಕವಾದ ಸಿನೆಮಾ ಜನರನ್ನು ತಲುಪುವಂತೆ ಮಾಡಬೇಕು ಎನ್ನುವುದೇ ಆದರೂ ಅವರು ಅದಕ್ಕೆ ಬದ್ಧರಾಗಿರಬೇಕು ಎಂದೇನೂ ಇಲ್ಲ. ಜನರನ್ನು ತಲುಪುವ ಭರದಲ್ಲಿ ಕಲಾತ್ಮಕತೆಯ ಜಾಗವನ್ನು marketing tactics ಆವರಿಸಿಕೊಳ್ಳಬಹುದು. ಅನೇಕ ಹಂತದಲ್ಲಿ ಕಥೆ ರಾಜಿಯಾಗಬೇಕಾಗಿಬರುವುದು. ಈ ಬಗೆಯ ಪ್ರಯತ್ನದಲ್ಲಿಯೂ ಒಂದು ಬಹುದೊಡ್ಡ ಅಪಾಯವಿದೆ. ‘ಎಲ್ಲರನ್ನೂ ಸಮಾಧಾನ ಪಡಿಸುವುದಕ್ಕೆ ಆ ದೇವರಿಗೂ ಸಾಧ್ಯವಿಲ್ಲ’ ಎನ್ನುವ ಹಾಗೆ ಈ ಬಗೆಯ ಬ್ರಿಡ್ಜ್ ಸಿನೆಮಾ ಎರಡು ಬದಿಗಳನ್ನು ಹೊಸೆಯಲು ಹೋಗಿ ತನ್ನ ಸತ್ವವನ್ನೇ ಕಳೆದುಕೊಳ್ಳಬಹುದು.

ಇಷ್ಟೆಲ್ಲಾ ಪೀಠಿಕೆ ಹಾಕಲಿಕ್ಕೆ ಕಾರಣ ಈ ತಿಂಗಳು ನಮ್ಮ ಚರ್ಚೆಯಲ್ಲಿ ನುಸುಳಿರುವ ಎರಡು ಸಿನೆಮಾಗಳು. ಒಂದು ‘ಮುಂಗಾರು ಮಳೆ’ಯಂತಹ ಅದ್ಭುತ ಯಶಸ್ಸಿನ ಚಿತ್ರವನ್ನು ನೀಡಿದಂತಹ ಯೋಗರಾಜ್ ಭಟ್‌ರವರ ಬಹುನಿರೀಕ್ಷೆಯ ಚಿತ್ರ ‘ಗಾಳಿಪಟ’. ಮತ್ತೊಂದು ಅದ್ಭುತ ಪ್ರತಿಭಾವಂತ ನಟನಾದ ಅಮೀರ್ ಖಾನ್ ನಿರ್ದೇಶಿಸಿರುವ ಚಿತ್ರ ‘ತಾರೆ ಜಮೀನ್ ಪರ್’. ಸಿನೆಮಾ ನೋಡದವರಿಗೆ ಇವುಗಳನ್ನು ಪರಿಚಯಿಸುವುದಾದರೆ, ‘ಗಾಳಿಪಟ’ ನಗರದಲ್ಲಿ ಬೆಳೆದ ಮೂರು ಮಂದಿ ಪಡ್ಡೆ ಹುಡುಗರ ಪ್ರೇಮದ ಕಥೆ. ಒಳ್ಳೆಯ ಗೀತ ಸಾಹಿತ್ಯ, ತಲೆದೂಗಬಹುದಾದಂತಹ ಸಂಗೀತ, ಲವಲವಿಕೆಯ ಸಂಭಾಷಣೆ, ಗಣೇಶ್ ಅಭಿಮಾನಿಗಳಿಗೆ ಬೇಕಾಗುವಂತಹ ಆತನ ಮ್ಯಾನರಿಸಂಗಳು, ಬೇಟೆ-ಕಾಡು ಮುಂತಾದ ಸಂಗತಿಗಳಿಗೆ ತೆರೆದುಕೊಂಡಿರದ ನಗರವಾಸಿ ಯುವಕರಿಗೆ ಮೈ ನವಿರೇಳಿಸುವಂತಹ ಕಾಡುಹಂದಿ ಬೇಟೆ, ಸಾಮಾನ್ಯವಾದ ಕಥೆ -ಇದಿಷ್ಟು ‘ಗಾಳಿಪಟ’ದ ಹೈಲೈಟ್ಸು. ಇನ್ನು ‘ತಾರೆ…’ಯ ಬಗ್ಗೆ ಹೇಳುವುದಾದರೆ, ಡಿಸ್ಲೆಕ್ಸಿಯಾ ಎಂಬ ಅಧ್ಯಯನ ಸಂಬಂಧಿ ಮಾನಸಿಕ ವ್ಯಾಧಿಯಲ್ಲಿ ಬಳಲುವ ಅನೇಕ ಬುದ್ಧಿವಂತ ಮಕ್ಕಳು ಹೇಗೆ ವ್ಯವಸ್ಥೆಯೆ ರೂಪು-ನೀತಿಗಳಿಗೆ ಹೊಂದಿಕೊಳ್ಳಲಾರದೆ ತೊಳಲಾಡುತ್ತವೆ ಎನ್ನುವುದು ಚಿತ್ರದ ಕಥೆ. ಈ ತೊಂದರೆಯಿಂದಾಗಿ ಸ್ವಭಾವತಃ ಎಷ್ಟೇ ಚುರುಕಾದ ಮಕ್ಕಳೂ, ಪ್ರತಿಭಾವಂತರೂ ಮೂರ್ಖರು ಎನ್ನುವ ಹಣೆಪಟ್ಟಿಯಲ್ಲಿ ನರಳಬೇಕಾಗುತ್ತದೆ ಎನ್ನುವುದನ್ನು ಆತ್ಮೀಯವಾಗಿ ಬಿಂಬಿಸುತ್ತದೆ ಚಿತ್ರ.

ಒಂದೊಂದು ಚಿತ್ರವನ್ನೂ ಅದರ ಗುಣ, ಅವಗುಣಗಳ ಆಧಾರದಲ್ಲಿ ವಿಮರ್ಶಿಸಿ ಕೈತೊಳೆದುಕೊಳ್ಳಲು ಒಪ್ಪದವರಿಗೆ ಒಂದನ್ನೊಂದು ಹೋಲಿಸಿ ನೋಡುವ ಚಟ ಹತ್ತಿಕೊಳ್ಳುತ್ತದೆ. ಹೀಗೆ ವಿಮರ್ಶಿಸುವವರು ಕೊಂಚ ಸಿನಿಕರಾದರಂತೂ ಮುಗಿಯಿತು. ‘ಅಯ್ಯೋ, ನಮ್ಮವರು ಯಾವಾಗ ಅಂತಹ ಸಿನೆಮಾ ಮಾಡುವುದು…’, ‘ಅವರನ್ನು ನೋಡಿ ಇವರು ಕಲಿಯಬಾರದಾ…’ ಎಂದು ಹಲುಬುತ್ತಾರೆ.

ಒಂದು ಒಳ್ಳೆಯ ಸಿನೆಮಾವನ್ನೋ, ನಮ್ಮ ಮನಸ್ಸಿಗೆ ತಟ್ಟಿದಂತಹ ಕಾದಂಬರಿಯನ್ನೋ ನೋಡಿದಾಗ ಇಂಥದ್ಯಾಕೆ ನಮ್ಮಲ್ಲಿ ಇಲ್ಲ ಎನ್ನುವ ಆಲೋಚನೆ ಬರುವುದು ಸಹಜ. ಅದು ತಾತ್ಕಾಲಿಕವಾದ ಅನುಭವ. ಇಂಥ ಅನುಭವ ಎಲ್ಲಾ ಭಾಷಿಕರಿಗೂ, ಎಲ್ಲಾ ಪ್ರದೇಶದವರಿಗೂ ಆಗುವುದು ಸಾಮಾನ್ಯ. ಹಿಂದಿಯಲ್ಲಿ ಅದೇ ಅತ್ತೆ ಸೊಸೆಯರ ಯುದ್ಧ-ಕದನ ವಿರಾಮದ ಕಥೆಯನ್ನು ಸಾವಿರ ಎಪಿಸೋಡುಗಟ್ಟಲೆ ಎಳೆಯುತ್ತಿದ್ದ ಸಮಯದಲ್ಲಿ ಕನ್ನಡದಲ್ಲಿ ಸಾಮಾಜಿಕ ಕಾಳಜಿಯನ್ನು ಹೊತ್ತ, ಸಮಾಜ ಮುಖಿಯಾದ ‘ಮುಕ್ತ’ದಂತಹ ಧಾರಾವಾಹಿ ಪ್ರಸಾರವಾದಾಗ ನಮಗೆ ಹೇಗೆ ಅಪ್ರಯತ್ನಪೂರ್ವಕವಾಗಿ ಹೆಮ್ಮೆ ಮೂಡುತ್ತದೆಯೋ ಹಾಗೆಯೇ ಇತರ ಭಾಷೆಯಲ್ಲಿರುವ ಒಳ್ಳೆಯ ಸರಕನ್ನು ನೋಡಿದಾಗ ನಮ್ಮಲ್ಲೇಕೆ ಇಂಥದ್ದಿಲ್ಲ ಎನ್ನುವ ಭಾವ ಮೂಡುತ್ತದೆ. ಒಂದು ಹಂತದವರೆಗೆ ಇದು ಆರೋಗ್ಯಕರವಾದದ್ದೇ, ಅಂತಹ ಸರಕನ್ನು ನಮ್ಮ ಭಾಷೆಯಲ್ಲೂ ತೋರುವ ಪ್ರಯತ್ನಕ್ಕೆ ಇದು ನಾಂದಿ ಹಾಡಿದರೆ ಸಂತೋಷದ ವಿಷಯವೇ. ಆದರೆ ಈ ಬಗೆಯ ಹಪಹಪಿ ವಿಪರೀತವಾದರೆ ನಮ್ಮ ಭಾಷೆಯಲ್ಲಿ ನಡೆದಿರುವ ಶ್ರೇಷ್ಠ ಹಾಗೂ ಅನನ್ಯವಾದ ಪ್ರಯತ್ನಗಳು ಮರೆಯಾಗಿ ವಿನಾಕಾರಣದ ಕೀಳರಿಮೆ ಮೂಡುತ್ತದೆ. ಹೀಗೆ ಕೀಳರಿಮೆ ಬೆಳೆಸಿಕೊಳ್ಳುವುದರಿಂದ ಯಾವ ಸಾಧನೆಯೂ ಆದಂತಾಗುವುದಿಲ್ಲ.2118881967_eb716cf331.jpg

ಹಿಂದಿಯಲ್ಲಿ ಸಾಲು ಸಾಲು ಸೀರಿಯಲ್ಲುಗಳನ್ನು ಮಾಡುವ ಎಕ್ತಾ ಕಪೂರ್ ಇದ್ದಂತೆಯೇ ಕನ್ನಡದಲ್ಲಿಯೂ ಜನರ ನಾಡಿಮಿಡಿತ ಅರಿತ ಎಸ್.ನಾರಾಯಣ್, ಬಿ.ಸುರೇಶ್‌ರಂತಹ ಧಾರಾವಾಹಿ ನಿರ್ಮಾಪಕರಿದ್ದಾರೆ. ಕರಣ್ ಜೋಹಾರ್‍ನಂತಹ ಅಪ್ಪಟ ಕಮರ್ಷಿಯಲ್ ಸಿನೆಮಾ ಮಾಡುವಂತಹ ನಿರ್ದೇಶಕರು ಕನ್ನಡದಲ್ಲಿದ್ದಾರೆ. ‘ಲಗಾನ್’,’ಸ್ವದೇಶ್’,ಇತ್ತೀಚಿನ ‘ಜೋಧಾ ಅಕ್ಬರ್’ ಚಿತ್ರಗಳ ನಿರ್ದೇಶಕ ಆಶುತೋಷ್ ಗೋವಾರಿಕರ್‌ರ ಚಿತ್ರಗಳಂಥವನ್ನು ಕನ್ನಡದಲ್ಲಿ ನಿರ್ಮಿಸಿದ ನಾಗಾಭರಣರಂತಹ ನಿರ್ದೇಶಕರಿದ್ದಾರೆ. ಪಿ.ಶೇಷಾದ್ರಿಯವರು ನಿರ್ದೇಶಿಸುದ ‘ತುತ್ತೂರಿ’ ಮುಂತಾದ ಮಕ್ಕಳ ಚಿತ್ರಗಳು ಅಮೀರ್‌ನ ‘ತಾರೆ..’ಗಿಂತ ಯಾವ ಮಾಪನದಲ್ಲೂ ಕಡಿಮೆಯಿಲ್ಲ. ಆದರೆ ಕನ್ನಡದ ಮಾರುಕಟ್ಟೆ ಸೂಕ್ಷ್ಮಗಳು, ಅಬ್ಬರದ ಪ್ರಚಾರದಿಂದ ದೂರ ಉಳಿಯುವ ಸಂಕೋಚ ಹೊಂದಿರುವ -ಆ ಮೂಲಕವೇ ತಮ್ಮ ಸೃಜನಶೀಲತೆಯನ್ನು ಉಳಿಸಿಕೊಂಡಿರುವ- ನಿರ್ದೇಶಕರ ಪ್ರಯತ್ನವನ್ನು ಗುರುತಿಸಿ ಪ್ರೋತ್ಸಾಹಿಸದೆ ಕೇವಲ ಬಾಯಿ ಚಪಲಕ್ಕಾಗಿ ‘ನಮ್ಮಲ್ಲೇನಿದೆ, ಅವರನ್ನ ನೋಡ್ರಿ’ ಅಂತ ಹಲುಬುವುದು ಕೇವಲ ಮಾನಸಿಕ ವ್ಯಾಧಿಯಷ್ಟೇ.

ಕನ್ನಡದಲ್ಲಿ ಎಲ್ಲಿಯವರೆಗೆ ಅಪ್ಪನ ವಯಸ್ಸಿನ ನಾಯಕ ಮಗಳ ವಯಸ್ಸಿನ ನಾಯಕಿಯೊಂದಿಗೆ ಮರ ಸುತ್ತುತ್ತಾ ಹಾಡು ಹಾಡುತ್ತಾ ತಿರುಗುತ್ತಿರುವ ಚಿತ್ರಗಳಿಗೆ ಬೇಡಿಕೆಯಿರುತ್ತದೆಯೋ ಅಲ್ಲಿಯವರೆಗೆ ಕನ್ನಡದಲ್ಲಿ ಅಂತಹ ಚಿತ್ರಗಳು ತಯಾರಾಗುತ್ತಿರುತ್ತವೆ. ಆದರೆ ಯಾವಾಗ ಜನ ಅಂತಹ ಸರಕನ್ನು ಮೂಸುವುದಿಲ್ಲ ಎಂಬ ಸುಳಿವು ಚಿತ್ರ ನಿರ್ಮಾಪಕರಿಗೆ ರವಾನೆಯಾಗುತ್ತದೆಯೋ ಆಗ ಅವರೂ ಹೊಸ ಅಲೆಗೆ ತೆರೆದುಕೊಳ್ಳುತ್ತಾರೆ. ಅಷ್ಟಕ್ಕೂ ಹಿಂದಿಯಲ್ಲಿ ಬರುತ್ತಿರುವ ಸಿನೆಮಾಗಳಿಂದ ಹಿಂದಿ ಭಾಷಿಕರು, ಮಾಧ್ಯಮದವರು ಸಂಪೂರ್ಣ ಸಂತೃಪ್ತರಾಗಿದ್ದಾರೆಯೇ? ಖಂಡಿತಾ ಇಲ್ಲ, ನೋಡಿ ಅಲ್ಲಿ ಹಾಲಿವುಡ್‌ನಲ್ಲಿ ವಾಸ್ತವಕ್ಕೆ ಸನಿಹದಲ್ಲಿರುವ ಎಷ್ಟು ಚಿತ್ರಗಳು ಬರುತ್ತಿವೆ. ‘ಟೈಟಾನಿಕ್’ನಂತಹ ಒಂದು ಚಿತ್ರವನ್ನು ಬಾಲಿವುಡ್‌ನಲ್ಲಿ ಮಾಡೋಕೆ ಸಾಧ್ಯನಾ? ‘ಎ ಬ್ಯೂಟಿಫುಲ್ ಮೈಂಡ್’ನಂತಹ ಸಿನೆಮಾ ಬಾಲಿವುಡ್ಡಿನಲ್ಲಿ ಬರೋದು ಯಾವಾಗ? ‘ಸಿಕೊ'(sicko) ರೀತಿಯ ಡಾಕುಮೆಂಟರಿ ಮಾಡಲು ನಮ್ಮವರಿಗೇನು ಧಾಡಿ, ಸಿನೆಮಾದಲ್ಲಿ ಹಾಡು, ಹೀರೋಯಿಸಂ ಇಟ್ಟುಕೊಳ್ಳುವುದು ಎಷ್ಟು ಬಾಲಿಶವಲ್ಲವಾ ಎನ್ನುವ ಆರೋಪಗಳು ಇದ್ದೇ ಇವೆ. TaareZameenPar.jpg

ಒಟ್ಟಿನಲ್ಲಿ ಇಂತಹ ಆರೋಪಗಳು ಎಷ್ಟರ ಮಟ್ಟಿಗೆ ಆರೋಗ್ಯಪೂರ್ಣವಾಗಿರುತ್ತವೆಯೋ ಅಷ್ಟರ ಮಟ್ಟಿಗೆ ಅವುಗಳಿಂದ ಚಿತ್ರೋದ್ಯಮಕ್ಕೆ ಸಹಾಯವಾಗುತ್ತದೆ. ಇಲ್ಲವಾದಲ್ಲಿ ಇದು ನಮ್ಮೊಳಗೇ ಕೀಳರಿಮೆಯನ್ನು ಬೆಳೆಸುವ ಮಾನಸಿಕ ವ್ಯಾಧಿಯಾಗುತ್ತದೆ. ಏನಂತೀರಿ?


Technorati : , , , , ,

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog Stats

  • 68,988 hits
ಮಾರ್ಚ್ 2008
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12
3456789
10111213141516
17181920212223
24252627282930
31  

Top Clicks

  • ಯಾವುದೂ ಇಲ್ಲ
%d bloggers like this: