ಕಲರವ

ಒಲವೆಂಬ ವಿಸ್ಮಯ!

Posted on: ಮಾರ್ಚ್ 7, 2008

ಈ ಸಂಚಿಕೆಯ ಮುಖಪುಟ ಲೇಖನದ ಲೇಖಕರು ಸುಪ್ರೀತ್.ಕೆ.ಎಸ್

ಈ ಪ್ರೀತಿ ಅಂದರೆ ಏನು?
ಹಾಗಂತ ಕೇಳಿ ನೋಡಿ ಪ್ರೀತಿಯಲ್ಲಿ ಬಿದ್ದವರಿಗೆ ಮಾತನಾಡಲು ಪದಗಳೇ ಸಿಕ್ಕುವುದಿಲ್ಲ. ಎಂದೂ ಪ್ರೀತಿಸಿರದವರಿಗೆ ಮಾತನಾಡಲಿಕ್ಕೆ, ವಾದಿಸುವುದಕ್ಕೆ ಸಾವಿರ ಸಾವಿರ ಸಂಗತಿಗಳು ಸಿಕ್ಕುತ್ತವೆ. ನೂರಾರು ಥಿಯರಿಗಳು ಕೈಗೆ ಎಟುಕುತ್ತವೆ. ಹತ್ತಾರು ಶ್ರೇಷ್ಠ ಚಿಂತಕರು ಹೇಳಿದ ಸಿದ್ಧಾಂತಗಳು ನೆರವಿಗೆ ಬರುತ್ತವೆ. ಆದರೆ ಪ್ರೀತಿಯಲ್ಲಿ ಮುಳುಗಿದವರನ್ನು ಕೇಳಿ, ಅವರಿಗೆ ಮಾತೇ ಬರದು, ಅವರು ಪ್ರೀತಿ ಕೊಡಮಾಡುವ ಮಧುರ ಅನುಭೂತಿಯನ್ನು ಸವಿಯುವುದರಲ್ಲಿ ಮಗ್ನರಾಗಿರುತ್ತಾರೆ, ಮಾತು ಮರೆತಿರುತ್ತಾರೆ.l1.png

ಧರ್ಮವೆಂದರೆ ಏನು, ದೇವರು ಇದ್ದಾನಾ? ಅಂತೆಲ್ಲಾ ಕೇಳಿದಾಗ ದೈವತ್ವದ ಅನುಭವವನ್ನು, ತನ್ನನ್ನೇ ತಾನು ಕಳೆದುಕೊಳ್ಳುವ ಮಗ್ನತೆಯನ್ನು ಎಂದೂ ಕಂಡಿರದವ ಮಾತ್ರ ಉಗ್ರವಾಗಿ ವಾದ ಮಾಡಬಲ್ಲ. ದೇವರಿದ್ದಾನೆ, ಅವನನ್ನು ನಂಬದವರು ದುರುಳರು ಎಂದು ಅಬ್ಬರಿಸಬಲ್ಲ. ದೇವರು ಎಂಬುದು ನಮ್ಮ ದೌರ್ಬಲ್ಯ, ನಮಗೆ ನಾವು ಮಾಡಿಕೊಳ್ಳುವ ವಂಚನೆ ಎಂದು ಉಪದೇಶಿಸಬಲ್ಲ. ಆದರೆ ದೇವರನ್ನು ಅನುಭವಿಸಿದವ ಮಾತ್ರ ಯಾವ ಮಾತನ್ನೂ ಆಡದೆ ಮೌನವಾಗಿ ಹಿಮಾಲಯದ ನಿಶ್ಯಬ್ಧ, ನಿರ್ಮಾನುಶ ಗುಹೆಗಳಲ್ಲಿ ಧ್ಯಾನಿಸುತ್ತಿರುತ್ತಾನೆ. ಖಾಲಿಯಾದ ಡಬ್ಬಗಳು ಜೋರಾಗಿ ಸದ್ದು ಮಾಡುತ್ತಾ ಬಡಿದುಕೊಳ್ಳುತ್ತಿರುತ್ತವೆ! ಎಂದಿನಂತೆ!

ಎರಡು ವಿಪರೀತಗಳು

ಪ್ರೀತಿಯ ಅನುಭವವನ್ನು ಹಂಚಿಕೊಳ್ಳುವಾಗ, ಪ್ರೀತಿಯನ್ನು ವ್ಯಾಖ್ಯಾನಿಸಲು ಕೂರುವಾಗ ನಾವು ಎರಡು ವಿಪರೀತಗಳಿಗೆ ಹೋಗುವ ಅಪಾಯವಿರುತ್ತದೆ. ಪ್ರೀತಿಯನ್ನು ತೀರಾ ಭಾವುಕವಾಗಿ ವರ್ಣಿಸುತ್ತಾ, ಪ್ರೀತಿ ಈ ಜಗತ್ತಿನದ್ದೇ ಅಲ್ಲ. ಅದು ಇಂದ್ರಿಯಗಳಿಗೆ ನಿಲುಕದ್ದು, ಅದು ಎಂಥಾ ವಿರೋಧವನ್ನಾದರೂ ಎದುರಿಸಬಲ್ಲದು. ಇಡೀ ಪ್ರಪಂಚವನ್ನೇ ಬೇಕಾದರೂ ಎದುರು ಹಾಕಿಕೊಂಡು ಪ್ರೀತಿ ಬದುಕಬಲ್ಲದು. ಪ್ರೀತಿಗೆ ಹಣ, ಅಂತಸ್ತಿನ ಹಂಗು ಇಲ್ಲ. ಅದು ಮುಖ ನೋಡಿ, ಭವಿಷ್ಯವನ್ನು ಆಲೋಚಿಸಿ ಪ್ರೀತಿಗೆ ಬೀಳಿಸುವುದಿಲ್ಲ. ಪ್ರೀತಿಯೆಂಬುದು ಒಂದು ಪವಾಡ. ನಮ್ಮ ನಿಯಂತ್ರಣವೇ ಇಲ್ಲದ ಆದರೆ ನಮ್ಮೆಲ್ಲರನ್ನೂ ನಿಯಂತ್ರಿಸುವ ಅಗೋಚರವಾದ ಶಕ್ತಿ ಪ್ರೀತಿ. ಪ್ರೀತಿಸಿದವರಿಗೆ ಪ್ರೀತಿಯೇ ದೇವರು. ಪ್ರೀತಿಗಿಂತ ದೊಡ್ಡದು ಅವರಿಗೆ ಬೇರೇನೂ ಕಾಣುವುದಿಲ್ಲ. ನಮ್ಮ ಜೀವನದ ಏಕೈಕ ಗುರಿಯೇ ಪ್ರೀತಿ. ಅಂತೆಲ್ಲಾ ಭಾವುಕವಾಗಿ ಪ್ರೀತಿಯ ಅಗಾಧತೆಯನ್ನು ಮೆರೆಸುವ ಭರದಲ್ಲಿ ವಾಸ್ತವದಿಂದ ದೂರಾಗುವ, ತೀರಾ ಎಮೋಶನಲ್ ಆಗುವ ಅಪಾಯವಿದೆ.

ಹಾಗೆಯೇ ಪ್ರೀತಿ ಎಂದ ಕೂಡಲೇ ಕೊಂಕಾಗಿ ನಗುತ್ತ, ಪ್ರೀತಿ ಅನ್ನೋದೆಲ್ಲಾ ಭ್ರಮೆ. ಪ್ರೀತಿ ಅನ್ನೋದು ಆತ್ಮವಂಚನೆ, ತಮ್ಮ ದೌರ್ಬಲ್ಯಗಳಿಗೆ, ತಮ್ಮ ಲೈಂಗಿಕ ಹಸಿವಿಗೆ ಗಂಡು ಹೆಣ್ಣು ಕಂಡುಕೊಳ್ಳುವ ಸಭ್ಯವಾದ ಹೆಸರು. ಪ್ರೀತಿಯಲ್ಲಿ ಬಿದ್ದವರು ಮೇಲೇಳಲು ಸಾಧ್ಯವೇ ಇಲ್ಲ. ಹುಡುಗನ ಹಣ, ಆತನ ಇಮೇಜು, ಅವನ ಫ್ಯಾಮಿಲಿ, ಅವನ ಹೆಸರು, ಅಂತಸ್ತು ನೋಡಿ ಅವನೆಡೆಗೆ ಆಕರ್ಷಿತಳಾಗುವ ಹುಡುಗಿ, ಹುಡುಗಿಯ ಅಂದ ಚೆಂದ, ಆಕೆಯ ಯೌವನಕ್ಕೆ ಪಿಗ್ಗಿ ಬೀಳುವ ಹುಡುಗರು ‘ಪ್ರೀತಿ ಕುರುಡು’ ಅಂತ ಹೇಳುತ್ತಾ ಓಡಾಡುವುದು ಆತ್ಮವಂಚನೆಯಲ್ಲದೆ ಮತ್ತೇನು? ಪ್ರೀತಿ ಮಾರುಕಟ್ಟೆಯಲ್ಲಿ ಸುಲಭವಾಗಿ ಹಾಗೂ ಪರಿಣಾಮಕಾರಿಯಾಗಿ ಬಿಕರಿಯಾಗಬಲ್ಲ ಸರಕು. ಅದೇ ಕಾರಣಕ್ಕೆ ನಮ್ಮ ಕವಿಗಳಿಗೆ, ಸಿನೆಮಾ ಮಾಡುವವರಿಗೆ, ಧಾರವಾಹಿಗಳನ್ನು ಸುತ್ತುವ ‘ಸೀರಿಯಲ್ ಕಿಲ್ಲರ್’ಗಳಿಗೆ ಪ್ರೀತಿ ಕೇಳಿದ್ದನ್ನೆಲ್ಲಾ ಕೊಡುವ ಕಾಮಧೇನು. ವಾಸ್ತವವನ್ನು ಮರೆಸಿ ಭ್ರಮಾ ಲೋಕಕ್ಕೆ ನಮ್ಮನ್ನು ತಳ್ಳಿ ಕೊಂಚ ಕಾಲದವರೆಗೆ ವಾಸ್ತವ ಜಗತ್ತಿನ ಕಷ್ಟಕೋಟಲೆ, ಕಠಿಣತೆಗಳನ್ನು ಮರೆಯುವಂತೆ ಮಾಡುವ ಅಫೀಮಿನಂತೆ ಈ ಪ್ರೀತಿ. ಪ್ರೀತಿ ಕುರುಡಲ್ಲ, ಪ್ರೀತಿ ನಮ್ಮನ್ನು ವಾಸ್ತವಕ್ಕೆ, ನಮ್ಮ ಜವಾಬ್ದಾರಿಯೆಡೆಗೆ, ನಮ್ಮ ಗುರಿ-ಸಾಧನೆಯೆಡೆಗೆ ಕುರುಡಾಗಿಸುತ್ತದೆ. ಎಂದು ವೈಚಾರಿಕ ಮದದಲ್ಲಿ ಅಬ್ಬರಿಸುವವರ ಮಧ್ಯೆ ಪ್ರೀತಿಯ ಮಧುರ ಅನುಭವ ಜೀವಂತಿಕೆ ಕಳೆದುಕೊಳ್ಳುತ್ತದೆ.

ಮಕ್ಕಳು ಪ್ರೀತಿಗೇಕೆ ಬೀಳುತ್ತಾರೆ?

ಹೀಗೆ ವಿಪರೀತವಾಗಿ ಯೋಚನೆಗೆ ಬೀಳುವವರು ತಂದೆ ತಾಯಿಗಳು. ತಮ್ಮ ಮಕ್ಕಳು ಯಾಕೆ ಪ್ರೀತಿಗೆ ಬೀಳುತ್ತಾರೆ ಎಂಬುದು ಅವರಿಗೆ ಚಿದಂಬರ ರಹಸ್ಯ.
ಸ್ವಲ್ಪ ಕಾಲದ ಮಟ್ಟಿಗೆ ಈ ಒಂದು ವಾದ ಚಾಲ್ತಿಯಲ್ಲಿತ್ತು. ಮನೆಯಲ್ಲಿ ಸಿಗದ ಪ್ರೀತಿಯನ್ನು ಹುಡುಕಿಕೊಂಡು ಹೊರಡುವ ಮಕ್ಕಳು ಪ್ರೀತಿಯಲ್ಲಿ ಬೀಳುತ್ತಾರೆ. ತಂದೆಯ ಅಭಯ, ಪ್ರೀತಿ, ನಾನಿದ್ದೇನೆ ಎನ್ನುವ ಧೈರ್ಯದ ಸಾಂತ್ವನ ಇಲ್ಲದೆ ಬೆಳೆದ ಹುಡುಗಿಯರು ತಮ್ಮ ಓರಗೆಯ ಹುಡುಗರಲ್ಲಿ ಆ ಪ್ರೀತಿಯನ್ನು, ಸಾಂತ್ವನವನ್ನು ಪಡೆಯುತ್ತಾರೆ. ಹಾಗಾಗಿ ಅವರೊಂದಿಗೆ ಪ್ರೀತಿಗೆ ಬೀಳುತ್ತಾರೆ. ಇನ್ನು ಹುಡುಗರು ಮನೆಯಲ್ಲಿ ತಮಗೆ ದೊರೆಯದ ಪ್ರೀತಿ, ಪ್ರಾಮುಖ್ಯತೆ, ‘ನೀನು ಇಂಪಾರ್ಟೆಂಟ್’ ಎನ್ನುವ ಮೆಚ್ಚುಗೆಯನ್ನು ಪ್ರೀತಿಸುವ ಹುಡುಗಿಯಲ್ಲಿ ಕಂಡುಕೊಳ್ಳುತ್ತಾನೆ. ಹಾಗಾಗಿ ಆತ ಹುಡುಗಿಯಲ್ಲಿ ಮೋಹಿತನಾಗುತ್ತಾನೆ. ಈ ರೀತಿಯ ವಾದ ಇತ್ತೀಚಿನವರೆಗೂ ಚಾಲ್ತಿಯಲ್ಲಿತ್ತು.
ಮನೆಯಲ್ಲಿ ಸಿಕ್ಕದ ಪ್ರೀತಿಗಾಗಿ ಮಕ್ಕಳು ಹೊರಗೆ ಕೈಚಾಚುತ್ತಾರೆ. ದಾಂಪತ್ಯದಲ್ಲಿ ಸಿಕ್ಕದ ಒಲವಿಗಾಗಿ ಮದುವೆಯಾಚೆಗಿನ ಸಂಬಂಧಕ್ಕೆ ವಿವಾಹಿತರು ಕೈಚಾಚುತ್ತಾರೆ ಎಂಬ ವಾದಗಳು ಬೋಗಸ್. ಮನೆಯಲ್ಲಿ ಅಪ್ಪ ಅಮ್ಮ ಎಷ್ಟೇ ಪ್ರೀತಿ ತೋರಿದರೂ ಮಕ್ಕಳು ಪ್ರೀತಿಯಲ್ಲಿ ಬೀಳುವುದನ್ನು ತಪ್ಪಿಸಲಾಗುವುದಿಲ್ಲ. ಅಸಲಿಗೆ ತಂದೆ ತಾಯಿ ತಮ್ಮ ಪ್ರೀತಿಯನ್ನು ಎಷ್ಟೇ ಧಾರೆಯೆರೆದರೂ ಮಕ್ಕಳಿಗೆ ‘ಹರೆಯದ ಪ್ರೀತಿ’ಯ ಅನುಭವ ಕೊಡಲಾರರು. ಹುಡುಗನಿಗೆ ತಾನು ಮೆಚ್ಚಿದ ಹುಡುಗಿಯ ಸಾನಿಧ್ಯದಲ್ಲಿ ದೊರೆಯುವ ಮಧುರ ಭಾವವನ್ನು ಯಾವ ಮನೆಯೂ ಕೊಡಲಾಗದು. ಹುಡುಗಿಗೆ ತನ್ನ ಪ್ರಿಯತಮನಲ್ಲಿ ಸಿಕ್ಕುವ ಸಾಂತ್ವನವನ್ನು ಎಷ್ಟೇ ಕಕ್ಕುಲಾತಿಯಿರುವ ತಾಯ್ತಂದೆಯರೂ ಕೊಡಲಾರರು.
ನಮ್ಮಲ್ಲಿ ಬಯಲಾಗುತ್ತಿರುವ ಎಷ್ಟೋ ವಿವಾಹೇತರ ಸಂಬಂಧಗಳಿಗೆ ಅಸಲಿಗೆ ಇಂಥದ್ದೇ ಅಂತ ಕಾರಣವೇ ಇರುವುದಿಲ್ಲ. ಅವಳಿಗೆ ಮನೆಯಲ್ಲಿ ಗಂಡನ ಕಾಳಜಿಗೆ, ಮಕ್ಕಳ ಪ್ರೀತಿಗೆ ಯಾವ ಕೊರತೆಯೂ ಇರುವುದಿಲ್ಲ. ಇವನಿಗೆ ತನ್ನ ಹೆಂಡತಿಯ ಮೇಲಿನ ಪ್ರೀತಿ ಕೊಂಚವೂ ಮುಕ್ಕಾಗಿರುವುದಿಲ್ಲ ಆದರೂ ಆತನ ಮನಸ್ಸು ಹೊರಗಿನ ಸಂಬಂಧಕ್ಕೆ ಹಾತೊರೆಯುತ್ತಿರುತ್ತದೆ. ಎಷ್ಟೋ ವೇಳೆ ಕೇವಲ ಹೊಸ ಅನುಭವದ ರೋಮಾಂಚನಕ್ಕಾಗಿ ಇಂಥ ಸಂಬಂಧಗಳು ಹುಟ್ಟಿಕೊಳ್ತವೆ.
ಈಗ ಹೇಳಿ, ಜನರು ಪ್ರೀತಿಗೆ ಬೀಳುವುದೇಕೆ?

ದೇವರೂ ಪ್ರೀತಿಯೂ…

ಮುಂಚೆ ಹೇಳಿದ ಎರಡು ವೈಪರೀತ್ಯಗಳನ್ನು ಗಮನಿಸಿದರೆ ನಮಗೆ ದೇವರ ಬಗೆಗಿನ ಚರ್ಚೆಯಲ್ಲಿ ಕಂಡು ಬರುವ ಎರಡು extremesಗಳ ನೆನಪಾಗದಿರದು. ತಮ್ಮನ್ನು ತಾವು ಕಳೆದುಕೊಂಡು ಧ್ಯಾನದಲ್ಲಿ, ಭಜನೆಯಲ್ಲಿ, ಪೂಜೆಯಲ್ಲಿ, ಜಾತ್ರೆ, ಯಜ್ಞ-ಯಾಗಾದಿಗಳಲ್ಲಿ ಮಗ್ನರಾಗುವ ದೈವ ಭಕ್ತರಿಗೆ ತಾವು ಪಡೆದ ಅನುಭವದ ಅನನ್ಯತೆಯ ಬಗ್ಗೆ ಅಪಾರ ನಂಬಿಕೆಯಿರುತ್ತದೆ. ಧ್ಯಾನದಲ್ಲಿ, ದೇವರ ಪೂಜೆಯಲ್ಲಿ, ದೇವರ ಮೇಲಿನ ನಂಬಿಕೆಯಲ್ಲಿ ಅವರ ಮನಸ್ಸಿಗೆ ಸಿಕ್ಕುವಂತಹ ಸಮಾಧಾನದ ಬಗ್ಗೆ ಅವರಿಗೆ ಮೋಹವಿದೆ. ತಮ್ಮ ಅನುಭವವನ್ನು ಅವರು ಅಲ್ಲಗಳೆಯಲು ಸಾಧ್ಯವಾಗುವುದಿಲ್ಲ. ಒಬ್ಬ ದೇವ ಪುರುಷನ ಸಂಗಡದಲ್ಲಿ ಅವರಿಗೆ ದೊರೆಯುವಂತಹ ಸಂತೃಪ್ತಿ, ಆತ್ಮ ಸಮಾಧಾನ, ಭರವಸೆಯನ್ನು ಆ ಪವಾಡ ಪುರುಷನ ಪವಾಡಗಳನ್ನೆಲ್ಲಾ ತಾನೂ ಮಾಡಿ ಆತನನ್ನು ಢೋಂಗಿ ಎಂದು ಸಾಬೀತು ಪಡೆಸುವ ವಿಜ್ಞಾನಿಯು ಕೊಡಲಾರ. ಹರಕೆ, ಮುಡಿಪು ಕಟ್ಟುವುದರಲ್ಲಿ ಜನರಿಗೆ ಸಿಗುವ ಆಶಾಭಾವವನ್ನು ಯಾವ ಚಿಂತಕನೂ ಅವರಿಗೆ ನೀಡಲಾರ. ಹೀಗೆ ದೈವಿಕತೆಯ ಬಗ್ಗೆ ಅಪಾರ ನಂಬಿಕೆಯಿರುವ ಆಸ್ತಿಕರು ದೇವರ ಬಗ್ಗೆ ಮಾತನಾಡುವಾಗ ತೀರಾ ಭಾವುಕರಾಗುತ್ತಾರೆ. ವಾಸ್ತವದಿಂದ ತೀರಾ ದೂರಾಗಿ ನಿಂತು ಮಾತನಾಡುತ್ತಾರೆ. ತಾರ್ಕಿಕತೆಗೆ ಸಂಪೂರ್ಣವಾಗಿ ತಿಲಾಂಜಲಿಯಿಟ್ಟು ವರ್ಣನೆಗೆ ಇಳಿಯುತ್ತಾರೆ. ಅವರ ಬಾಯಲ್ಲಿ ‘ದೇವರೆಂಬ ಅನುಭವ’ ಸರ್ವಶಕ್ತನ, ಸರ್ವಾಂತರ್ಯಾಮಿಯ, ನಿರ್ಗುಣ, ಸರ್ವಜ್ಞನ ರೂಪವನ್ನು ಪಡೆಯುತ್ತದೆ. ವರ್ಣನೆಗೆ ನಿಲುಕದ ಅನುಭೂತಿಗೆ ಅಕ್ಷರದ ರೂಪ ಕೊಡುವಾಗ ಅವು ತೀರಾ ವಾಚ್ಯವೆನಿಸುತ್ತವೆ. ಹೆಸರಿಡಲು ಸಾಧ್ಯವೇ ಇಲ್ಲದ ಅನುಭೂತಿಗೆ ಸಹಸ್ರನಾಮಗಳು ಹುಟ್ಟಿಕೊಳ್ಳುತ್ತವೆ. ತೀರಾ ವೈಯಕ್ತಿಕವಾದ ಅನುಭವಕ್ಕೆ ನೂರಾರು ಪಂಥಗಳು ಹುಟ್ಟಿಕೊಂಡು ಲಕ್ಷಾಂತರ ಸಿದ್ಧಾಂತಗಳು ಜನ್ಮ ಪಡೆಯುತ್ತವೆ.

ಇನ್ನು ‘ದೇವರು ಜನ ಸಾಮಾನ್ಯರ ಪಾಲಿನ ಅಫೀಮು’ ಎಂದು ಕರೆದು ತಮ್ಮ ಬೌದ್ಧಿಕತೆಯನ್ನು ಸಾಣೆಯಲ್ಲಿ ಮಸೆದುಕೊಂಡು ಬರುವ ನಾಸ್ತಿಕರು ಮತ್ತೊಂದು ವಿಪರೀತವನ್ನು ತಲುಪಿಕೊಳ್ಳುತ್ತಾರೆ. ಆಸ್ತಿಕರು ದೈವಿಕತೆ, ದೇವರು ಎಂದು ಕರೆಯುವುದು ತಮ್ಮ ವೈಯಕ್ತಿಕ ಅನುಭವವನ್ನು ಎಂಬ ಪ್ರಾಥಮಿಕ ಹಾಗೂ ಸರಳ ಸತ್ಯವನ್ನು ಅರಿಯದೆ ಆಸ್ತಿಕರು ತಮ್ಮ ಅನುಭವವನ್ನು ವರ್ಣಿಸುವುದಕ್ಕೆ, ವೈಯಕ್ತಿಕವಾದ ಅನುಭವವನ್ನು ಸಾರ್ವತ್ರಿಕ ಸತ್ಯವಾಗಿಸುವುದಕ್ಕೆ ಬಳಸಿಕೊಂಡ ವ್ಯಾಖ್ಯಾನಗಳನ್ನು ಹಿಡಿದು ವಾದಿಸಲು ಕುಳಿತುಕೊಳ್ಳುತ್ತಾರೆ. ಆಸ್ತಿಕರು ತಮ್ಮ ವೈಯಕ್ತಿಕ ಅಭಿಪ್ರಾಯವನ್ನು, ಒಲವನ್ನು ಜಾಗತಿಕ ಶ್ರದ್ಧೆಯಾಗಿಸುವ ಭರದಲ್ಲಿ ಅನುಸರಿಸುವ ಮಾರ್ಗಗಳ ಮೇಲೆ ಕ್ಷ-ಕಿರಣ ಬೀರಿ ತೀರ್ಮಾನಗಳಿಗೆ ಬರಲು ನಾಸ್ತಿಕರು ಸಿದ್ಧರಾಗುತ್ತಾರೆ. ದೇವರು ಸರ್ವಶಕ್ತ ಎಂದು ಹೇಳಿದಾಗ ಆತನಿಗೇಕೆ ಜಗತ್ತಿನ ದುಃಖವನ್ನು, ಪೀಡೆಯನ್ನು, ರೋಗ ರುಜಿನವನ್ನು ನಿವಾರಿಸುವುದಕ್ಕೆ ಆಗಿಲ್ಲ ಎಂದು ಪ್ರಶ್ನಿಸುತ್ತದೆ ನಾಸ್ತಿಕತೆ. ದೇವರು ನಿರ್ಗುಣನು ಎಂದಾಗ, ಹಾಗಾದರೆ ಕೋಪವೇ ಮೈವೆತ್ತ ಶಿವ, ಸೌಮ್ಯತೆಯ ಸಾಕಾರ ಮೂರ್ತಿಯಾದ ವಿಷ್ಣುವಿನ ನಂಬಿಕೆಗಳೆಲ್ಲಾ ಕಾಲ್ಪನಿಕವಾ ಎಂದು ಕೊರಳಪಟ್ಟಿ ಹಿಡಿದು ಉತ್ತರಕ್ಕಾಗಿ ಪೀಡಿಸುತ್ತಾನೆ ನಾಸ್ತಿಕ. ಆತ ಎದುರಾಳಿಯ ವಾದವನ್ನು ಖಂಡತುಂಡ ಮಾಡುವ ಭರದಲ್ಲಿ ಏಕಾಂತದ ಮೌನದಲ್ಲಿ ದೊರೆಯುವ ದೈವಿಕತೆಯ ಅನುಭೂತಿಯನ್ನು ಗ್ರಹಿಸಲಾರದಷ್ಟು ಗದ್ದಲವನ್ನು ಸೃಷ್ಟಿಸಿಕೊಂಡುಬಿಟ್ಟಿರುತ್ತಾನೆ.
ಥೇಟ್ ಇದೇ ರೀತಿಯಲ್ಲಿ ನಡೆಯುತ್ತದೆ ಪ್ರೀತಿಯ ಬಗೆಗಿನ ನಮ್ಮ ವಾದ-ವಿವಾದ.

ಭಾವನೆಗಳ ಅತಾರ್ಕಿಕತೆ

ಭಾವನೆಗಳು ತರ್ಕಕ್ಕೆ ನಿಲುಕದಂಥವು. Emotions are illogical. ಭಾವನೆಗಳಿಗೆ ಕಾರಣಗಳನ್ನು ಕೊಡಲು ಯಾರಿಗೂ ಸಾಧ್ಯವಿಲ್ಲ. ಕಾರಣ ಕೊಡುವ ಒತ್ತಾಯವಿದ್ದರೆ ಅಲ್ಲಿ ಆ ಭಾವನೆ ಸತ್ವ ಕಳೆದುಕೊಳ್ಳುತ್ತದೆ. ನಿರ್ಜೀವವಾಗುತ್ತದೆ. ಅರಳಿನಿಂತ ಗುಲಾಬಿ ತೋಟವನ್ನು ನೋಡಿದಾಗ ಮನಸ್ಸಿಗೇಕೆ ಉಲ್ಲಾಸವಾಗುತ್ತದೆ ಎಂದು ಕೇಳಿದರೆ ಉತ್ತರ ಸಿಗುತ್ತದೆಯೇ? ಕಿಲ ಕಿಲ ನಗುವ l7.pngಮಗುವಿನ ಮುಖ ನೋಡಿದಾಗ ನಮ್ಮೆಲ್ಲಾ ಕ್ರೂರತೆ ಒಂದು ಕ್ಷಣ ಮರೆತು ಹೋಗಿಬಿಡುತ್ತಲ್ಲಾ ಅದರ ಬಗ್ಗೆ ಏನಂತ ವಿವರಣೆ ಕೊಡಲು ಸಾಧ್ಯ? ಅಗಾಧವಾದ ಜಲರಾಶಿ ಕಾಲು ಮುರಿದುಕೊಂಡು ಬಿದ್ದಂತಿರುವ ಸಮುದ್ರದೆದುರು ನಾವೆಷ್ಟು ಸಣ್ಣವರು ಅನ್ನಿಸುತ್ತದೆಯಲ್ಲ, ಹಾಗೇಕೆ ಅಂತ ಕೇಳಿದರೆ ಉತ್ತರ ಕೊಡಲು ಸಾಧ್ಯವಾ? ಪರೀಕ್ಷಯಲ್ಲಿ ಫೇಲಾಗಿ ಕುಳಿತಾಗ, ಎಲ್ಲರೂ ನಮ್ಮನ್ನು ಮರೆತಾಗ ಮೆಲ್ಲಗೆ ಭುಜದ ಮೇಲೆ ಕೈಯಿರಿಸಿ ಅಕ್ಕರೆಯ ಮಾತನಾಡುವ ಗೆಳೆಯನಿಗೆ ಸರಿಸಾಟಿಯಾದ ವ್ಯಕ್ತಿ ಈ ಜಗತ್ತಿನಲ್ಲೇ ಇಲ್ಲ ಅನ್ನಿಸುತ್ತದೆಯಲ್ಲಾ ಅದನ್ನು ಭ್ರಮೆ ಅನ್ನಲು ಸಾಧ್ಯವಾ? ಬದುಕಿನಲ್ಲಿ ಇನ್ನು ಆಶಾಕಿರಣ ಕಾಣಲು ಸಾಧ್ಯವೇ ಇಲ್ಲ ಎಂದು ಕೈಚೆಲ್ಲಿ ಕುಳಿತವನಿಗೆ ದೇವರ ಮುಂದೆ ನಿಂತಾಗ ಮೂರ್ತಿಯ ಬಲಭಾಗದಿಂದ ಬಿದ್ದ ಹೂವು ಹೊಸ ಸಾಹಸಕ್ಕೆ ಕೈ ಹಾಕುವಂತೆ ಮಾಡುತ್ತದೆಯಲ್ಲಾ ಅದನ್ನು ಭ್ರಾಂತಿ ಎಂದು ಕರೆಯಲು ಸಾಧ್ಯವಾ? ಹೀಗೆಯೇ ಪ್ರೀತಿ ಕೂಡ, ಪ್ರೀತಿಯಲ್ಲಿ ಬಿದ್ದವರಿಗೆ ದೊರೆಯುವ ಅನುಭವ, ರೋಮಾಂಚನ, ಕ್ಷಣಕ್ಕೂ ಹುಟ್ಟಿಕೊಳ್ಳುವ ಹುರುಪು, ಸುತ್ತಲಿನದೆಲ್ಲವನ್ನೂ ಮರೆತು ಒಳಗೊಳಗೇ ಕಚಗುಳಿಯಿಟ್ಟುಕೊಂಡು ನಗುವ ಉಲ್ಲಾಸ ಎಲ್ಲವನ್ನೂ ಭ್ರಮೆ ಎಂದು ತಳ್ಳಲು ಸಾಧ್ಯವಾಗುವುದಿಲ್ಲ. ತರ್ಕದ ಪಂಡಿತರು ಏನೇ ಹೇಳುತ್ತಿದ್ದರೂ ಪ್ರೇಮಿಗೆ ತನ್ನ ಜಗತ್ತೇ ಮಹತ್ತಾಗಿ ಕಾಣಿಸುತ್ತದೆ.

ಜಗತ್ತೇ ಶತೃವಾಗುತ್ತದೆ!

ಅದು ಕೇವಲ ಪ್ರೀತಿಯಲ್ಲಿ ಬಿದ್ದವರಿಗಾಗುವ ಅನುಭವವಲ್ಲ. ಬೆಳೆಸಿದ ತಂದೆ ತಾಯಿಯರೇ ಹಿತಶತೃಗಳಾಗಿ ಕಾಣುತ್ತಿರುತ್ತಾರೆ. ಆಪ್ತರ, ಹಿತಚಿಂತಕರ ಬುದ್ಧಿ ಮಾತುಗಳು ಕಾದ ಸೀಸದ ಹಾಗೆ ಕಿವಿಗೆ ಬಿದ್ದಂತೆ ಅನ್ನಿಸುತ್ತಿರುತ್ತದೆ. ಯಾರು ಏನೇ ಹೇಳಿದರೂ ನಮಗೆ ನಮ್ಮನ್ನು ಬದಲಾಯಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಲವು ಬಾರಿ ನಮಗೇ ಇದು ಸರಿಯಲ್ಲ, ಅಪ್ಪ ಅಮ್ಮ ಹೇಳುವುದು ಸರಿ ಅನ್ನಿಸಿದರೂ ಬದಲಾಗಲಾಗುವುದಿಲ್ಲ.
ನಾಟಕದ ಗೀಳಿಗೆ ಬಿದ್ದವರು, ಸಿನೆಮಾದಲ್ಲಿ ಹೀರೋ ಆಗುತ್ತೇನೆ ಅಂತ ಅಲೆಯುವವರು, ಕಥೆ-ಕವನ ಅಂತ ಸಾಹಿತ್ಯ ರೂಢಿಸಿಕೊಂಡವರು, ಓದುತ್ತ ಕುಳಿತಿರುವಾಗ ಕದ್ದು ಪುಸ್ತಕದ ಹಿಂದಿನ ಪುಟಗಳಲ್ಲಿ ಚಿತ್ರ ಬರೆಯುವವರು, ಕ್ಲಾಸಲ್ಲಿ ಕೂತು ಪಾಠ ಕೇಳದೆ ಬಿಸಿಲಲ್ಲಿ ಗಂಟೆ ಗಟ್ಟಲೆ ಕ್ರಿಕೆಟ್ ಆಡುವವರು- ಇವರೆಲ್ಲರಿಗೂ ಹೀಗೇ, ಆ ಸಮಯದಲ್ಲಿ ಜಗತ್ತೇ ಶತೃವಾಗಿರುತ್ತದೆ. ಬುದ್ಧಿಮಾತುಗಳಿಗೆಲ್ಲಾ ಅವರ ಕಿವಿ ಕಿವುಡಾಗಿರುತ್ತವೆ.
ತಾವು ಇಷ್ಟಪಟ್ಟ ಸಂಗತಿಯಲ್ಲಿ ತೊಡಗಿಸಿಕೊಳ್ಳುವುದರಲ್ಲಿ ಅವರಿಗೆ ವಿಪರೀತವಾದ ಸಮಾಧಾನ ಸಿಕ್ಕುತ್ತಿರುತ್ತದೆ. ಆತ್ಮ ತೃಪ್ತಿ ಸಿಗುತ್ತಿರುತ್ತದೆ. ತಾವು ಮಾಡುವ ಕೆಲಸವನ್ನು ಅವರು ಅಪಾರವಾಗಿ ಪ್ರೀತಿಸುತ್ತಿರುತ್ತಾರೆ. ಅದಕ್ಕಾಗಿ ಅವರು ಪಡುವ ಶ್ರಮ, ಅದರಿಂದಾಗುವ ಆಯಾಸ ಅವರಿಗೆ ಆಪ್ಯಾಯಮಾನವಾಗಿ ಕಾಣುತ್ತದೆ. ಯಾರೆಷ್ಟೇ ವಿರೋಧ ಮಾಡಿದರೂ ಅವರ ಕಣ್ಣು ತಪ್ಪಿಸಿಯಾದರೂ ಅವರು ತಮ್ಮ ಪ್ರಿಯವಾದ ಸಂಗತಿಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ.

ಪ್ರೀತಿಯ ಕಲ್ಪನೆ

ವಯಸ್ಸಿಗೆ ಬಂದ ಹುಡುಗನಿಗೆ ತಾನು ಮೆಚ್ಚಿದ ಹುಡುಗಿ ಒಮ್ಮೆ ತನ್ನ ನೋಡಿ ನಕ್ಕುಬಿಟ್ಟರೆ ಜಗತ್ತನ್ನೇ ಗೆದ್ದ ಸಂಭ್ರಮವಾಗುತ್ತದೆ. ಈತನ ಕಳ್ಳನೋಟಕ್ಕೆ ಆಕೆಯ ಕಡೆಯಿಂದ ಗ್ರೀನ್ ಸಿಗ್ನಲ್ ದೊರೆತು ಬಿಟ್ಟರೆ ಇವನ ಕಾಲುಗಳು ನೆಲದ ಮೇಲೆ ನಿಲ್ಲುವುದೇ ಇಲ್ಲ. ಒಮ್ಮೆ ಒಬ್ಬರಿಗೊಬ್ಬರು ಇಷ್ಟವಾಗಿದ್ದೇವೆ ಎನ್ನುವ ಸುಳಿವು ಇಬ್ಬರಿಗೂ ಸಿಕ್ಕರೆ ಆಗ ಅವರು ಸಾಮಾನ್ಯ ಹುಡುಗ-ಹುಡುಗಿಯರಾಗಿ ಉಳಿದಿರುವುದಿಲ್ಲ. ಅವರಾಗಲೇ ಪ್ರೇಮಿಗಳಾಗಿರುತ್ತಾರೆ. ತಮ್ಮನ್ನು ತಾವು ಪ್ರೇಮಿಗಳು ಎಂದೇ ಭಾವಿಸಿಕೊಳ್ಳುತ್ತಾರೆ.

ಮಜವಿರುವುದೇ ಇಲ್ಲಿ. ಒಬ್ಬರನ್ನೊಬ್ಬರು ಇಷ್ಟಪಡುವ ಹುಡುಗ ಹುಡುಗಿಗೆ ಪ್ರೀತಿಯ ಬಗ್ಗೆ, ಪ್ರೇಮಿಗಳು ಹೇಗಿರುತ್ತಾರೆ, ಪ್ರೇಮಿಗಳು ಹೇಗಿರಬೇಕು ಎನ್ನುವುದರ ಬಗ್ಗೆ ತಿಳಿಯುವುದೇ ಈ ಸಮಾಜದಿಂದ. ಇಲ್ಲಿನ ಉದಾಹರಣೆಗಳೇ ಅವರಿಗೆ ತಾವು ಪ್ರೀತಿಸುತ್ತಿದ್ದೇವೆ, ತಾವು ಪ್ರೇಮಿಗಳು ತಾವು ಇನ್ನು ಮುಂದೆ ಹೇಗೆ ವರ್ತಿಸಬೇಕು ಎಂಬುದನ್ನು ಹೇಳಿಕೊಟ್ಟಿರುತ್ತವೆ. ಹೀಗಿರುವಾಗ ಒಮ್ಮೆ ಅವರು ಪ್ರೀತಿಸಲು ತೊಡಗಿದರೆ ಇಡೀ ಸಮಾಜವನ್ನೇ ಶತೃವಾಗಿ ಕಾಣಲಾರಂಭಿಸುತ್ತಾರೆ. ಸಮಾಜ ನಮ್ಮನ್ನು ಬೇರೆ ಮಾಡಲು ಹಗಲು ರಾತ್ರಿ ಶ್ರಮಿಸುತ್ತಿದೆ ಅಂತ ಕಲ್ಪಿಸಿಕೊಂಡು ಸುಖಿಸುತ್ತಿರುತ್ತಾರೆ, ಪಾಪ ಸಮಾಜಕ್ಕೆ ಮಾಡಲು ಬೇರೆ ಕೆಲಸವೇ ಇಲ್ಲ ಎಂಬಂತೆ! ಇವರು ಪ್ರೀತಿಯ ಬಗ್ಗೆ ತಿಳಿದುಕೊಂಡಿರುವುದೆಲ್ಲಾ ಸಮಾಜದಿಂದ, ತಾವು ನೋಡಿದ ಸಿನೆಮಾಗಳಿಂದ ಪ್ರೇಮಿಗಳು ಹೇಗಿರುತ್ತಾರೆ, ಪ್ರೇಮಿಗಳಿಗೆ ಸಮಾಜ ಯಾವ ರೀತಿಯ ಸ್ಥಾನಮಾನ ಕೊಡುತ್ತದೆ ಎಂಬುದನ್ನು ನೋಡಿ ಕಲ್ಪಿಸಿಕೊಂಡಿರುತ್ತಾರೆ. ತಾವೂ ಈಗ ಹಾಗೆಯೇ ಇದ್ದೇವೆ ಎಂದುಕೊಂಡು ಬೀಗುತ್ತಿರುತ್ತಾರೆ. ಸಿನೆಮಾದ ಅತಿಭಾವುಕತೆ, ನಾಟಕೀಯತೆ ಅವರ ವರ್ತನೆಯಲ್ಲಿ ಬೆರೆತಿರುತ್ತದೆ. ಇವೆಲ್ಲವೂ ಪ್ರೀತಿ ತಮಗೆ ಕಲಿಸಿದ್ದು ಎಂದು ಭಾವಿಸಿರುತ್ತಾರೆ, ಪೆದ್ದರು, ಇದೆಲ್ಲಾ ತಮಗೆ ಕಲಿಸಿದ್ದು ಸಮಾಜವೇ ಎಂಬುದು ಅವರಿಗೆ ತಿಳಿಯುವುದೇ ಇಲ್ಲ!

ರೂಢಿಗೆ ಬಂಧಿತರು

ಈ ಪ್ರೀತಿಯ ಮಾಯೆಯೇ ಅಂಥದ್ದು. ತನ್ನ ತಂಗಿ ಯಾರನ್ನೋ ಪ್ರೀತಿಸುತ್ತಿದ್ದಾಳೆ ಎಂದು ತಿಳಿದಾಗ ಅಣ್ಣನಾದವನು ಎಷ್ಟು ಸಿಟ್ಟಿಗೆ ಒಳಗಾಗುತ್ತಾನೆ. ತನ್ನ ತಂಗಿ ದಾರಿ ತಪ್ಪುತ್ತಿದ್ದಾಳೆ ಅಂತ ಹಪಹಪಿಸುತ್ತಾನೆ, ಪ್ರೀತಿಯಿಂದ ಆಕೆಯ ಭವಿಷ್ಯವೇ ಹಾಳಾಗಬಹುದು ಅಂತ ಆಕೆಗೆ ತಿಳಿದಿಲ್ಲವಾ ಎಂದು ಹಳಹಳಿಸುತ್ತಾನೆ, ಆಕೆಯೇನೋ ಅಪರಾಧ ಮಾಡಿದ್ದಾಳೆಯೋ ಎಂಬಂತೆ ಆಕೆಯನ್ನು ದ್ವೇಷಿಸುತ್ತಾನೆ. ಆದರೆ ತಾನು ಪ್ರೀತಿಸುತ್ತಿರುವ ಹುಡುಗಿ ಸಹ ಯಾರೋ ಒಬ್ಬ ಅಣ್ಣನಿಗೆ ತಂಗಿಯಾಗಿರಬಹುದು. ಒಬ್ಬ ತಂದೆಗೆ ಮಗಳಾಗಿರುತ್ತಾಳೆ ಎನ್ನುವುದನ್ನು ಆತ ಕಲ್ಪಿಸಿಕೊಳ್ಳಲು ಸಾಧ್ಯವಾ?

ಖಂಡಿತಾ ಇಲ್ಲ. ಪ್ರೀತಿ ಎನ್ನುವುದು ತೀರಾ ವೈಯಕ್ತಿಕ ಅನುಭವ ಎಂದು ಹೇಳಿದ್ದೆನಲ್ಲ, ಹಾಗಾಗಿ ಸ್ವತಃ ಪ್ರೀತಿಸಿದವರಿಗೂ ಇನ್ನೊಬ್ಬರ ಪ್ರೀತಿಯ ಆಳವನ್ನು, ಅವರ ಅನುಭವವನ್ನು ಗೌರವಿಸಲು ಸಾಧ್ಯವಾಗುವುದಿಲ್ಲ. ಚಿಕ್ಕವರಿದ್ದಾಗ ಯಾರೋ ಎದುರು ಮನೆಯ ಹುಡುಗ ಪಕ್ಕದ ಮನೆಯಾಕೆ ಜೊತೆ ನಗುತ್ತಾ ಮಾತನಾಡಿದರೆ ಲೈನು ಹೊಡಿತಿದ್ದಾನೆ ಅಂತ ಯೋಚಿಸುತ್ತಿರುತ್ತಾರಲ್ಲ ಥೇಟು ಹಾಗೆಯೇ ಎಷ್ಟೇ ವಯಸ್ಸಾದರೂ ಯೋಚಿಸುತ್ತಾರೆ. ಅದಕ್ಕಾಗಿಯೇ ಸ್ವತಃ ಪರಸ್ಪರ ಪ್ರೀತಿಸಿ ಮನೆಯಿಂದ ಓಡಿಹೋಗಿ ಮದುವೆಯಾದ ಅಪ್ಪ ಅಮ್ಮಂದಿರು ಸಹ ತಮ್ಮ ಮಕ್ಕಳು ಯಾರನ್ನೋ ಪ್ರೀತಿಸಿದ್ದಾರೆ ಎಂದರೆ ದಿಗಿಲಿಗೆ ಬೀಳುತ್ತಾರೆ. ಅನವಶ್ಯಕ ಆತಂಕಕ್ಕೆ ಒಳಗಾಗುತ್ತಾರೆ. ತಮ್ಮ ತಂದೆ ತಾಯಿಗಳು ಮಾಡಿದಂತೆ ಮಕ್ಕಳನ್ನು ಹದ್ದು ಬಸ್ತಿನಲ್ಲಿಡುವ ವ್ಯರ್ಥ ಪ್ರಯತ್ನಗಳಿಗೆ ಕೈ ಹಾಕುತ್ತಾರೆ.

ಸಮಾಜದ ಟ್ರಿಕ್ಕು

ಪ್ರೀತಿ ಕುರುಡು, ಪ್ರೀತಿ ಮುಖ ನೋಡಿ, ಅಂತಸ್ತು, ವಯಸ್ಸು ನೋಡಿ ಹುಟ್ಟುವುದಲ್ಲ. ಪ್ರೀತಿಗೆ ಯಾರೂ ಬೇಲಿ ಹಾಕಲು ಸಾಧ್ಯವಿಲ್ಲ ಎಂದೆಲ್ಲಾ ಆದರ್ಶದ ಮಾತುಗಳನ್ನಾಡುವ ಪ್ರೇಮಿಗಳು ಸಹ ತಮಗೆ ಗೊತ್ತಿಲ್ಲದೆಯೇ ಸಮಾಜದ ಟ್ರಿಕ್ಕಿಗೆ ಬಲಿಯಾಗಿರುತ್ತಾರೆ. ಪ್ರೀತಿ ಕುರುಡು, ಯಾರ ಮೇಲೆ ಯಾರಿಗೆ ಬೇಕಾದರೂ ಪ್ರೀತಿ ಬೆಳೆಯಬಲ್ಲದು ಎಂಬುದನ್ನು ವೇದವಾಕ್ಯ ಎಂದು ನಂಬಿಕೊಂಡ ಹುಡುಗನಿಗೆ ತನ್ನ ಹುಡುಗಿ ಇನ್ಯಾರೋ ಹುಡುಗನನ್ನು ಇಷ್ಟ ಪಡುತ್ತಿದ್ದಾಳೆ ಎಂಬ ಸಂಶಯ ಬಂದೊಡನೆ ಕುದ್ದು ಹೋಗುತ್ತಾನೆ. ಪ್ರೀತಿಯಲ್ಲಿ ಭಿನ್ನಾಭಿಪ್ರಾಯಗಳು, ಜಗಳಗಳು ಇರುವುದಿಲ್ಲ ಎಂದು ಭಾವಿಸಿದ ಹುಡುಗಿಗೆ ತನ್ನ ಹುಡುಗ ಪೆದ್ದು ಪೆದ್ದಾಗಿ ವರ್ತಿಸುವುದು ವಿಪರೀತ ಕಿರಿಕಿರಿಯನ್ನು ಉಂಟು ಮಾಡುತ್ತದೆ. ಬೇರೆಲ್ಲಾ ಸಂಗತಿಗಳಲ್ಲಿ ಆದರ್ಶವೇ ಬೇರೆ ವಾಸ್ತವವೇ ಬೇರೆಯಾದಂತೆಯೇ ಪ್ರೀತಿಯ ಆದರ್ಶ ಪಾಲಿಸುವಾಗ ಪ್ರೇಮಿಗಳು ತಮ್ಮ ವ್ಯಕ್ತಿತ್ವದ ದೌರ್ಬಲ್ಯಗಳಿಂದ ಹೊರ ಬರಲು ಸಾಧ್ಯವಾಗುವುದಿಲ್ಲ.

ಪ್ರೀತಿ ಅಮರ ಎಂದು ಹಾಡಿದ ಪ್ರೇಮಿಗಳು ಮದುವೆಯಾಗಿ ಒಂದೆರಡು ವರ್ಷ ಕಳೆಯುವಷ್ಟರಲ್ಲಿ ಒಬ್ಬರ ಸಾಂಗತ್ಯ ಒಬ್ಬರಿಗೆ ಉಸಿರುಗಟ್ಟಿಸುವಂತಿರುತ್ತದೆ. ಅವರಿಬ್ಬರ ಪ್ರೀತಿ ಅಕ್ಷರಶಃ ಮದುವೆಯಲ್ಲಿ ಅಂತ್ಯವಾಗಿರುತ್ತದೆ. ಪಡ್ಡೆ ವಯಸ್ಸಿನಲ್ಲಿ ಪ್ರೇಮಿಗಳು ವ್ಯವಸ್ಥೆಯ ವಿರುದ್ಧ ಹೋರಾಡುವವರು, ಸಮಾಜಕ್ಕೆ ಅಂಜದವರು ಎಂದೆಲ್ಲಾ ಬಡಾಯಿ ಹೊಡೆಯುವವರು ಮದುವೆಯಾದ ಮೇಲೆ ಸಮಾಜ ವಿಧಿಸಿದ ರೂಲುಗಳಿಗೆ ಅನುಗುಣವಾಗಿಯೇ ವರ್ತಿಸಲು ಶುರು ಮಾಡುತ್ತಾರೆ. ತಮ್ಮ ಪ್ರೀತಿ, ಮಧುರ ಭಾವಗಳಿಗೆ ತಿಲಾಂಜಲಿ ಇತ್ತು ಇಡೀ ಬದುಕನ್ನು ಕರೆಂಟು ಬಿಲ್ಲು, ರೇಷನ್ನು, ಸೇವಿಂಗ್ಸ್‌ನ ವಿಚಾರದ ಚರ್ಚೆಯಲ್ಲೇ ಕಳೆದುಬಿಡುತ್ತಾರೆ. ಭಾವುಕ ಮಟ್ಟದಲ್ಲಿರುವ ಪ್ರೀತಿಯ ಆದರ್ಶ ವಾಸ್ತವಕ್ಕೆ ಹೊಂದಿಕೆಯಾಗದಿದ್ದಾಗಲೇ ಹೀಗಾಗುವುದು.

ಪ್ರೀತಿ ಮರೀಚಿಕೆ?

ಇಷ್ಟೆಲ್ಲಾ ಹೇಳಿದ ನಂತರವೂ ನಾವು ಪ್ರೀತಿಯನ್ನು ಕಂಡುಕೊಳ್ಳಲು ಸಾಧ್ಯವಾಗದು. ಪಂಡಿತನಾದವನು ಆತ್ಮಸಾಕ್ಷಾತ್ಕಾರದಿಂದ ದೂರ ಹೋಗುತ್ತಾನೆ ಎಂಬ ಮಾತಿದೆ. ಹಾಗೆಯೇ ಪ್ರೀತಿಯೂ. ಹೆಚ್ಚು ಮಾತನಾಡುವವನಿಗೆ ಪ್ರೀತಿ ಮರೀಚಿಕೆಯಾಗುತ್ತದೆ. ಪ್ರೀತಿಯ ಬಗ್ಗೆ ಏನೇ ಮಾತಾಡಲಿ, ಪ್ರೀತಿಯನ್ನು ಆತ ವಿಸ್ಮಯ ಎಂದು ಬಣ್ಣಿಸಲಿ, ಭ್ರಮೆ ಎಂದು ಕರೆಯಲಿ ಆತ ಪ್ರೀತಿಗೆ ತನ್ನನ್ನು ಒಡ್ಡಿಕೊಳ್ಳುವವರೆಗೆ ಆತನಿಗೆ ಪ್ರೀತಿಯ ಅನುಭವ ದಕ್ಕದು.

ಹಾಗಾದರೆ ಪ್ರೀತಿ ಎಂದರೇನು? ಪ್ರೀತಿ ಕುರುಡಾ, ಪ್ರೀತಿ ವಿಸ್ಮಯವಾ, ಪ್ರೀತಿ ಭ್ರಮೆಯಾ, ಪ್ರೀತಿ ವಂಚನೆಯಾ, ಪ್ರೀತಿ ಜೀವನ ವಿಧಾನವಾ, ಪ್ರೀತಿ ನಮ್ಮ ವ್ಯಕ್ತಿತ್ವದ ಅಭಿವ್ಯಕ್ತಿಯಾ? ಮಾತಾಡಬೇಕೆಂದಾದರೆ ಎಲ್ಲವೂ ಹೌದು, ಪ್ರೀತಿ ಮಾಡುವವರಿಗೆ ಅದು ಯಾವುದೂ ಅಲ್ಲ. ಅದೊಂದು… ಹೋಗಲಿ ಬಿಡಿ, ಮತ್ಯಾಕೆ ಮಾತು!


Technorati : , , , ,

8 Responses to "ಒಲವೆಂಬ ವಿಸ್ಮಯ!"

good supreeth, but nimma conclusion helidre chennagiruthe

Dear santosh,
i have nothing to conclude. Love is like that, no words can define it. Its absolute bliss…

nimma ee lekhana nange tumbaa hidisitu. chennaagide haage bareyodanna belesikolli

hi santhosh

nimma ee lekana nanage thumba estavagide

god bles you

thank you

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

Blog Stats

  • 68,990 hits
ಮಾರ್ಚ್ 2008
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 12
3456789
10111213141516
17181920212223
24252627282930
31  

Top Clicks

  • ಯಾವುದೂ ಇಲ್ಲ
%d bloggers like this: